ಮುಂದಿನ ವರ್ಷದಲ್ಲಿ ಅಂದರೆ 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೂ ಮುನ್ನವೇ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್‌ನ (ಕೆಪೆಕ್ಸ್) ಶೇಕಡ 80ರಷ್ಟು ಮೊತ್ತವನ್ನು ಡಿಸೆಂಬರ್ 2023ಕ್ಕೂ ಮುನ್ನವೇ ವೆಚ್ಚ ಮಾಡಲು ಕೇಂದ್ರ ಸರ್ಕಾರವು ನಿರ್ಧಾರ ಮಾಡಿದೆ. ಒಂದು ಹಣಕಾಸು ವರ್ಷದಲ್ಲಿ ಒಂದು ಸಚಿವಾಲಯಕ್ಕೆ ನಿಗದಿತ ನಿಧಿಯನ್ನು ಬಜೆಟ್ ಸಂದರ್ಭದಲ್ಲೇ ಹಂಚಲಾಗಿರುತ್ತದೆ. ಇದರ ಒಟ್ಟು ಶೇಕಡ 80ರಷ್ಟು ನಿಧಿಯನ್ನು ಡಿಸೆಂಬರ್ ಒಳಗೆ ಬಳಕೆ ಮಾಡುವುದು ಸರ್ಕಾರದ ಗುರಿಯಾಗಿದೆ.
ಹಲವಾರು ಸಚಿವರುಗಳು ತಮ್ಮ ಖಾತೆಗೆ ಒಂದು ವರ್ಷದ ಅವಧಿಗೆ ಹಂಚಿಕೆ ಮಾಡಲಾಗಿದ್ದ ಮೊತ್ತದಲ್ಲಿ ಸುಮಾರು ಶೇಕಡ 45ರಿಂದ ಶೇಕಡ 46ರಷ್ಟು ಹಂಚಿಕೆಯ ನಿಧಿಯನ್ನು ಬಳಕೆ ಮಾಡಿದ್ದಾರೆ. ಆದರೆ ಇನ್ನೂ ಕೆಲವು ಸಚಿವಾಲಯಕ್ಕೆ ಹಂಚಲಾದ ನಿಧಿಯ ಸದ್ಬಳಕೆ ಆಗಿಲ್ಲ. ಈ ಸಚಿವಾಲಯಗಳಲ್ಲಿಯೂ ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಸರಿಯಾದ ರೀತಿಯಲ್ಲಿ ಕೆಪೆಕ್ಸ್ ಬಳಕೆ ಮಾಡುವುದು ಸರ್ಕಾರದ ನಿರ್ಧಾರವಾಗಿದೆ.

ಮಾಧ್ಯಮದ ವರದಿಗಳ ಪ್ರಕಾರ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ ವೆಚ್ಚವನ್ನು ಹೆಚ್ಚಿಸುವ ಕ್ರಮವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಆದೇಶದ ಮೇರೆಗೆ ಮಾಡಲಾಗುತ್ತಿದೆ. ಎಲ್ಲ ಸಚಿವಾಲಯಗಳು ತಮ್ಮ ಖಾತೆಗೆ ಹಂಚಿಕೆ ಮಾಡಲಾದ ಒಟ್ಟು ನಿಧಿಯ ಪೈಕಿ ಮೂರನೇ ಎರಡರಷ್ಟು ನಿಧಿಯನ್ನು ಡಿಸೆಂಬರ್ ಒಳಗಾಗಿ ವೆಚ್ಚ ಮಾಡಬೇಕು ಎಂದು ಹಣಕಾಸು ಸಚಿವಾಲಯದ ಬಯಸುತ್ತದೆ.
ಹೆಚ್ಚು ವೆಚ್ಚ ಮಾಡಿದರೆ ಅಧಿಕ ನಿಧಿ ಹಂಚಿಕೆ
ಉಳಿದ ಮೊತ್ತವನ್ನು ಜನವರಿ- ಮಾರ್ಚ್ ಸಂದರ್ಭದಲ್ಲಿ ಬಳಕೆ ಮಾಡಬೇಕಾಗುತ್ತದೆ. ಇನ್ನು ಪ್ರಮುಖವಾಗಿ ಯಾವ ಸಚಿವಾಲಯವು ಈ ಹಣಕಾಸು ವರ್ಷದಲ್ಲಿ ಅಧಿಕ ವೆಚ್ಚವನ್ನು ಮಾಡಿರುವುದಿಲ್ಲವೋ ಆ ಸಚಿವಾಲಯಕ್ಕೆ ಮುಂದಿನ ಬಜೆಟ್ ವೇಳೆ ನಿಧಿ ಹಂಚಿಕೆಯಲ್ಲಿ ಕಡಿತ ಮಾಡಲಾಗುತ್ತದೆ. ಈ ಸಂದರ್ಭದಲ್ಲೇ ಯಾವ ಸಚಿವಾಲಯಕ್ಕೆ ನೀಡಿದ ನಿಧಿ ಹಂಚಿಕೆಯನ್ನು ಅಧಿಕ ವೆಚ್ಚ ಮಾಡಲಾಗಿರುತ್ತದೆಯೋ ಆ ಖಾತೆಗೆ ಮುಂದಿನ ಬಜೆಟ್ ವೇಳೆ ಅಧಿಕ ಮೊತ್ತ ಹಂಚಿಕೆ ಮಾಡಲಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ಒಟ್ಟಾಗಿ ಹಣಕಾಸು ವೆಚ್ಚದ ಆಧಾರದಲ್ಲಿ ಮುಂದಿನ ಬಜೆಟ್ ಹಂಚಿಕೆ ನಿರ್ಧಾರವಾಗಲಿದೆ.
ಹಣಕಾಸು ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಈ ಹಣಕಾಸು ವರ್ಷದ ಏಪ್ರಿಲ್‌ನಿಂದ ಜೂನ್ ತಿಂಗಳ ಅವಧಿಯಲ್ಲಿ ಕೇಂದ್ರದ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಅಥವಾ ಕೆಪೆಕ್ಸ್ ಶೇಕಡ 55ರಷ್ಟು ಏರಿಕೆಯಾಗಿ 2.7 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಅಂದರೆ ಬಜೆಟ್‌ನ ಶೇಕಡ 27ಕ್ಕಿಂತ ಅಧಿಕ ಹೆಚ್ಚು ನಿಧಿಯನ್ನು ಈಗಾಗಲೇ ಬಳಕೆ ಮಾಡಲಾಗಿದೆ. ಪ್ರಮುಖವಾಗಿ ಕೇಂದ್ರಿಯ ಸಾರ್ವಜನಿಕ ಉದ್ದಿಮೆಗಳು ನಿಧಿಯನ್ನು ಬಳಕೆ ಮಾಡುವ ವಿಚಾರದಲ್ಲಿ ಹಿಂದುಳಿದಿದೆ.
ಸರ್ಕಾರ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಅಧಿಕ ವೆಚ್ಚ ಮಾಡುವುದು ಮುಖ್ಯವಾಗಿದೆ. ಈಗಾಗಲೇ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಬಡ್ಡಿದರವನ್ನು ಏರಿಕೆ ಮಾಡಲಾಗಿದೆ. ಇನ್ನೊಂದೆಡೆ ರಫ್ತು ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತಗೊಂಡು, ಖಾಸಗಿ ಹೂಡಿಕೆಗಳು ಕಡಿಮೆಯಾಗಿದೆ. ಇದು ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡುತ್ತದೆ.
ಈ ನಡುವೆ ಕೆಪೆಕ್ಸ್ ಹೆಚ್ಚಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವೆಚ್ಚವನ್ನು ಈಗಲೇ ಅಧಿಕ ಮಾಡುವುದರಿಂದಾಗಿ ಕೇಂದ್ರ ಸರ್ಕಾರಕ್ಕೂ ಕೂಡಾ ಪ್ರಯೋಜನವಾಗಲಿದೆ. ಬಾಕಿ ಉಳಿದ ಕಾರ್ಯಗಳನ್ನು ಪೂರ್ಣಗೊಳಿಸುವುದು ಅಥವಾ ಹೊಸ ಯೋಜನೆಯನ್ನು ಆರಂಭ ಮಾಡಿ ಬಹುತೇಕ ಸಂಪೂರ್ಣಗೊಳಿಸುವುದರಿಂದಾಗಿ ಕೇಂದ್ರ ಸರ್ಕಾರವು ಈ ಯೋಜನೆಗಳನ್ನು ಮಾಡಿರುವುದು ತನ್ನ ಸಾಧನೆ ಎಂದು ತೋರಿಸಲು ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಕೆಪೆಕ್ಸ್ ಬಳಕೆ ಹೆಚ್ಚಿಸಲು ಸೂಚನೆ ನೀಡಿದ್ದಾರೆ ಎಂಬ ಮಾತು ಕೂಡಾ ಕೇಳಿಬಂದಿದೆ.


Click it and Unblock the Notifications