ನಗರದ ಹೊರವಲಯದಲ್ಲಿ ಅಂತರ್ಜಲ ಮಟ್ಟವು ಈ ವರ್ಷ ಕನಿಷ್ಠ 10 ರಿಂದ 15 ಮೀಟರ್‌ಗಳಷ್ಟು ಕುಸಿದಿದ್ದು, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನ ಗರಿಷ್ಠ ಪೂರ್ವ ಮಾನ್ಸೂನ್ ತಿಂಗಳುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ. ಹೀಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಐಐಎಸ್‌ಸಿ ಸಂಶೋಧನೆಗಳನ್ನು ಉಲ್ಲೇಖಿಸಿದೆ. ಅಪಾರ್ಟ್ಮೆಂಟ್ ನಿವಾಸಿಗಳು ಅಂತರ್ಜಲ ಅವಲಂಬನೆಯನ್ನು ಕಡಿಮೆ ಮಾಡಿ, ಕಾವೇರಿ ನೀರಿನ ಸಂಪರ್ಕ ಒದಗಿಸಿಕೊಳ್ಳಿ ಎಂದು ತಿಳಿಸಿದೆ.

ಇನ್ನು ನೀರಿನ ಕೊರತೆಯ ಬಗ್ಗೆ ಈಗಾಗಲೇ, BWSSB ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಅಪಾರ್ಟ್‌ಮೆಂಟ್ ಸಂಕೀರ್ಣಗಳಿಗೆ ಪತ್ರ ಬರೆಯುತ್ತಿದ್ದಾರೆ. ಹಾಗೆಯೇ ಕಳೆದ ಫೆಬ್ರವರಿ 10ರಂದು ಬರೆದ ಒಂದು ಪತ್ರದಲ್ಲಿ, ಈ ವರ್ಷ ಎಷ್ಟರ ಮಟ್ಟಕ್ಕೆ ಅಂತರ್ಜಲ ಕುಸಿದಿದೆ ಎಂದು ಸಂಕ್ಷಿಪ್ತವಾಗಿ ತಿಳಿಸಿದೆ. ಪತ್ರದಲ್ಲಿರುವ ಮಾಹಿತಿ ಪ್ರಕಾರ ಕಳೆದ ವರ್ಷ.. ಅಂದರೆ, 2024ಕ್ಕೆ ಹೋಲಿಸಿದರೆ ಈ ವರ್ಷ ಪ್ರಮುಖ ಪ್ರದೇಶಗಳಲ್ಲಿ, ಸುಮಾರು ಐದು ಮೀಟರ್‍ನಷ್ಟು ಅಂತರ್ಜಲ ಕುಸಿದಿದೆ. ಹಾಗೆಯೇ ನಗರ ಪುರಸಭೆ ಪ್ರದೇಶಗಳು ಮತ್ತು ನಗರದ ಹೊರವಲಯದಲ್ಲಿರುವ 110 ಹಳ್ಳಿಗಳಲ್ಲಿ ಸುಮಾರು 10 ರಿಂದ 15 ಮೀಟರ್‌ಗಳಷ್ಟು ಕುಸಿದಿದೆ ಎಂದು ಎಚ್ಚರಿಕೆ ಗಂಟೆ ಹೊಡೆದಿದೆ.
ಇನ್ನು BWSSB ಪ್ರಕಾರ, ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ ಬೋರ್‍ವೆಲ್‌ಗಳು ಮತ್ತು ಟ್ಯಾಂಕರ್ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿವೆ. ದಿನ ಕಳೆದಂತೆ ನೀರಿನ ಕೊರತೆಯೂ ಹೆಚ್ಚಾಗಬಹುದು. ಅಲ್ಲದೇ ಕೊರತೆ ಪರಿಸ್ಥಿತಿ ಉದ್ಭವಿಸಿದಂತೆಲ್ಲ ಜನರ ಜೇಬಿಗೆ ಕತ್ತರಿ ಬೀಳುವುದು ಮಾತ್ರ ಸಹಜ. ಹೀಗಾಗಿ ಬೇಸಿಗೆಗಾಗಿ ಈಗಿನಿಂದಲೇ ಎಲ್ಲಾ ವ್ಯವಸ್ಥೆಗಳನ್ನು ಸಿದ್ಧಪಡಿಸಿಕೊಳ್ಳಿ ಎಂದು, ಬಿಡಬ್ಲ್ಯೂಎಸ್‌ಎಸ್‌ಬಿ ತಿಳಿಸಿದೆ.
ಇನ್ನು ಬೋರ್‍ವೆಲ್‌ಗಳಿಂದಲೇ ಅಂತರ್ಜಲ ಹೆಚ್ಚು ಖರ್ಜಾಗುತ್ತಿದೆ. ಈ ಮೂಲಕ ಅಂತರ್ಜಲವನ್ನು ಹೆಚ್ಚಾಗಿ ಬಳಸಿಕೊಳ್ಳುವ ಬದಲು, ಕಾವೇರಿ ನೀರಿನ ಸಂಪರ್ಕ ಅಳವಡಿಸಿಕೊಳ್ಳಬೇಕು ಎಂದು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತಿಳಿಸಿದೆ. ಒಂದು ವೇಳೆ ಈ ಎಚ್ಚರಿಕೆಯನ್ನು ಪರಿಗಣಿಸಿ ಮೊದಲೇ ವ್ಯವಸ್ಥೆ ಮಾಡಿಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನೀರಿನ ಕೊರತೆ ಹೆಚ್ಚಾಗುತ್ತದೆ. ಆಗ ಟ್ಯಾಂಕರ್ ಮಾಫಿಯಾ ಶುರುವಾಗಿ ಜನರ ಜೇಬಿಗೆ ಬೀಳುವುದು ಗ್ಯಾರಂಟಿ. ಹೀಗಾಗಿ ಕುಡಿಯುವ ನೀರನ್ನು ವಿವೇಚನೆಯಿಂದ ಬಳಸಲಾಗುತ್ತಿದೆಯೇ ಎಂದು ಈಗಲೇ ಖಚಿತಪಡಿಸಿಕೊಳ್ಳಿ ಎಂದು ತಿಳಿಸಿದೆ.
ಇನ್ನು ಏಪ್ರಿಲ್ 1ರಿಂದ ಬಿಬಿಎಂಪಿಯು ಎಲ್ಲಾ ಬೋರ್‌ವೆಲ್‌ಗಳು ಮತ್ತು ಆರ್‌ಒ ಪ್ಲಾಂಟ್‌ಗಳನ್ನು BWSSBಗೆ ಹಸ್ತಾಂತರಿಸಲಿದೆ. ಹೆಚ್ಚುವರಿಯಾಗಿ ನೀರಿನ ಸಂಪರ್ಕ ಹೆಚ್ಚಿಸಲು BWSSBಯು, ಕಾವೇರಿ ಹಂತ 5ನೇ ವ್ಯಾಪ್ತಿಯ 110 ಹಳ್ಳಿಗಳಲ್ಲಿ 16 ಕಾವೇರಿ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದೆ. ಹಾಗೆಯೇ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಭಿವೃದ್ಧಿಪಡಿಸುತ್ತಿರುವ ಅಪ್ಲಿಕೇಷನ್ ಶೀಘ್ರದಲ್ಲೇ ಬರಲಿದೆ. ಈ ಅಪ್ಲಿಕೇಷನ್ ಮೂಲಕ ಬೆಂಗಳೂರಿನ ನಿವಾಸಿಗಳು ಪ್ರತಿ ಟ್ಯಾಂಕರ್‌ಗೆ 90 ರೂ. ಪಾವತಿಸಿ ನೀರಿನ ಟ್ಯಾಂಕರ್‌ಗಳನ್ನು ಬುಕ್ ಮಾಡಿಕೊಳ್ಳಬಹುದು. ಮಾರ್ಚ್ ಮೊದಲ ವಾರದೊಳಗೆ ಇದನ್ನು ಕಾರ್ಯಗತಗೊಳಿಸುವ ಯೋಜನೆ ಇದೆ ಎನ್ನಲಾಗುತ್ತಿದೆ.
ಇನ್ನು ಈ ರೀತಿ ಅಪ್ಲಿಕೇಷನ್ ಏನಾದರೂ ಬಂದರೆ ಬೆಂಗಳೂರು ನಿವಾಸಿಗಳ, ಜೇಬಿಗೆ ಕತ್ತರಿ ಬೀಳುವುದು ತಪ್ಪುತ್ತದೆ. ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚಾಗುವುದರಿಂದ ಜನರು ನೀರಿನ ಟ್ಯಾಂಕರ್ ಮೊರೆ ಹೋಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ನೀರಿನ ಟ್ಯಾಂಕರ್ ಮಾಲೀಕರು ಮನಬಂದಂತೆ ಹಣ ಕೇಳುತ್ತಾರೆ. ನೀರು ಬೇಕಾದ್ದೇ ಆಗಿದ್ದಲ್ಲಿ ಹಣವನ್ನು ಹೆಚ್ಚಾಗಿ ಯಾರೂ ಪರಿಗಣಿಸಲ್ಲ. ಆದರೆ ಈ ಒಂದು ಅಪ್ಲಿಕೇಷನ್ ಕಾರ್ಯರೂಪಕ್ಕೆ ಬಂದರೆ ಬೆಂಗಳೂರು ನಿವಾಸಿಗಳಿಗೆ, ಅತೀ ನಿಖರವಾದ ಬೆಲೆಯಲ್ಲಿ ನೀರು ಸಿಕ್ಕಂತಾಗುತ್ತದೆ.


Click it and Unblock the Notifications