ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. 49ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ವಿತ್ತ ಸಚಿವೆ ಮಾಹಿತಿ ನೀಡಿದ್ದು, ಬಾಕಿಯಿರುವ ಎಲ್ಲ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಜಿಎಸ್‌ಟಿ ಪರಿಹಾರವನ್ನು ಪಾವತಿ ಮಾಡುವುದಕ್ಕೆ ಸಂಬಂಧಿಸಿದ್ದಂತೆ ಹಲವಾರು ಸ್ಕೇಕ್‌ಹೋಲ್ಟರ್‌ಗಳು ಧ್ವನಿ ಎತ್ತಿದ ಬೆನ್ನಲ್ಲೇ ಈ ಘೋಷಣೆಯನ್ನು ಮಾಡಲಾಗಿದೆ.
"ಜಿಎಸ್‌ಟಿಯ ಎಲ್ಲ ಬಾಕಿಯಿರುವ ಪರಿಹಾರವನ್ನು ಸರ್ಕಾರವು ಶೀಘ್ರವೇ ಪಾವತಿ ಮಾಡಲಿದೆ. ಜೂನ್‌ವರೆಗೆ ಒಟ್ಟಾಗಿ 16,982 ಕೋಟಿ ರೂಪಾಯಿ ಜಿಎಸ್‌ಟಿ ಪರಿಹಾರ ಬಾಕಿಯಿದೆ. ಅದನ್ನು ಶೀಘ್ರ ಪಾವತಿಸಲಾಗುವುದು," ಎಂದು 49ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಈ ದಿನದವರೆಗೆ ಎಷ್ಟೆಲ್ಲ ಜಿಎಸ್‌ಟಿ ಪರಿಹಾರ ಬಾಕಿಯಿದೆಯೋ ಅದನ್ನು ನಾವು ಶೀಘ್ರವೇ ಪಾವತಿ ಮಾಡುವುದಾಗಿ ಜಿಎಸ್‌ಟಿ ಸಭೆಯಲ್ಲಿ ಮಾಹಿತಿ ನೀಡಿದ್ದೇವೆ," ಎಂದು ಹೇಳಿದ್ದಾರೆ.

ಹಲವು ವಸ್ತುಗಳ ಜಿಎಸ್‌ಟಿ ಇಳಿಕೆ ನಿರ್ಧಾರ
ಇನ್ನು ಈ ಬಗ್ಗೆ ಹೆಚ್ಚಿನ ಸ್ಪಷ್ಟತೆಯನ್ನು ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಜಿಎಸ್‌ಟಿ ಪರಿಹಾರ ನಿಧಿಯಲ್ಲಿ ಈವರೆಗೆ ಅಷ್ಟು ಮೊತ್ತವಿಲ್ಲ, ಆದರೆ ಶೀಘ್ರ ಮರುಪಾವತಿ ಮಾಡಲಾಗುವುದು," ಎಂದು ತಿಳಿಸಿದ್ದಾರೆ.
ಸರ್ಕಾರವು ಬೇರೆ ಮೂಲಗಳಿಂದ ಮೊತ್ತವನ್ನು ಬಿಡುಗಡೆ ಮಾಡಲಿದೆ. ಮುಂದಿನ ಸೆಸ್ ಸಂಗ್ರಹದಿಂದ ಇದನ್ನು ಸರಿದೂಗಿಸಲಾಗುವುದು ಎಂದು ವರದಿಯಾಗಿದೆ. ಇನ್ನು ಬೆಲ್ಲ, ಪೆನ್ಸಿಲ್ ಶಾರ್ಪ್‌ನರ್ ಸೇರಿದಂತೆ ಹಲವಾರು ವಸ್ತುಗಳ ಜಿಎಸ್‌ಟಿಯನ್ನು ಕಡಿತ ಮಾಡುವ ನಿರ್ಧಾರವನ್ನು ಕೂಡಾ ಈ ಜಿಎಸ್‌ಟಿ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಜಿಎಸ್‌ಟಿ ಸಂಗ್ರಹ ಏರಿಕೆ
ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹ ಮತ್ತೆ ಏರಿಕೆಯಾಗಿದೆ. ಜನವರಿ ಜಿಎಸ್‌ಟಿ ಸಂಗ್ರಹವು 1.55 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಎರಡನೇ ಅತೀ ಅಧಿಕ ಜಿಎಸ್‌ಟಿ ಸಂಗ್ರಹ ಇದಾಗಿದೆ ಎಂದು ಇತ್ತೀಚೆಗೆ ಹಣಕಾಸು ಸಚಿವಾಲಯವು ಮಾಹಿತಿ ನೀಡಿದೆ. "ಜನವರಿ 2023ರ ತಿಂಗಳಿನ ಅಂತ್ಯದ ದಿನವಾದ 31ರಂದು ಸಂಜೆ 5 ಗಂಟೆಯವರೆಗೆ ಒಟ್ಟು 1,55,922 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಈ ಪೈಕಿ 28,963 ಕೋಟಿ ಸಿಜಿಎಸ್‌ಟಿ ಆಗಿದ್ದರೆ, 36,730 ಕೋಟಿ ಎಸ್‌ಜಿಎಸ್‌ಟಿ ಆಗಿದೆ. 79,599 ಕೋಟಿ ಐಜಿಎಸ್‌ಟಿ ಹಾಗೂ 10,630 ಕೋಟಿ ಸೆಸ್ ಆಗಿದೆ," ಎಂದು ಸಚಿವಾಲಯ ವಿವರಣೆ ನೀಡಿದೆ. ಕಳೆದ ವರ್ಷ ಜನವರಿಯಲ್ಲಿ ಜಿಎಸ್‌ಟಿ ಮೂಲಕ ಸಂಗ್ರಹವಾದ ಆದಾಯಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಜನವರಿ ತಿಂಗಳಿನ ಜಿಎಸ್‌ಟಿ ಸಂಗ್ರಹವು ಶೇಕಡ 24ರಷ್ಟು ಏರಿಕೆಯಾಗಿದೆ. ಈ ಹಣಕಾಸು ವರ್ಷದಲ್ಲಿ ಇದು ಮೂರನೇ ಬಾರಿ 1.50 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿದೆ.


Click it and Unblock the Notifications