ಇತ್ತೀಚೆಗೆ ಭಾರತದಲ್ಲಿ ಆನ್‌ಲೈನ್‌ನಲ್ಲಿ ಹಣ ಗಳಿಸುವ ಗೇಮ್‌ಗಳ ಹಾವಳಿ ಹೆಚ್ಚಾಗಿದೆ. ಈ ಆನ್‌ಲೈನ್ ಗೇಮ್‌ಗಳು ಹಣ ಗಳಿಸುವುದಕ್ಕಿಂತ, ಕಳೆದುಕೊಳ್ಳುವ ಗೇಮ್‌ಗಳು ಎನ್ನಬಹುದು. ಇದರಿಂದ ಸಾಕಷ್ಟು ಜನ ಹಣ ಕಳೆದುಕೊಂಡು ಪ್ರಾಣ ಬಿಟ್ಟಿದ್ದಾರೆ. ಇದರ ನಡುವೆ ಒಂದು ಮಹತ್ವದ ಬೆಳವಣಿಗೆ ಕಂಡುಬಂದಿದೆ. ಅದೇನೆಂದರೆ ಆನ್‌ಲೈನ್ ಗೇಮಿಂಗ್‌ಗಳತ್ತ ಗಮನ ಹರಿಸಿದ ಜಿಎಸ್ಟಿ ಗುಪ್ತಚರ ಅಧಿಕಾರಿಗಳು ಭಾರತದಲ್ಲಿ, ಅಕ್ರಮ ವಿದೇಶಿ ಗೇಮಿಂಗ್ ಸಂಸ್ಥೆಗಳನ್ನು ನಿರ್ಬಂಧಿಸಿದ್ದಾರೆ. ಈ ಬಗ್ಗೆ ಹಣಕಾಸು ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.

ಹೌದು, ಜಿಎಸ್‌ಟಿ ಗುಪ್ತಚರ ಅಧಿಕಾರಿಗಳು 357 ವಿದೇಶಿ ಗೇಮಿಂಗ್ ಕಂಪನಿಗಳನ್ನು ತಡೆಹಿಡಿದಿದ್ದಾರೆ. ಅಲ್ಲದೇ 2,400ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಗೇಮಿಂಗ್ ಕಂಪನಿಗಳು ಭಾರತದಲ್ಲಿ ಆನ್‌ಲೈನ್ ಹಣ ಗೇಮಿಂಗ್ ಸೇವೆಗಳನ್ನು ಒದಗಿಸುತ್ತಿದ್ದರೂ, ಜಿಎಸ್‌ಟಿ ನೋಂದಣಿ ಇಲ್ಲದೆ ತೆರಿಗೆ ಪಾವತಿಯನ್ನು ತಪ್ಪಿಸುತ್ತಿದ್ದವು. ಇದು ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹಾನಿ ಮಾಡುತ್ತಿತ್ತು.ಹೀಗಾಗಿ ಈ ಬೆಳವಣಿಗೆ ಕಂಡುಬಂದಿದೆ.
ಇನ್ನು ಇತ್ತೀಚೆಗೆ ನೋಡಬಹುದಾದರೆ ಈ ಬೆಟ್ಟಿಂಗ್ ಗೇಮ್‌ಗಳನ್ನು ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್‍ಗಳಿಂದ ಹಿಡಿದು, ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು ಕೂಡ ಬೆಂಬಲಿಸುತ್ತಿದದ್ದಾರೆ. ಹಣ ಗಳಿಸಬಹುದು ಎಂದು ಹೇಳಿ ಈ ಬೆಟ್ಟಿಂಗ್ ಜಾಲದಲ್ಲಿ ಬೀಳಿಸುವವರಲ್ಲಿ ಒಬ್ಬರಾಗಿದ್ದಾರೆ. ಈ ಕುರಿತು ಸರ್ಕಾರ ಕೂಡ ಜನರಿಗೆ ಎಚ್ಚರಿಕೆ ನೀಡಿದೆ. ಇಂತಹ ಅಕ್ರಮ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ತೊಡಗಿಸಿಕೊಳ್ಳಬಾರದು ಎಂದು ತಿಳಿಸಿದೆ. ಏಕೆಂದರೆ, ಈ ಸಂಸ್ಥೆಗಳು ವಿದೇಶಿ ಮೂಲದವಾಗಿದ್ದು, ದೇಶೀಯ ಆರ್ಥಿಕ ಸ್ಥಿರತೆ ಹಾಗೂ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ತಿಳಿಸಿದೆ.
ಅಕ್ರಮ ಗೇಮಿಂಗ್ ಕಂಪನಿಗಳ ವಿರುದ್ಧ ತನಿಖೆ:
ಇನ್ನು ಸದ್ಯ 700 ವಿದೇಶಿ ಇ-ಗೇಮಿಂಗ್ ಕಂಪನಿಗಳು ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ ಸ್ಕ್ಯಾನರ್ ಅಡಿಯಲ್ಲಿವೆ. ಈ 700 ವಿದೇಶಿ ಇ-ಗೇಮಿಂಗ್ ಕಂಪನಿಗಳು ನೋಂದಾಯಿಸಿಕೊಳ್ಳದೆ, ಸರ್ಕಾರಕ್ಕೆ ತೆರಿಗೆ ಪಾವತಿಸದೆ, ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಸೇವೆಗಳನ್ನು ಒದಗಿಸುತ್ತಿವೆ ಎಂಬುದು ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲ , ತೆರಿಗೆ ಬಾಧ್ಯತೆ ತಪ್ಪಿಸಲು ಮತ್ತು ಹಣವನ್ನು ಮರು ಮಾರ್ಗದಲ್ಲಿಯೇ ಪರಿವರ್ತಿಸಲು ಸುಳ್ಳು ಖಾತೆಗಳ ಬಳಕೆ ಮಾಡುತ್ತಿವೆ ಎಂದು ತನಿಖೆಯಿಂದ ಬಹಿರಂಗವಾಗಿದೆ. ಸದ್ಯ ಈಗಾಗಲೇ ಸರ್ಕಾರ 166 ಸುಳ್ಳು ಖಾತೆಗಳನ್ನು ನಿರ್ಬಂಧಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜೊತೆಗೂಡಿ, 357 ಅಕ್ರಮ ಆನ್‌ಲೈನ್ ಹಣ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಹಾಗೂ ಅವರ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ. ಈ ಕ್ರಮದ ಮೂಲಕ, ಸಾರ್ವಜನಿಕರು ಅಕ್ರಮ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ತೊಂದರೆ ಅನುಭವಿಸುವುದನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿದೆ.
ಬ್ಯಾಂಕ್ ಖಾತೆಗಳ ನಿರ್ಬಂಧ ಮತ್ತು ಹಣ ಮುಟ್ಟುಗೋಲು:
ಇದಿಷ್ಟೇ ಅಲ್ಲ ಇನ್ನೂ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, 2,400ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು DGGI ಮುಟ್ಟುಗೋಲು ಹಾಕಿಕೊಂಡಿದೆ. ಜೊತೆಗೆ ಸುಮಾರು ₹126 ಕೋಟಿ ಹಣವನ್ನು ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈ ಹಣವನ್ನು ಆನ್‌ಲೈನ್ ಮನಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಅಕ್ರಮವಾಗಿ ಸಂಗ್ರಹಿಸಲಾಗುತ್ತಿತ್ತು ಎನ್ನಲಾಗಿದೆ.
ಅಂದಹಾಗೆ ಕೆಲವು ಭಾರತೀಯ ಪ್ರಜೆಗಳು ವಿದೇಶಿ ಸಂಸ್ಥೆಗಳ ಸಹಾಯದಿಂದ ಆನ್‌ಲೈನ್ ಗೇಮಿಂಗ್ ಸೇವೆಗಳನ್ನು ನೀಡುತ್ತಿದ್ದರು. ಈ ಪೈಕಿ ಸತ್ಗುರು ಆನ್‌ಲೈನ್ ಮನಿ ಗೇಮಿಂಗ್, ಮಹಾಕಾಲ್ ಆನ್‌ಲೈನ್ ಮನಿ ಗೇಮಿಂಗ್, ಮತ್ತು ಅಭಿ247 ಆನ್‌ಲೈನ್ ಮನಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಮುಖ್ಯವಾಗಿವೆ ಎಂದು ತಿಳಿದುಬಂದಿದೆ. ಈ ಪ್ಲಾಟ್‌ಫಾರ್ಮ್‌ಗಳು ದೇಶದ ಜನರನ್ನು ಆಕರ್ಷಿಸಿ, ಅವರಿಂದ ಹಣ ಸಂಗ್ರಹಿಸಿ, ಅದನ್ನು ವಿದೇಶಕ್ಕೆ ವರ್ಗಾಯಿಸುತ್ತಿದ್ದವು ಎಂಬ ಆರೋಪವೂ ಇದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ನಂತರ, 166 ಸುಳ್ಳು ಖಾತೆಗಳನ್ನು ತಡೆ ಹಿಡಿಯಲಾಗಿತ್ತು. ಇನ್ನು ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಷ್ಟು ಆರೋಪಿಗಳ ಮೇಲೆ ತನಿಖೆ ಮುಂದುವರಿಯುತ್ತಿದೆ.
ಇನ್ನು ಈ ವಿದೇಶಿ ಗೇಮಿಂಗ್ ಕಂಪನಿಗಳು, ತಮ್ಮ ಸೇವೆಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಅಲ್ಲದೇ ಇವು ಹೊಸ ವೆಬ್ ವಿಳಾಸಗಳನ್ನು ರಚಿಸುವ ಮೂಲಕ ಮತ್ತೆ ತಮ್ಮ ಕಾರ್ಯಾಚರಣೆಗಳನ್ನು ಪ್ರಾರಂಭಿಸುತ್ತವೆ. ಇದರಿಂದಾಗಿ, ಜನರು ಮತ್ತೆ ಮರುಳಾಗುತ್ತಾರೆ ಮತ್ತು ಅನಧಿಕೃತ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಪ್ರಾರಂಭಿಸುತ್ತಾರೆ. ಸರ್ಕಾರ ಇದನ್ನು ತಡೆಯಲು ಹೊಸ ತಂತ್ರಗಳನ್ನು ಅನುಸರಿಸುತ್ತಿದೆ.


Click it and Unblock the Notifications