ಬೆಂಗಳೂರು ನಗರದ ಹೆಚ್‌ಎಎಲ್ ಏರ್‍ಪೋರ್ಟ್ ಸೇವೆ ನಿಂತು 17 ವರ್ಷಗಳೇ ಆಗಿವೆ. 2008ರಲ್ಲಿ ಸೇವೆ ನಿಲ್ಲಿಸಿದ ಹೆಚ್‌ಎಎಲ್ ಏರ್‍ಪೋರ್ಟ್ ಈಗ ಮತ್ತೆ ಸುದ್ದಿಯಲ್ಲಿ ಮುನ್ನೆಲೆಗೆ ಬಂದಿದೆ. ಅಂದರೆ ಈ ವಿಮಾನ ನಿಲ್ದಾಣವನ್ನು ಪುನರಾರಂಭಿಸುವ ಕುರಿತ ಚರ್ಚೆಗಳು ಜೋರಾಗಿ ಸದ್ದು ಮಾಡುತ್ತಿವೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೆಚ್‌ಎಎಲ್ ವಿಮಾನ ನಿಲ್ದಾಣದವನ್ನು ನವೀಕರಣ ಮಾಡುವ ಸಂಬಂಧ, ಮಾಸ್ಟರ್ ಪ್ಲಾನ್‌ಗೆ ಒಪ್ಪಿಗೆ ಸೂಚಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹೆಚ್‌ಎಎಲ್ ವಿಮಾನ ನಿಲ್ದಾಣದ ಬಗ್ಗೆ ಧ್ವನಿ ಎತ್ತುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು, ಈ ಪುನರಾರಂಭದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಇನ್ನು 2008 ಮೇ ತಿಂಗಳಲ್ಲಿ ದೇವನಹಳ್ಳಿ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಸೇವೆ ಆರಂಭವಾಯಿತು. ಹಾಗೆಯೇ ಆ ವರ್ಷವೇ ಹೆಚ್‌ಎಎಲ್ ವಿಮಾನ ನಿಲ್ದಾಣದ ಸೇವೆ ಸ್ಥಗಿತವೂ ಆಯ್ತು. ಇದಾದ ಕೆಲ ವರ್ಷಗಳ ನಂತರ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಂಥಾ ಹೊತ್ತಿನಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, HAL ವಿಮಾನ ನಿಲ್ದಾಣದಂತೆ ಸರಿಯಾದ ಸಾರ್ವಜನಿಕ ಮೂಲಸೌಕರ್ಯವನ್ನು ವ್ಯರ್ಥ ಮಾಡುವುದು ಯುಕ್ತಿಯುತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಹೆಚ್‌ಎಎಲ್ ವಿಮಾನ ನಿಲ್ದಾಣದ ಪುನಾರರಂಭದಿಂದ ಸಾಕಷ್ಟು ಅಗತ್ಯತೆಗಳಿವೆ. ಅದರಲ್ಲಿ ಮೊದಲನೆಯದಾಗಿ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವುದಾಗಿದೆ. ಅಂದರೆ ಬೆಂಗಳೂರಿನಲ್ಲಿ ವಿಮಾನ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಕೆಂಪೇಗೌಡ ವಿಮಾನ ನಿಲ್ದಾಣ ಹೈರಾಣಾಗಿ ಹೋಗಿದೆ. ಹೆಚ್‌ಎಎಲ್ ವಿಮಾನ ಮರು ಆರಂಭವಾದರೆ ಆ ಒತ್ತಡವನ್ನು ಕಡಿಮೆ ಮಾಡಬಹುದು..ಜೊತೆಗೆ ಪ್ರಯಾಣಿಕರು ಸುಖಕರವಾಗಿ ತಮ್ಮ ಗುರಿ ತಲುಪಬಹುದು. ಹಾಗೆಯೇ ವಿಮಾನ ಸೇವೆಗಳೂ ಸುಗಮಗೊಳ್ಳುತ್ತದೆ.
ತೇಜಸ್ವಿ ಸೂರ್ಯ ಟ್ವೀಟ್ ಹಂಚಿಕೆ
ಇನ್ನು ಈ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಹಂಚಿಕೊಂಡಿದ್ದಾರೆ. ಅದೇನೆಂದರೆ ಬೆಂಗಳೂರಿನ ತಜ್ಞರಿಂದ ಬೆಂಬಲ ಪಡೆದು ಹೆಚ್‌ಎಎಲ್ ಏರ್‍ಪೋರ್ಟ್ ಮರು ಆರಂಭದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮಾರ್ಚ್ 10ರಿಂದ ಸಂಸತ್ ಅಧಿವೇಶನ ಪ್ರಾರಂಭವಾಗಲಿದ್ದು, ಅದರ ನಂತರ ವಿಮಾನ ನಿಲ್ದಾಣ ಮರು ಆರಂಭದ ಕೆಲಸ ಶುರು ಎಂದು ಹಂಚಿಕೊಂಡಿದ್ದಾರೆ.
ಹೆಚ್‌ಎಎಲ್ ಏರ್‍ಪೋರ್ಟ್ ಮರು ಆರಂಭದ ಕುರಿತು ಸಭೆ:
ಇತ್ತೀಚೆಗೆ ಬಂದಿರುವ ಮಾಹಿತಿ ಪ್ರಕಾರ, ಮಾರ್ಚ್ ಎರಡನೇ ವಾರದಲ್ಲಿ ಹೆಚ್‌ಎಎಲ್ ವಿಮಾನ ನಿಲ್ದಾಣ ಮರು ಆರಂಭದ ಕುರಿತು, ದೆಹಲಿಯಲ್ಲಿ ಎಲ್ಲಾ ಪಾಲುದಾರರ ಸಭೆ ನಡೆಯಲಿದೆ ಎನ್ನಲಾಗುತ್ತಿದೆ. ಈ ಸಭೆ ನಾಗರಿಕ ವಿಮಾನಯಾನ ಸಚಿವರ ನೇತೃತ್ವದಲ್ಲಿ ನಡೆಯಲಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮತ್ತು HAL ನಂತಹ ಪಾಲುದಾರರನ್ನು ಒಳಗೊಂಡಿರುತ್ತದೆ.
ಅಂದಹಾಗೆ ಈ ಹೆಚ್‌ಎಎಲ್ ವಿಮಾನ ನಿಲ್ದಾಣವು ವಿಧಾನಸೌಧದಿಂದ ಸುಮಾರು, 13 ಕಿ.ಮೀ ದೂರದಲ್ಲಿದೆ. ಹಾಗೆಯೇ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ನಿರ್ವಹಿಸುತ್ತಿದ್ದ, ಈ ವಿಮಾನ ನಿಲ್ದಾಣವನ್ನು ಈಗ ಪರೀಕ್ಷಾ ಸೌಲಭ್ಯ ಮತ್ತು VIP ವಿಮಾನಯಾನವಾಗಿ ಬಳಸಲಾಗುತ್ತದೆ. ಇದು ಕೂಡ ಮರು ಆರಂಭವಾದರೆ ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಮತ್ತೊಂದು ಏರ್‍ಪೋರ್ಟ್ ಸೇರಿ, ಬೆಂಗಳೂರಿನಲ್ಲಿ ಮೂರು ವಿಮಾನ ನಿಲ್ದಾಣಗಳು ತಲೆ ಎತ್ತಬಹುದಾಗಿದೆ.
ಇನ್ನು ಸಂಸದ ತೇಜಸ್ವಿ ಸೂರ್ಯ ಅವರು ದೆಹಲಿಯಲ್ಲಿ ಕಳೆದ ತಿಂಗಳಷ್ಟೇ, ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮನವಿ ಮಾಡಿದ್ರು. ವಾಣಿಜ್ಯ ವಿಮಾನ ಸಂಚಾರಕ್ಕಾಗಿ HAL ವಿಮಾನ ನಿಲ್ದಾಣವನ್ನು ತೆರೆಯಲು ಕ್ರಮಗಳನ್ನು ತೆಗೆದುಕೊಂಡರೆ ಉತ್ತಮ. ಹೀಗಾಗಿ ಬೆಂಗಳೂರಿನಲ್ಲಿ ಹೆಚ್‌ಎಎಲ್ ವಿಮಾನ ನಿಲ್ದಾಣ ಮತ್ತೆ ಸೇವೆ ಆರಂಭಿಸಬೇಕು ಎಂದು ಮನವಿ ಮಾಡಿ, ಈ ಬಗ್ಗೆ ತಮ್ಮ X ಖಾತೆಯಲ್ಲಿ ಪೋಸ್ಟ್‌ವೊಂದನ್ನು ಕೂಡ ಹಂಚಿಕೊಂಡಿದ್ದರು.


Click it and Unblock the Notifications