ಬೆಂಗಳೂರು: ಪ್ರಸ್ತುತ ಎಚ್‌ಸಿಎಲ್ ಕಂಪನಿಯ ಅಧ್ಯಕ್ಷ ಶಿವ ನಡಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಜುಲೈ 17 ರಂದು ಅಂಗೀಕಾರಗೊಂಡಿದೆ.
ತೆರವಾದ ನೋಯ್ಡಾ ಮೂಲದ ಎಚ್‌ಸಿಎಲ್ ಕಂಪನಿಯ ಅಧ್ಯಕ್ಷ ಸ್ಥಾನವನ್ನು ಶಿವ ನಡಾರ್ ಅವರ ಮಗಳು ರೋಶಿನಿ ನಡಾರ್ ಮಲ್ಹೋತ್ರಾ ಅವರು ತುಂಬಲಿದ್ದಾರೆ. ಶಿವ ನಡಾರ್ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ. ಎಚ್‌ಸಿಎಲ್ ಅಧ್ಯಕ್ಷರಾಗುವ ಮೂಲಕ ರೋಶಿನಿ ಅವರು ಇದೀಗ ಭಾರತದ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.
ರೋಶಿನಿ ನಡಾರ್ ಮಲ್ಹೋತ್ರಾ ಅವರ ಪರಿಚಯ ಇಲ್ಲಿದೆ...
ಅಮೆರಿಕದ ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ಪದವಿ
ರೋಶಿನಿ ಅವರು ರಾಷ್ಟ್ರ ರಾಜಧಾನಿ ನವದೆಹಲಿಯ ವಸಂತ್ ವ್ಯಾಲಿ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ ಮತ್ತು ನಂತರ ಅಮೆರಿಕದ ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಮಾಸ್ಟರ್ಸ್ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮಾಡಿದ್ದಾರೆ.
ಸಿಇಒ ಹುದ್ದೆ ಅಲಂಕರಿಸಿದ್ದಾರೆ
ರೋಶ್ನಿ ನಾಡರ್ ಮಲ್ಹೋತ್ರಾ ಅವರು ಎಚ್‌ಸಿಎಲ್ ಕಾರ್ಪೊರೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಎಚ್‌ಸಿಎಲ್ ಟೆಕ್ನಾಲಜೀಸ್ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ ಮತ್ತು ಶಿವ ನಾಡರ್ ಪ್ರತಿಷ್ಠಾನದ ಟ್ರಸ್ಟಿಯೂ ಆಗಿದ್ದಾರೆ. ಎಚ್‌ಸಿಎಲ್ ಕಾರ್ಪೊರೇಶನ್‌ನಲ್ಲಿ, ಸಂಸ್ಥೆಗೆ ಕಾರ್ಯತಂತ್ರದ ಸಲಹೆಗಳನ್ನು ನೀಡುವ ಕೆಲಸವನ್ನು ರೋಶಿನಿ ಹೊಂದಿದ್ದಾರೆ.
ಶೇ 7.3 ರ ಕುಸಿತ
ಜೂನ್ ತ್ರೈಮಾಸಿಕದಲ್ಲಿ ಎಚ್‌ಸಿಎಲ್ ಕಂಪನಿಯು ತನ್ನ ನಿವ್ವಳ ಲಾಭದಲ್ಲಿ ಶೇ 7.3 ರ ಕುಸಿತವನ್ನು ದಾಖಲಿಸಿತ್ತು. ಈ ವೇಳೆ ನಿವ್ವಳ ಲಾಭ 2925 ಕೋಟಿ ರುಪಾಯಿ ಆಗಿದ್ದರೆ, ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 3154 ಕೋಟಿ ರು ಆಗಿತ್ತು.
ಆದಾಯ ಶೇ 4 ರಷ್ಟು ಕುಸಿತವಾಗಿದೆ
ಕಳೆದ ತ್ರೈಮಾಸಿಕದಲ್ಲಿ ಎಚ್‌ಸಿಎಲ್‌ನ ಆದಾಯ ಶೇ 4 ರಷ್ಟು ಕುಸಿತವಾಗಿದೆ. ಶಿವ ನಡಾರ್ ಅವರು ಹುದ್ದೆ ತ್ಯಜೀಸುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ರೋಶಿನಿ ನಡಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ


Click it and Unblock the Notifications