ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್‌ನ ಷೇರು ಬೆಲೆ ಸತತ ನಾಲ್ಕನೇ ಸೆಷನ್‌ನಲ್ಲಿ ಶುಕ್ರವಾರ (ಸೆಪ್ಟೆಂಬರ್ 22) ಕುಸಿತ ಕಂಡಿದೆ. ಶುಕ್ರವಾರ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಸುಮಾರು ಶೇಕಡ 1.57 ರಷ್ಟು ಕುಸಿದು ಪ್ರತಿ ಷೇರಿನ ಬೆಲೆ 1529.20 ರೂಪಾಯಿಗೆ ತಲುಪಿದೆ.
ಈ ಷೇರು ಬೆಲೆ ಲೆಕ್ಕಾಚಾರದಲ್ಲಿ ನೋಡಿದಾಗ ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ 11,59,154.60 ಕೋಟಿ ರೂಪಾಯಿಯಷ್ಟು ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಮುಖ್ಯವಾಗಿ ಕಳೆದ ನಾಲ್ಕು ವಹಿವಾಟು ಅವಧಿಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸುಮಾರು 1 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ 52 ವಾರಗಳ ಕನಿಷ್ಠ ಮಟ್ಟ 1,365.05 ರೂಪಾಯಿಗೆ ತಲುಪಿದೆ. 52 ವಾರಗಳ ಗರಿಷ್ಠ ಮಟ್ಟ 1,757.80 ರೂಪಾಯಿ ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಲೀನದ ಘೋಷಣೆಯ ಬಳಿಕದ ಈ ಗರಿಷ್ಠ ಕನಿಷ್ಠ ಮಟ್ಟವಾಗಿದೆ.
ಸ್ಟಾಕ್ ಒಂದು ವಾರದಲ್ಲಿ ಶೇಕಡ 6.70ರಷ್ಟು ಮತ್ತು ಒಂದು ತಿಂಗಳ ಅವಧಿಯಲ್ಲಿ ಶೇಕಡ 2 ರಷ್ಟು ಕುಸಿದಿದೆ. ಇನ್ನು ಕ್ರಮವಾಗಿ ಒಂದು ವರ್ಷದಲ್ಲಿ ಶೇಕಡ 12.35 ರಷ್ಟು, 3 ವರ್ಷಗಳಲ್ಲಿ ಶೇಕಡ 49.66 ರಷ್ಟು ಮತ್ತು ಐದು ವರ್ಷಗಳ ಅವಧಿಯಲ್ಲಿ ಶೇಕಡ 57.50 ರಷ್ಟು ಗಳಿಸಿದೆ.
ಇತ್ತೀಚೆಗೆ, ಬ್ರೋಕರೇಜ್ ಸಂಸ್ಥೆ ನೋಮುರಾ ಸ್ಟಾಕ್‌ನ ರೇಟಿಂಗ್ ಅನ್ನು ಖರೀದಿ (buy) ಸ್ಥಿತಿಯಿಂದ ತಟಸ್ಥ (neutral) ಕ್ಕೆ ಇಳಿಕೆ ಮಾಡಿದೆ. ಹಾಗೆಯೇ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಟಾರ್ಗೆಟ್ ಪ್ರೈಸ್ ಅನ್ನು 1,970 ರೂಪಾಯಿಯಿಂದ 1,800 ರೂಪಾಯಿಗೆ ಇಳಿಸಿದೆ. ಇದಾದ ಬಳಿಕ ಷೇರುಪೇಟೆಯಲ್ಲಿ ಸ್ಟಾಕ್ ಕುಸಿಯುತ್ತಿದೆ.
ಹಿಂದೂಸ್ತಾನ್ ಆಯಿಲ್ ಕಂಪನಿ ಪಾಲು ಕಡಿತಗೊಳಿಸಿದ ಬ್ಯಾಂಕ್
"ಹಿಂದೂಸ್ತಾನ್ ಆಯಿಲ್ ಎಕ್ಸ್‌ಪ್ಲೋರೇಶನ್ ಕಂಪನಿ ಲಿಮಿಟೆಡ್‌ನಲ್ಲಿ ಎಚ್‌ಡಿಎಫ್‌ಸಿ ಲಿಮಿಟೆಡ್ ಪ್ರತಿ ಷೇರಿನ ದರ ಹತ್ತು ರೂಪಾಯಿಯಂತೆ 86,83,148 ಈಕ್ವಿಟಿ ಷೇರುಗಳಲ್ಲಿ 239,144 ಷೇರುಗಳನ್ನು ಮಾರ್ಚ್ 31, 2022 ಮತ್ತು ಜೂನ್ 23, 2023ರಂದು ಮಾರಾಟ ಮಾಡಿದೆ. ಜುಲೈ 1, 2023 ರಿಂದ ಜಾರಿಗೆ ಬರುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್ ಜೊತೆ ಎಚ್‌ಡಿಎಫ್‌ಸಿ ವಿಲೀನವಾಗಿದೆ. ಈಗ ಬ್ಯಾಂಕ್ 26,98,744 ಷೇರುಗಳನ್ನು ಮಾರಾಟ ಮಾಡಿದೆ. ಇದರಿಂದಾಗಿ ಒಟ್ಟಾಗಿ ಶೇಕಡ 2.22 ರಷ್ಟು ಷೇರನ್ನು ಮಾರಾಟ ಮಾಡಿದಂತಾಗಿದೆ," ಎಂದು ಕಂಪನಿಯ ನಿರ್ದೇಶಕರ ಮಂಡಳಿಯು ಫೈಲಿಂಗ್‌ನಲ್ಲಿ ಹೇಳಿದೆ.
ಎಚ್‌ಒಇಸಿ ಅಥವಾ ಹಿಂದೂಸ್ತಾನ್ ಆಯಿಲ್ ಎಕ್ಸ್‌ಪ್ಲೋರೇಶನ್ ಕಂಪನಿ ಲಿಮಿಟೆಡ್ ತೈಲ ಮತ್ತು ಅನಿಲ ಪರಿಶೋಧನಾ ವಲಯದ ಕಂಪನಿಯಾಗಿದ್ದು, ಭಾರತದಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಪರಿಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ತೊಡಗಿದೆ.


Click it and Unblock the Notifications