ಕರ್ನಾಟಕ, ಕೇರಳ, ತಮಿಳುನಾಡು (Karnataka, Kerala, Tamil nadu) ರಾಜ್ಯಗಳಲ್ಲಿ ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇತ್ತೀಚೆಗೆ ಬಿಸಿಲಿಗಿಂತ ಮಳೆಯೇ ಹೆಚ್ಚಾಗಿದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಹಲವು ರಾಜ್ಯಗಳಿಗೆ ಮಳೆ ಅಲರ್ಟ್ (Rain Alert) ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಕೇರಳದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಕೆಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ಕೇರಳ ಬೆನ್ನಲ್ಲೇ ಚೆನ್ನೈ ಜಿಲ್ಲಾಧಿಕಾರಿ ರಶ್ಮಿ ಸಿದ್ಧಾರ್ಥ್ ಜಾಗಡೆ ಅವರು ಕೂಡಾ ಇಂದು (ಅ.22) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಇದಕ್ಕೆ ಕಾರಣ ಚೆನ್ನೈ ನಗರದಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಲೇ ಇದೆ. ದೀಪಾವಳಿ ಬೆನ್ನಲ್ಲೇ ಮಳೆ ಜೋರಾಗಿದ್ದು, ಈ ಪರಿಣಾಮ ರಜೆ ಘೋಷಣೆ ಮಾಡಲಾಗಿದೆ.

ಚೆನ್ನೈನ ಚೆಂಗಲ್ಪಟ್ಟು, ಕಡಲೂರು, ತಂಜಾವೂರು, ತಿರುವಾರೂರು, ಮೈಲಾಡುತುರೈ, ತಿರುವಳ್ಳೂರು, ವಿಲ್ಲುಪುರಂ, ಕಲ್ಲಕುರಿಚಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದು, ಇಂದು ಒಂದು ದಿನ ರಜೆ ಘೋಷಣೆ ಮಾಡಲಾಗಿದೆ.
ತಮಿಳುನಾಡಿನಲ್ಲಿ ಭಾರೀ ಮಳೆಯಿಂದಾಗಿ ಶಾಲಾ ಶಿಕ್ಷಣ ಇಲಾಖೆ ಮಹತ್ವದ ರಾಜ್ಯಮಟ್ಟದ ಗಣರಾಜ್ಯೋತ್ಸವ ಕ್ರೀಡಾಕೂಟವನ್ನು ಕೂಡಾ ಮುಂದೂಡಲಾಗಿದೆ. ಈ ಕ್ರೀಡಾಕೂಟವು ಅಕ್ಟೋಬರ್ 24 ರಿಂದ 29 ರವರೆಗೆ ತಂಜಾವೂರಿನಲ್ಲಿ ನಡೆಯಬೇಕಾಗಿತ್ತು. ಆದರೆ ಮಳೆ ಆರ್ಭಟ ಜೋರಾಗಿರುವುದರಿಂದ ಇದೀಗ ಮುಂದೂಡಲಾಗಿದೆ.
ಅದೇ ರೀತಿ ಚೆನ್ನೈನಲ್ಲಿ ಮಂಗಳವಾರವೂ ಭಾರೀ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೇರಳದಲ್ಲೂ ರಜೆ
ಇಡುಕ್ಕಿ, ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಈ ಹಿನ್ನೆಲೆ ಕೇರಳದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ, ಪ್ರವಾಸಿ ತಾಣಗಳನ್ನು ಮುಚ್ಚಲು ಮತ್ತು ಜನರಿಗೆ ಬೆಟ್ಟ ಪ್ರದೇಶಗಳಿಗೆ ಹೋಗದಂತೆ ಸೂಚನೆ ನೀಡಲಾಗಿದೆ.
ಕೇರಳದ ಇಡುಕ್ಕಿಯ ಕುಮಿಲಿಯಲ್ಲಿ ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಆಕಸ್ಮಿಕ ಪ್ರವಾಹ ಉಂಟಾಗಿತ್ತು. ಈ ಪರಿಣಾಮ ರಾಜ್ಯದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ತಿರುವನಂತಪುರಂ, ಕಣ್ಣೂರು, ಕೋಝಿಕ್ಕೋಡ್ ಮತ್ತು ಇಡುಕ್ಕಿ ಜಿಲ್ಲೆಯ ಎತ್ತರದ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಇನ್ನೂ ಮುಂದುವರೆಯುವ ಸಾಧ್ಯತೆ ಇದೆ. ಆದ್ದರಿಂದ ಕೇರಳದ ಈ ಪ್ರದೇಶಗಳಲ್ಲಿ ಪ್ರವಾಸಿ ಕೇಂದ್ರಗಳನ್ನು ಮುಚ್ಚಲಾಗಿದ್ದು, ಮುಂದಿನ ಆದೇಶದವರೆಗೆ ತೆರೆಯದಂತೆ ಎಚ್ಚರಿಕೆ ನೀಡಲಾಗಿದೆ.
ಕೇರಳ, ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದಲ್ಲೂ ಕಳೆದ ಕೆಲವು ವಾರಗಳಿಂದ ಭಾರೀ ಮಳೆಯಾಗುತ್ತಿದೆ. ಈ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ 4 ದಿನಗಳ ಕಾಲ ಮಳೆ ಅಲರ್ಟ್ ಘೋಷಣೆ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ದೀಪಾವಳಿ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದ್ದು, ಮಳೆ ಅಲರ್ಟ್‌ನಿಂದ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.


Click it and Unblock the Notifications