ರಾಜ್ಯದಲ್ಲಿ ಹಲವು ದಿನಗಳಿಂದ ಚಳಿ (Cold) ವಿಪರೀತವಾಗಿದೆ. ಅತ್ತ ಬಿಸಿಲೂ ಕಾಣದೆ ದಿನವಿಡೀ ಚಳಿ ವಾತಾವಾರಣವೇ ಇದೆ. ಅದರಲ್ಲೂ ಬೆಂಗಳೂರಂತೂ ಬೆಳಗಾದ್ರೆ ಸಾಕು ಮಂಜಿನಿಂದ ಆವರಿಸಿಕೊಂಡಿರುತ್ತದೆ. ದಿನವಿಡೀ ಚಳಿ ಇರುತ್ತದೆ. ಆದರೆ ಇದೀಗ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿ ಜಾಸ್ತಿಯಾಗಿಬಿಟ್ಟಿದೆ. ಈ ಮಧ್ಯೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದೆ. ಇದರಿಂದ ಕೆಲವು ಜಿಲ್ಲೆಗಳಲ್ಲಿ ಮಳೆಯೂ ಬೀಳಲಿದ್ದು, ಇಂದೂ (ಜ.27) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೌದು, ಬಂಗಾಳ ಕೊಲ್ಲಿಯಲ್ಲಿ ವಾಯುಭಾರತ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಮಳೆ ಸೂಚನೆ ನೀಡಲಾಗಿದೆ. ಈ ಪರಿಣಾಮ ರಾಜ್ಯದಲ್ಲಿ ಮುಂದಿನ 2 ದಿನಗಳ ಕಾಲ ಮಳೆ ಆಗಮನವನ್ನು ನಿರೀಕ್ಷಿಸಲಾಗಿದೆ.
ಕರ್ನಾಟಕದಾದ್ಯಂತ ಹಲವು ದಿನಗಳಿಂದ ಒಣಹವೆ ಮುಂದುವರೆದಿದೆ. ಆದ್ರೆ ನಿನ್ನೆಯಷ್ಟೇ (ಸೋಮವಾರ) ಬೆಂಗಳೂರು ಸೇರಿ ವಿವಿಧೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿತ್ತು. ಇದೀಗ ಇಂದೂ (ಮಂಗಳವಾರ) ಕೂಡಾ ಮಳೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಚಳಿ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬದಲಾವಣೆ ಇನ್ನೂ ಎರಡರಿಂದ ಮೂರು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರಿನ ಹವಾಮಾನ?
ಬೆಂಗಳೂರಿನಲ್ಲಿ ಇಂದೂ ಚಳಿ ಹೆಚ್ಚಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳವರೆಗೆ ಮೋಡ ಕವಿದ ವಾತಾವರಣವೇ ಮುಂದುವರೆಯಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಬೀಳಲಿದೆ. ಹವಾಮಾನ ಇಲಾಖೆ ಪ್ರಕಾರ ಬೆಂಗಳೂರಿನಲ್ಲಿ ತಾಪಮಾನವು 25 ಡಿಗ್ರಿ ಸೆಲ್ಸಯಸ್ ಹಾಗೂ 18 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಎಲ್ಲೆಲ್ಲಿ ಒಣಹವೆ?
ದಕ್ಷಿಣ ಒಳನಾಡಿನ ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಶಿವಮೊಗ್ಗ, ಚಾಮರಾಜನಗರ, ಬಳ್ಳಾರಿ, ಚಿಕ್ಕಬಳ್ಳಾಪುರ, ಮಂಡ್ಯ, ದಾವಣಗೆರೆ, ತುಮಕೂರು, ರಾಮನಗರ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಕೆಲವು ದಿನಗಳವರೆಗೆ ಒಣ ಹವೆ ಮುಂದುವರೆಯುವ ಸಾಧ್ಯತೆ ಇದೆ.
ಅಷ್ಟೇ ಅಲ್ಲದೇ ಉತ್ತರ ಒಳನಾಡು ಜಿಲ್ಲೆಗಳಾದ ಬೀದರ್, ಬಾಗಲಕೋಟೆ, ಗದಗ, ಕಲಬುರಗಿ, ಬಳ್ಳಾರಿ, ಯಾದಗಿರಿ, ಬೆಳಗಾವಿ, ವಿಜಯಪುರ, ಹಾವೇರಿ, ಧಾರವಾಡ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲೂ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ಕರಾವಳಿ ಜಿಲ್ಲೆಗಳಾದ ಉಡುಪಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯೇ ಮುಂದುವರೆಯಲಿದೆ ಎಂದು ಸೂಚನೆ ನೀಡಲಾಗಿದೆ.
ಜನರಿಗೆ ಸಲಹೆ:
ಚಳಿ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸೂಚನೆ ನೀಡಿದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುವುದರಿಂದ, ಬಿಸಿ ಬಿಸಿ ನೀರು, ಆಹಾರ, ಬೆಚ್ಚಗಿನ ಬಟ್ಟೆ, ಆರೋಗ್ಯಕರ ಆಹಾರ ಧರಿಸುವುದನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಲಾಗಿದೆ.


Click it and Unblock the Notifications