ಬೆಂಗಳೂರು: ಬೆಂಗಳೂರಿನಾದ್ಯಂತ ಮೆಟ್ರೋ (Bengaluru Metro) ಸೇವೆಯನ್ನು ವಿಸ್ತರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ನಿರಂತರ ಕೆಲಸ ಮಾಡುತ್ತಲೇ ಇದೆ. ಈಗಾಗಲೇ ಪರ್ಪಲ್, ಗ್ರೀನ್, ಯೆಲ್ಲೋ ಮಾರ್ಗದ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಸೇವೆ ಸಲ್ಲಿಸುತ್ತಿದೆ. ಇದೀಗ ಈ ವರ್ಷಾಂತ್ಯದಲ್ಲಿ ಅಥವಾ 2027 ರಲ್ಲಿ ಬೆಂಗಳೂರಿಗೆ ಬ್ಲೂಲೈನ್ ಮತ್ತು ಪಿಂಕ್ ಲೈನ್ ಮೆಟ್ರೋ ಮಾರ್ಗಗಳನ್ನು ಪರಿಚಯಿಸಲು ಬಿಎಂಆರ್‌ಸಿಎಲ್ (BMRCL) ಮುಂದಾಗಿದೆ. ಈ ಮಧ್ಯೆ ಇದೀಗ ಹೆಬ್ಬಾಳ ಮತ್ತು ಸರ್ಜಾಪುರ (Hebbala-Sarjapur Metro) ಸಂಪರ್ಕಿಸಬೇಕಿದ್ದ ಮೆಟ್ರೋ ಕಾರಿಡಾರ್ ನಿರ್ಮಾಣಕ್ಕೆ ಡಬಲ್ ಡೆಕ್ಕರ್ ನಿಯಮ ಅಡ್ಡಿಯಾಗಿದೆ.

ಹೌದು, ಈಗಾಗಲೇ ಹೆಬ್ಬಾಳ-ಸರ್ಜಾಪುರ ನಡುವೆ ನಿರ್ಮಾಣವಾಗಬೇಕಿದ್ದ ಮೆಟ್ರೋ ಕಾರಿಡಾರ್‌ಗೆ ಇದೀಗ ಡಬಲ್ ಡೆಕ್ಕರ್ ಅಡ್ಡಿಯಾಗಿದೆ. ಈ ಮಾರ್ಗದಲ್ಲಾಗುತ್ತಿರುವ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಈ ಮೆಟ್ರೋ ಯೋಜನೆಗೆ ಅನುದಾನ ಮತ್ತು ಅನುಮೋದನೆ ನೀಡಲು ಹಿಂದೇಟು ಹಾಕಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ನಿಯಮಕ್ಕೆ ಕೇಂದ್ರ ಸರ್ಕಾರ ವಿರೋಧ!
ಕರ್ನಾಟಕ ಸರ್ಕಾರವು ಭವಿಷ್ಯದ ಎಲ್ಲಾ ಎಲಿವೇಟೆಡ್ ಮೆಟ್ರೋ ಮಾರ್ಗಗಳನ್ನು ಡಬಲ್ ಡೆಕ್ಕರ್ ಮಾದರಿಯಲ್ಲಿ ಅಂದರೆ ರಸ್ತೆ, ಮೆಟ್ರೋ ಮಾರ್ಗ, ಫ್ಲೈಓವರ್ ಒಟ್ಟಿಗೆ ಇರುವಂತೆ ಮಾಡಬೇಕೆಂಬ ನಿರ್ಧಾರ ತೆಗೆದುಕೊಂಡಿದೆ. ಆದ್ರೆ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಈ ನಿರ್ಧಾರವನ್ನು ವಿರೋಧಿಸಿದೆ.
ಕೇಂದ್ರದ ಆಕ್ಷೇಪಗಳೇನು?
ಇನ್ನು ಕೇಂದ್ರ ಸರ್ಕಾರ ಬೆಂಗಳೂರಿನಾದ್ಯಂತ ಡಬಲ್ ಡೆಕ್ಕರ್ ಸೇವೆಯನ್ನು ವಿರೋಧಿಸಲು ಹಲವು ಕಾರಣಗಳಿದೆ. ಅವುಗಳೆಂದರೆ..
- ಡಬಲ್ ಡೆಕ್ಕರ್ ರಚನೆಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು.
- ವೆಚ್ಚ ಹೆಚ್ಚಾಗುತ್ತದೆ ಮತ್ತು ಸುರಕ್ಷತಾ ಸಮಸ್ಯೆಗಳು ಉಂಟಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದೆ.
- ನಗರದ ಎಲ್ಲಾ ಕಾರಿಡಾರ್‌ಗಳಲ್ಲೂ ಡಬಲ್ ಡೆಕ್ಕರ್ ವಿಸ್ತರಿಸುವುದು ಸರಿಯಲ್ಲ ಎಂಬುದು ಕೇಂದ್ರದ ವಾದ.
- ಇನ್ನು ಡಬಲ್ ಡೆಕ್ಕರ್‌ನಿಂದ ಖಾಸಗಿ ವಾಹನಗಳಿಗೂ ಅನುಕೂಲವಾಗಲಿದೆ. ಇದರಿಂದ ನಗರದಲ್ಲಿ ಮತ್ತಷ್ಟು ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ.
ನೂತನ ಮೆಟ್ರೋ ಮಾರ್ಗಗಳೆಲ್ಲಾ "ಡಬಲ್ ಡೆಕ್ಕರ್"!
ಇನ್ನು ಹೊಸದಾಗಿ ನಿರ್ಮಾಣವಾಗುವ ಎಲ್ಲಾ ಮೆಟ್ರೋ ಕಾರಿಡಾರ್‌ಗಳು 40 ಕಿ.ಮೀ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣದ ಗುರಿಯನ್ನು ಹೊಂದಿದೆ. ಇದು 30-40 ವರ್ಷದ ಭವಿಷ್ಯದ ಯೋಜನೆಯಾಗಿ ರೂಪಿಸಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮೊದಲೇ ಘೋಷಣೆ ಮಾಡಿದ್ದರು. ಆದರೆ ಈ ನಿರ್ಧಾರಕ್ಕೆ ಕೇಂದ್ರ ಸರಕಾರ ಇದೀಗ ಆಕ್ಷೇಪ ವ್ಯಕ್ತಪಡಿಸಿದೆ.
ಅಲ್ಲದೇ ಡಬಲ್ ಡೆಕ್ಕರ್ ನಿಯಮದಿಂದಾಗಿ, ಇದೀಗ ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್ ಅನ್ನು ಮರುಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಇನ್ನು ಈ ಕುರಿತು ಮಾತನಾಡಿರುವ ಸಂಸದ ಪಿಸಿ ಮೋಹನ್, ಕರ್ನಾಟಕದ ಡಬಲ್ ಡೆಕ್ಕರ್ ಯೋಜನೆಯಿಂದಾಗಿ ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್ ನಿರ್ಮಾಣ ವಿಳಂಬವಾಗುತ್ತಿದೆ. ಅಲ್ಲದೇ ಯೋಜನೆಗೆ ನೀಡಲಾಗಿದ್ದ 28,405 ಕೋಟಿ. ರೂ. ಅನುದಾನವನ್ನು ಸಹ ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.


Click it and Unblock the Notifications