ಬೆಂಗಳೂರು, ಏಪ್ರಿಲ್ 25: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಅದರಲ್ಲಿಯೂ ಬ್ಯಾಂಕಿಂಗ್‌ಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಗ್ರಾಹಕರು ಸಾಕಷ್ಟು ಆತಂಕ ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಆನ್‌ಲೈನ್ ವಂಚನೆ ಹಾಗೂ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಗೃಹ ಇಲಾಖೆಯು ಎಸ್‌ಬಿಐ ಕಾರ್ಡ್ ಮತ್ತು ಪೇಮೆಂಟ್ ಸರ್ವೀಸಸ್ ಹಾಗೂ ಟೆಲಿಕಾಂ ಆಪರೇಟರ್‌ಗಳ ಬೆಂಬಲದೊಂದಿಗೆ ಪರಿಹಾರ ಹುಡುಕುವ ಕಾರ್ಯಕ್ಕೆ ಮುಂದಾಗಿದೆ.
ಸದ್ಯ ಹಲವು ಕಡೆಗಳಲ್ಲಿ ಓಟಿಪಿ ಮೂಲಕ ಗ್ರಾಹಕರ ಖಾತೆಯಿಂದ ಹಣವನ್ನು ಲಪಟಾಯಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗ್ರಾಹಕರ ಓಟಿಪಿಯನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳುವ ಸನ್ನಿವೇಶ ಬಂದರೆ ಆಗ ಆ ಬಗ್ಗೆ ಗ್ರಾಹಕರಿಗೆ ಅಲರ್ಟ್ ಸಂದೇಶ ಕಳುಹಿಸುವ ವ್ಯವಸ್ಥೆಯನ್ನು ಜಾರಿಗೊಳಲಾಗುತ್ತಿದೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆಯು ಎಸ್‌ಬಿಐ ಪೇಮೆಂಟ್ ಹಾಗೂ ಬ್ಯಾಂಕಿಂಗ್ ಸಂಸ್ಥೆಗಳು ಹಾಗೂ ಟೆಲಿಕಾಂ ಆಪರೇಟರ್‌ಗಳ ಜತೆಸೇರಿಕೊಂಡು ತಂತ್ರಜ್ಞಾನ ವ್ಯವಸ್ಥೆಯನ್ನು ರೂಪಿಸುವತ್ತ ಕಾರ್ಯಪ್ರವೃತ್ತವಾಗಿದೆ.

ಅಂದರೆ, ಗ್ರಾಹಕರಿಗೆ ಓಟಿಪಿ ನೀಡುವ ಸಂದರ್ಭ ಬಂದಾಗ ಅವರ ವಿಳಾಸ ಹಾಗೂ ಜಿಯೋಲೊಕೇಷನ್ ಆಧರಿಸಿ ಕಾರ್ಯನಿರ್ವಹಣೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಇದರಿಂದ ಸೈಬರ್ ಖದೀಮರು ಓಟಿಪಿಯನ್ನು ಕಳ್ಳತನ ಮಾಡಿದರೆ ಜಿಯೋಲೊಕೇಷನ್ ಹಾಗೂ ಮೋಸಗಾರರು ಬಳಸುವ ಲೊಕೇಷನ್ ಬಗ್ಗೆ ಅಲರ್ಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಸದ್ಯ ಈ ತಂತ್ರಜ್ಞಾನ ವ್ಯವಸ್ಥೆಯು ಪ್ರಯೋಗಿಕವಾಗಿ ಬಳಸಲಾಗುತ್ತಿದೆ. ಗ್ರಾಹಕರ ಜಿಯೋಲೊಕೇಷನ್‌ನ್ನು ಟ್ರ್ಯಾಕ್ ಮಾಡುವ ಮೂಲಕ ಓಟಿಪಿಯನ್ನು ಸರಿಯಾದ ಲೊಕೇಷನ್‌ಗೆ ರವಾನಿಸುವ ವ್ಯವಸ್ಥೆ ಇದಾಗಿದೆ.
ಈ ರೀತಿಯ ಸೈಬರ್ ವಂಚನೆ ತಪ್ಪಿಸುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಯಾವುದೇ ಡಿಜಿಟಲ್ ಪೇಮೆಂಟ್‌ಗೆ ಹೆಚ್ಚುವರಿ ದೃಢೀಕರಣವನ್ನು ಬಯಸುತ್ತದೆ. ಆದರೆ, ಸೈಬರ್ ಖದೀಮರು ತಮ್ಮ ಮೊಬೈಲ್‌ಗಳಿಗೇ ಗ್ರಾಹಕರ ಓಟಿಪಿಯನ್ನು ರೀಡೈರೆಕ್ಟ್ ಮಾಡುವ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸೈಬರ್ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಈಗ ಜಿಯೋ ಲೊಕೇಷನ್ ಆಧಾರಿತ ಓಟಿಪಿ ವ್ಯವಸ್ಥೆ ಆರಂಭಿಸಲಾಗುತ್ತಿದೆ.
ಒಂದುವೇಳೆ ಲೊಕೇಷನ್ ಆಧಾರಿತ ಓಟಿಪಿ ಪಡೆಯುವ ಸಮಸ್ಯೆ ಎದುರಾದರೆ ಎರಡು ಹಂತಗಳನ್ನು ತೆಗೆದುಕೊಳ್ಳಲಾಗುತ್ತದೆ.
ಅಂದರೆ ಇಂಥಹ ಸಂಶಯಾಸ್ಪದ ಓಟಿಪಿಗಳಿಗೆ ಅಲರ್ಟ್ ಸಂದೇಶವನ್ನು ತಮ್ಮ ಮೊಬೈಲ್‌ನಲ್ಲಿ ಪಡೆಯುವುದು ಅಥವಾ ಓಟಿಪಿಯನ್ನು ಸಂಪೂರ್ಣ ಬ್ಲಾಕ್ ಮಾಡುವ ವ್ಯವಸ್ಥೆ ಇರುತ್ತದೆ. ಈ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಟೆಲಿಕಾಂ ನೆಟ್‌ವರ್ಕ್ ಸಂಸ್ಥೆಗಳ ಜತೆ ಸೇರಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಯೋ ಲೊಕೇಷನ್ ಓಟಿಪಿ ಬಂದಾಗ ಸಿಮ್ ಲೊಕೇಷನ್ ವ್ಯಾರಿಫಿಕೇಷನ್ ಕೂಡ ಮಾಡುವಂಥ ವ್ಯವಸ್ಥೆಯಾಗಿರುತ್ತದೆ. ಅತ್ತ ಬ್ಯಾಂಕ್‌ಗಳ ಬಳಿಯೂ ಗ್ರಾಹಕರ ವಿಳಾಸಕ್ಕೆ ಸಂಬಂಧಿಸಿದ ಡೇಟಾಗಳು ಇರುತ್ತವೆ. ಹೀಗೆ, ಬ್ಯಾಂಕ್ ಹಾಗೂ ಟೆಲಿಕಾಂ ಆಪರೇಟರ್‌ಗಳು ಜಂಟಿಯಾಗಿ ಹೊಸ ತಂತ್ರಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ಈ ರೀತಿಯ ಓಟಿಪಿ ಸೈಬರ್ ವಂಚನೆ ತಪ್ಪಿಸಬಹುದು.
ಉದಾಹರಣೆಗೆ ಗ್ರಾಹಕರು ಬೆಂಗಳೂರಿನಲ್ಲಿ ನೆಲೆಸಿದ್ದು, ಓಟಿಪಿಯು ಉತ್ತರ ಪ್ರದೇಶದಲ್ಲಿ ಬಂದರೆ, ಆಗ ಅದೊಂದು ಅಪಾಯಕಾರಿ ವ್ಯವಹಾರ ಎನ್ನುವುದು ಕೂಡಲೇ ಗಮನಕ್ಕೆ ಬರುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ ಪ್ರಕಾರ 2021ರ ಏಪ್ರಿಲ್‌ನಿಂದ 2023ರ ಡಿಸೆಂಬರ್‌ವರೆಗೆ ಸುಮಾರು 10,319 ಕೋಟಿ ರೂ. ಈ ರೀತಿಯ ಸೈಬರ್ ವಂಚನೆಗೆ ಒಳಗಾಗಿದೆ. ಕಳೆದ ವರ್ಷ ಬರೋಬ್ಬರಿ 7,488 ಕೋಟಿ ರೂ.ಗಳ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಸುಮಾರು 1.12 ಮಿಲಿಯನ್ ದೂರುಗಳು ದಾಖಲಾಗಿವೆ.


Click it and Unblock the Notifications