ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧವಾಗಿ ಹಿಂಡನ್‌ಬರ್ಗ್ ವರದಿಯೊಂದನ್ನು ಪ್ರಕಟ ಮಾಡಿದೆ. ಆದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂದು ಹಿಂಡನ್‌ಬರ್ಗ್ ಆರೋಪ ಮಾಡಿದೆ. ಈ ಬಗ್ಗೆ ಷೇರುದಾರರಿಗೆ ಪ್ರತಿಕ್ರಿಯೆಯನ್ನು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಇಂದು (ಜುಲೈ 18) ನೀಡಿದ್ದಾರೆ. ಹಿಂಡನ್‌ಬರ್ಗ್ ವರದಿಯು ಗ್ರೂಪ್ ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಅದಾನಿ ತಿಳಿಸಿದ್ದಾರೆ.
"ಹಿಂಡೆನ್‌ಬರ್ಗ್ ವರದಿಯು ಅದಾನಿ ಗ್ರೂಪ್‌ನ ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡುವ ಉದ್ದೇಶಪೂರ್ವಕ, ದುರುದ್ದೇಶಪೂರಿತ ಪ್ರಯತ್ನವಾಗಿದೆ. ಅಲ್ಪಾವಧಿಯಲ್ಲಿ ಅದಾನಿ ಗ್ರೂಪ್ ಷೇರು ಕುಸಿಯುವಂತೆ ಮಾಡಿ ಅದರ ಲಾಭವನ್ನು ಪಡೆಯುವ ಪ್ರಯತ್ನವಾಗಿದೆ," ಎಂದು ಅದಾನಿ ಎಂಟರ್‌ಪ್ರೈಸಸ್‌ನ ಎಜಿಎಂನಲ್ಲಿ ಷೇರುದಾರರಿಗೆ ಗೌತಮ್ ಅದಾನಿ ಹೇಳಿದ್ದಾರೆ.

ಎಫ್‌ಪಿಒ ಹಿಂಪಡೆದ ಬಗ್ಗೆ ಉಲ್ಲೇಖಿಸಿದ ಅದಾನಿ
"ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಗುಂಪು ವಿವಿಧ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಳ್ಳು ಸುಳ್ಳಾಗಿ ಅದಾನಿ ಗ್ರೂಪ್ ಬಗ್ಗೆ ಬರೆದುಕೊಂಡಿದೆ. ಅದನ್ನು ಪ್ರಚಾರ ಕೂಡಾ ಮಾಡಿದೆ. ಆದರೆ ಈ ನಡುವೆ ಅದಾನಿ ಗ್ರೂಪ್ ಷೇರುದಾರರ ಹಿತಾಸಕ್ತಿಯನ್ನು ಕಾಪಾಡುವ ಪ್ರಯತ್ನವನ್ನು ಮಾಡಿದೆ. ಪೂರ್ಣ ಚಂದಾದಾರಿಕೆ ಇದ್ದರೂ ಕೂಡಾ ಎಫ್‌ಪಿಒವನ್ನು ಹಿಂಪಡೆಯುವ ನಿರ್ಧಾರವನ್ನು ಗ್ರೂಪ್ ಮಾಡಿದೆ," ಎಂದು ಅದಾನಿ ಸ್ಪಷ್ಟಣೆಯನ್ನು ನೀಡಿದ್ದಾರೆ.
"ತಪ್ಪು ಮಾಹಿತಿ ಹಾಗೂ ಅಪಖ್ಯಾತಿ ಮಾಡುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ಮಾಡಲಾಗಿರುವ ವರದಿಯೇ ಹಿಂಡನ್‌ಬರ್ಗ್ ವರದಿಯಾಗಿದೆ. ಎಫ್‌ಪಿಒ ಆರಂಭವಾಗುತ್ತಿದ್ದಂತೆ ಅದಾನಿ ಸ್ಟಾಕ್‌ಗಳು ಕುಸಿಯುವಂತೆ ಮಾಡಲು ದುರುದ್ದೇಶದಿಂದ ಯುಎಸ್‌ನ ಶಾರ್ಟ್‌ಸೆಲ್ಲರ್ ಪ್ರಕಟಿಸಿರುವ ಸುಳ್ಳು ವರದಿ ಇದಾಗಿದೆ," ಎಂದು ಕೂಡಾ ಗೌತಮ್ ಅದಾನಿ ಹೇಳಿದ್ದಾರೆ.
"ಮುಂದಿನ ದಶಕಕ್ಕೂ ಮುನ್ನ ಪ್ರತಿ 18 ತಿಂಗಳಿಗೆ ಟ್ರಿಲಿಯನ್ ಡಾಲರ್ ಅನ್ನು ಜಿಡಿಪಿಗೆ ಸೇರ್ಪಡೆ ಮಾಡಲಿದೆ ಎಂಬ ನಿರೀಕ್ಷೆಯನ್ನು ನಾನು ಹೊಂದಿದ್ದೇನೆ. 2050ಕ್ಕೂ ಮುನ್ನ ಭಾರತದ ಸ್ಟಾಕ್ ಮಾರುಕಟ್ಟೆ ಬಂಡವಾಳವು 40 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ," ಎಂದು ಇದೇ ಸಂದರ್ಭದಲ್ಲಿ ಗೌತಮ್ ಅದಾನಿ ಹೇಳಿದ್ದಾರೆ. ಇನ್ನು ಪ್ರಸ್ತುತ ಭಾರತೀಯ ಷೇರು ಮಾರುಕಟ್ಟೆಯ ಒಟ್ಟು ಬಂಡವಾಳ ಮೌಲ್ಯವು 3.31 ಟ್ರಿಲಿಯನ್ ಡಾಲರ್ ಆಗಿದೆ.
ಅದಾನಿ ಗ್ರೂಪ್ ಷೇರು ಜಿಗಿತ
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಭಾಷಣದ ಬಳಿಕ ಅದಾನಿ ಗ್ರೂಪ್ ಸ್ಟಾಕ್ ಏರಿಕೆಯನ್ನು ಕಂಡಿದೆ. ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಸ್ಟಾಕ್ ಶೇಕಡ 0.73ರಷ್ಟು ಜಿಗಿದು 2,426.25 ರೂಪಾಯಿ ಆಗಿದೆ. ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್ ಸ್ಟಾಕ್ ಶೇಕಡ 2.26ರಷ್ಟು ಏರಿಕೆಯಾಗಿ 787.85 ರೂಪಾಯಿಗೆ ತಲುಪಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸ್ಟಾಕ್ ಶೇಕಡ 1.32ರಷ್ಟು ಹೆಚ್ಚಳವಾಗಿ 978.00 ರೂಪಾಯಿಗೆ ತಲುಪಿದೆ. ಇನ್ನು ಅದಾನಿ ವಿಲ್ಮಾರ್ ಲಿಮಿಟೆಡ್ ಷೇರು ಸುಮಾರು ಶೇಕಡ 1.17ರಷ್ಟು ಜಿಗಿತ ಕಂಡು 407.30 ರೂಪಾಯಿ ಆಗಿದೆ. ಅದಾನಿ ಪವರ್ ಲಿಮಿಟೆಡ್ ಸ್ಟಾಕ್ ಶೇಕಡ 0.73ರಷ್ಟಿ ಏರಿಕೆಯಾಗಿ, 247.50 ರೂಪಾಯಿಗೆ ತಲುಪಿದೆ.
ಹಿಂಡನ್‌ಬರ್ಗ್ ವರದಿ ಏನು ಹೇಳಿದೆ?
ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ವರದಿ ನೀಡಲಾಗಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ದಾಖಲೆಗಳು ನಮ್ಮಲ್ಲಿದೆ ಎಂದು ಹಿಂಡನ್‌ಬರ್ಗ್ ಮಾಹಿತಿ ನೀಡಿದೆ.
ಜನವರಿ 24ರಂದು ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಬಗ್ಗೆ ನಾವು ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ. 12ರಷ್ಟು ದೇಶಗಳಿಗೆ ಭೇಟಿ ನೀಡಿ ಸ್ವತಃ ಸ್ಥಳ ಪರಿಶೀಲನೆ ಮಾಡಿದ್ದೇವೆ. ಇದರಿಂದಾಗಿ ಅದಾನಿ ಗ್ರೂಪ್‌ಯು ವಂಚನೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ ಎಂದು ವರದಿ ಹೇಳಿದೆ.
ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.


Click it and Unblock the Notifications