ನವದೆಹಲಿ, ಆಗಸ್ಟ್ 14: ಹಿಂಡೆನ್‌ಬರ್ಗ್ ಆರೋಪದ ನಂತರ ಅದಾನಿ ಷೇರುಗಳು ಏರಿಳಿತ ಕಾಣುತ್ತಲೇ ಇವೆ. ಈ ನಡುವೆ ಮಾರಿಷಸ್‌ನ ಹಣಕಾಸು ಸೇವೆಗಳ ಆಯೋಗ (ಎಫ್‌ಎಸ್‌ಸಿ) ಬಿಡುಗಡೆ ಮಾಡಿರುವ ಹೇಳಿಕೆ ಸಹ ಪ್ರಾಮುಖ್ಯತೆ ಪಡೆದುಕೊಂಡಿದೆ.
ಆಗಸ್ಟ್ 13 ರಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ. ಭಾರತದ ಸೆಕ್ಯುರಿಟೀಸ್ ಮತ್ತು ಎಕ್ಸ್ಚೆಂಜ್ ಬೋರ್ಡ್ (ಸೆಬಿ) ಅಧ್ಯಕ್ಷೆ, ಮಾಧಬಿ ಪುರಿ ಬುಚ್ ಕಡಲಾಚೆ ಅಂದರೆ ಮಾರಿಷಸ್ ನಲ್ಲಿ ಫಂಡ್ ವಿನಿಯೋಗಿಸಿದ್ದಾರೆ ಎಂದು ಮಾಡಿರುವ ಆರೋಪಕ್ಕೆ ಯಾವುದೇ ಆಧಾರ ಇಲ್ಲ ಎಂದು ಮಾರಿಷಸ್ ಹೇಳಿದೆ. ಮಾರಿಷಸ್ ಶೆಲ್ ಕಂಪನಿಗಳ ಸೃಷ್ಟಿಗೆ ಅವಕಾಶ ನೀಡುವುದಿಲ್ಲ ಎಂದು FSC ಸ್ಪಷ್ಟಪಡಿಸಿದೆ.

ಹಿಂಡೆನ್ ಬರ್ಗ್ ಆರೋಪ ಮಾಡಿದ ಮೂರು ದಿನಗಳ ನಂತರದಲ್ಲಿ ಈ ಸ್ಪಷ್ಟನೆ ಬಂದಿದೆ. ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಪಾತ್ರ ಇದ್ದು ಇದಕ್ಕೆ ಮಾರಿಷಸ್ ಲಿಂಕ್ ಇದೆ ಎಂದು ಹಿಂಡೆನ್ ಬರ್ಗ್ ಆರೋಪ ಮಾಡಿತ್ತು. 2015ರಲ್ಲಿ ಸಿಂಗಾಪುರ ಮೂಲದ ಸಂಪತ್ತು ನಿರ್ವಹಣಾ ಸಂಸ್ಥೆಯೊಂದರಲ್ಲಿ ಬಚ್ ಕುಟುಂಬ ಅನ್ ಕ್ಲೋಸ್ಡ್ ಹಣ ಹೂಡಿಕೆ ಮಾಡಿತ್ತು. ಇದು ಅದಾನಿ ಗ್ರೂಪ್ ಗೆ ಲಿಂಕ್ ಆಗಿತ್ತು. ಕೃತಕವಾಗಿ ಅದಾನಿ ಷೇರುಗಳ ದರ ಏರಿಕೆ ಉದ್ದೇಶ ಇದರ ಹಿಂದಿತ್ತು ಎಂದು ಹಿಂಡನ್ ಬರ್ಗ್ ಆರೋಪಿಸಿತ್ತು.
FSC ಯ ತನ್ನ ಹೇಳಿಕೆಯಲ್ಲಿ ಇನ್ನಷ್ಟು ಸ್ಪಷ್ಟನೆ ನೀಡಿದೆ. ಹಿಂಡೆನ್ ಬರ್ಗ್ ಹೇಳಿರುವ IPE ಪ್ಲಸ್ ಫಂಡ್ ಮತ್ತು IPE ಪ್ಲಸ್ ಫಂಡ್ 1- FSC ಯಿಂದ ಪರವಾನಗಿ ಪಡೆದಿಲ್ಲ ಅಥವಾ ಮಾರಿಷಸ್‌ನಲ್ಲಿ ಈ ರೀತಿಯ ವ್ಯವಹಾರ ನಡೆದಿಲ್ಲ ಎಂಬ ಸ್ಪಷ್ಟನೆಯನ್ನು ನೀಡಲಾಗಿದೆ. ಮಾರಿಷಸ್ ಒಂದು ತೆರಿಗೆ ಸ್ವರ್ಗ, ಇಲ್ಲಿಂದ ಬೇರೆ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಬಹುದು ಎನ್ನುವ ಅಂಶಗಳನ್ನು ಹಿಂಡೆನ್ ಬರ್ಗ ಹೇಳಿದ್ದು ಇವೆಲ್ಲ ಸತ್ಯಕ್ಕೆ ದೂರವಾದ ಸಂಗತಿ ಎಂದು ಸ್ಪಷ್ಟನೆ ನೀಡಲಾಗಿದೆ.
ಅಂತರಾಷ್ಟ್ರೀಯ ಮಾನದಂಡಗಳ ಅನುಸಾರವಾಗಿ FSC ಮಾರಿಷಸ್‌ನಲ್ಲಿ ಕಾರ್ಯನಿರ್ವಹಿಸಿಕೊಂಡು ಬಂದಿದೆ. ವಿಶೇಷವಾಗಿ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಯ ನಿಯಮಗಳಿಗೆ ಬದ್ಧವಾಗಿಯೇ ಕಾರ್ಯನಿರ್ವಹಣೆ ಇದೆ. ಇದನ್ನು OECD ಸಹ ಹೇಳಿದೆ. ಮಾರಿಷಸ್ ತನ್ನ ತೆರಿಗೆ ವ್ಯವಸ್ಥೆಯಲ್ಲಿಯೂ ಪಾರ್ದರ್ಶಕವಾಗಿದೆ. ನಿಯಂತ್ರಿತ, ಪಾರದರ್ಶಕ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನ್ವಯವಾಗಿಯೇ ಕೆಲಸ ಮಾಡಿಕೊಂಡು ಬರಲಾಗುತ್ತಿದೆ ಎಂದು ಸ್ಪಷ್ಟನೆ ತಿಳಿಸಿದೆ.
ಹಿಂಡೆನ್‌ಬರ್ಗ್ ವರದಿಯ ನಂತರ SEBI ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಮಾರಿಷಸ್‌ನಲ್ಲಿ ನೋಂದಾಯಿಸಲಾದ IPE ಪ್ಲಸ್ ಫಂಡ್ 1 ಮತ್ತು ಬರ್ಮುಡಾ ಮೂಲದ ಗ್ಲೋಬಲ್ ಡೈನಾಮಿಕ್ ಆಪರ್ಚುನಿಟೀಸ್ ಫಂಡ್‌ನಲ್ಲಿ ಹೂಡಿಕೆ ಮಾಡಲಾಗಿದೆ ಎನ್ನುವುದಕ್ಕೂ ಯಾವುದೇ ಆಧಾರ ಇಲ್ಲ ಎಂದು ಹೇಳಿದ್ದಾರೆ.
ಬಿಲಿಯನೇರ್ ಗೌತಮ್ ಅದಾನಿಯವರ ಹಿರಿಯ ಸಹೋದರ ವಿನೋದ್ ಅದಾನಿಯವರ ನಿಯಂತ್ರಣದಲ್ಲಿರುವ ಕಂಪನಿಯು ಗ್ಲೋಬಲ್ ಡೈನಾಮಿಕ್ ಆಪರ್ಚುನಿಟೀಸ್ ಫಂಡ್‌ನಲ್ಲಿ ಹೂಡಿಕೆ ಮಾಡಿದೆ ಎಂದು ಹಿಂಡೆನ್ ಬರ್ಗ್ ಆರೋಪಿಸಿದೆ. ಅಲ್ಲದೇ ಐಪಿಇ ಪ್ಲಸ್ ಫಂಡ್ 1 ನಲ್ಲಿ ಹೂಡಿಕೆ ಮಾಡಲಾಗಿದೆ ಎನ್ನುವ ಆರೋಪವೂ ಇದೆ. ಈ ಐಪಿಇ ಪ್ಲಸ್ ಫಂಡ್ 1 ರ ಸ್ಥಾಪಕ ಮತ್ತು ಮುಖ್ಯ ಹೂಡಿಕೆ ಅಧಿಕಾರಿ ಅದಾನಿ ಎಂಟರ್‌ಪ್ರೈಸಸ್‌ನ ಮಾಜಿ ನಿರ್ದೇಶಕ ಅನಿಲ್ ಅಹುಜಾ ಎನ್ನುವುದು ಇನ್ನೊಂದು ಪ್ರಮುಖ ಆರೋಪ.
ಒಟ್ಟಿನಲ್ಲಿ ಅಮೆರಿಕದಲ್ಲಿ ಕುಳಿತು ಬಿಡುಗಡೆಯಾದ ಹಿಂಡೆನ್ ಬರ್ಗ್ ವರದಿ ಅದಾನಿ ಗ್ರೂಪ್, ಭಾರತದ ಷೇರು ಮಾರುಕಟ್ಟೆ ಮೇಲೆ ಅಷ್ಟೇ ಅಲ್ಲದೆ ಮಾರಿಷಸ್ ನಲ್ಲಿಯೂ ಒಂದು ಹಂತದ ಪ್ರತಿಧ್ವನಿಗೆ ಕಾರಣವಾಯಿತು.


Click it and Unblock the Notifications