ಆರಂಭದಲ್ಲಿ ಯಾವುದೇ ಉದ್ಯಮ ಆರಂಭಿಸುವಾಗ ಅಲ್ಪ ಮೊತ್ತದ ಹೂಡಿಕೆಯೊಂದಿಗೆ ವ್ಯವಹಾರ ಆರಂಭ ಮಾಡುವುದೇ ಉತ್ತಮ ಎಂದು ಹೆಚ್ಚಿನ ಆರ್ಥಿಕ ಪಂಡಿತರ ಅಭಿಪ್ರಾಯ. ಅದರಂತೆ ಭಾರತದಲ್ಲಿ ಸದ್ಯ ಇರುವ ದೊಡ್ಡ ಉದ್ಯಮಿಗಳು ಕೂಡ ಇದಕ್ಕೆ ಹೊರತಾಗಿಲ್ಲ.
ಅಲ್ಪ ಮೊತ್ತದ ಹೂಡಿಕೆಯಿಂದ ಆರ್ಂಭಿಸಿದ ಅವರು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆರಂಭದಲ್ಲಿ ಅವರು ತಮ್ಮ ವಾಣಿಜ್ಯೋದ್ಯಮ ಪ್ರಯಾಣವನ್ನು ಪ್ರಾರಂಭಿಸಲು ಹಣವನ್ನು ಸಾಲದ ರೂಪದಲ್ಲಿ ಪಡೆಯಬೇಕಾಗಿತ್ತು.

ಆದರೆ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಅವರಲ್ಲಿ ಅನೇಕರು ಇಂದು ಕೋಟ್ಯಾಧಿಪತಿಗಳಾಗಿದ್ದಾರೆ. ಇದಕ್ಕೆ ನಮಗೆ ಹಲವು ಉದಾಹರಣೆಗಳು ಲಭಿಸುತ್ತದೆ. ಸದ್ಯ ನಾವು ಹೇಳ ಹೊರಟಿರುವುದು ವಾರೀ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಿತೇಶ್ ಚಿಮನ್‌ಲಾಲ್ ದೋಶಿ ಅವರ ಬಗ್ಗೆ. ಸದ್ಯ ವಾರೀ ಎನರ್ಜಿಸ್ ಅಕ್ಟೋಬರ್ 28 ರಂದು ಷೇರು ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿದೆ.
ಯಾರಿವರು ಹಿತೇಶ್?
ಮಹಾರಾಷ್ಟ್ರದ ತುಂಕಿಯಲ್ಲಿ ಜನಿಸಿದ ಹಿತೇಶ್ ವಾರೀ ಗ್ರೂಪ್ ಅಧ್ಯಕ್ಷ ಮತ್ತು ಎಂಡಿ ಆಗಿ ಸೇವೆ ನಡೆಸುತ್ತಿದ್ದಾರೆ. ಹಿತೇಶ್ ಅವರು ಎಂಜಿನಿಯರಿಂಗ್ ಉದ್ಯಮದಲ್ಲಿ 22 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಹಿತೇಶ್ ಅವರು ವಾರೀ ಎನರ್ಜಿಸ್ ಲಿಮಿಟೆಡ್ ಅನ್ನು 1990 ರಲ್ಲಿ ಸ್ಥಾಪಿಸಲಾಯಿತು.
ತಮ್ಮ ಹಳ್ಳಿಯಲ್ಲಿರುವ ವಾರಿ ದೇವಸ್ಥಾನದ ಹಿನ್ನೆಲೆಯಲ್ಲಿ ಅವರು ತಮ್ಮ ಕಂಪನಿಗೆ ಕೂಡ ವಾರೀ ಎನರ್ಜಿಸ್ ಎಂದು ನಾಮಕರಣ ಮಾಡಿದರು. ಇನ್ನು ಹಿತೇಶ್ ಅವರು 1985 ರಲ್ಲಿ ಮುಂಬೈ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಪದವಿ ವ್ಯಾಸಂಗ ಮಾಡಲು ಮುಂಬೈಗೆ ತೆರಳಿದರು.
ಯುರೋಪಿಯನ್ ಕಾಂಟಿನೆಂಟಲ್ ವಿಶ್ವವಿದ್ಯಾನಿಲಯದಿಂದ ವ್ಯಾಪಾರ ಯೋಜನೆ ನಿರ್ವಹಣೆಯಲ್ಲಿ ವೃತ್ತಿಪರ ಉದ್ಯಮಶೀಲತೆಯಲ್ಲಿ ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು ವಾರೀ ಎನರ್ಜಿಸ್ ಅನ್ನು ಅಧ್ಯಕ್ಷ ಮತ್ತು MD ಆಗಿ ಮುನ್ನಡೆಸುತ್ತಿದ್ದಾರೆ. ಇನ್ನು ಅವರ ಇಬ್ಬರು ಸಹೋದರರು ಮತ್ತು ಸೋದರಳಿಯರು ಗುಂಪಿನಲ್ಲಿ ಮಂಡಳಿಯ ನಿರ್ದೇಶಕರಾಗಿದ್ದಾರೆ.
ಸಂಸ್ಥೆಯ ಮೌಲ್ಯವೆಷ್ಟು?
ಭಾರತದಲ್ಲಿ ಸೌರ ಶಕ್ತಿ ಉದ್ಯಮದಲ್ಲಿ ಒಂದಾಗಿರುವ ವಾರೀ ಎನರ್ಜಿಸ್ ಸದ್ಯ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಮೂಲಕ ಎಲ್ಲರ ಗಮನ ಸೆಳೆದಿದೆ. ಇನ್ನು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಆರಂಭಿಕ ಸಾರ್ವಜನಿಕ ಕೊಡುಗೆ (IPO) ಮೂಲಕ 514 ಮಿಲಿಯನ್ ಡಾಲರ್ ಪಡೆದುಕೊಂಡ ಬಳಿಕ ಷೇರುಗಳು 56 ಪ್ರತಿಶತದಷ್ಟು ಏರಿಕೆ ಕಂಡಿದ್ದು, ಈ ಮೂಲಕ ದೋಶಿ ಕುಟುಂಬದ ನಿವ್ವಳ ಮೌಲ್ಯ 5.2 ಶತಕೋಟಿ ಡಾಲರ್ ಗೆ ಏರಿಕೆ ಪಡೆದುಕೊಂಡಿದೆ.
ಅದರಲ್ಲೂ ಐಪಿಒಗಳ ಇತಿಹಾಸದಲ್ಲಿ ಕಂಪೆನಿಯು ಅತಿ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಅಕ್ಟೋಬರ್ 29 ರ ಹೊತ್ತಿಗೆ ಕಂಪನಿಯು ಬರೊಬ್ಬರಿ 68,414 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ ಎಂದು ವರದಿಯಾಗಿದೆ.
ಅಲ್ಪಮೊತ್ತದಿಂದ ಉದ್ಯಮ ಆರಂಭಿಸಿದ್ದ ಹಿತೇಶ್
ಈಗಾಗಲೇ ತಿಳಿಸಿದಂತೆ ಹೆಚ್ಚಿನ ಉದ್ಯಮಿಗಳು ಅಲ್ಪಮೊತ್ತದಿಂದಲೇ ಉದ್ಯಮ ಆರಂಭಿಸುವುದು ಸಾಮಾನ್ಯ ಸಂಗತಿಯಾಗಿದ್ದರೂ ಕಠಿಣ ಪರಿಶ್ರಮ ಹಾಗೂ ಅಚಲ ನಂಬಿಕೆಯಿಂದ ಮಾತ್ರ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಬಹುದು. ಅಂಥವರಲ್ಲಿ ಹಿತೇಶ್ ಕೂಡ ಒಬ್ಬರಾಗಿದ್ದಾರೆ.
ಇನ್ನು ಉದ್ಯಮದ ಆರಂಭಿಕ ಹಂತ ಕೂಡ ಉತ್ತಮವಾಗಿರಲಿಲ್ಲ. ಹಿತೇಶ್ ಒಮ್ಮೆ ಹಾರ್ಡ್‌ವೇರ್, ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟ್ ಗೇಜ್‌ಗಳ ವ್ಯಾಪಾರವನ್ನು ಪ್ರಾರಂಭಿಸಲು ಸಂಬಂಧಿಯಿಂದ ರೂ 5000 ಸಾಲ ಪಡೆದುಕೊಂಡಿದ್ದರು. ಈ ಬಗ್ಗೆ ಸ್ವತಹ ಅವರೇ ಹೇಳಿಕೊಂಡಿದ್ದಾರೆ.
ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಂತರ, ದೋಶಿ ಕಂಪನಿಯ ಉತ್ಪಾದನಾ ಕೈಗಾರಿಕಾ ಉಪಕರಣಗಳನ್ನು ಸ್ಥಾಪಿಸಲು ರೂ 1,50,000 ಬ್ಯಾಂಕ್ ಸಾಲವನ್ನು ಪಡೆದುಕೊಂಡರು. ಅವರು ಬಳಿಕ ವಿದ್ಯುತ್ ಉಪಕರಣಗಳ ಸಾಮರ್ಥ್ಯವನ್ನು ಗುರುತಿಸಿದರು.
ನಂತರ ಹಿಂದಿರುಗಿ ನೋಡದ ಹಿತೇಶ್ ನಿಧಾನವಾಗಿ ಅಮೆರಿಕಾ ಮತ್ತು ಯುರೋಪ್ ವರೆಗೆ ತಮ್ಮ ಉದ್ಯಮವನ್ನು ವಿಸ್ತರಿಸಿದರು. ಹಿತೇಶ್ ಅವರು ಪ್ರಸ್ತುತ ಕಂಪನಿಯ ಆರ್ಥಿಕ ಕಾರ್ಯಕ್ಷಮತೆ, ಹೂಡಿಕೆಗಳು ಮತ್ತು ಇತರ ವ್ಯಾಪಾರ ಉದ್ಯಮಗಳು ಮತ್ತು ಇತರೆ ವಿಚಾರಗಳ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಇಂದು ವಾರೀ ಸಂಸ್ಥೆಯು ಸೌರ PV ಮಾಡ್ಯೂಲ್‌ಗಳ ಭಾರತದ ಅತಿದೊಡ್ಡ ತಯಾರಕರಲ್ಲಿ ಒಂದಾಗಿದೆ.


Click it and Unblock the Notifications