ಹೊಸೂರು ವಿಮಾನ ನಿಲ್ದಾಣ (Hosur Airport) ಯಾವಾಗ ಕಾರ್ಯಾರಂಭ ಮಾಡುತ್ತೆ ಎಂದು ಎಲ್ಲರೂ ಕುತೂಹಲದಲ್ಲಿದ್ದಾರೆ. ಹೊಸೂರು ಏರ್‌ಪೋರ್ಟ್, ಸದ್ಯ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ನಿರ್ಮಿಸಲು ಪ್ಲಾನ್ ಮಾಡಿರುವ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಬೆಂಗಳೂರಿನಿಂದ ಕೇವಲ 40 ಕಿ.ಮೀ ದೂರದಲ್ಲಿದ್ದು, ಬೆಂಗಳೂರಿಗರಿಗೆ ಮತ್ತಷ್ಟು ಅನುಕೂಲವಾಗಲಿದೆ. ಆದರೆ ಈ ವಿಮಾನ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru Airport) ಟಕ್ಕರ್ ಕೊಡಲಿದೆ ಎಂಬ ವರದಿಗಳೂ ಹರಿದಾಡಿತ್ತು.

ಇನ್ನೇನು ನಿರ್ಮಾಣದ ಕಾರ್ಯಕ್ಕೆ ಮುಹೂರ್ತ ಇಡುವ ಮೊದಲೇ ಹೊಸೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಕಷ್ಟ ಎದುರಾಗಿದೆ. ಇದೀಗ ಆರಂಭದಿಂದಲೂ ಹೊಸೂರು ವಿಮಾನ ನಿಲ್ದಾಣ ಸವಾಲುಗಳನ್ನು ಎದುರಿಸುತ್ತಲೇ ಬರುತ್ತಿದೆ. ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಕಾರಣ ಇದರ ನಿರ್ಮಾಣ ವಿಳಂಬವಾಗಿತ್ತು. ಇದೀಗ ಕೇಂದ್ರ ಸರ್ಕಾರದ ಉಡಾನ್ (UDAN) ಯೋಜನೆಯ ಪಟ್ಟಿಯಿಂದ ಹೊಸೂರು ವಿಮಾನ ನಿಲ್ದಾಣವನ್ನು ಕೈಬಿಡಲಾಗಿದೆ.
ಉಡಾನ್ ಯೋಜನೆಯಲ್ಲಿಲ್ಲ ಹೊಸೂರು ಏರ್‌ಪೋರ್ಟ್!
ಹೌದು, ಇದೀಗ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಿಂದ ಹೊಸೂರು ವಿಮಾನ ನಿಲ್ದಾಣವನ್ನು ಕೈಬಿಡಲಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (BIAL) ದೊಂದಿಗಿನ 150 ಕಿ.ಮೀ. ನಿರ್ಬಂಧದ ಒಪ್ಪಂದ. ಹೊಸೂರು ಬಿಐಎಎಲ್‌ನಿಂದ ಕೇವಲ 80 ಕಿ.ಮೀ. ದೂರದಲ್ಲಿದ್ದು, 2033ರವರೆಗೆ ಈ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು ಅನುಮತಿಯಿಲ್ಲ.
ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಮುರಳೀಧರನ್ ಮೋಹೋಲ್ ಇದನ್ನು ಖಚಿತಪಡಿಸಿ, ಖಾಸಗಿ ವಿಮಾನ ನಿಲ್ದಾಣಗಳ ರಕ್ಷಣೆಗಾಗಿ ಷರತ್ತು ಇದೆ ಎಂದರು. ಇದರಿಂದ ಉಡಾನ್‌ನ ಮೊದಲ ಸುತ್ತಿನಲ್ಲಿ ಚೆನ್ನೈ-ಹೊಸೂರು ವಿಮಾನ ಮಾರ್ಗಕ್ಕೆ ಅನುಮೋದನೆ ಕೊಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ವರದಿ ಪ್ರಕಾರ, ತಮಿಳುನಾಡು ಸರ್ಕಾರವು ಹೊಸೂರು ವಿಮಾನ ನಿಲ್ದಾಣಕ್ಕೆ ಉಡಾನ್ ನಿಧಿಗೆ ಮನವಿ ಮಾಡಿಲ್ಲ. ಬದಲಿಗೆ, ಬೆಂಗಳೂರು ಗಡಿಯಂಚಿನಲ್ಲಿರುವ ಸೂಳಗಿರಿ (ಬೇರಿಗೈ-ಬಾಗಲೂರು) ವಲಯದಲ್ಲಿ 2,300 ಎಕರೆ ಪ್ರದೇಶದಲ್ಲಿ ತನ್ನದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಚಿಂತನೆ ಮಾಡುತ್ತಿದೆ ಎನ್ನಲಾಗಿದೆ. ಇದು ವಾರ್ಷಿಕವಾಗಿ 3 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವಿರುತ್ತದೆ ಎಂದು ಅಂದಾಜಿಸಲಾಗಿದೆ.
ಬಿಐಎಎಲ್ ಒಪ್ಪಂದ 2033ರವರೆಗೆ ರದ್ದಾಗದಿದ್ದರೆ, ತಮಿಳುನಾಡು ಅಲ್ಲಿಯವರೆಗೆ ಹೊಸೂರು ವಿಮಾನ ನಿಲ್ದಾಣ ನಿರ್ಮಾಣವಾಗುವುದು ಬಹುತೇಕ ಅನುಮಾನ. ಈ ಮಧ್ಯೆ, ಕೇಂದ್ರದ ಉಡಾನ್ ಯೋಜನೆಯಡಿ ವೇಲೂರು ಮತ್ತು ನೆಯ್ವೇಲಿ ವಿಮಾನ ನಿಲ್ದಾಣಗಳ ಪರವಾನಗಿ ಕಾರ್ಯಗಳು ಪ್ರಗತಿಯಲ್ಲಿದ್ದು, ಅವುಗಳಿಗೆ ₹84.9 ಕೋಟಿ ಅನುದಾನ ಹಂಚಿಕೆಯಾಗಿದೆ.
ಬೆಂಗಳೂರಿಗೆ ಹತ್ತಿರವಾಗಿರುವ, ವೇಗವಾಗಿ ಬೆಳವಣಿಗೆಯಾಗಿರುವ ಕೈಗಾರಿಕಾ ನಗರವಾದ ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸಜ್ಜಾಗಿದೆ. ಇದು ವಾರ್ಷಿಕವಾಗಿ ಮೂರು ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ. ಹೊಸೂರು ವಿಮಾನ ನಿಲ್ದಾಣದ ಜೊತೆಗೆ ಇತ್ತ, ಬೆಂಗಳೂರಿನ ಎರಡನೇ ಏರ್‌ಪೋರ್ಟ್‌ನ ಕಾರ್ಯಗಳು ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ ಜಾಗದ ಆಯ್ಕೆಯೂ ಭಾರೀ ಕುತೂಹಲ ಹುಟ್ಟಿಸಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದೀಗ ಜಾಗದ ಆಯ್ಕೆ ಮಾಡಲು ಸಜ್ಜಾಗಿದೆ.


Click it and Unblock the Notifications