ಬೆಂಗಳೂರು, ಅಕ್ಟೋಬರ್ 20: ಆಸ್ತಿಗಳ ನೋಂದಣಿಗೆ ಕರ್ನಾಟಕ ಸರ್ಕಾರ ಅಕ್ಟೋಬರ್ ತಿಂಗಳಿನಿಂದಲೇ ಇ-ಖಾತಾ ವ್ಯವಸ್ಥೆ ಮಾಡಿದೆ. ಇದು ಜನರಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇ-ಖಾತಾ ಕುರಿತು ಹಲವು ಗೊಂದಲ ಉಂಟಾಗಿದ್ದು, ಜನರು ಬಿಬಿಎಂಪಿ ಕಛೇರಿಗೆ ಅಲೆದಾಡುತ್ತಿದ್ದಾರೆ. ಆದ್ದರಿಂದ ಪಾಲಿಕೆ ಬಿಬಿಎಂಪಿ ಅಂತಿಮ ಇ-ಖಾತಾವನ್ನು ಪಡೆಯಲು ಯಾವ ವಿಧಾನವನ್ನು ಅನುಸರಿಸಬೇಕು ಎಂದು ಜನರಿಗೆ ಮಾಹಿತಿ ನೀಡಿದೆ.
ಬಿಬಿಎಂಪಿ ಪತ್ರಿಕಾ ಪ್ರಕಟಣೆ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ-2024ರ ಅಕ್ಟೋಬರ್ ತಿಂಗಳ ಒಳಗೆ ಉಪ-ನೋಂದಣಾಧಿಕಾರಿ ಕಛೇರಿಯಲ್ಲಿ ನೀವು ತುರ್ತು ಆಸ್ತಿ ನೋಂದಣಿಯನ್ನು ಹೊಂದಿದ್ದೀರಾ? ಹಾಗಾದರೆ ಬಿಬಿಎಂಪಿ ಅಂತಿಮ ಇ-ಖಾತಾವನ್ನು ಪಡೆಯಲು ದಯವಿಟ್ಟು ಕೆಳಗಿನ ವಿಧಾನವನ್ನು ಅನುಸರಿಸಿ ಎಂದು ತಿಳಿಸಿದೆ.

ಬಿಬಿಎಂಪಿ ಅಂತಿಮ ಇ-ಖಾತಾವನ್ನು ಪಡೆಯಲು ಆನ್‌ಲೈನ್ https://BBMPeAasthi.karnataka.gov.in ನಲ್ಲಿ ವಾರ್ಡ್‌ವಾರು ಇ-ಖಾತಾ ಪಟ್ಟಿಯಿಂದ ನಿಮ್ಮ ಕರಡು ಇ-ಖಾತಾ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ಹೇಳಿದೆ. ಆಸ್ತಿ ಹುಡುಕುವ ವಿಧಾನಗಳನ್ನು ತಿಳಿಸಿದೆ.
ಜನರು ತಮ್ಮ ಸ್ವತ್ತಿನ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಹೆಸರು ಮತ್ತು ಸಂಖ್ಯೆಯನ್ನು ತಿಳಿದುಕೊಳ್ಳಬಹುದು. ಅಂತಿಮ ಇ-ಖಾತಾ ಪಡೆಯಲು ಕೆಳಗಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಿ/ ಅಪ್‌ಲೋಡ್ ಮಾಡಿ...
* ತಮ್ಮ ಸ್ವತ್ತಿನ ಆಸ್ತಿ ತೆರಿಗೆ ಅರ್ಜಿ ಸಂಖ್ಯೆಯ 10-ಅಂಕಿಗಳು
* ಮಾಲೀಕರ ಆಧಾರ್ ಆಧಾರಿತ ಇ-ಕೆವೈಸಿ (ಇ-ಖಾತಾ ನಲ್ಲಿರುವ ಎಲ್ಲಾ ಮಾಲೀಕರು ಇ-ಕೆವೈಸಿ ಮಾಡಬೇಕಾಗಿದೆ ಯಾವುದೇ ಮಾಲೀಕರು ಆಧಾರ್ ಹೊಂದಿಲ್ಲದಿದ್ದರೆ, ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಪಾಸ್‌ಪೋರ್ಟ್ ಅಥವಾ ಮತದಾರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿಯನ್ನು ಬಳಸಿ ದೃಢೀಕರಿಸಿ).
* ಮಾಲೀಕರು ಆಸ್ತಿಯನ್ನು ಪಡೆದ ನೋಂದಾಯಿತ ಪತ್ರ ಸಂಖ್ಯೆ (ಕ್ರಯ/ ದಾನ ಪತ್ರ ಇತ್ಯಾದಿ) (ಕಾವೇರಿ ತಂತ್ರಾಂಶದಿಂದ ನೋಂದಾಯಿತ ಪತ್ರ ಮಾಹಿತಿಯನ್ನು ಪಡೆಯಲಾಗುವುದು)
* ಆಸ್ತಿಯ ಹಕ್ಕು ನಿರೂಪಿಸುವ ನೋಂದಾಯಿತ ಪತ್ರವು, ನೋಂದಣಿ ದಿನಾಂಕದ ಒಂದು ದಿನದ ಹಿಂದಿನಿಂದ ದಿನಾಂಕ 18.10.2024ರವರೆಗೆ ಅಸ್ತಿಯ ಋಣಭಾರ ಪ್ರಮಾಣಪತ್ರ.
* ಆಸ್ತಿಯ ಮಾಲೀಕರು, ಆಸ್ತಿಯ ಹೊರಗೆ ಹಾಗೂ ಮುಂದೆ ನಿಂತಿರುವ ಆಸ್ತಿಯ ಛಾಯಾಚಿತ್ರ.
* ಬೆಸ್ಕಾಂ 10-ಅಂಕಿಯ ಅಕೌಂಟ್ ಐಡಿ (ಬೆಸ್ಕಾಂ ಬಿಲ್ ನೋಡಿ ಮತ್ತು ಖಾಲಿ ಭೂಮಿಗೆ ಕಡ್ಡಾಯವಲ್ಲ).
* ಬಿ.ಡಬ್ಲ್ಯೂ.ಎಸ್.ಎಸ್.ಬಿ (ಐಚ್ಛಿಕ).
ಮೇಲೆ ತಿಳಿಸಿರುವಂತೆ ಮಾಹಿತಿ ಹಾಗೂ ದಾಖಲೆಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ, ಸಲ್ಲಿಸಿದ ನಂತರ, ಎಲ್ಲವೂ ಕ್ರಮದಲ್ಲಿದ್ದರೆ, ಒಂದೇ-ದಿನದಲ್ಲಿ ಅಂತಿಮ ಇ-ಖಾತಾ ವನ್ನು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಅವರನ್ನು ಭೇಟಿ ಮಾಡತಕ್ಕದ್ದು.
ಮೇಲಿನ ವಿಧಾನವನ್ನು ಪೂರ್ಣಗೊಳಿಸಲು ಯಾವುದೇ ಸವಾಲುಗಳಿದ್ದಲ್ಲಿ ಮತ್ತು ನೀವು ತುರ್ತು ನೋಂದಣಿಯನ್ನು ಹೊಂದಿದ್ದರೆ, ನೀವು ತಮ್ಮ ಎಲ್ಲಾ ದಾಖಲೆಗಳು ಮತ್ತು ತಹಲ್‌ವರೆಗಿನ ಋಣಭಾರ ಪ್ರಮಾಣಪತ್ರವನ್ನು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಅಲ್ಲಿ ಸಹಾಯ ಫಲಕದ ಸಿಬ್ಬಂದಿಯು ತಮಗೆ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಮತ್ತು ಒಂದು ದಿನದಲ್ಲಿ ನಿಯಮಗಳ ಪ್ರಕಾರ ನಿಮಗೆ ಅಂತಿಮ ಇ-ಖಾತಾಯನ್ನು ಹೊಂದಲು ಸಹಾಯವನ್ನು ಪಡೆಯಬಹುದು.
ಉಪ-ನೋಂದಣಾಧಿಕಾರಿ ಕಛೇರಿಯಲ್ಲಿ ತುರ್ತು ಆಸ್ತಿ ನೋಂದಣಿಯನ್ನು ಹೊಂದಿರದ ನಾಗರೀಕರು, ಬಿಬಿಎಂಪಿ ಹಿಂಬರಹದ ಮೂಲಕ ನಿರ್ದಿಷ್ಟವಾಗಿ ಸೂಚನೆಯ ಹೊರತು ಅಂತಿಮ ಇ-ಖಾತಾವನ್ನು ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಹೋಗದಂತೆ ವಿನಂತಿಸಲಾಗಿದೆ. ಅಂತಹ ಪ್ರಕರಣಗಳಲ್ಲಿ ತಮ್ಮ ಅಗತ್ಯಕ್ಕೆ ಅನುಕೂಲದ ಸಮಯದಲ್ಲಿ ತಮ್ಮ ಅಂತಿಮ ಇ-ಖಾತಾವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಅಂತಹ ಸಂದರ್ಭಗಳಲ್ಲಿ ಋಣಭಾರ ಪ್ರಮಾಣಪತ್ರ (ಇಸಿ) ಅಗತ್ಯವನ್ನು ಕೈಬಿಡಲಾಗಿದೆ.
ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗಾಗಿ 1533ಗೆ ಕರೆ ಮಾಡಿ ಅಥವಾ [email protected] ಗೆ ಇಮೇಲ್ ಮಾಡಿ ಎಂದು ಜನರಿಗೆ ಮನವಿ ಮಾಡಲಾಗಿದೆ.


Click it and Unblock the Notifications