ನವದೆಹಲಿ, ಜುಲೈ 25: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದು ಮಕ್ಕಳಿಗಾಗಿ ವಿಶೇಷ ಯೋಜನೆಯೊಂದನ್ನು ಹೊರತಂದಿದ್ದಾರೆ. ಮಕ್ಕಳಿಗಾಗಿ ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಅಂದರೆ ಎನ್ ಪಿ ಎಸ್ ವಾತ್ಸಲ್ಯ ಯೋಜನೆ ಎಂದು ಸರಳವಾಗಿ ಹೇಳಬಹುದು.
ಇದು ಅಪ್ರಾಪ್ರ ಭವಿಷ್ಯವನ್ನು ಗಟ್ಟಿಗೊಳಿಸಲು ಅವರ ಹೆತ್ತವರು ಅಥವ ಪೋಷಕರು ಕೈಗೊಳ್ಳಬಹುದಾದ ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ. ಇಲ್ಲಿ ಮಕ್ಕಳ ಹೆಸರಿನಲ್ಲಿ ಪಾಲಿಸಿಗಳನ್ನು ತೆಗೆದುಕೊಂಡು, ಮಕ್ಕಳ ಪರವಾಗಿ ಹೆತ್ತವರು ಅಥವಾ ಪೋಷಕರು ಹಣ ಹೂಡಿಕೆ ಮಾಡಬಹುದು. ಮಕ್ಕಳು, ಪ್ರಾಪ್ತ ವಯಸ್ಸಿಗೆ ಕಾಲಿಟ್ಟ ನಂತರ ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಾಗಿ (ಎನ್ ಪಿಎಸ್) ಯೋಜನೆಯ ಪಾಲಿಸಿಯನ್ನಾಗಿ ಬದಲಾಯಿಸಿಕೊಳ್ಳಲು ಸಾಧ್ಯವಿದೆ.

ಎನ್ ಪಿ ಎಸ್ ವಾತ್ಸಲ್ಯದಲ್ಲಿ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿಯೂ ಖಾತೆಯನ್ನು ತೆರೆಯಬಹುದು. ಇದರಲ್ಲಿ ಅಪ್ರಾಪ್ತರ ಕನಿಷ್ಠ ವಯಸ್ಸು ಎಷ್ಟು ಇರಬೇಕು ಎನ್ನುವುದರ ಬಗ್ಗೆ ನಿರ್ಮಲಾ ಸೀತಾರಾಮನ್ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಗುವಿನ ಎನ್‌ಪಿಎಸ್ ಖಾತೆಯನ್ನು ಪ್ರಾರಂಭಿಸಲು ಅವಕಾಶ ನೀಡುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಹೂಡಿಕೆ ಮತ್ತು ಉಳಿತಾಯದ ತಿಳಿವಳಿಕೆ ನೀಡಲು ಸಾಧ್ಯವಾಗುತ್ತದೆ.
ಎನ್‌ಪಿಎಸ್ ನಿವೃತ್ತಿ ಯೋಜನೆಯಾಗಿದ್ದು, ಆರ್ಥಿಕ ವರ್ಷದಲ್ಲಿ ಒಮ್ಮೆಯಾದರೂ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು. ಎನ್ ಪಿ ಎಸ್ ಅನ್ನು ಮಾರುಕಟ್ಟೆಗೆ ಲಿಂಕ್ ಮಾಡಲಾಗಿರುತ್ತದೆ ಎನ್ನುವುದು ಸಹ ನಿಮ್ಮ ಗಮನದಲ್ಲಿ ಇರಬೇಕು. ಇದು ಮಕ್ಕಳಿಗಾಗಿ, ಅವರ ಭವಿಷ್ಯತ್ತನ್ನು ಗಟ್ಟಿಗೊಳಿಸಲಿಕ್ಕಾಗಿ ಆರಂಭಿಸಲಾಗುವ ಹೊಸ ಸ್ಕೀಂ. ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಒಂದಿಷ್ಟು ಹಣವನ್ನು ಮಕ್ಕಳಿಗಾಗಿ ಉಳಿತಾಯ ಮಾಡಲು ಅವಕಾಶವಿದೆ. ಇದಕ್ಕಾಗಿ, ಅಂಚೆ ಕಚೇರಿಯಲ್ಲಾಗಲೀ ಅಥವಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಾಗಲೀ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ (ಎನ್ ಪಿಎಸ್) ವಾತ್ಸಲ್ಯ ಖಾತೆಯನ್ನು ಆರಂಭಿಸಬೇಕು. ಪ್ರತಿ ತಿಂಗಳು ಅಥವಾ ನಿರ್ದಿಷ್ಟ ಅವಧಿಯ ಅಂತರದಲ್ಲಿ ಈ ಖಾತೆಗೆ ಹಣ ವರ್ಗಾಯಿಸುವ ಮೂಲಕ ಮಕ್ಕಳ ಹೆತ್ತವರು ಇದರಲ್ಲಿ ಸೇವಿಂಗ್ಸ್ ಮಾಡಬಹುದು.
ಸಾಮಾನ್ಯವಾಗಿ ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ತೆರಿಗೆ ವಿನಾಯಿತಿ ಸೌಲಭ್ಯ ಸಿಗುತ್ತದೆ. ವಾತ್ಸಲ್ಯ ಯೋಜನೆಯಲ್ಲಿ ಮಾಡಲಾಗುವ ಹೂಡಿಕೆಗೂ ತೆರಿಗೆ ವಿನಾಯಿತಿ ಸಿಗಲಿದೆ. ಅದರಿಂದ ಹೂಡಿಕೆ ಮೇಲಿನ ತೆರಿಗೆಯಿಂದ ಪಾರಾಗಬಹುದು. 60 ವರ್ಷಗಳ ನಿವೃತ್ತಿ ವಯಸ್ಸಿನಲ್ಲಿ ನಿವೃತ್ತಿ ಮೊತ್ತದ ಗರಿಷ್ಠ ಶೇ. 60ರಷ್ಟನ್ನು ಹಿಂತೆಗೆದುಕೊಳ್ಳುವ ಇನ್ನೊಂದು ಆಯ್ಕೆ ಇದರಲ್ಲಿದೆ. ಇದರಲ್ಲಿ ಉಳಿದ ಶೇ. 40ರಷ್ಟನ್ನು ವರ್ಷಾಶನವಾಗಿ ಖರೀದಿ ಮಾಡಬಹುದು. ಈ ರೀತಿಯ ನಿವೃತ್ತಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.


Click it and Unblock the Notifications