For Quick Alerts
ALLOW NOTIFICATIONS  
For Daily Alerts

ಮಾರಾಟ ಆಗದ ಬೆಳೆ, ಕುಸಿಯುತ್ತಿರುವ ಆದಾಯ: ಭಾರತದ ಗ್ರಾಮೀಣ ಆರ್ಥಿಕತೆ ಸಂಕಷ್ಟದಲ್ಲಿ

By ಅನಿಲ್ ಆಚಾರ್
|

ಸತತ ಎರಡನೇ ವರ್ಷ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ ಆಗಿದೆ. ಕಳೆದ ಆರು ದಶಕದಲ್ಲಿ ಇದು ಮೊದಲ ಬಾರಿಗೆ ಈ ರೀತಿಯ ಉದಾಹರಣೆ ಸಿಗುತ್ತದೆ. ಆದರೆ ರಾಜ್ಯದ ರೈತರ ಮುಖದಲ್ಲಿ ಸಂತೋಷ ಇಲ್ಲ. ತೇವಾಂಶದ ಪ್ರಮಾಣ ಜಾಸ್ತಿಯಾಗಿ, ಇಟ್ಟ ಜಾಗದಲ್ಲೇ ಬಿತ್ತನೆ ಬೀಜಗಳು, ಧಾನ್ಯಗಳು ಕೊಳೆಯುತ್ತಿವೆ. ಇವುಗಳಿಗೆ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ದೊರೆಯುವ ಯಾವ ಆಶಾಭಾವನೆಯೂ ಇಲ್ಲ.

"ಈಗ ಬೆಳೆ ನಷ್ಟದ ಭಾರ ಕೂಡ ಹೆಗಲೇರಿದೆ," ಎನ್ನುತ್ತಾರೆ ಕೊಪ್ಪಳದ ರೈತ ಭೀಮಪ್ಪ. ಹಳ್ಳಿಯಿಂದ ದೂರದಲ್ಲಿ ಕೆಲಸಗಳಿದ್ದಾಗ ಜನರನ್ನು ಟ್ರ್ಯಾಕ್ಟರ್ ನಲ್ಲಿ ಕರೆದೊಯ್ದು, ಅದರಿಂದ ಆದಾಯ ಬರುತ್ತಿತ್ತು. ಲಾಕ್ ಡೌನ್ ನಿಂದಾಗಿ ಹೆಚ್ಚುವರಿ ಆದಾಯಕ್ಕೂ ಕತ್ತರಿ ಬಿತ್ತು ಎನ್ನುತ್ತಾರೆ ಅವರು.

ಇನ್ನು ಲಕ್ಕವ್ವನ ಸ್ಥಿತಿ ಮತ್ತೊಂದು ಬಗೆಯದು. ಕೃಷಿ ಚಟುವಟಿಕೆಗಳು ಗರಿಗೆದರಿದರೆ ಆಕೆಯ ಬಳಿ ಮಂಕರಿ ಖರೀದಿಗೆ ರೈತರು ಬರುತ್ತಾರೆ. ಮಾರ್ಚ್ ನಿಂದ ಈಚೆಗೆ ವ್ಯವಹಾರವೇ ನೆಲ ಕಚ್ಚಿರುವುದರಿಂದ ಆದಾಯಕ್ಕೆ ಭರ್ತಿ ಪೆಟ್ಟು ಬಿದ್ದಿದೆ. ಈಗ ಬೀಳುತ್ತಿರುವ ಭಾರೀ ಮಳೆಗೆ ಮನೆ ಕಳೆದುಕೊಂಡಿರುವ ಕಲಬುರಗಿ ಜಿಲ್ಲೆ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಜನರಿಗೆ ಅಗತ್ಯವಾದ ಊಟ- ಬಟ್ಟೆಗೂ ಸಮಸ್ಯೆ ಎದುರಾಗಿದೆ.

ಕುಸಿಯುತ್ತಿರುವ ಆದಾಯ: ಭಾರತದ ಗ್ರಾಮೀಣ ಆರ್ಥಿಕತೆ ಸಂಕಷ್ಟದಲ್ಲಿ

ಹಲವು ಬಗೆಯಲ್ಲಿ ಸವಾಲುಗಳಿವೆ
ಇನ್ನು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಸೇರಿದಂತೆ ಸುತ್ತಮುತ್ತ ಧರ್ಮಾವರಂ ರೇಷ್ಮೆ ಸೀರೆಗಳನ್ನು ನೇಯುತ್ತಾರೆ. ಸಾಮಾನ್ಯವಾಗಿ ಮದುವೆ ಸೀಸನ್ ಗಳಲ್ಲಿ ಅನಂತಪುರಂ, ಹಿಂದೂಪುರ, ಬೆಂಗಳೂರು, ತುಮಕೂರು ಸೇರಿದಂತೆ ವಿವಿಧೆಡೆ ಬೇಡಿಕೆ ಇರುತ್ತಿತ್ತು. ಆದರೆ ಈ ಬಾರಿ ಕೊರೊನಾದ ಕಾರಣಕ್ಕೆ ಮದುವೆ ಮೊದಲಾದ ಸಮಾರಂಭಗಳೇ ಇಲ್ಲದಂತಾಗಿ, ಆದಾಯಕ್ಕೆ ಪೆಟ್ಟು ಬಿದ್ದಿದೆ.

2020ರಲ್ಲಿ ತಲಾ ಜಿಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಲಿದೆ ಬಾಂಗ್ಲಾದೇಶ್2020ರಲ್ಲಿ ತಲಾ ಜಿಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಲಿದೆ ಬಾಂಗ್ಲಾದೇಶ್

ಇನ್ನು ಸೋಲಾರ್ ಪಾರ್ಕ್ ಗಾಗಿ ತಮ್ಮ ಜಮೀನು ಬಿಟ್ಟುಕೊಟ್ಟಿರುವುದರಿಂದ ಬಹಳ ಮಂದಿ ಅದರ ಮೂಲಕ ಬರುವ ಆದಾಯವನ್ನೇ ನೆಚ್ಚಿಕೊಂಡು ಬದುಕುವಂತಾಗಿದೆ. ಒಂದು ಕಡೆ ಕೂಲಿಗಳಿಗೆ ಬೇಡಿಕೆ ಹೆಚ್ಚುತ್ತಿದೆ ಅನ್ನೋದು ಹೌದು. ಅದೇ ವೇಳೆ ಕೊರೊನಾ ಕಾರಣಕ್ಕೆ ಸಾರಿಗೆ ಸೇರಿದಂತೆ ಮೊದಲಾದ ಸಮಸ್ಯೆ ಇರುವುದು ಕೂಡ ಹೌದು. ಇನ್ನು ನಮ್ಮ ಭಾಗದಲ್ಲಿ ಬೆಳೆಗಳಿಗೆ ಜಿಂಕೆ ಕಾಟ. ಆದ್ದರಿಂದ ಬೆಳೆಯೂ ಬೆಳೆಯಲಿಕ್ಕಾಗದೆ, ಇನ್ನೊಂದು ಕಡೆ ಕೆಲಸಕ್ಕೂ ಹೋಗಲಿಕ್ಕಾಗದೆ ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ ವೈ.ಎನ್. ಹೊಸಕೋಟೆಯ ಕೃಷ್ಣಪ್ಪ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 23.9% ಕುಗ್ಗಿತು. ಕೊರೊನಾ ಲಾಕ್ ಡೌನ್ ಕಾರಣಕ್ಕೆ ಏಪ್ರಿಲ್- ಮೇ ತಿಂಗಳಲ್ಲಿ ಉತ್ಪಾದನೆ ಚಟುವಟಿಕೆ ಸಂಪೂರ್ಣ ನೆಲ ಕಚ್ಚಿತು. ಕೃಷಿ ವಲಯ ಮಾತ್ರ 3.4% ಬೆಳವಣಿಗೆ ದಾಖಲಿಸಿತು. ಹಲವು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದು ಏನೆಂದರೆ, ಭಾರತದ ಪಾಲಿನ ಏಕೈಕ ಧ್ರುವ ನಕ್ಷತ್ರ ಅಂದರೆ, ಅದು ಗ್ರಾಮೀಣ ಆರ್ಥಿಕತೆ. ಉತ್ತಮ ಕೊಯ್ಲು ಕೂಡ ಗ್ರಾಮೀಣ ಆರ್ಥಿಕತೆಯ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟ ಎಂಬಂತಾಗಿದೆ ಪರಿಸ್ಥಿತಿ.

ಗ್ರಾಮೀಣ ಭಾಗದಲ್ಲಿ ಆದಾಯ ಇಳಿಕೆ
ಏಕೆಂದರೆ, ಗ್ರಾಮೀಣ ಭಾಗದಲ್ಲಿ ಆದಾಯ ಇಳಿಕೆ ಆಗಿದೆ. ಕೊರೊನಾ ಹೆಚ್ಚುತ್ತಿದೆ. ವಲಸಿಗರು ನಗರ ಪ್ರದೇಶಗಳಿಂದ ಹಿಂತಿರುಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಮುಖ್ಯವಾಗಿ ರೈತರಿಗೆ ತಾವು ಬೆಳೆದ ಉತ್ಪನ್ನಗಳ ಸಾಗಾಟವೇ ಸವಾಲಾಗಿದೆ. ಸಿಕ್ಕಷ್ಟು ಬೆಲೆಗೆ ಮಾರಿಕೊಳ್ಳುವಂತಾಗಿದ್ದು, ಇದರಿಂದ ಆದಾಯದ ಮಟ್ಟ ನೆಲ ಕಚ್ಚಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದಲೂ ದೊಡ್ಡ ಮಟ್ಟದಲ್ಲೇನೂ ಗ್ರಾಮೀಣ ವಲಯಕ್ಕೆ ಬೆಂಬಲ ಸಿಕ್ಕಿಲ್ಲ. ಕೃಷಿ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲು ತಂದು ನಗದು ವರ್ಗಾವಣೆ, ಆಹಾರ ಧಾನ್ಯ ವಿತರಣೆ ಒಂದೋ ಈಗಾಗಲೇ ಕೊನೆ ಆಗಿದೆ ಅಥವಾ ಮುಂದಿನ ತಿಂಗಳುಗಳಲ್ಲಿ ತಲುಪಬೇಕಿದೆ.

ನರೇಗಾದ ಅಡಿ ಮೀಸಲಿಟ್ಟಿದ್ದ ಬಜೆಟ್ ಈಗಾಗಲೇ ಬಳಸಲಾಗಿದೆ. ಸರ್ಕಾರದಿಂದ ಘೋಷಣೆ ಮಾಡಿರುವ ಕನಿಷ್ಠ ಬೆಂಬಲ ಬೆಲೆ ಏನೇನೂ ಅಲ್ಲ. ಇದರಿಂದ ಕೃಷಿಕರ ಆದಾಯದ ಮೇಲೆ ಯಾವ ಮುಖ್ಯ ಪರಿಣಾಮವೂ ಬೀರಲ್ಲ. ತಜ್ಞರೇ ಹೇಳುವಂತೆ, ಯಾವ ಸೂಚ್ಯಂಕವೂ ಗ್ರಾಮೀಣ ಆರ್ಥಿಕತೆ ಚೇತರಿಸಿಕೊಳ್ಳುವ ಸೂಚನೆ ನೀಡುತ್ತಿಲ್ಲ. ಬಹುತೇಕ ಸೂಚ್ಯಂಕವು ಕುಗ್ಗಿದೆ. ಉತ್ಪನ್ನಗಳ ಬೆಲೆ ಕೆಳಗೆ ಇಳಿದಿದೆ. ಬೇಡಿಕೆ ಕುಸಿದಿರುವ ಸೂಚನೆ ಇದು. ಗ್ರಾಮೀಣ ಭಾಗದಲ್ಲಿ ಆದಾಯ ಇಳಿಮುಖ ಆಗಿದೆ ಎಂಬುದರ ಸೂಚನೆ ಇದು ಎನ್ನುತ್ತಾರೆ.

ಬೇಡಿಕೆ ಹೆಚ್ಚಾಗಿದೆ ಎನ್ನುತ್ತದೆ ಅಂಕಿ- ಅಂಶ
ಸರ್ಕಾರದಿಂದ ನಗದು ವರ್ಗಾವಣೆ ಮಾಡಲಾಗಿದೆ. ಆದರೆ ಅದನ್ನು ವಾಸ್ತವ ನೆಲೆಗಟ್ಟಿನಲ್ಲಿ ನೋಡಿದರೆ ಖಂಡಿತಾ ದೊಡ್ಡ ಮಟ್ಟವಲ್ಲ ಎನ್ನುತ್ತಾರೆ ವಿಶ್ಲೇಷಕರು. ಇನ್ನು ದಿನದಿನಕ್ಕೂ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಇದು ಕೂಡ ಮುಂಬರುವ ದಿನಗಳಲ್ಲಿ ಪರಿಣಾಮ ಬೀರಲಿದೆ ಎಂದು ವರದಿಗಳು ಹೇಳುತ್ತಿವೆ.

ಆದರೆ, ಕೇಂದ್ರ ಕೃಷಿ ಸಚಿವರು ಗ್ರಾಮೀಣ ಆರ್ಥಿಕತೆ ಸುಧಾರಿಸಿದೆ ಎನ್ನುತ್ತಾರೆ. ದ್ವಿಚಕ್ರ/ತ್ರಿಚಕ್ರ/ಪ್ರಯಾಣಿಕರ ವಾಹನ ನೋಂದಣಿ ಮೂಲಕ ಗ್ರಾಮೀಣ ವಲಯದ ಬೇಡಿಕೆ ಬೆಳವಣಿಗೆ ಗೊತ್ತಾಗುತ್ತದೆ. ಕಳೆದ ಆಗಸ್ಟ್ ನಲ್ಲಿ ಅದಕ್ಕೂ ಹಿಂದಿನ ವರ್ಷದ ಅದೇ ಅವಧಿಯ ಬೇಡಿಕೆಯನ್ನು ಮೀರುವಷ್ಟು ನೋಂದಣಿ ಆಗಿದೆ ಎಂಬ ಉದಾಹರಣೆ ನೀಡಲಾಗುತ್ತದೆ.

ಈ ಹಣಕಾಸು ವರ್ಷದಲ್ಲಿ ನರೇಗಾಕ್ಕೋಸ್ಕರ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರುಪಾಯಿಯನ್ನು ಸರ್ಕಾರ ಮೀಸಲಿಟ್ಟಿದೆ. ಅಲ್ಲಿಗೆ ಒಟ್ಟು ಮೀಸಲು 1 ಲಕ್ಷ ಕೋಟಿ ರುಪಾಯಿಯನ್ನು ಗ್ರಾಮೀಣ ಉದ್ಯೋಗ ಖಾತ್ರಿಗೆ ಅಂತಲೇ ಇಟ್ಟಂತಾಗುತ್ತದೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲೇ ಉದ್ಯೋಗ ಹುಡುಕಿಕೊಳ್ಳಲು, ಬದುಕು ನಡೆಸಲು ಸಾಧ್ಯವಾಗುತ್ತಿದೆ.

ನರೇಗಾದ ಹಣ ಸಾಕಾಗುತ್ತಲೇ ಇಲ್ಲ
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗಂಗಮ್ಮ ಹೇಳುವಂತೆ, ಕಳೆದ ನಾಲ್ಕು ತಿಂಗಳಿಂದ ಆಕೆಯ ಗಂಡ ಮತ್ತು ಮಾವನಿಗೆ ಉದ್ಯೋಗ ಇರಲಿಲ್ಲವಂತೆ. ಇಂಥ ಸನ್ನಿವೇಶದಲ್ಲಿ ಕುಟುಂಬ ನಿರ್ವಹಣೆ ನಡೆದಿದ್ದು ನರೇಗಾ ಮೂಲಕ ಗಂಗಮ್ಮ ದುಡಿದ ಹಣದಿಂದಲೇ ಎನ್ನುತ್ತಾರೆ.

ಈಗ ಪರಿಸ್ಥಿತಿ ಸುಧಾರಿಸಿದೆ. ಗಂಡ- ಮಾವನಿಗೆ ಕೆಲಸ ದೊರೆತಿದೆ. ಆದರೆ ಹೆಚ್ಚುವರಿ ಆದಾಯ ಮೂಲ ಇರಲಿ ಎಂದು ಗಂಗಮ್ಮ ಕೆಲಸ ಮುಂದುವರಿಸಿದ್ದಾರೆ. ಏಕೆಂದರೆ ಶಾಲೆಗೆ ರಜಾ ಇರುವುದರಿಂದ ಈಗ ಮಕ್ಕಳು ಸಹ ಮನೆಯಲ್ಲಿ ಇರುತ್ತಾರೆ. ಅವರಿಗೂ ಊಟದ ವ್ಯವಸ್ಥೆ ಮಾಡಬೇಕಾದ್ದರಿಂದ ಖರ್ಚು ಹೆಚ್ಚಾಗುತ್ತದೆ ಎನ್ನುತ್ತಾರೆ ಆಕೆ.

ಕೆಲವು ಹಳ್ಳಿಗಳಲ್ಲಿ ಸಮಸ್ಯೆ ಏನೆಂದರೆ, ವಲಸಿಗರು ಹಿಂತಿರುಗಿದ ಮೇಲೆ ಅವರಿಗೂ ನರೇಗಾದ ಕೂಲಿ ಹಣ ಹಂಚಿಕೆ ಆಗುತ್ತಿದೆ. ಆ ಕಾರಣಕ್ಕೆ ಬಜೆಟ್ ಬಹಳ ಬೇಗ ಖರ್ಚಾಗುತ್ತಿದೆ. ಆದರೆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿರುವುದರಿಂದ ಕೆಲವರು ಪಟ್ಟಣ- ನಗರಗಳಿಗೆ ಹಿಂತಿರುಗುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಆದರೂ ಸ್ಥಿತಿ ಸುಧಾರಿಸಲು ಇನ್ನೂ ಮೂರ್ನಾಲ್ಕು ತಿಂಗಳು ಬೇಕೆನ್ನುತ್ತಾರೆ.

ಜೂನ್ ನಲ್ಲಿ 3.5 ಕೋಟಿ ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ. ಅದು ಜುಲೈನಲ್ಲಿ 2.34 ಕೋಟಿಗೆ ಹಾಗೂ ಆಗಸ್ಟ್ ನಲ್ಲಿ 1.62 ಕೋಟಿಗೆ, ಸೆಪ್ಟೆಂಬರ್ ನಲ್ಲಿ 1.54 ಕೋಟಿಗೆ ಇಳಿಕೆ ಆಗಿದೆ. ಮಾನವ ದಿನಗಳು ಜೂನ್ ನಲ್ಲಿ 60.03 ಕೋಟಿ ಇತ್ತು. ಅದು ಸೆಪ್ಟೆಂಬರ್ ನಲ್ಲಿ 21.4 ಕೋಟಿ ಆಗಿದೆ. ಇದು ಕೂಡ ಗ್ರಾಮೀಣ ಕೂಲಿ ಮತ್ತು ಆದಾಯದಲ್ಲಿ ಕುಸಿತಕ್ಕೆ ಕಾರಣವಾಗಿದೆ.

ಸರಾಸರಿ ವೇತನದಲ್ಲಿ ಇಳಿಕೆ ಆಗಿದೆ
ಕಳೆದ ಕೆಲವು ವಾರದಲ್ಲಿ ಸರಾಸರಿ ವೇತನ ಇಳಿಕೆ ಆಗಿದೆ, ಅದರ ಜತೆಗೆ ಮಾನವ ದಿನಗಳು ಕಡಿಮೆ ಆಗಿದೆ. ಇದರ ಜತೆ ಸರ್ಕಾರದಿಂದ ಪ್ರತಿ ತಿಂಗಳು ಜನ್ ಧನ್ ಖಾತೆಗೆ ಹಾಕುತ್ತಿದ್ದ 500 ರುಪಾಯಿ ಜೂನ್ ಗೆ ಕೊನೆ ಆಗಿದೆ. ಪಿಎಂ- ಕಿಸಾನ್ ಯೋಜನೆ ಅಡಿಯಲ್ಲಿ ಮುಂಚಿತವಾಗಿ ನೀಡಿದ ಹಣದಿಂದ ರೈತರಿಗೆ ತಾತ್ಕಾಲಿಕವಾಗಿ ನೆರವಾಗಿದೆ. ಇನ್ನು ಸರ್ಕಾರದಿಂದ ಉಚಿತವಾಗಿ ವಿತರಿಸಿದ ಆಹಾರ ಧಾನ್ಯ ದೊಡ್ಡ ಮಟ್ಟದಲ್ಲಿ ತಲುಪಿದೆ.

ಅಂದಹಾಗೆ ಜನ್ ಧನ್ ಖಾತೆಗೆ ಪಾವತಿಸಿದ ಮೊತ್ತ ಏಪ್ರಿಲ್ ನಲ್ಲಿ 10,300 ಕೋಟಿ, ಮೇ 10,300 ಕೋಟಿ ಹಾಗೂ ಜೂನ್ ನಲ್ಲಿ 10,300 ಕೋಟಿ ರುಪಾಯಿ. ಇನ್ನು ಕೇಂದ್ರ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಅಂತ ಹೆಚ್ಚು ಮಾಡಿದ್ದು 2ರಿಂದ 8%. ಅದರಿಂದ ರೈತರ ಆದಾಯದಲ್ಲಿ ಗಮನಾರ್ಹ ಬೆಳವಣಿಗೆ ಏನೂ ಆಗಲ್ಲ. ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಸರ್ಕಾರವೇ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುತ್ತದೆ. ಆದರೆ ಎಲ್ಲವನ್ನೂ ಕೊಳ್ಳಲ್ಲ. ಗುಣಮಟ್ಟ ಇತ್ಯಾದಿಗಳನ್ನು ಪರಿಗಣಿಸಿ, ನಿರ್ಧರಿಸುತ್ತದೆ.

ರೈತರೇ ಹೇಳುವಂತೆ, ಪಡೆದುಕೊಂಡು ಸಾಲ ವಾಪಸ್ ಮಾಡುವುದಕ್ಕೆ ತುರ್ತಾದ ಹಣ ಅಗತ್ಯ ಇರುತ್ತದೆ. ಅದಕ್ಕಾಗಿ ತಕ್ಷಣ ಎಲ್ಲಿ ಹಣ ಸಿಗುತ್ತದೋ ಅಂತಲ್ಲೇ ಮಾರುತ್ತೇವೆ ಎನ್ನುತ್ತಾರೆ ಕೃಷಿಕರು. ಇನ್ನೂ ಒಂದು ವಾದ ಏನೆಂದರೆ, ಸರ್ಕಾರ ಕನಿಷ್ಠ ಬೆಂಬಲ ಘೋಷಣೆ ಮಾಡಿದೆ ಎಂದಾಕ್ಷಣ ಖರೀದಿ ಮಾಡುತ್ತದೆ ಅಂತಲ್ಲ. ಎಷ್ಟೋ ಸಲ ಮಾರುಕಟ್ಟೆ ಬೆಲೆಗಿಂತಲೂ ಕನಿಷ್ಠ ಬೆಂಬಲ ಬೆಲೆ ಕಡಿಮೆ ಇರುತ್ತದೆ ಎನ್ನುತ್ತಾರೆ ರೈತರು.

ದಿನಸಿ ಅಂಗಡಿಯಿಂದ ಕಟ್ಟಿಂಗ್ ಶಾಪ್ ತನಕ ವ್ಯಾಪಾರ ಡಲ್
ಸರ್ಕಾರದಿಂದ ನಾನಾ ಸಾಲ ಯೋಜನೆಗಳು ಇವೆ. ಆದರೆ ತಕ್ಷಣದ ಅಗತ್ಯಕ್ಕೆ ಅವು ಸಿಗುವುದೇ ಕಷ್ಟ. ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದೆ. ಕೊರೊನಾ ಲಾಕ್ ಡೌನ್ ಇದ್ದಾಗ ಬಾಡಿಗೆ ಕಟ್ಟುವುದಕ್ಕೆ ಆಗಲ್ಲ ಅಂತ ನಮ್ಮೂರು ದೊಡ್ಡಬಳ್ಳಾಪುರಕ್ಕೆ ಹೋದೆ. ಇಲ್ಲಿ ಕಾರಿನ ಇಎಂಐ ಇಪ್ಪತ್ತು ಸಾವಿರ ಕಟ್ಟಬೇಕು. ಜತೆಗೆ ಕೃಷಿ ಚಟುವಟಿಕೆಗೆ ಸಹಾಯ ಮಾಡುವವರು ಯಾರೂ ಇಲ್ಲ. ಈ ಮುಂಚೆ ಹೇಗೋ ಖರ್ಚು ಕಳೆದು, ಮನೆಗೆ ಹಣ ಕಳುಹಿಸುತ್ತಿದ್ದೆ. ಈಗ ವಿಪರೀತ ಕಷ್ಟವಾಗುತ್ತಿದೆ ಎನ್ನುತ್ತಾರೆ ಚಾಲಕ ರಾಮು.

ಅವರೇ ಮುಂದುವರಿದು, ಹಳ್ಳಿಗಳಲ್ಲಿ ಖರೀದಿ ಮಾಡುವ ಶಕ್ತಿಯನ್ನೇ ಜನರು ಕಳೆದುಕೊಂಡು ಬಿಟ್ಟಿದ್ದಾರೆ ಎಂದರು. ನಮ್ಮ ಸಂಬಂಧಿಕರದೊಂದು ದಿನಸಿ ಅಂಗಡಿ ಇದೆ. ಲಾಕ್ ಡೌನ್ ನಂತರ ಅವರಿಗೆ ವ್ಯಾಪಾರವೇ ಬಿದ್ದುಹೋಗಿದೆ. ಯಾವುದೇ ಜಮೀನು ಅವರಿಗಿಲ್ಲ. ನಮ್ಮಂಥ ಹಳ್ಳಿಗಳಲ್ಲಿ ಕಟ್ಟಿಂಗ್ ಶಾಪ್ ಇಟ್ಟುಕೊಂಡವರಿಗೂ ಸಮಸ್ಯೆ ಬೇಕಾದಷ್ಟಾಗಿದೆ. ಇವೆಲ್ಲ ಯಾವಾಗ ತೀರುತ್ತೋ ಎಂದು ನಿಟ್ಟುಸಿರು ಇಟ್ಟರು.

ದಿನಸಿ ಅಂಗಡಿಗಳಷ್ಟೇ ಅಲ್ಲ, ಚಿಕನ್- ಮಟನ್, ಫಿಷ್, ಡೇರಿ ವ್ಯಾಪಾರವೂ ಡಲ್ ಆಗಿದೆ. ಮುಂಚೆ ಮೀನುಗಾರಿಕೆ ಮಾಡಿದರೂ ಆ ದಿನದ ದುಡಿಮೆಗೆ ಒಂದು ದಾರಿ ಆಗುತ್ತಿತ್ತು. ಈಗ ಖರೀದಿ ಮಾಡುವವರು ಯಾರು? ನನಗೂ 55 ವರ್ಷ ದಾಟಿತು. ಈಗ ನಾನು ಬೇರೆ ಏನು ಮಾಡುವುದಕ್ಕೆ ಸಾಧ್ಯ ಎಂದು ಅಸಹಾಯಕತೆಯಿಂದ ಪ್ರಶ್ನಿಸುತ್ತಾರೆ ಚಿಕ್ಕಯ್ಯ.

ಹಾಗಂತ ಹಳ್ಳಿಗಳಿಗೆ ವಾಪಸ್ ಆದವರೆಲ್ಲ ನರೇಗಾ ಅಡಿಯಲ್ಲೋ ಅಥವಾ ಬೇರೆ ಕೃಷಿ ಕೆಲಸವೋ ಮಾಡಬಲ್ಲರು ಅಂದುಕೊಳ್ಳಬೇಡಿ. ಬೆಂಗಳೂರಿನ ಸಣ್ಣ ಬಿಪಿಒನಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ ಎಂಬುವರಿಗೆ 12,000 ರುಪಾಯಿ ಸಂಬಳ ಬರುತ್ತಿತ್ತು. ಆದರೆ ಕೊರೊನಾ ಬಂದ ಮೇಲೆ ಮಂಡ್ಯ ಹತ್ತಿರದ ಹಳ್ಳಿಗೆ ವಾಪಸ್ ಹೋಗಬೇಕಾಯಿತು. "ಈ ಹಳ್ಳಿಯಲ್ಲಿ ಕೃಷಿ ಬಿಟ್ಟರೆ ಬೇರೆ ಕೆಲಸ ಇಲ್ಲ. ನಾನು ಮತ್ತೆ ಬೆಂಗಳೂರಿಗೆ ವಾಪಸ್ ಹೋಗಬೇಕು," ಎನ್ನುತ್ತಾರೆ.

CMIE ದತ್ತಾಂಶದ ಪ್ರಕಾರ ಗ್ರಾಮೀಣ ನಿರುದ್ಯೋಗ ಪ್ರಮಾಣವು ಸೆಪ್ಟೆಂಬರ್ ನಲ್ಲಿ 5.86%ಗೆ ಕುಸಿದಿದೆ. ಇದು ಆಗಸ್ಟ್ ನಲ್ಲಿ 7.65% ಇತ್ತು. ಆದರೆ ಈ ಸಂಖ್ಯೆ ಬೇರೆಯದೇ ಇರಬಹುದು ಎಂದು ಹಳ್ಳಿಗರನ್ನು ಮಾತನಾಡಿಸಿದಾಗ ಗಮನಕ್ಕೆ ಬರುತ್ತದೆ.

English summary

How India's Rural Economy Crashed By Various Factors Despite Above Average Monsoon?

How rural economy crashed after Corona pandemic? Here is an analysis of monsoon, rural income, consumption, demand and other factors.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X