ಬೆಂಗಳೂರು, ಜುಲೈ 31: ಮಹಾನಗರದಲ್ಲಿ ಮನೆ ಖರೀದಿ ಮಾಡಬೇಕು ಎನ್ನುವ ಕನಸನ್ನು ಅಪಾರ ಶ್ರಮಪಟ್ಟು ನನಸು ಮಾಡಿಕೊಂಡಿರುತ್ತೀರಿ. ಹೊಸ ಮನೆಗೆ ಶಿಫ್ಟ್ ಆಗಿ ವಾಸ ಆರಂಭಿಸಿರುತ್ತೀರಿ. ಆದರೆ ಮಳೆಗಾಲ ಶುರುವಾದ ತಕ್ಷಣ ಮನೆ ಸೋರಲು ಆರಂಭಿಸುತ್ತದೆ. ಮನೆಯ ಪೇಂಟ್ ಕಿತ್ತು ಬರುತ್ತದೆ. ಟಿವಿ ಮೌಂಟ್ ಮಾಡೋದಕ್ಕೆ ಗೋಡೆಗೆ ಡ್ರಿಲ್ ಮಾಡಿದಾಗ, ಪ್ಲಾಸ್ಟರ್ ಕಿತ್ತು ಬರುತ್ತದೆ. ಇದರಿಂದ ಕಿರಿಕಿರಿಯುಂಟಾಗಿ ನಿಮ್ಮ ಅಪಾರ್ಟ್ ಮೆಂಟ್ ಗೆ ಸಂಬಂಧಿಸಿದ ಸೊಸೈಟಿಗೆ ದೂರು ನೀಡುತ್ತೀರಿ. ಯಾವಾಗ ಕೇಳಿದರೂ ನಿಮ್ಮ ದೂರು ಪರಿಶೀಲನೆಯಲ್ಲಿದೆ ಎನ್ನುವ ಉತ್ತರವೇ ಬರುತ್ತದೆ. ಇಂಥ ಸಂದರ್ಭ ನಿಮಗೆ ಏನು ಮಾಡಬೇಕು ಎನ್ನುವುದೇ ತೋಚುವುದಿಲ್ಲ.
ತುಂಬಾ ಜನರು ಮನೆ ಖರೀದಿ ಮಾಡುವಾಗ ಬಜೆಟ್ ಮತ್ತು ಸ್ಥಳವನ್ನಷ್ಟೇ ಗಮನಿಸುತ್ತಾರೆ. ಆದರೆ ಕನ್‌ಸ್ಟ್ರಕ್ಷನ್ ಗುಣಮಟ್ಟದ ಮೇಲೆ ಗಮನ ಹರಿಸುವುದಿಲ್ಲ. ನೀವು ಕಷ್ಟಪಟ್ಟು ಗಳಿಸಿದ ಹಣ ಇಂತಹದ್ದರಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಕಾಪಾಡಿಕೊಳ್ಳಲು, ಮನೆ ಖರೀದಿ ಮಾಡುವುದಕ್ಕೂ ಮೊದಲು ಮನೆ ನಿರ್ಮಾಣದ ಗುಣಮಟ್ಟವನ್ನು ಮಾಡಿಕೊಳ್ಳುವುದು ಉತ್ತಮ.

ಮನೆ ಅಥವಾ ಫ್ಲಾಟ್ ಬುಕ್ ಮಾಡೋದಕ್ಕೆ ಮೊದಲು ನೀವು ಸ್ವಲ್ಪ ರೀಸರ್ಚ್ ಮಾಡಿದರೆ, ಆಮೇಲೆ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು. ಪ್ರಾಜೆಕ್ಟ್ ಸೈಟ್‌ಗೆ ನೀವು ಭೇಟಿ ನೀಡಬೇಕು. ಕಾಂಕ್ರೀಟ್ ಮತ್ತು ಬ್ರಿಕ್‌ವರ್ಕ್ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಅಲ್ಲಿ ಇರುವ ಸ್ಟ್ರಕ್ಚರಲ್ ಇಂಜಿನಿಯರ್‌ನಿಂದ ನಿರ್ಮಾಣ ಗುಣಮಟ್ಟ ಸರ್ಟಿಫಿಕೇಟ್ ಅನ್ನು ಕೂಡಾ ಪಡೆದುಕೊಳ್ಳಬಹುದು.
ಬಿಲ್ಡರ್ ಈ ಹಿಂದೆ ನಿರ್ಮಾಣ ಮಾಡಿದ ಪ್ರಾಜೆಕ್ಟ್ ಗಳು ಈಗ ಹೇಗಿವೆ? ಎನ್ನುವ ರಿಪೋರ್ಟ್ ಪಡೆದುಕೊಳ್ಳಬಹುದು. ನಿರ್ಮಾಣ ಗುಣಮಟ್ಟದ ಬಗ್ಗೆ ನಿವಾಸಿಗಳು ಸಂತೃಪ್ತರಾಗಿದ್ದಾರೆಯೇ? ಎಂದು ನೋಡಬಹುದು. ನೀವು ಮಾಡಬಹುದಾದ ತುಂಬಾ ಸುಲಭವಾದ ತಪಾಸಣೆ ಕಾರ್ಯಕ್ರಮ ಇದು. ಸ್ಥಳೀಯ ಪ್ರಾಧಿಕಾರಗಳು ವಿತರಿಸುವ ಕಂಪ್ಲೈನ್ಸ್ ಸರ್ಟಿಫಿಕೇಟ್‌ಗಳು ಮತ್ತು ಒಕ್ಯುಪೆನ್ಸ್ ಸರ್ಟಿಫಿಕೇಟ್‌ಗಳನ್ನು ತೋರಿಸುವಂತೆ ಡೆವಲಪರ್ ಬಳಿ ನೀವು ಕೇಳಬಹುದು. ಈಗಿನ ಬಿಲ್ಡಿಂಗ್ ಬೈಲಾಗಳು ಮತ್ತು ಇತರ ಕಾನೂನುಗಳಿಗೆ ಪ್ರಾಜೆಕ್ಟ್ ಅನುಗುಣವಾಗಿದೆ ಅಂತ ಈ ಪ್ರಮಾಣಪತ್ರಗಳು ಸೂಚಿಸುತ್ತವೆ.
ಪ್ರಾಪರ್ಟಿಯನ್ನು ಖರೀದಿ ಮಾಡುವಾಗ ಫಿನಿಶಿಂಗ್, ಅಡುಗೆಮನೆ, ಶೌಚಾಲಯದ ಫಿಟಿಂಗ್‌ಗಳು, ಟೈಲ್ಸ್ ಮತ್ತು ಇತರ ಸಾಮಗ್ರಿಗಳ ಗುಣಮಟ್ಟವನ್ನು ಪರಿಶೀಲಿಸಿಕೊಳ್ಳಿ. ಅವುಗಳಲ್ಲಿ ಯಾವುದೇ ದೋಷವಿದ್ದರೆ, ಅವುಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಡೆವಲಪರ್‌ಗೆ ಹೇಳಿ ಅದನ್ನು ಸರಿಪಡಿಸಿಕೊಳ್ಳಿ. ಕನ್‌ಸ್ಟ್ರಕ್ಷನ್ ಕ್ವಾಲಿಟಿ ನೋಡುವುದಕ್ಕೆ ನೀವು ಸ್ಟ್ರಕ್ಚರಲ್ ಇಂಜಿನಿಯರ್ ಸಹಾಯವನ್ನೂ ತೆಗೆದುಕೊಳ್ಳಬಹುದು. ಅವರು ಬಿಲ್ಡಿಂಗ್ ಲೇಔಟ್, ಡಿಸೈನ್ ಮತ್ತು ಬಿಲ್ಡಿಂಗ್ ಸಾಮಗ್ರಿಗಳನ್ನು ಪರಿಶೀಲಿಸಿ, ಕನ್‌ಸ್ಟ್ರಕ್ಷನ್ ಕ್ವಾಲಿಟಿ ಸರಿ ಇದೆ ಎಂದು ನೋಡುತ್ತಾರೆ. ಹಳೆಯ ಮನೆ ಖರೀದಿ ಮಾಡೋದಾದರೆ ಸ್ಟ್ರಕ್ಚರಲ್ ಇಂಜಿನಿಯರ್ ಬಳಸಿ ಅದರ ಸಾಮರ್ಥ್ಯ ಎಷ್ಟು ಎಂಬುದಾಗಿ ಚೆಕ್ ಮಾಡಿಸಿಕೊಳ್ಳಿ.
ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಆಕ್ಟ್ ಅಂದರೆ ರೇರಾ, ಕನ್‌ಸ್ಟ್ರಕ್ಷನ್ ಗುಣಮಟ್ಟದಲ್ಲಿ ಅಗತ್ಯ ಸುಧಾರಣೆ ಮಾಡೋದಕ್ಕೆ ಸಹಾಯ ಮಾಡಿದೆ. ಬಿಲ್ಡರ್ ಹೇಳಿದ ಎಲ್ಲ ಸೌಲಭ್ಯಗಳನ್ನೂ ಬಿಲ್ಡರ್ ಮತ್ತು ಖರೀದಿದಾರರ ಕರಾರಿನಲ್ಲಿ ಇರಬೇಕು. ಅವರು ಹೇಳಿದ ಸೌಲಭ್ಯಗಳನ್ನು ಒದಗಿಸದೇ ಇದ್ದಿದ್ದಕ್ಕೆ ಅವರನ್ನು ನೀವು ಹೊಣೆಗಾರರನ್ನಾಗಿಸಬಹುದು.
ರೇರಾ ಕಾನೂನಿನ ಸೆಕ್ಷನ್ 14(3) ಅಡಿಯಲ್ಲಿ, ಯಾವುದೇ ಸ್ಟ್ರಕ್ಚರಲ್ ದೋಷ ಇದ್ದರೆ, ಅಂದರೆ ನಿರ್ಮಾಣ, ಕೆಲಸ, ಗುಣಮಟ್ಟ ಅಥವಾ ಸೇವೆಯಲ್ಲಿ 5 ವರ್ಷಗಳೊಳಗೆ ಯಾವುದೇ ತೊಂದರೆ ಕಾಣಿಸಿಕೊಂಡರೆ, ಅದನ್ನು ಬಿಲ್ಡರ್ ಸರಿಪಡಿಸಿಕೊಡಬೇಕು. 30 ದಿನಗಳೊಳಗೆ ಯಾವುದೇ ಶುಲ್ಕ ವಿಧಿಸದೇ ಈ ಸಮಸ್ಯೆಗಳನ್ನು ಬಿಲ್ಡರ್ ಸರಿಪಡಿಸಬೇಕು. ನಂತರವೂ ದೋಷ ಕಾಣಿಸಿಕೊಂಡರೆ, ಪರಿಹಾರವನ್ನು ಪಡೆಯುವುದಕ್ಕೆ ಮನೆ ಖರೀದಿ ಮಾಡಿದವರಿಗೆ ಹಕ್ಕು ಇರುತ್ತದೆ.
ರಿಯಲ್ ಎಸ್ಟೇಟ್ ರೆಗ್ಯುಲೇಶನ್ ಕಾಯ್ದೆಯನ್ನು ಪ್ರಮೋಟರ್ ಅಥವಾ ರಿಯಲ್ ಎಸ್ಟೇಟ್ ಏಜೆಂಟ್ ಉಲ್ಲಂಘಿಸಿದರೆ, ಸಂಬಂಧಿಸಿದ ರಾಜ್ಯದ ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿಗೆ ದೂರು ಸಲ್ಲಿಸಬಹುದು. ರೇರಾ ಜೊತೆಗೆ ಗ್ರಾಹಕರ ನ್ಯಾಯಾಲಯದಲ್ಲೂ ದೂರು ದಾಖಲು ಮಾಡಬಹುದು. ರೇರಾದಲ್ಲಿ ದೂರು ದಾಖಲಿಸುವುದು ಹೇಗೆ? ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ದೂರು ದಾಖಲು ಮಾಡಬಹುದು. ರೇರಾ ವೆಬ್‌ಸೈಟ್‌ನಲ್ಲಿ, ಆನ್‌ಲೈನ್‌ನಲ್ಲಿ ದೂರು ಸಲ್ಲಿಸಬಹುದು. ಇದರ ಜೊತೆಗೆ ರೇರಾ ಕಚೇರಿಗೆ ಭೇಟಿ ನೀಡಿ ಫಾರ್ಮ್ ಎಂ ಸಹ ಸಲ್ಲಿಸಿ ನಿಮ್ಮ ದೂರನ್ನು ಸಲ್ಲಿಸಬಹುದು.


Click it and Unblock the Notifications