ಬೆಂಗಳೂರು, ಆಗಸ್ಟ್ 2: ಪ್ರವಾಹ, ನೆರೆ ಹಾವಳಿಯಿಂದ ಮನೆ ಕಳೆದುಕೊಂಡು ಬೀದಿಗೆ ಬಂದಿರುವ ಅದೆಷ್ಟೋ ಕುಟುಂಬಗಳ ಕಣ್ಣೀರ ಕತೆಯನ್ನು ಪ್ರತಿ ದಿನ ಕೇಳುತ್ತಲೇ ಇದ್ದೇವೆ. ಸರಿಯಾದ ಸಮಯಕ್ಕೆ ಪರಿಹಾರ ಸಿಗದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಪ್ರತಿದಿನ ಒಂದು ಕಪ್ ಕಾಫಿ ಕುಡಿಯಲು ವ್ಯಯಸುವ ಹಣವನ್ನು ವಿಮೆಗೆ ತೆಗೆದಿಟ್ಟರೆ ಸಾಕು.
ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ನೀಡುವ ಗೃಹ ವಿಮೆ ಮಾಡಿಸಿದರೆ ದೊಡ್ಡ ತಾಪತ್ರಯದಿಂದ ಪಾರಾಗಬಹುದು. ದುಸ್ಥಿತಿ ತಲುಪುವುದರಿಂದ ಬಚಾವ್ ಆಗಬಹುದು. ದುರದೃಷ್ಟ ಎಂದರೆ ಕೇವಲ ಕೆಲವೇ ಮಂದಿ ತಮ್ಮ ಮನೆ ಹಾಗೂ ವ್ಯವಹಾರಗಳಿಗೆ ವಿಮಾ ರಕ್ಷಣೆ ಪಡೆದುಕೊಂಡಿರುತ್ತಾರೆ.
ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಮನೆ ಕಳೆದುಕೊಳ್ಳುವವರ, ಆಸ್ತಿ ಕಳೆದುಕೊಳ್ಳುವವರ ಪೈಕಿ ಕೇವಲ ಶೇ. 8ರಷ್ಟು ಜನ ವಿಮೆ ಮಾಡಿಸಿಕೊಂಡಿರುತ್ತಾರೆ ಎಂಬ ವರದಿಗಳು ಇವೆ. ದೇಶದಲ್ಲಿ ವಿಮಾ ರಕ್ಷಣೆಯ ಕೊರತೆ ಶೇ 92ರಷ್ಟಿದೆ ಎಂದೇ ಹೇಳಬಹುದು.

1990ರ ನಂತರ, ಭಾರತವು ಅಮೆರಿಕಾ ಮತ್ತು ಚೀನಾಗಳ ನಂತರ ಅತಿ ಹೆಚ್ಚು ನೈಸರ್ಗಿಕ ವಿಕೋಪಗಳನ್ನು ಎದುರಿಸಿದೆ ಮತ್ತು ಎದುರಿಸುತ್ತಿದೆ. ಈ ವಿಕೋಪಗಳಲ್ಲಿ ಪ್ರವಾಹಗಳು, ಭೂ ಕುಸಿತಗಳು, ಸೈಕ್ಲೋನ್‌ಗಳು, ಭೂಕಂಪಗಳು, ಮತ್ತು ಕ್ಷಾಮಗಳು ಸೇರಿವೆ. 1900ರ ನಂತರ, 770ಕ್ಕೂ ಅಧಿಕ ಸೈಸರ್ಗಿಕ ವಿಕೋಪಗಳ ಪ್ರಕರಣಗಳನ್ನು ಅನುಭವಿಸಿದೆ. ಭಾರತದಲ್ಲಿ ಪ್ರವಾಹಗಳು ಬಹಳ ಸಾಮಾನ್ಯವಾದ ನೈಸರ್ಗಿಕ ವಿಕೋಪಗಳಾಗಿವೆ. ವರದಿಯ ಪ್ರಕಾರ, ಸುಮಾರು ಶೇ. 41ರಷ್ಟು ನೈಸರ್ಗಿಕ ವಿಕೋಪಗಳು ಪ್ರವಾಹಗಳಿಗೆ ಸಂಬಂಧಿಸಿವೆ. ಪ್ರವಾಹಗಳ ನಂತರ, ದೇಶವು ಅತಿ ಹೆಚ್ಚಿನ ಸಂಖ್ಯೆಯ ಸೈಕ್ಲೋನ್‌ಗಳನ್ನು ಎದುರಿಸುತ್ತದೆ.
ವಿಮಾ ರಕ್ಷಣೆ ಏಕೆ ಮುಖ್ಯ?
ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ನೈಸರ್ಗಿಕ ವಿಕೋಪಗಳ ಆತಂಕ ಹೆಚ್ಚು. ಬಹಳಷ್ಟು ಜನರಿಗೆ, ತಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಲು ಜೀವನದುದ್ದಕ್ಕೂ ಕಷ್ಟಪಟ್ಟು ಗಳಿಸಿದ ಹಣದ ಬಹುಪಾಲು ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತೆ, ಹೆಚ್ಚಿನ ವೇಳೆಗಳಲ್ಲಿ, ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಅವರು ಗೃಹ ಸಾಲ ಪಡೆಯಬೇಕಾಗುತ್ತೆ.
ಕಾರಿ ಕೊಂಡಾಗ, ದ್ವಿಚಕ್ರ ವಾಹನ ಖರೀದಿಸಿದಾಗ ನೀವು ಹೇಗೆ ಅದಕ್ಕೊಂದು ವಿಮೆಯನ್ನು ಕೊಳ್ಳುವಿರೋ, ಹಾಗೆಯೇ ನಿಮ್ಮ ಮನೆಗೂ ಒಂದು ವಿಮೆ ಕೊಳ್ಳುವುದು ಅಷ್ಟೇ ಮುಖ್ಯ ಆಗುತ್ತದೆ. ನಿಮ್ಮ ಮನೆಗೆ ಆಗಬಹುದಾದ ಹಾನಿ ಮತ್ತು ಅದರಲ್ಲಿನ ಬೆಲೆಬಾಳುವ ವಸ್ತುಗಳ ನಷ್ಟಕ್ಕೆ ಪರಿಹಾರ ಒದಗಿಸಲು ಗೃಹ ವಿಮೆ ಅತ್ಯವಶ್ಯಕವಾಗಿ ಬೇಕಾಗುತ್ತದೆ. ನಿಮ್ಮ ಮನೆಗೆ ಅನಿರೀಕ್ಷಿತವಾಗಿ ಉಂಟಾಗಬಹುದಾದ ಯಾವುದೇ ನಷ್ಟಗಳ ವಿರುದ್ಧ ರಕ್ಷಣೆ ನೀಡುವ ರಕ್ಷಾ ಕವಚದಂತೆ ಗೃಹ ವಿಮೆ ಕೆಲಸ ಮಾಡುತ್ತದೆ.
ಗೃಹ ವಿಮೆಗೆ, ಎಲ್ಲಾ ಸಾಮಾನ್ಯ ವಿಮಾ ಕಂಪನಿಗಳು ಭಾರತ್ ಗೃಹ ರಕ್ಷಾ ಅನ್ನೋ ಹೆಸರಿನ ಅಡಿಯಲ್ಲಿ ಒಂದು ಗೃಹ ವಿಮಾ ಯೋಜನೆಯನ್ನು ನೀಡುತ್ತಿವೆ. ಅದು ಮನೆಯ ಕಟ್ಟಡ ಮತ್ತು ಅದರೊಳಗಿರುವ ವಿದ್ಯುತ್ ಉಪಕರಣಗಳು ಮತ್ತು ಜೋಡಣೆಗಳು, ಸ್ನಾನದ ಕೋಣೆಯ ಫಿಟ್ಟಿಂಗ್‌ಗಳು, ಮತ್ತು ವಾಹನ ನಿಲುಗಡೆ/ದುರಸ್ತಿಯ ಸ್ಥಳ ಸೇರಿದಂತೆ ಎಲ್ಲಾ ಸಾಧನಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ಮನೆ ಮಾಲೀಕರ (ಹೌಸ್‌ಹೋಲ್ಡರ್) ಪಾಲಿಸಿಗಳು ಎಂದು ಕರೆಯಲ್ಪಡುವ ಕೆಲ ವಿಮಾ ಉತ್ಪನ್ನಗಳನ್ನು ಎಲ್ಲಾ ಬಗೆಯ ಆತಂಕಗಳಿಗೆ ರಕ್ಷಣೆ ಒದಗಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಆಯ್ಕೆಗಳಲ್ಲಿ, ನೀವು ನಿಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಒಂದನ್ನು ಆರಿಸಿಕೊಳ್ಳಬಹುದು. ನಿಮಗೆ ಅವಶ್ಯಕವೆನಿಸುವ ಹೆಚ್ಚುವರಿ ರಕ್ಷಣೆಗಳನ್ನು (ರೈಡರ್‌ಗಳು) ನಿಮ್ಮ ವಿಮಾ ಯೋಜನೆಗೆ ಸೇರಿಸಿಕೊಳ್ಳಲು ಸಾಧ್ಯವಿದೆ.
ಇಂತಹ ವಿಮಾ ಯೋಜನೆಗಳು ಎಷ್ಟು ದುಬಾರಿಯಾಗಿರುತ್ತವೆ?
ಸ್ವತ್ತಿನ ವಿಮೆಯನ್ನು ಸಾಮಾನ್ಯವಾಗಿ ದೀರ್ಘಾವಧಿಯ ಉದ್ದೇಶದಿಂದ ಹಾಗೂ ಒಂದೇ ಪ್ರೀಮಿಯಮ್‌ನ ಪಾಲಿಸಿಯಾಗಿ ನೀಡಲಾಗುತ್ತದೆ. ಪಾಲಿಸಿ ನಿಮಗೆ ಕೈಗೆಟಕುವ ದರದಲ್ಲಿಯೇ ಸಿಗುತ್ತದೆ. ನೀವು ಮನೆ ನಿರ್ಮಾಣ ಮಾಡಲು, ಪ್ರಾಪರ್ಟಿ ಖರೀದಿ ಮಾಡಲು ಮಾಡುವ ವೆಚ್ಚದ ಸಣ್ಣ ಪಾಲೊಂದನ್ನು ತೆಗೆದಿರಿಸಿದರೆ ನಿಮ್ಮ ಮನೆಗೆ ಸಂಪೂರ್ಣ ಸುರಕ್ಷೆ ಪಡೆದುಕೊಳ್ಳುತ್ತೀರಿ.


Click it and Unblock the Notifications