ಬ್ಯುಸಿನೆಸ್ (Business) ಆರಂಭಿಸಬೇಕು, ಸಕ್ಸಸ್ ಕಾಣಬೇಕೆಂದು ಹೆಚ್ಚಿನವರು ಕನಸು ಕಾಣುತ್ತಾರೆ. ಆದ್ರೆ ಬಂಡವಾಳದ ಕೊರತೆಯಿಂದಲೋ, ನಷ್ಟದ ಭಯದಿಂದಲೋ ಹೆಚ್ಚಿನವರ ಕನಸು ನನಸಾಗುವುದಿಲ್ಲ. ಆದರೆ ಇಲ್ಲೊಬ್ಬರು ಕಡಿಮೆ ಬಂಡವಾಳದೊಂದಿಗೆ ಬ್ಯುಸಿನೆಸ್ ಆರಂಭಿಸಿ ಸಕ್ಸಸ್ ಕಂಡವರು ಇದ್ದಾರೆ. ಹೌದು, ಲೈಮ್ ಸೋಡಾ (Fresh Lime Soda) ಎಂಬ ಫ್ರೆಶ್ ಪಾನೀಯದ ಬ್ಯುಸಿನೆಸ್ ಆರಂಭಿಸಿ, ಇಂದು ಯಶಸ್ವಿ ಉದ್ಯಮಿಗಳಾಗಿದ್ದಾರೆ.

ಸನತ್ ಎಂಬವರು 9ನೇ ತರಗತಿಯಲ್ಲಿ ಫೇಲ್ ಆದವರು. ಆದ್ರೆ ಅವರ ಸತತ ಪರಿಶ್ರಮದಿಂದಾಗಿ ಇಂದು ಯಶಸ್ವಿ ಉದ್ಯಮಿಯಾಗಿದ್ದಾರೆ. ಹಾಗಿದ್ರೆ ಇವರ ಯಶಸ್ವಿ ಹಿಂದಿನ ರಹಸ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಸನತ್ ಎಂಬವರು 9ನೇ ತರಗತಿ ಫೇಲ್ ಆದ ನಂತರ ಹಲವು ಕಡೆ ಕೆಲಸ ಮಾಡಿದ್ದರು. ಆ ಬಳಿಕ ಇದೇ ರೀತಿ ಲೈಮ್ ಸೋಡಾ ಬ್ಯುಸಿನೆಸ್ ನಡೆಸುತ್ತಿದ್ದ ಉದ್ಯಮಿಯೊಂದಿಗೆ ಕೆಲಸಕ್ಕೆ ಸೇರಿದ್ದರು. ಹಲವು ವರ್ಷಗಳ ನಂತರ ಉದ್ಯೋಗಿಯಾಗಿದ್ದ ಸನತ್, ತನ್ನದೇ ಆದ ಸ್ವಂತ ಲೈಮ್ ಸೋಡಾ ಉದ್ಯಮವನ್ನು ಆರಂಭಿಸಿದರು.
ಬಂಡವಾಳ ಎಷ್ಟು ಬೇಕು?
ಆರಂಭದಲ್ಲಿ ಒಂದು ವಾಹನ ಮತ್ತು ಲೈಮ್ ಸೋಡಾ ಜ್ಯೂಸ್ ಮಾಡುವ ಮೆಷಿನ್ ಖರೀದಿಸಬೇಕು. ಸೆಕೆಂಡ್ ಹ್ಯಾಂಡ್ ಗಾಡಿ ತೆಗೆದುಕೊಳ್ಳುವವರು ಕಮ್ಮಿ ಅಂದರೂ 4 ಲಕ್ಷದಿಂದ 5 ಲಕ್ಷದೊಳಗೆ ತೆಗೆದುಕೊಳ್ಳಬಹುದು. ಇನ್ನು ಅದರ ಮೆಷಿನ್ 1 ಲಕ್ಷದಿಂದ 1.50 ಲಕ್ಷದಲ್ಲಿ ಸಿಗುತ್ತದೆ. ಈ ಬ್ಯುಸಿನೆಸ್ ಆರಂಭಿಸಲು ಮುಖ್ಯವಾಗಿ ಜನರ ಜೊತೆ ಸಂಪರ್ಕ ಇದ್ದರೆ ಒಳ್ಳೆಯದು. ಇನ್ನು ನಿಂಬೆ ಹಣ್ಣು, ಲೋಟ, ಸಕ್ಕರೆ, ಗ್ಯಾಸ್ ಹೀಗೆ ಎಲ್ಲಾ ಸೇರಿದರೂ 10 ಲಕ್ಷದೊಳಗಿನ ಬಂಡವಾಳದಿಂದ ಈ ವ್ಯವಹಾರ ಶುರು ಮಾಡಬಹುದು ಅನ್ನುತ್ತಾರೆ ಸನತ್.

ಸನತ್ ಅವರು ಈ ಲೈಮ್ ಸೋಡಾ ವ್ಯಾಪಾರವನ್ನು ಅಂಗಡಿಯಲ್ಲೋ, ಬೇರೆಲ್ಲೋ ಮಾಡುವುದಿಲ್ಲ. ಬದಲಾಗಿ ಜಾತ್ರೆಗಳಲ್ಲಿ, ಮದುವೆಗಳಲ್ಲಿ ಮಾರಾಟ ಮಾಡುತ್ತಾರೆ. ಅಂದರೆ ಊರಲ್ಲಿ ನಡೆಯುವ ಜಾತ್ರೆ, ಕಾರ್ಯಕ್ರಮಗಳಲ್ಲಿ ಹೋಗಿ ಲೈಮ್ ಸೋಡಾ ವ್ಯಾಪಾರ ಮಾಡುತ್ತಾರೆ.
ಲಾಭ ಹೇಗೆ ಸಿಗುತ್ತದೆ?
ಸಾಮಾನ್ಯವಾಗಿ ಜಾತ್ರೆಗಳಲ್ಲಿ 20 ರಿಂದ 40 ರೂಪಾಯಿಗೆ ಲೈಮ್ ಸೋಡಾವನ್ನು ಸೇಲ್ ಮಾಡಲಾಗುತ್ತದೆ. ಇದರಲ್ಲಿ ಖರ್ಚು ಅಂದ್ರೆ 10 ರಿಂದ 15 ರೂಪಾಯಿ ಆಗಬಹುದು. 20 ರೂಪಾಯಿಗೆ ಮಾರಾಟ ಮಾಡಿದ್ರೆ, ಅರ್ಧ ಪಟ್ಟು ಲಾಭ ಪಡೆಯಬಹುದು. ಅದೇ 40 ರೂಪಾಯಿಗೆ ಮಾರಾಟ ಮಾಡಿದ್ರೆ ಹೆಚ್ಚು ಲಾಭ ಪಡೆಯಬಹುದು. ಈ ಮೂಲಕ ಒಮ್ಮೆ ಮಾರಾಟಕ್ಕೆ ಹೋದರೆ ಅರ್ಧಕ್ಕರ್ಧ ಲಾಭವನ್ನು ಪಡೆಯಬಹುದು.
ಇನ್ನು ಮದುವೆ ಸಮಾರಂಭಗಳಲ್ಲಿ ಆಯಾ ಕುಟುಂಬದವರು ಅಥವಾ ಕ್ಯಾಟರಿಂಗ್ ಮೂಲಕ ಆರ್ಡರ್ ತೆಗೆದುಕೊಳ್ಳಬಹುದು. ಮದುವೆಗಳಲ್ಲಿನ ಮನೆಯವರಿಗೆ ಅಥವಾ ಕ್ಯಾಟರಿಂಗ್‌ನವರಿಗೆ 10 ರಿಂದ 15 ರೂಪಾಯಿಯಂತೆ ನೀಡಲಾಗುತ್ತದೆ. ಇಲ್ಲಿ ಮೊದಲೇ ಎಷ್ಟು ಜ್ಯೂಸ್ ಬೇಕಾಗುತ್ತದೆ ಎಂದು ಆರ್ಡರ್ ನೀಡಲಾಗುತ್ತದೆ. ಆ ಆರ್ಡರ್‌ಗೆ ತಕ್ಕಂತೆ ಬೆಲೆ ನಿಗದಿ ಮಾಡಲಾಗುತ್ತದೆ.
ಇನ್ನು ಈ ಬಗ್ಗೆ ಗುಡ್ ರಿಟರ್ನ್ಸ್‌ನೊಂದಿಗೆ ಮಾತನಾಡಿರುವ ಉದ್ಯಮಿ ಸನತ್, "ಸತತ ಪರಿಶ್ರಮ, ಸಂಪರ್ಕದಿಂದ ಒಂದು ಉದ್ಯಮ ಯಶಸ್ವಿಯಾಗಲು ಕಾರಣ" ಎಂದು ಹೇಳುತ್ತಾರೆ. 28 ವರ್ಷದ ಈ ಯುವಕ ಇಂದು ಹಲವು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.


Click it and Unblock the Notifications