ಬೆಂಗಳೂರು, ನವೆಂಬರ್ 06: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೆತ್ತಿಕೊಳ್ಳಲಿರುವ ಪ್ರಮುಖ ರಸ್ತೆ ಯೋಜನೆಯೊಂದಕ್ಕೆ ಅನುದಾನ ಸಿಕ್ಕಿದೆ. ನಗರದ ಬಹು ನಿರೀಕ್ಷಿತ 73 ಕಿ. ಮೀ. ರಸ್ತೆ ಯೋಜನೆ ಇದಾಗಿದ್ದು, ಇದರ ಯೋಜನಾ ವೆಚ್ಚ ಸುಮಾರು 27,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮಹತ್ವದ ಯೋಜನೆ ಇದಾಗಿದೆ.
ಬಿಡಿಎ ಮೊದಲು ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಎಂಬ ಯೋಜನೆ ಕೈಗೊಂಡಿತ್ತು. ಸದ್ಯ ಯೋಜನೆಗೆ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಎಂದು ಮರು ನಾಮಕಾರಣ ಮಾಡಲಾಗಿದೆ. ಯೋಜನೆ ವ್ಯಾಪ್ತಿಗೆ ಬರುವ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಕಾರ್ಯಕ್ಕೆ ಈಗಾಗಲೇ ಬಿಡಿಎ ಚಾಲನೆ ನೀಡಿದೆ.

ಬಿಡಿಎ ಅಧ್ಯಕ್ಷ ಎನ್. ಎ. ಹ್ಯಾರೀಸ್, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ಬಿಡಿಎ ಆಯುಕ್ತ ಎನ್. ಜಯರಾಮ್ ಹಾಗೂ ವಿವಿಧ ಅಧಿಕಾರಿಗ ಜೊತೆ ಬಿಬಿಸಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು. ಯೋಜನೆ ಭೂ ಸ್ವಾಧೀನಕ್ಕಾಗಿ ಯಲಹಂಕದಲ್ಲಿ ಈಗಾಗಲೇ ಹೊಸ ಕಛೇರಿಯನ್ನು ಸಹ ತೆರೆಯಲಾಗಿದೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಅಗತ್ಯವಿರುವ ಶೇ 100ರಷ್ಟು ಅನುದಾನವನ್ನು ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ (ಹುಡ್ಕೊ) ನೀಡಲಿದೆ. ಕುರಿತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹುಡ್ಕೋ ಜನರಲ್ ಮ್ಯಾನೇಜರ್ ಶೀಘ್ರವೇ ಬಿಡಿಎ ಕಛೇರಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಲಿಖಿತವಾಗಿ ಅನುದಾಣ ನೀಡುವ ಕುರಿತು ಹುಡ್ಕೊ ಭರವಸೆಯನ್ನು ನೀಡಿದೆ.
ಈ ಪ್ರಮುಖ ರಸ್ತೆ ಯೋಜನೆಗೆ 76 ಹಳ್ಳಿಗಳ ಸುಮಾರು 1,810 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. ಸರ್ಕಾರಕ್ಕೆ ಸೇರಿದ 193 ಎಕರೆ ಭೂಮಿ ಸಹ ಯೋಜನೆ ವ್ಯಾಪ್ತಿಗೆ ಒಳಪಡಲಿದೆ. ಸರ್ಕಾರಿ ಭೂಮಿಯನ್ನು ಉಚಿತವಾಗಿ ಹಸ್ತಾಂತರ ಮಾಡಲು ತೀರ್ಮಾನಿಸಲಾಗಿದೆ. ಈ ಯೋಜನೆಯ ಉಸ್ತುವಾರಿ ನೋಡಿಕೊಳ್ಳಲು ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಎಲ್. ಕೆ. ಅತೀಕ್ ಅವರನ್ನು ವಿಶೇಷ ಅಧಿಕಾರಿಯಾಗಿಯೂ ನೇಮಕ ಮಾಡಲಾಗಿದೆ.
ಬಿಡಿಎ ಅಧಿಕಾರಿಗಳ ಮಾಹಿತಿ ಪ್ರಕಾರ ಅನುದಾನದ ಖಚಿತತೆ, ಅನುದಾನ ಹಂಚಿಕೆ, ಭೂ ಸ್ವಾಧೀನ ಪ್ರಕ್ರಿಯೆ ಮುಗಿದ ಬಳಿಕ ಬಿಬಿಸಿ ಯೋಜನೆಗೆ ಟೆಂಡರ್ ಕರೆಯಲಾಗುತ್ತದೆ. 73 ಕಿ. ಮೀ. ಉದ್ದದ ರಸ್ತೆ ಯೋಜನೆಯನ್ನು ವಿಭಾಗವಾಗಿ ಮಾಡಿ ಜಾರಿಗೊಳಿಸಲಾಗುತ್ತದೆ. ತುಮೂರು ರಸ್ತೆ-ಹೊಸೂರು ರಸ್ತೆ ಸಂಪರ್ಕಿಸುವ ಈ ಕಾರಿಡಾರ್ ದೊಡ್ಡಬಳ್ಳಾಪುರ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮೂಲಕ ಸಾಗುತ್ತದೆ.
ಈ ಯೋಜನೆ ಭೂ ಸ್ವಾಧೀನಕ್ಕಾಗಿಯೇ ಬಿಡಿಎ 8 ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಯೋಜನೆ ವ್ಯಾಪ್ತಿಗೆ ಸೇರುವ ಸುಮಾರು 40 ಸಾವಿರ ಭೂ ಮಾಲೀಕರಿಗೆ ಭೂ ಸ್ವಾಧೀನ ಕಾಯ್ದೆ, 1984ರ ಅಡಿ ನೋಟಿಸ್ ನೀಡುವ ಕೆಲಸ ಆರಂಭವಾಗಿದೆ.
ಯೋಜನೆಗೆ ಭೂಮಿ ನೀಡುವ ರೈತರು ಈಗಿರುವ 2013ರ ನಿಯಮಗಳ ಅನ್ವಯ ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಬಹುದು. ಯೋಜನೆಗೆ ಇರುವ ಆಕ್ಷೇಪಣೆ, ಭೂ ಒಡೆತನದ ಕುರಿತು ಮಾಲೀಕರ ಬಳಿ ಇರುವ ದಾಖಲೆಗಳನ್ನು ನೀಡಿ ಎಂದು ನೋಟಿಸ್‌ನಲ್ಲಿ ಮಾಹಿತಿ ನೀಡಲಾಗುತ್ತಿದೆ. ಭೂಮಿಯ ಪರಿಹಾರ ಹಂಚಿಕೆಯೇ ಸವಾಲಾಗಲಿದ್ದು, ರೈತರು ಕೋರ್ಟ್ ಮೆಟ್ಟಿಲೇರುವ ನಿರೀಕ್ಷೆಯೂ ಇದೆ.
ಬೆಂಗಳೂರು ನಗರಕ್ಕೆ ಪೆರಿಫೆರಲ್ ವರ್ತುಲ ರಸ್ತೆ ಯೋಜನೆ ತುಂಬಾ ಹಳೆಯದು. ಸರ್ಕಾರ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲು ಬಯಸಿತ್ತು. ಆದರೆ ಯಾವುದೇ ಕಂಪನಿ ಗುತ್ತಿಗೆಯನ್ನು ಪಡೆಯಲಿಲ್ಲ. ಅಂತಿಮವಾಗಿ ಸೆಪ್ಟೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಏಕಾಂಗಿಯಾಗಿ ಯೋಜನೆ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿತ್ತು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಯೋಜನೆ ಜಾರಿಗೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಯೋಜನೆಗೆ ಇದ್ದ ಅಡೆ-ತಡೆಯನ್ನು ಸರ್ಕಾರದ ಮಟ್ಟದಲ್ಲಿ ಪರಿಹರ ಮಾಡಿ ಯೋಜನೆ ಕಾಮಗಾರಿ ಆರಂಭವಾಗುವ ಹಂತಕ್ಕೆ ತಂದಿದ್ದಾರೆ.


Click it and Unblock the Notifications