ವಿಶ್ವದ ಪ್ರಖ್ಯಾತ ಕಾರ್ ತಯಾರಿಕಾ ಕಂಪೆನಿ ಹುಂಡೈ ಬಗ್ಗೆ ಗೊತ್ತಿರದವರು ಬಹಳ ವಿರಳ ಎಂದರೆ ತಪ್ಪಾಗಲಾರದು. ದಕ್ಷಿಣ ಕೋರಿಯಾ ಮೂಲದ ಕಂಪೆನಿಯಾಗಿರುವ ಹುಂಡೈ ಕಂಪೆನಿಯು ಜಗತ್ತಿನೆಲ್ಲೆಡೆ ಅದರಲ್ಲೂ ಮುಖ್ಯವಾಗಿ ಏಶ್ಯಾದಲ್ಲಿ ತನ್ನ ಛಾಪು ಮೂಡಿಸಿದೆ. ಇನ್ನು ಭಾರತದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಭಾರತದ ಅಚ್ಚುಮೆಚ್ಚಿನ ಕಾರ್ ತಯಾರಿಕಾ ಕಂಪೆನಿಗಳಲ್ಲಿ ಒಂದಾಗಿರುವ ಹುಂಡೈ ಹೆಚ್ಚಿನವರ ನೆಚ್ಚಿನ ಬ್ರ್ಯಾಂಡ್ ಕೂಡ ಆಗಿರುವುದು ಸುಳ್ಳಲ್ಲ.
ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಕೇವಲ ಹುಂಡೈ ಅಲ್ಲದೆ ಜಗತ್ತಿನ ಬಹುತೇಕ ಎಲ್ಲಾ ಕಾರ್ ತಯಾರಿಕಾ ಕಂಪೆನಿಗಳಿಗೆ ಇಲೆಕ್ಟ್ರಿಕ್ ಕಾರ್ (ಇವಿ) ಗಳಿಂದ ಕಠಿಣ ಸ್ಪರ್ಧೆ ಏರ್ಪಡುತ್ತಿದೆ. ಆರಂಭದಲ್ಲಿ ಕೊಂಚ ಹೆಚ್ಚು ಖರ್ಚು ಮಾಡಿದರೆ ಬಳಿಕ ಇಂಧನ ತುಂಬಿಸುವ ಸಮಸ್ಯೆ ಇರುವುದಿಲ್ಲ ಎಂಬ ಕಾರಣಕ್ಕೆ ಹೆಚ್ಚಿನ ಜನತೆ ಸದ್ಯ ಇವಿ ಕಾರ್‌ಗಳತ್ತ ತಮ್ಮ ಚಿತ್ತ ಹರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚಿಗಿನ ದಿನಗಳಲ್ಲಿ ಸಾಂಪ್ರದಾಯಿಕ ಶೈಲಿಯ ಅಂದರೆ ಇಂಧನ ಆಧಾರಿತ ಚಾಲನೆಯ ಕಾರ್ ತಯಾರಿಕಾ ಕಂಪೆನಿಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ.

ಇದರ ನಡುವೆಯೇ ಹುಂಡೈ ಕಂಪೆನಿಯು ತನ್ನ ನೂತನ ಸಿಇಒ ಆಗಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ವ್ಯಕ್ತಿಯೊಬ್ಬನಿಗೆ ಮಣೆ ಹಾಕಲಾಗಿದೆ. ಇದೀಗ ನಡೆದ ಬೆಳವಣಿಗೆಯಲ್ಲಿ ಹುಂಡೈ ಸಂಸ್ಥೆಯು ಕೋ ಜೋಸ್ ಮುನೋಜ್ (59) ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿದೆ.
ಈ ಮೂಲಕ ಮುನೋಜ್ ಅವರು ಈ ಹುದ್ದೆ ಅಲಂಕರಿಸಿದ ಮೊದಲ ದಕ್ಷಿಣ ಕೊರಿಯೇತರ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಂದರೆ ಹುಂಡೈ ಕಂಪೆನಿಯ ಇತಿಹಾಸದಲ್ಲಿ ಇಲ್ಲಿಯ ವರೆಗೆ ದಕ್ಷಿಣ ಕೊರಿಯಾದ ವ್ಯಕ್ತಿಗೆ ಇಲ್ಲಿ ಸಿಇಒ ಹುದ್ದೆ ನೀಡುತ್ತಾ ಬಂದಿರುವುದು ಸಾಮಾನ್ಯ ಸಂಗತಿಯಾಗಿದ್ದು, ಸದ್ಯ ಈ ಸರಪಳಿ ಇದೀಗ ಕಡಿತಗೊಂಡಿದೆ.
ಇನ್ನು ಇದಕ್ಕೂ ಮುನ್ನ ಸಿಇಒ ಹುದ್ದೆಯಲ್ಲಿದ್ದ ಜೇಹೂನ್ ಚಾಂಗ್ ಅವರನ್ನು ಹುಂಡೈನ ಉಪಾಧ್ಯಕ್ಷ ಸ್ಥಾನಕ್ಕೆ ಭಡ್ತಿ ನೀಡಲಾಗಿದೆ ಎಂದು ಶುಕ್ರವಾರ ಕಂಪೆನಿ ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಸಂಗ್ ಕಿಮ್ ಅವರನ್ನು ಹುಂಡೈ ಮೋಟಾರ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ ಜುನ್ ಯಂಗ್ ಚೋಯ್ ಅವರು ಸಂಸ್ಥೆಯ ಸಹೋದರ ಕಂಪನಿ ಕಿಯಾ ಕಾರ್ಪ್‌ನ ಅಧ್ಯಕ್ಷರಾಗಿ ಬಡ್ತಿ ಪಡೆದುಕೊಂಡಿದ್ದಾರೆ.
ಉಳಿದಂತೆ ಹ್ಯುಂಡೈ ಅಧ್ಯಕ್ಷ ಯುಯಿಸುನ್ ಚುಂಗ್ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಹಾಗಾಗಿ 2025ರ ಜನವರಿ 1ರಿಂದ ನೂತನ ಆದೇಶಗಳು ಜಾರಿಗೆ ಬರಲಿದೆ. ದೊಡ್ಡ ಹುದ್ದೆಯ ನಡುವೆಯೇ ಮುನೋಜ್ ಅವರು ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದು, ಜೊತೆಗೆ ಹಲವು ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾದ ಕಠಿಣತೆ ಇದೆ.
ಯಾರಿವರು ಮುನೋಜ್?
ಬಹುತೇಕ ಮಂದಿ ಮುನೋಜ್ ಹೆಸರನ್ನು ಇದೇ ಮೊದಲ ಬಾರಿಗೆ ಕೇಳುತ್ತಿದ್ದರೂ ಅವರೇನು ಹುಂಡೈ ಪಾಲಿಗೆ ಹೊಸಬರಲ್ಲ. ಮುನೋಜ್ ಅವರು 2019 ರಲ್ಲಿ ಗ್ಲೋಬಲ್ ಚೀಫ್ ಆಪರೇಟಿಂಗ್ ಆಫೀಸರ್ ಆಗಿ ಹುಂಡೈ ಕಂಪನಿಗೆ ಸೇರಿದ್ದು, ಅವರು ಅಲ್ಲಿ ಉತ್ತರ ಮತ್ತು ದಕ್ಷಿಣ ಅಮೆರಿಕಾದ ವಾಹನ ತಯಾರಕರ ಕಾರ್ಯಾಚರಣೆಗಳಿಗೆ ಜವಾಬ್ದಾರರಾಗಿದ್ದರು.
ನೇರವಾಗಿ ಹೇಳುವುದಾದರೆ ಹುಂಡೈನ ಉತ್ತರ ಹಾಗೂ ದಕ್ಷಿಣ ಅಮೆರಿಕಾ ವ್ಯವಹಾರಗಳನ್ನು ಮುನೋಜ್ ಅವರೇ ನೋಡಿಕೊಳ್ಳುತ್ತಿದ್ದರು. ಸದ್ಯ ಸಿಇಒ ಹುದ್ದೆಗೇರಿದ್ದಾರೆ. ಇನ್ನು 2019ರಲ್ಲಿ ಮುನೋಜ್ ಅವರು ಹುಂಡೈ ಸಂಸ್ಥೆಗೆ ಸೇರುವ ಮುನ್ನ ನಿಸ್ಸಾನ್ ಮೋಟಾರ್ ಕಂಪನಿಯಲ್ಲಿ 15 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಬ್ಲೂಮ್‌ಬರ್ಗ್ ವರದಿ ಪ್ರಕಾರ, ಎಲೆಕ್ಟ್ರಿಕ್ ಕಾರುಗಳ ಪರಿವರ್ತನೆಯ ನಡುವಲ್ಲಿ ಕುಂಟುತ್ತಾ ಸಾಗುತ್ತಿರುವ ಜಾಗತಿಕ ಆಟೋ ವಲಯವನ್ನು ಕ್ರಾಂತಿಕಾರಕ ರೀತಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಮುನೋಜ್ ಅವರ ಮೇಲಿದೆ ಎಂದು ತಿಳಿಸಿದೆ. ಆದರೆ ಎಲೆಕ್ಟ್ರಿಕ್ ಕಾರ್‌ಗಳ ತಯಾರಿಕೆಯಲ್ಲಿ ಹುಂಡೈ ಏನು ಹಿಂದೆಬಿದ್ದಿಲ್ಲ. ತನ್ನ ನೂತನ ಎಲೆಕ್ಟ್ರಿಕ್ ಕಾರು Ioniq 5 EV ಮೇಲೆ ಕಂಪೆನಿ ಹೆಚ್ಚಿನ ನಿರೀಕ್ಷೆ ಕೂಡ ಇರಿಸಿದೆ.
ಇನ್ನು ಈ ನಡುವೆ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಪ್ರಮುಖ ಗ್ರಾಹಕ ತೆರಿಗೆ ಕ್ರೆಡಿಟ್ ಅನ್ನು ರದ್ದುಗೊಳಿಸಲು ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಉದ್ದೇಶಿಸಿದ್ದಾರೆ ಎಂಬ ವರದಿಯ ನಂತರ ಏಷ್ಯನ್ ತಯಾರಕ ಷೇರುಗಳು ಶುಕ್ರವಾರ ಕುಸಿದವು.
ಎಲ್ಲರಿಗೂ ತಿಳಿದಿರುವಂತೆ ಡೊನಾಲ್ಡ್ ಟ್ರಂಪ್ ಎಲೆಕ್ಟ್ರಿಕ್ ಕಾರುಗಳ ವಿಚಾರದಲ್ಲಿ ಒಲ್ಲದ ಮನಸ್ಸು ಹೊಂದಿದ್ದು, ಸಾಂಪ್ರದಾಯಿಕ ಶೈಲಿಯ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಕೇವಲ ವಾಹನಗಳಲ್ಲದೆ ಸೋಲಾರ್ ಪ್ಯಾನೆಲ್‌ಗಳ ವಿಚಾರದಲ್ಲೂ ಟ್ರಂಪ್ ಹೆಚ್ಚಿನ ನಿರಾಸಕ್ತಿ ಹೊಂದಿದ್ದು, ಹಾಗಾಗಿ ಮುಂಬರುವ ದಿನಗಳಲ್ಲಿ ಸೋಲಾರ್ ಪ್ಯಾನೆಲ್ ತಯಾರಿಕಾ ಕಂಪೆನಿಗಳಿಗೆ ಕಂಟಕ ಎದುರಾದಂತಾಗಿದೆ. ಹಾಗಾಗಿ ಹುಂಡೈ ಎಲ್ಲಾ ಲೆಕ್ಕಾಚಾರಗಳನ್ನು ಮಾಡಿಕೊಂಡೇ ತನ್ನ ಕಂಪೆನಿಗೆ ವಿದೇಶಿ ವ್ಯಕ್ತಿಯನ್ನು ಸಿಇಒ ಆಗಿ ನಿಯೋಜಿಸಿರುವುದು ಕಂಡುಬಂದಿದೆ.


Click it and Unblock the Notifications