ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಹ್ಯುಂಡೈ ಮೋಟರ್ ಇಂಡಿಯಾ ಐಪಿಒ ಹೂಡಿಕೆದಾರರಿಗೆ ನಿರಾಸೆ ಮಾಡಿದೆ. ಹ್ಯುಂಡೈ ಮೋಟರ್ ಇಂಡಿಯಾ ಷೇರುಗಳು ಮಾರುಕಟ್ಟೆ ಪ್ರವೇಶಿಸಿದ್ದು, 1.5% ರಿಯಾಯಿತಿಯಲ್ಲಿ ಲಿಸ್ಟಿಂಗ್ ಆಗಿದೆ. 1,960 ರೂಪಾಯಿ ಮುಖಬೆಲೆ ಹೊಂದಿದ್ದ ಷೇರುಗಳು ಮೊದಲ ದಿನ ಬಿಎಸ್‌ಇಯಲ್ಲಿ ರೂ 1,931 ಮತ್ತು ಎನ್‌ಎಸ್‌ಇಯಲ್ಲಿ ರೂ 1,934 ಗೆ ಪ್ರಾರಂಭವಾಯಿತು.
ಷೇರು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಕಂಪನಿಯ ಮೌಲ್ಯಮಾಪನದ ಬಗ್ಗೆ ಇದ್ದ ಕಳವಳಗಳು ಐಪಿಒ ಮೇಲೆ ಪರಿಣಾಮ ಬೀರಿದೆ. ಗ್ರೇ ಮಾರ್ಕೆಟ್‌ನಲ್ಲಿ ನೀಡಿದ್ದ ಪ್ರೀಮಿಯಂ ಮೊತ್ತಕ್ಕಿಂತ ಕಡಿಮೆ ಬೆಲೆಗೆ ಷೇರುಗಳು ಲಿಸ್ಟಿಂಗ್ ಆಗಿದೆ.

27,870 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲು ಹ್ಯುಂಡೈ ಷೇರು ಮಾರುಕಟ್ಟೆಗೆ ಪ್ರವೇಶಿಸಿತ್ತು. ಪೂರ್ಣಪ್ರಮಾಣದಲ್ಲಿ ಚಂದಾದಾರಿಕೆ ಸಿಕ್ಕಿದರೂ, ಹೂಡಿಕೆದಾರರಿಗೆ ಲಾಭ ತಂದುಕೊಡುವಲ್ಲಿ ವಿಫಲವಾಗಿದೆ. 2.37 ಪಟ್ಟು ಒಟ್ಟಾರೆ ಚಂದಾದಾರಿಕೆಯೊಂದಿಗೆ ಮುಕ್ತಾಯಗೊಂಡ ಐಪಿಒ ಬಗ್ಗೆ ಚಿಲ್ಲರೆ ಹೂಡಿಕೆದಾರರು ನಿರಾಸಕ್ತಿ ತೋರಿಸಿದರು. ಚಿಲ್ಲರೆ ಹೂಡಿಕೆದಾರರು ಹಂಚಿಕೆಯ ಷೇರುಗಳಲ್ಲಿ ಕೇವಲ 50% ರಷ್ಟು ಮಾತ್ರ ಚಂದಾದಾರರಾಗಿದ್ದಾರೆ. ಸಾಂಸ್ಥಿಕ ಖರೀದಿದಾರರು ಹ್ಯುಂಡೈ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿಸಿದರು.
ಹೂಡಿಕೆದಾರರಿಗೆ ನಿರಾಸಕ್ತಿ ಏಕೆ?
ಹ್ಯುಂಡೈ ಭಾರತದಲ್ಲಿ ಪ್ರಮುಖ ಕಾರು ಮಾರಾಟಗಾರ ಎನಿಸಿಕೊಂಡರೂ, ಎಲೆಕ್ಟ್ರೆಕ್ ವಾಹನಗಳ ತಯಾರಿಕೆಯಲ್ಲಿ ಹ್ಯುಂಡೈ ಹೆಚ್ಚು ಪಾಲನ್ನು ಹೊಂದದೇ ಇರುವುದು ಕೂಡ ಭವಿಷ್ಯದ ಕಂಪನಿ ಬೆಳವಣಿಗೆ ದೃಷ್ಟಿಯಿಂದ ಹೂಡಿಕೆದಾರರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಭಾರತದಲ್ಲಿ ಇವಿ ಕಾರುಗಳ ಉತ್ಪಾದನೆಯಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ.
ನಿರ್ಬಂಧಿತ ಉತ್ಪಾದನಾ ಸಾಮರ್ಥ್ಯ ಮತ್ತು ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೀತಿಯ ಕಾರು ಬಿಡುಗಡೆ ಮಾಡುವಲ್ಲಿ ಹ್ಯುಂಡೈ ವಿಫಲವಾಗಿರುವುದು ಕೂಡ ಹೂಡಿಕೆದಾರರ ಉತ್ಸಾಹ ಕಡಿಮೆ ಮಾಡಿವೆ.
ಇಕ್ವೆಂಟಿಸ್‌ನ ಮುಖ್ಯ ಹೂಡಿಕೆ ಅಧಿಕಾರಿ ಜಸ್‌ಪ್ರೀತ್ ಸಿಂಗ್ ಅರೋರಾ ಈಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಭಾರತದಲ್ಲಿ ಹ್ಯುಂಡೈ ಇತರೆ ಕಂಪನಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.
ಲಿಸ್ಟಿಂಗ್ ದಿನ ನಿರಾಸೆ ಮೂಡಿಸಿದರೂ ದೀರ್ಘಾವಧಿಯಲ್ಲಿ ಉತ್ತಮ ಆದಾಯ ಪಡೆಯುವ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಹ್ಯುಂಡೈ 15% ರಷ್ಟು ಪಾಲು ಹೊಂದಿದ್ದು, ಯುಟಿಲಿಟಿ ವಾಹನ ಮಾರಾಟದಲ್ಲಿ 63% ಪಾಲನ್ನು ಹೊಂದಿದೆ. ಇದನ್ನು ಪರಿಗಣಿಸಿ ಭವಿಷ್ಯದಲ್ಲಿ ಷೇರುಗಳ ಬೆಲೆ ಏರಿಕೆಯಾಗಬಹುದು ಎಂದು ಹೇಳಲಾಗಿದೆ.
ಲಿಸ್ಟಿಂಗ್ ಆದ ಮೊದಲ ದಿನವೇ ಹೂಡಿಕೆದಾರರಿಗೆ ನಿರಾಸೆ ಮೂಡಿಸಿದರೂ, ದೀರ್ಘಾವಧಿ ಹೂಡಿಕೆದಾರರು ಷೇರುಗಳಿಂದ ಉತ್ತಮ ರಿಟರ್ನ್ಸ್ ನಿರೀಕ್ಷೆ ಮಾಡಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Disclaimer: ಗುಡ್ ರಿಟರ್ನ್ಸ್ (Good Returns) ಷೇರು ಮಾರುಕಟ್ಟೆ ಸುದ್ದಿಗಳನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನೀಡುತ್ತದೆ. ಇದನ್ನು ಹೂಡಿಕೆ ಸಲಹೆ ಎಂದು ಪರಿಗಣಿಸಬಾರದು. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ತಜ್ಞ ಹಣಕಾಸು ಸಲಹೆಗಾರರ ಜೊತೆ ಚರ್ಚಿಸುವಂತೆ ಓದುಗರಿಗೆ ಮನವಿ ಮಾಡಲಾಗಿದೆ.


Click it and Unblock the Notifications