ಭಾರತದ ಪ್ರಮುಖ ಕಾರು ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ಹುಂಡೈ ಮೊಟಾರ್ಸ್ ಸದ್ಯ ತನ್ನ ಷೇರುಗಳನ್ನು ಸುಮಾರು ೨೦೦೦ ಕೋಟಿ ರೂ.ಗ ಪರಿಧಿಯಲ್ಲಿ ಮಾರಾಟ ಮಾಡಲು ಮುಂದಾಗಿದ್ದು, ಈ ಮೂಲಕ ಈ ಮೂಲಕ ಬರೊಬ್ಬರಿ ಸುಮಾರು 27,856 ಕೋಟಿ ರೂ. ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಅಕ್ಟೋಬರ್ 15ರಂದು ಐಪಿಒಗೆ ಮುಂದಾಗಿದ್ದು, ಈ ಮೂಲಕ ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಐಪಿಒ ಬಿಡುಗಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಐಪಿಒಗೂ ಮುನ್ನ ಷೇರು ಕುಸಿತ
ಅಕ್ಟೋಬರ್ 15ರ ಐಪಿಒಗೂ ಮುನ್ನವೇ ಹುಂಡೈ ಕೊಂಚ ಆಘಾತ ಕಂಡಿದ್ದು, ಷೇರು ಮಾರುಕಟ್ಟೆಯಲ್ಲಿ ಗಮನಾರ್ಹ ಕುಸಿತವನ್ನು ಕಂಡಿವೆ. ಇದಕ್ಕೆ ಪುರಾವೆ ಎಂಬಂತೆ ಕಳೆದ ಒಂದು ವಾರದಲ್ಲಿ ಕಂಪೆನಿಯ ಜಿಎಂಪಿ (grey market premium) 50 ಪ್ರತಿಶತಕ್ಕಿಂತಲೂ ಹೆಚ್ಚು ಕುಸಿದಿದೆ. ಹುಂಡೈ ಮೊಟಾರ್ಸ್ ನ ಜಿಎಂಪಿ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವ ಕ್ಷೇತ್ರದ ಡೇಟಾವು ಅಕ್ಟೋಬರ್ 11 ರ ವೇಳೆಗೆ ಕಂಪನಿಯ ಐಪಿಒ ಷೇರುಗಳ ಪ್ರೀಮಿಯಂ 170 ರೂ.ಗೆ ಕುಸಿದಿದೆ ಎಂದು ತೋರಿಸಿದೆ. ಇದೇ ಅಕ್ಟೋಬರ್ 4ರಂದು ಸುಮಾರು 370 ರೂ.ನಷ್ಟು ಇದ್ದ ಐಪಿಒ ಷೇರುಗಳ ಪ್ರೀಮಿಯಂ ಮೊತ್ತ ಸದ್ಯ 54 ಪ್ರತಿಶತದಷ್ಟು ಕುಸಿತ ಕಂಡು 170ಕ್ಕೆ ಕುಸಿದಿದೆ.

"ಇತ್ತೀಚಿನ ಮಾರುಕಟ್ಟೆ ಕರೆಕ್ಷನ್ ಗಳಿಂದ GMP ಗಣನೀಯವಾಗಿ ಕುಸಿದಿರುವುದು ನಿಜ. ಇದು ಅಲ್ಪಾವಧಿಯಲ್ಲಿ IPO ಸುತ್ತಲಿನ ಉತ್ಸಾಹವನ್ನು ಕಡಿಮೆಮಾಡಬಹುದು, ಆದರೆ ಇದು ಹ್ಯುಂಡೈನ ವ್ಯವಹಾರದ ದೀರ್ಘಾವಧಿಯ ಸಾಮರ್ಥ್ಯವನ್ನು ಪ್ರತಿಬಿಂಬಿಸುವುದಿಲ್ಲ" ಎಂದು ಅರಿಹಂತ್ ಕ್ಯಾಪಿಟಲ್ ಮಾರ್ಕೆಟ್ಸ್ ಮುಖ್ಯಸ್ಥ ಅಭಿಷೇಕ್ ಜೈನ್ ಹೇಳಿದ್ದಾರೆ.
ಮಾರುಕಟ್ಟೆಯಿಂದ ನಗದು ಬರಿದು!
ಇನ್ನು ಮಾರುಕಟ್ಟೆಯ ಪ್ರಸಕ್ತ ಸನ್ನಿವೇಶಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಲಿಯಂ ಓ'ನೀಲ್‌ನ ಈಕ್ವಿಟಿ ರಿಸರ್ಚ್ ಮುಖ್ಯಸ್ಥರಾಗಿರುವ ಮಯೂರೇಶ್ ಜೋಶಿ ಅವರು ಲಿಕ್ವಿಡಿಟಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹುಂಡೈನ ಐಪಿಒ ತುಂಬಾ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಅದು ಮಾರುಕಟ್ಟೆಯಿಂದ ಲಿಕ್ವಿಡಿಟಿ (ನಗದು)ಯನ್ನು ಎಳೆದುಕೊಳ್ಳಲಿದೆ. ಇದೇ ಹಾದಿಯನ್ನು ಸ್ವಿಗ್ಗಿ ಕೂಡ ಅನುಸರಿಸಲಿದೆ. ಹಾಗಾಗಿ ಮಾರುಕಟ್ಟೆಯಿಂದ ಸುಮಾರು 31,000-32,000 ಕೋಟಿ ರೂ. ಬರಿದಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಆದರೂ ಹುಂಡೈನ ಐಪಿಒ ಬಗ್ಗೆ ಜೋಶಿ ಅವರು ಹೊಗಳಿದ್ದು, ಸಂಸ್ಥೆಯ ಐಪಿಒ ಮೌಲ್ಯಮಾಪನ, ಉತ್ಪನ್ನ ಕೊಡುಗೆಗಳು ಮತ್ತು ಬೆಲೆಯ ವಿಷಯಕ್ಕೆ ಸಂಬಂಧಿಸಿದಂತೆ ಅತ್ಯಂತ ಆಕರ್ಷಕವಾಗಿದ್ದು, ಹಾಗಾಗಿ ಐಪಿಒಗೆ ಚಂದಾದಾರರಾಗಬಹುದು ಎಂದು ಶಿಫಾರಸ್ಸು ಮಾಡಿದ್ದಾರೆ. ಇನ್ನು ಸಂಸ್ಥೆಯ ಐಪಿಒ ಚಂದಾದಾರಿಕೆಯು ಅಕ್ಟೋಬರ್ 15ರಂದು ಆರಂಭವಾಗಲಿದ್ದು, ಅಕ್ಟೋಬರ್ 17 ರಂದು ಮುಕ್ತಾಯಗೊಳ್ಳಲಿದೆ.
ಹಲವು ದಿಗ್ಗಜರಿಂದ ಬಿಡ್
ಇನ್ನು ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಹ್ಯುಂಡೈ ಮೋಟಾರ್ ಇಂಡಿಯಾದ IPO ನಲ್ಲಿ ಷೇರುಗಳನ್ನು ಖರೀದಿಸಲು ಬಿಡ್‌ಗಳನ್ನು ಮಾಡಿದವರಲ್ಲಿ ಬ್ಲ್ಯಾಕ್‌ರಾಕ್ ಮತ್ತು ಸಿಂಗಾಪುರದ ಸಾರ್ವಭೌಮ ಸಂಪತ್ತು ನಿಧಿ (sovereign wealth fund) GIC Pte ಕೂಡ ಸೇರಿವೆ. ಅಲ್ಲದೆ ಐಪಿಒ ಬಿಡ್ಡಿಂಗ್ ಬಗ್ಗೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಾಂಸ್ಥಿಕ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.
ಉದ್ಯೋಗಿಗಳಿಗೆ ಬಂಪರ್ ಆಫರ್!
ಇನ್ನು ಹುಂಡೈ ಇಂಡಿಯಾದ ಐಪಿಎ ಖರೀದಿಸುವ ಅರ್ಹ ಉದ್ಯೋಗಿಗಳಿಗೆ ಕಂಪೆನಿ ದೊಡ್ಡ ಆಫರ್ ನೀಡಿದೆ. ಐಪಿಒದಲ್ಲಿ ಬಿಡ್ ಮಾಡುವ ಸಂಸ್ಥೆಯ ಅರ್ಹ ಉದ್ಯೋಗಿಗಳಿಗೆ ಕಂಪೆನಿಯು ಪ್ರತೀ ಷೇರಿಗೆ 186 ರೂ. ರಿಯಾಯಿತಿ ನೀಡಿದೆ. ಇನ್ನು ಎಲ್ಲರಿಗೂ ತಿಳಿದಿರುವಂತೆ ಹುಂಡೈ ಮೋಟಾರ್ ಇಂಡಿಯಾವು ಎರಡನೇ ಅತಿ ದೊಡ್ಡ OEM (ಮೂಲ ಉಪಕರಣ ತಯಾರಕ) ಆಗಿದ್ದು, ಅಲ್ಲದೆ ಪ್ರಯಾಣಿಕ ವಾಹನಗಳ ಎರಡನೇ ಅತಿ ದೊಡ್ಡ ರಫ್ತುದಾರ ಮತ್ತು ದೇಶೀಯ ಮಾರುಕಟ್ಟೆ ಪಾಲನ್ನು 14.6 ಪ್ರತಿಶತದಷ್ಟು ಪಾಲನ್ನು ಹೊಂದಿದೆ.
ಕಾರು ಮಾರಾಟದಲ್ಲಿ ಇಳಿಕೆ
ಇನ್ನು ಸೆಪ್ಟೆಂಬರ್ ತಿಂಗಳೊಂದರಲ್ಲೇ ಹುಂಡೈ 64,201 ಕಾರುಗಳನ್ನು ಮಾರಾಟ ಮಾಡಿದ್ದು, ಇದು ವರ್ಷದಿಂದ ವರ್ಷಕ್ಕೆ 10% ನಷ್ಟು ಇಳಿಕೆಯಾಗಿರುವ ಸಂಸ್ಥೆಗೆ ದೊಡ್ಡ ಹಿನ್ನಡೆ ತಂದಿದೆ. 2024ರಲ್ಲಿ ಕಂಪೆನಿಯು 5.77 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಯಾವುದೇ ಲಾಭ ಅಥವಾ ನಷ್ಟವಿಲ್ಲದ ವ್ಯವಹಾರವಾಗಿ ಕಂಡಿದೆ.
ದೀಪಾವಳಿಯಲ್ಲಿ ಕಾರುಗಳ ಮಾರಾಟ ಏರಿಕೆ ಸಾಧ್ಯತೆ
ಭಾರತದಲ್ಲಿ ದೀಪಾವಳಿ ಸಮಯದಲ್ಲಿ ಕಾರುಗಳ ಮಾರಾಟದಲ್ಲಿ ಭರ್ಜರಿ ಏರಿಕೆ ದಾಖಲಾಗುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗಾಗಿ ಅಕ್ಟೋಬರ್‌ನಲ್ಲಿ ದೀಪಾವಳಿ ಇರುವ ಹಿನ್ನೆಲೆಯಲ್ಲಿ ಪ್ರಸಕ್ತ ತಿಂಗಳಲ್ಲೇ ಹುಂಡೈ ಸಂಸ್ಥೆಯ ಕಾರುಗಳ ಮಾರಾಟದಲ್ಲೂ ಏರಿಕೆ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅದಕ್ಕೂ ಮುನ್ನ ಸಂಸ್ಥೆಯ ಐಪಿಒ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.


Click it and Unblock the Notifications