ಷೇರು ಮಾರುಕಟ್ಟೆಯಲ್ಲಿ ಐಡಿಎಫ್‌ಸಿ ಬ್ಯಾಂಕ್‌ಗೆ ಬರಸಿಡಿಲು ಬಡಿದಂತಾಗಿದೆ. ಇದಕ್ಕೆ ಕಾರಣ ಒಂದು ಶಾಕಿಂಗ್ ಮಾಹಿತಿ. ಅದೇನೆಂದರೆ ಚಂಡೀಗಢದಲ್ಲಿರುವ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಶಾಖೆಯಲ್ಲಿ ಸುಮಾರು 590 ಕೋಟಿ ರೂ. ವಂಚನೆ ನಡೆದಿರೋದು ಬೆಳಕಿಗೆ ಬಂದಿದೆ. ಇದಾದ 24 ಗಂಟೆಗಳೊಳಗೆ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲೇ ದೊಡ್ಡ ಕುಸಿತ ನೋಡಿದಂತಾಗಿದೆ. ಅಂದರೆ ಬ್ಯಾಂಕಿನ ಷೇರು ಬೆಲೆ ಸುಮಾರು 10 ಶೇಕಡಾ ಕುಸಿತ ಕಂಡಿದೆ.

ಇನ್ನು ಇತ್ತೀಚಿನ ಡಿಸೆಂಬರ್ ತ್ರೈಮಾಸಿಕದಲ್ಲಿ ಐಡಿಎಫ್ಸಿ ಬ್ಯಾಂಕ್ ಸುಮಾರು 503 ಕೋಟಿ ರೂ. ನಿವ್ವಳ ಲಾಭ ನೋಡಿತ್ತು. ಈ ಹಿನ್ನೆಲೆಯಲ್ಲಿಯೇ ವಂಚನೆಯಲ್ಲಿ ಬೆಳಕಿಗೆ ಬಂದ, 590 ಕೋಟಿ ರೂಪಾಯಿ ಮೊತ್ತವು ಗಮನಾರ್ಹವಾಗಿದೆ ಅನ್ನೋದು ಮಾರುಕಟ್ಟೆ ವಲಯಗಳು ಅಭಿಪ್ರಾಯವಾಗಿದೆ.
ಅಂದಹಾಗೆ ಇಂತಹ ಬೆಳವಣಿಗೆ ಒಂದು ಪ್ರತಿಷ್ಠಿತ ಬ್ಯಾಂಕ್‌ನಲ್ಲಿ ಹೇಗೆ ಸಾಧ್ಯ ಎಂದು ಕೇಳಬಹುದು. ಹರಿಯಾಣ ಸರ್ಕಾರದ ಒಂದು ಇಲಾಖೆಯ ಖಾತೆಯನ್ನು ಮುಚ್ಚಿ, ಮತ್ತೊಂದು ಬ್ಯಾಂಕ್‌ಗೆ ಹಣ ವರ್ಗಾಯಿಸೋ ವಿನಂತಿಯೇ ಇದಕ್ಕೆ ಕಾರಣ ಅನ್ನೋ ಆರೋಪವೂ ಕೇಳಿಬಂದಿದೆ.
ಅಂದ್ರೆ ಬ್ಯಾಂಕ್ ದಾಖಲೆಗಳಲ್ಲಿ ಕಾಣಿಸಿದ ಖಾತೆ ಬಾಕಿ ಮತ್ತು ಸರಕಾರ ತಿಳಿಸಿದ ಮೊತ್ತದ ನಡುವೆ ವ್ಯತ್ಯಾಸ ಕಂಡುಬಂದಿತ್ತು. ಇದೇ ಗುಮಾನಿಯಿಂದ ಪರಿಶೀಲನೆ ನಡೆಸಿದಾ ಮಹಾ ವಂಚನೆ ಬೆಳಕಿಗೆ ಬಂದಿದೆ. ಅಂದರೆ ಆಂತರಿಕ ಪರಿಶೀಲನೆಯಲ್ಲಿ ಚಂಡೀಗಢ ಶಾಖೆಯ ಮೂಲಕ ನಿರ್ವಹಿಸಲ್ಪಟ್ಟ ಕೆಲವು ಖಾತೆಗಳಲ್ಲಿ ಗಂಭೀರ ವ್ಯತ್ಯಾಸಗಳು ಪತ್ತೆಯಾಗಿವೆ.
ಇತ್ತ ಬ್ಯಾಂಕ್‌ನ ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಕೆಲವು ಉದ್ಯೋಗಿಗಳಿಂದ ವಂಚನೆ ಚಟುವಟಿಕೆ ನಡೆದಿದೆ ಎನ್ನಲಾಗ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಾಲ್ವರು ಅಧಿಕಾರಿಗಳನ್ನು ತನಿಖೆ ಪೂರ್ಣಗೊಳ್ಳೋವರೆಗೆ ಸಸ್ಪೆಂಡ್ ಕೂಡ ಮಾಡಲಾಗಿದೆ. ಹಾಗೆಯೇ ಇದಕ್ಕೆ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ, ನಾಗರಿಕ ಹಾಗೂ ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳಲಾಗುತ್ತೆ ಎಂದು ಬ್ಯಾಂಕ್ ತಿಳಿಸಿದೆ. ಅನುಮಾನಾಸ್ಪದ ಖಾತೆಗಳಲ್ಲಿರುವ ಹಣವನ್ನು ವಾಪಸು ಪಡೆಯಲು ಸಂಬಂಧಿತ ಫಲಾನುಭವಿ ಬ್ಯಾಂಕ್‌ಗಳಿಗೆ ಕೂಡ ವಿನಂತಿ ಕಳುಹಿಸಲಾಗಿದೆ.
ಈ ಪ್ರಕರಣವನ್ನು ಬ್ಯಾಂಕಿನ ವಂಚನೆ ಮೇಲ್ವಿಚಾರಣೆ ಸಮಿತಿಯ ಮುಂದಿಡಲಾಗಿದೆ. ಸ್ವತಂತ್ರ ವಿಧಿವಿಜ್ಞಾನ ಲೆಕ್ಕಪರಿಶೋಧನೆ ನಡೆಸಲು ಕೆಪಿಎಂಜಿಯನ್ನು ನೇಮಿಸಲಾಗಿದೆ. ಜೊತೆಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಹೂಡಿಕೆದಾರರು ಮತ್ತು ವಿಶ್ಲೇಷಕರಿಗೆ ಹೆಚ್ಚಿನ ಮಾಹಿತಿ ನೀಡಲು ವಿಶೇಷ ಕಾನ್ಫರೆನ್ಸ್ ಕರೆ ಕೂಡ ನಿಗದಿಪಡಿಸಲಾಗಿದೆ.ಬ್ಯಾಂಕಿನ ಸಿಇಒ ವಿ. ವೈದ್ಯನಾಥನ್ ಮಾತನಾಡಿ, ಬ್ಯಾಂಕ್ ಬಲವಾದ ಬಂಡವಾಳ ಸ್ಥಿತಿಯಲ್ಲಿದ್ದು, ಒಟ್ಟು ಠೇವಣಿಗಳಲ್ಲಿ ಹರಿಯಾಣ ಸರ್ಕಾರದ ಖಾತೆಯ ಪಾಲು ಕೇವಲ 0.5 ಶೇಕಡಾ ಮಾತ್ರ ಎಂದು ತಿಳಿಸಿದ್ದಾರೆ. ಕಾರ್ಯಾಚರಣಾ ಲಾಭವು 2 ಶೇಕಡಾವನ್ನು ದಾಟಿದೆ ಮತ್ತು ಬ್ಯಾಂಕ್ ಮೂಲಭೂತವಾಗಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಮುಂದಿನ ದಿನಗಳಲ್ಲಿ ಷೇರು ಬೆಲೆಯ ಚಲನವಲನ, ವಂಚನೆಯ ನಿಜವಾದ ಆರ್ಥಿಕ ಪರಿಣಾಮ, ಹಣ ವಸೂಲಾತಿಯ ಪ್ರಗತಿ ಮತ್ತು ಬ್ಯಾಂಕ್ ಆಂತರಿಕ ನಿಯಂತ್ರಣ ವ್ಯವಸ್ಥೆಯಲ್ಲಿ ಯಾವುದೇ ದೌರ್ಬಲ್ಯಗಳಿದ್ದವೆಯೇ ಎಂಬುದರ ಕುರಿತು ಸ್ಪಷ್ಟತೆ ಪಡೆಯಲು ಕಾಯುತ್ತಿದ್ದಾರೆ. ಪ್ರಕರಣದ ಸಂಪೂರ್ಣ ವಿವರಗಳು ಹೊರಬಂದ ನಂತರವೇ ಅಂತಿಮ ಪರಿಣಾಮ ಸ್ಪಷ್ಟವಾಗಲಿದೆ.


Click it and Unblock the Notifications