ಬೆಂಗಳೂರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನದೇ ಆದ ಪ್ರಸಿದ್ಧಿ ಪಡೆದಿರುವ ಪುರವಂಕರ ಲಿಮಿಟೆಡ್, ಸ್ವೀಡನ್‌ನ ಗೃಹೋಪಕರಣ ಬ್ರಾಂಡ್ ಆದ ಐಕಿಯಾ ಜೊತೆ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಅದೇನೆಂದರೆ. ಕನಕಪುರ ರಸ್ತೆಯಲ್ಲಿರುವ ಪೂರ್ವಾ ಪಾರ್ಕ್ ಯೋಜನೆಯಲ್ಲಿ, ಐಕಿಯಾ 1.2 ಲಕ್ಷ ಚದರ ಅಡಿಗಳಿಗೂ ಹೆಚ್ಚು ಚಿಲ್ಲರೆ ಜಾಗವನ್ನು ಬಳಸಿಕೊಳ್ಳಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಸದ್ಯ ಈ ಒಪ್ಪಂದದ ಪ್ರಕಾರ, ಐಕಿಯಾ ಹೊಸ ಮಿಶ್ರ-ಬಳಕೆಯ ವಾಣಿಜ್ಯ ಯೋಜನೆಯನ್ನು ರೂಪಿಸಲಿದೆ. ಇದರಡಿ ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಲಿದೆ. ಹಾಗೆಯೇ 2026ರ ಮೊದಲ ತ್ರೈಮಾಸಿಕದಲ್ಲಿ ಈ ಯೋಜನೆ ಹಸ್ತಾಂತರಗೊಳ್ಳಲಿದೆ. ಬಳಿಕ ಐಕಿಯಾ ತನ್ನ ಅಂಗಡಿ ಮತ್ತು ಸೇವೆಗಳನ್ನು ತೆರೆಯಲಿದೆ. ಆದರೆ ಬಾಡಿಗೆ ಮೊತ್ತ ಮತ್ತು ಗುತ್ತಿಗೆಯ ಅವಧಿಯ ಮಾಹಿತಿ ಇನ್ನೂ ಬಹಿರಂಗಪಡಿಸಲಾಗಿಲ್ಲ.
ಪೂರ್ವಾ ಝೆಂಟೆಕ್ ಪಾರ್ಕ್ ಯೋಜನೆ ಒಟ್ಟು 9.6 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ, ಐಜಿಬಿಸಿ ಗೋಲ್ಡ್ ಪ್ರಮಾಣಪತ್ರ ಪಡೆದ ಆಧುನಿಕ ವಾಣಿಜ್ಯ ಕಟ್ಟಡವಾಗಿದೆ. ಪ್ರತಿ ಮಹಡಿಗೆ 50,000 ಚದರ ಅಡಿ ವಿಸ್ತೀರ್ಣ ಮತ್ತು 4,500-5,000 ಚದರ ಅಡಿಗಳ ಮಾಡ್ಯುಲರ್ ಘಟಕಗಳು ಇಲ್ಲಿ ಲಭ್ಯ. ಕೋಣನಕುಂಟೆ ಮೆಟ್ರೋ ನಿಲ್ದಾಣ ಮತ್ತು ಫೋರಂ ಮಾಲ್ ಸಮೀಪ ಇರುವ ಕಾರಣ, ಈ ಪ್ರದೇಶವು ವಾಣಿಜ್ಯ ಮತ್ತು ನಿವಾಸಿ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆಯನ್ನು ನೀಡುತ್ತದೆ. ಈ ಗುತ್ತಿಗೆ ಪ್ರಕ್ರಿಯೆಗೆ ರಿಯಲ್ ಎಸ್ಟೇಟ್ ಸಲಹೆಗಾರರಾದ ಕೊಲಿಯರ್ಸ್ ಕಂಪನಿಯ ಕಚೇರಿ ಸೇವಾ ತಂಡ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದೆ.
ಪುರವಂಕರದ ಪಶ್ಚಿಮ ಮತ್ತು ವಾಣಿಜ್ಯ ಆಸ್ತಿಗಳ ಸಿಇಒ ರಜತ್ ರಸ್ತೋಗಿ ಅವರು, ಐಕಿಯಾ ಈ ಜಾಗವನ್ನು ಆಯ್ಕೆ ಮಾಡಿರುವುದು ಯೋಜನೆಯ ಸ್ಥಳದ ಮಹತ್ವ ಮತ್ತು ವಿನ್ಯಾಸದ ಬಲವನ್ನು ತೋರಿಸುತ್ತದೆ ಎಂದು ಹೇಳಿದರು. "1.2 ಲಕ್ಷ ಚದರ ಅಡಿ ಜಾಗವನ್ನು ಬಳಸುವ ಐಕಿಯಾದ ನಿರ್ಧಾರ, ಪೂರ್ವಾ ಝೆಂಟೆಕ್ ಪಾರ್ಕ್ ಯೋಜನೆಗೆ ಸಿಕ್ಕಿರುವ ದೊಡ್ಡ ಮಾನ್ಯತೆ," ಎಂದು ಅವರು ಹೇಳಿದರು.
ದಕ್ಷಿಣ ಬೆಂಗಳೂರು ಕಾರಿಡಾರ್‌ನಲ್ಲಿ ವಾಣಿಜ್ಯ ಗುತ್ತಿಗೆಗಳು ಇತ್ತೀಚೆಗೆ ಉತ್ತಮ ವೇಗದಲ್ಲಿ ನಡೆಯುತ್ತಿವೆ. ಪುರವಂಕರ ಪ್ರಸ್ತುತ 3.2 ಮಿಲಿಯನ್ ಚದರ ಅಡಿ ವಾಣಿಜ್ಯ ಯೋಜನೆಗಳನ್ನು ನಿರ್ಮಿಸುತ್ತಿದೆ. ಈ ಹಣಕಾಸು ವರ್ಷದಲ್ಲಿ 2 ಮಿಲಿಯನ್ ಚದರ ಅಡಿ ಯೋಜನೆಗಳು ಪೂರ್ಣಗೊಂಡು ಆಕ್ಯುಪೆನ್ಸಿ ಪ್ರಮಾಣಪತ್ರ ಪಡೆಯುವ ನಿರೀಕ್ಷೆಯಿದೆ.
ಪೂರ್ವಾ ಝೆಂಟೆಕ್ ಮತ್ತು ಪೂರ್ವಾ ಏರೋಸಿಟಿ ಸೇರಿದಂತೆ ಈ ಯೋಜನೆಗಳು ಕಂಪನಿಗೆ ₹1,870 ಕೋಟಿಗಳಷ್ಟು ಹೆಚ್ಚುವರಿ ಆದಾಯ ತರುವ ಸಾಧ್ಯತೆ ಇದೆ. ಇದರಿಂದ ದಕ್ಷಿಣ ಬೆಂಗಳೂರಿನ ವಾಣಿಜ್ಯ ಕ್ಷೇತ್ರದಲ್ಲಿ ಪುರವಂಕರ ತನ್ನ ಹೆಜ್ಜೆಗುರುತನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ.


Click it and Unblock the Notifications