ನವದೆಹಲಿ, ಆಗಸ್ಟ್ 18: ಭಾರತದ ಆರ್ಥಿಕ ಪ್ರಗತಿದರ ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿದೆ. ಇದೇ ಕಾರಣಕ್ಕೆ 2027ರ ವೇಳೆಗೆ ಭಾರತ ಪ್ರಪಂಚದಲ್ಲೇ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಂದರೆ ಐಎಂಎಫ್ ಉಪ ವ್ಯವಸ್ಥಾಪಕ ನಿರ್ದೇಶಕಿ ಡಾ.ಗೀತಾ ಗೋಪಿನಾಥ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಆರ್ಥಿಕತೆಯ ನಿರೀಕ್ಷಿತ ಬೆಳವಣಿಗೆ ದರ ಮೀರಿ ಮುಂದೆ ಸಾಗುತ್ತಿದೆ. 2027 ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆಯಿದೆ. ಖಾಸಗಿ ಉದ್ಯಮಗಳು ಚೇತರಿಸಿಕೊಳ್ಳುತ್ತಿರುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಜತೆಗೆ ಇನ್ನಿತರ ಆರ್ಥಿಕ ಬೆಳವಣಿಗೆ ಅಂಶಗಳು ಕಾರಣವಾಗುತ್ತವೆ ಎಂದು ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ವೇಳೆ ಗೀತಾ ಈ ಮಾತುಗಳನ್ನಾಡಿದರು. ಭಾರತದ ಬೆಳವಣಿಗೆಯು ಕಳೆದ ಹಣಕಾಸು ವರ್ಷದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸಾಧನೆ ಮಾಡಿದೆ. ಖಾಸಗಿ ಉದ್ಯಮಗಳ ಚೇತರಿಕೆ ಮತ್ತು ವಿವಿಧ ವಲಯಗಳಲ್ಲಿನ ಬಂಡವಾಳ ಹೂಡಿಕೆ ವೇಗದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಎಫ್ಎಂಸಿಜಿ ಮತ್ತು ದ್ವಿಚಕ್ರ ವಾಹನ ಮಾರಾಟದ ಹೊಸ ಅಂಕಿ ಅಂಶಗಳು ಸಹ ಆಶಾದಾಯಕವಾಗಿವೆ. ಈ ಬಾರಿಯ ಮಾನ್ಸೂನ್ ಸಹ ಭಾರತದಲ್ಲಿ ಉತ್ತಮವಾಗಿದ್ದು ಕೃಷಿ ಬೆಳವಣಿಗೆಗೂ ಪೂರಕ ವಾತಾವರಣ ಇದೆ. 2024-25ರ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆಯ ದರವನ್ನು ಶೇ.7 ರಷ್ಟು ನಿರೀಕ್ಷೆ ಮಾಡಲಾಗಿದೆ. ಕೇಂದ್ರ ಸರ್ಕಾರ ಆರ್ಥಿಕ ಸಮೀಕ್ಷೆಯಲ್ಲಿ ನೀಡಿದ್ದಕ್ಕಿಂತಲೂ ಹೆಚ್ಚಿನ ಬೆಳವಣಿಗೆ ಕಂಡುಬರುವ ಸಾಧ್ಯತೆ ಇದೆ ಎನ್ನುವ ವಿಶ್ಲೇಷಣಯೂ ಈ ಅಂಶಗಳಿಗೆ ಪೂರಕವಾಗಿವೆ.
ಕೃಷಿ ಆದಾಯವು ಹೆಚ್ಚುತ್ತಿರುವುದರಿಂದ, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚೇತರಿಕೆ ಸಾಧ್ಯತೆ ಹೆಚ್ಚಿದೆ. ಬಂಡವಾಳ ಹೂಡಿಕೆಯ ಮಾರ್ಗಗಳು, ಆರ್ ಬಿಐ ತೆಗೆದುಕೊಂಡ ಪರಿಹಾರ ಕ್ರಮಗಳು, ಹಣದುಬ್ಬರ ನಿಯಂತ್ರಣ ಸೇರಿದಂತೆ ಅನೇಕ ಅಂಶಗಳು ಪರಿಣಾಮ ಬೀರಲಿದ್ದು ಭಾರತದ ಆರ್ಥಿಕತೆ ಸದೃಢವಾಗಿ ಮುಂದುವರಿಯಲಿದೆ ಎಂದು ವಿಶ್ಲೇಷಣೆಗಳು ಹೇಳಿವೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದರು. ಆರ್ಥಿಕ ಸಮೀಕ್ಷೆ ಸಹ ಬಿಡುಗಡೆಯಾಗಿತ್ತು.


Click it and Unblock the Notifications