ರತನ್ ಟಾಟಾ ಭಾರತ ಕಂಡ ಅತ್ಯುನ್ನತ ಉದ್ಯಮಿ, ಹಾಗೂ ಮಹಾನ್ ಲೋಕೋಪಕಾರಿ ವ್ಯಕ್ತಿ ಎಂದರೆ ತಪ್ಪಾಗಲಾರದು. ಸ್ವಾತಂತ್ರ್ಯ ಪಡೆದಂದಿನಿಂದಲೂ ಭಾರತದ ಆರ್ಥಿಕತೆಗೆ ತಮ್ಮದೇ ಉದ್ಯಮದ ಮೂಲಕ ಹೊಸ ಚೇತನ ನೀಡಿದ್ದ ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಟಾಟಾ ಸನ್ಸ್ ನ ಗೌರವಾಧ್ಯಕ್ಷ ರತನ್ ಟಾಟಾ ಬುಧವಾರ ತಡರಾತ್ರಿ ನಿಧನರಾಗಿದ್ದು, ದೇಶಕ್ಕೆ ತುಂಬಲಾರದ ನಷ್ಟ ತಂದಿದೆ. ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ರತನ್ ಅವರು ನಿಧನರಾಗಿದ್ದಾರೆ. 86 ವರ್ಷದ ರತನ್ ಟಾಟಾ ಅವರು ತಮ್ಮ ಕಾಯಿಲೆಗಳಿಗೆ ಸೋಮವಾರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೊಳಗಾಗಿದ್ದು, ಬುಧವಾರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದರು.
ಷೇರು ಮಾರುಕಟ್ಟೆಯಲ್ಲಿ ಕುಸಿತ ಸಾಧ್ಯತೆ?
ರತನ್ ಅವರು ನಿಧನರಾಗಿರುವುದು ಕೇವಲ ಟಾಟಾ ಸಂಸ್ಥೆಗೆ ಅಲ್ಲದೆ ದೇಶಕ್ಕೂ ದೊಡ್ಡ ನಷ್ಟವಾಗಿದೆ. ಇನ್ನು ರತನ್ ನಿಧನದಿಂದ ಷೇರು ಮಾರುಕಟ್ಟೆಗೂ ಕೊಂಚ ಹೊಡೆತ ಬೀಳುವ ಎಲ್ಲಾ ಸಾಧ್ಯತೆಗಳಿವೆ ಎಂದು ಷೇರು ದಿಗ್ಗಜರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಾಟಾ ದೇಶದ ಅತೀ ದೊಡ್ಡ ಮಾರುಕಟ್ಟೆ ಕಂಪೆನಿಯಾಗಿರವ ಹಿನ್ನೆಲೆಯಲ್ಲಿ ಸಣ್ಣ ಬದಲಾವಣೆ ಕೂಡ ದೊಡ್ಡ ಹಾನಿ ತರುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ. ರತನ್ ನಿಧನದಿಂದ ಹೂಡಿಕೆದಾರರಲ್ಲಿ ಕೊಂಚ ಅತಂಕ ಆವರಿಸಿದ್ದು, ಬಹುಷಃ ಹೂಡಿಕೆ ಹಿಂಪಡೆದರೆ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ. ಟಾಟಾ ಸಮೂಹ ಸಂಸ್ಥೆಗಳ ಅಡಿಯಲ್ಲಿ ಬರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ (ಟಿಸಿಎಸ್), ಟಾಟಾ ಪವರ್ ಕಂಪೆನಿ ಲಿಮಿಟೆಡ್, ಟಾಟಾ ಸ್ಟೀಲ್ ಲಿಮಿಟೆಡ್, ಟಾಟಾ ಮೋಟಾರ್ಸ್ ಲಿಮಿಟೆಡ್, ಟ್ರೆಂಟ್ ಲಿಮಿಟೆಡ್ ಮತ್ತು ಟೈಟಾನ್ ಕಂಪೆನಿ ಲಿಮಿಟೆಡ್ ಸೇರಿದಂತೆ ಟಾಟಾ ಸಮೂಹ ಸಂಸ್ಥೆಗಳ ಷೇರಿನ ಮೇಲೆ ಎಲ್ಲರು ಗಮನ ಹರಿಸಿದ್ದಾರೆ.

ತನ್ನೊಂದಿಗೆ ಹೂಡಿಕೆದಾರರನ್ನು ಬೆಳೆಸಿದ್ದ ಸಂಸ್ಥೆ
ಟಾಟಾ ಸಂಸ್ಥೆ ಮಾತ್ರ ಅಭಿವೃದ್ದಿ ಹೊಂದಿರಲಿಲ್ಲ. ಬದಲಾಗಿ ತನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದವರನ್ನೂ ಚೆನ್ನಾಗಿ ನೋಡಿಕೊಂಡಿದೆ. ಟಾಟಾ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಬಹುತೇಕ ಎಲ್ಲರೂ ಹೆಚ್ಚಿನ ಆದಾಯವನ್ನು ಗಳಿಸಿದ್ದು, ಆ ಪ್ರತೀತಿ ಇಂದಿಗೂ ಮುಂದುವರೆದಿದೆ. ಇದಕ್ಕೆ ಪುರಾವೆ ಎಂಬಂತೆ ಟಾಟಾ ಗ್ರೂಪ್ ಸ್ಟಾಕ್‌ಗಳು ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ ಉತ್ತಮ ನಿರ್ವಹಣೆ ತೋರಿದೆ. 16 ಷೇರುಗಳು ವರ್ಷದಿಂದ ಎರಡಂಕಿ ಆದಾಯವನ್ನು ನೀಡಿದೆ. ಇದು ಟಾಟಾದ ಬದ್ದತೆ ಹಾಗೂ ಖ್ಯಾತಿ ಕೈಗನ್ನಡಿಯಂತಿದೆ. ಅದೇ ಅವಧಿಯಲ್ಲಿ ಟಿಆರ್‌ಎಫ್, ವೋಲ್ಟಾಸ್, ಆಟೋಮೊಬೈಲ್ ಕಾರ್ಪೊರೇಷನ್ ಆಫ್ ಗೋವಾ ಲಿಮಿಟೆಡ್, ದಿ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್, ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಕೂಡ 50 ಪ್ರತಿಶತ ಮತ್ತು 90 ಪ್ರತಿಶತದಷ್ಟು ಏರಿಕೆ ಆಗಿದೆ
ರತನ್ ಟಾಟಾ ಕೇವಲ ಹೆಸರಲ್ಲ ಅದೊಂದು ಬ್ರ್ಯಾಂಡ್!
ಎಲ್ಲರಿಗೂ ತಿಳಿದಿರುವಂತೆ ರತನ್ ಟಾಟಾ ಅವರು ಉದ್ಯಮದ ಬಗ್ಗೆ ಹೊಂದಿದ್ದ ದೂರಾಲೋಚನೆ ಹಾಗೂ ಆಳವಾದ ಜ್ಞಾನದಿಂದಲೇ ಇಂದು ಟಾಟಾ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಯಿತು ಎನ್ನಬಹುದು. ರತನ್ ಟಾಟಾ ಅವರ ಅವರ ನೇತೃತ್ವದಲ್ಲಿ ಟಾಟಾ ಸಮೂಹವು ಟೆಟ್ಲಿ, ಕೋರಸ್, ಜಾಗ್ವಾರ್ ಲ್ಯಾಂಡ್ ರೋವರ್, ಬ್ರನ್ನರ್ ಮಾಂಡ್, ಜನರಲ್ ಕೆಮಿಕಲ್ ಇಂಡಸ್ಟ್ರಿಯಲ್ ಪ್ರಾಡಕ್ಟ್ಸ್ ಮತ್ತು ಡೇವೂ ಮುಂತಾದ ವಿದೇಶಿ ಕಂಪೆನಿಗಳು ಟಾಟಾ ಜೊತೆ ವಿಲೀನವಾಗಿತ್ತು. ಸದ್ಯ ಇಂದು ಇವೆಲ್ಲಾ ಟಾಟಾ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಈ ಜಾಗತಿಕ ಕಂಪೆನಿಗಳ ಸ್ವಾಧೀನದೊಂದಿಗೆ ಟಾಟಾ ಜಾಗತಿಕ ಬ್ರ್ಯಾಂಡ್ ಆಗಿ ಕೂಡ ಗುರುತಿಸಿಕೊಂಡಿದೆ. ರತನ್ ಅವರು ಜೆಆರ್‌ಡಿ ಟಾಟಾ ಅವರಿಂದ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಮತ್ತು ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಾಗಿ 1991ರ ಮಾರ್ಚ್‌ನಲ್ಲಿ ಅಧಿಕಾರ ವಹಿಸಿಕೊಂಡರು.
ಬಹುತೇಕ ಹಣ ಚಾರಿಟಿಗಾಗಿ ಮೀಸಲು!
ಟಾಟಾ ಸನ್ಸ್‌ನ ಈಕ್ವಿಟಿ ಷೇರು ಬಂಡವಾಳದ ಶೇಕಡಾ ೬೦ ಪ್ರತಿಶತ ಪಾಲನ್ನು ಚ್ಯಾರಿಟಿ ಟ್ರಸ್ಟ್‌ಗಳು ಹೊಂದಿದ್ದು, ಇದು ಶಿಕ್ಷಣ, ಆರೋಗ್ಯ, ಜೀವನೋಪಾಯದ ಉತ್ಪಾದನೆ ಮತ್ತು ಕಲೆ ಮತ್ತು ಸಂಸ್ಕೃತಿಯನ್ನು ಬೆಂಬಲಿಸುತ್ತದೆ. ಒಂದು ವೇಳೆ ಇಷ್ಟು ದೊಡ್ಡ ಮೊತ್ತವನ್ನು ಚ್ಯಾರಿಟಿ ಟ್ರಸ್ಟ್ ಗಳಿಗೆ ನೀಡದೇ ಹೋಗಿರುತ್ತಿದ್ದರೆ ಇಂದು ಜಗತ್ತಿನ ಅತೀ ದೊಡ್ಡ ಹಾಗೂ ಶ್ರೀಮಂತ ಕಂಪೆನಿಗಳ ಪಟ್ಟಿಯಲ್ಲಿ ಟಾಟಾ ಇರುತ್ತಿತ್ತು. ಆದರೆ ಅದರ ಬಗ್ಗೆ ಚಿಂತಿಸದೆ ಲೋಕೋಪಕಾರಿ ಕಾರ್ಯಗಳಿಗೆ ಹಣವನ್ನು ಬಳಸುತ್ತಿರುವುದು ರತನ್ ಅವರ ವಿಶಾಲ ಹೃದಯಕ್ಕೆ ಸಾಕ್ಷಿಯಾಗಿದೆ.
2012ರಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ರತನ್!
ಸುಮಾರು 50 ವರ್ಷಗಳ ಕಾಲ ಟಾಟಾ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ರತನ್ ಅವರು 2012ರ ಡಿಸೆಂಬರ್ ನಲ್ಲಿ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಈ ವೇಳೆ ರತನ್ ಅವರಿಗೆ ಟಾಟಾ ಸನ್ಸ್‌ನ ಚೇರ್ಮನ್ ಎಮೆರಿಟಸ್ ಎಂಬ ಬಿರುದನ್ನು ನೀಡಿ ಗೌರವಿಸಲಾಗಿತ್ತು.
ಅನ್ನದಾತ ಟಾಟಾ ಸಂಸ್ಥೆ!
2023-24ರಲ್ಲಿ 2023-24ರಲ್ಲಿ, ಟಾಟಾ ಕಂಪೆನಿಗಳ ಒಟ್ಟು ಆದಾಯವು 165 ಶತಕೋಟಿ ಡಾಲರ್‌ಗಿಂತ ಹೆಚ್ಚಿದ್ದು, ಸಾರ್ವಜನಿಕವಾಗಿ ಪಟ್ಟಿ (ಪಬ್ಲಿಕ್ ಲಿಸ್ಟ್) ಮಾಡಲಾದ ಒಟ್ಟು 26 ಟಾಟಾ ಉದ್ಯಮಗಳು 2024 ರ ಮಾರ್ಚ್ 31ರ ಅನ್ವಯ 365 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳೀಕರಣವನ್ನು ಹೊಂದಿವೆ. ಇನ್ನು ಈ ಸಂಸ್ಥೆಯ ಕಂಪೆನಿಗಳು ಒಟ್ಟಾರೆಯಾಗಿ 10 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿವೆ. ಈ ಮೂಲಕ ೧೦ ಲಕ್ಷಕ್ಕೂ ಅಧಿಕ ಜನರ ಅನ್ನದಾತ ಎಂದರೆ ತಪ್ಪಾಗಲಾರದು.
ಒಟ್ಟಾರೆಯಾಗಿ ಹೇಳುವುದಾದರೆ ಹಲವಾರು ಪಾಲಿನ ಅನ್ನದ ಬಟ್ಟಲು ಎಂದೇ ಗುರುತಿಸಿಕೊಂಡಿದ್ದ ರತನ್ ಇಂದು ನಮ್ಮ ಜೊತೆ ಇಲ್ಲದಿದ್ದರೂ ದಾನದ ವಿಚಾರದಲ್ಲಿ ಅವರು ಹಾಕಿಕೊಟ್ಟ ನೀತಿ ಹಾಗೂ ಉದ್ಯಮದ ಬಗೆಗೆ ಅವರು ಹೊಂದಿರುವ ಜ್ಞಾನ ಎಲ್ಲರಿಗೂ ಮಾದರಿ ಎಂದರೆ ತಪ್ಪಾಗಲಾರದು.


Click it and Unblock the Notifications