ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ವಿರುದ್ಧ ಸುಂಕದ (Tariffs) ಸಮರ ಸಾರಿದ ಬೆನ್ನಲ್ಲೇ, ಭಾರತ ಕೂಡಾ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿತ್ತು. ಈ ಪರಿಣಾಮ ಭಾರತ ಆಗಸ್ಟ್ 22 ರಿಂದ ಅಮೆರಿಕಾಗೆ ಕಳುಹಿಸುವ ಪೋಸ್ಟ್ ಸೇವೆಗಳಿಗೆ (Post Service) ತಾತ್ಕಾಲಿಕ ಬ್ರೇಕ್ ನೀಡಿತ್ತು. ಆದ್ರೆ ಅಮೆರಿಕದೊಂದಿಗೆ ಸುಂಕದ ಬಿಕ್ಕಟ್ಟು ಕಡಿಮೆಯಾಗದಿದ್ದರೂ, ಇದೀಗ ಭಾರತೀಯ ಅಂಚೆ ಇಲಾಖೆಯು ಮಹತ್ವದ ಘೋಷಣೆ ಮಾಡಿದೆ. ಅಕ್ಟೋಬರ್ 15 ರಿಂದ ಅಮೆರಿಕಕ್ಕೆ ಎಲ್ಲಾ ಅಂತರರಾಷ್ಟ್ರೀಯ ಅಂಚೆ ಸೇವೆಗಳನ್ನು ಪುನರಾರಂಭಿಸುವುದಾಗಿ ಇಲಾಖೆ ತಿಳಿಸಿದೆ. ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ನ ಹೊಸ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ಸೇವೆಗಳನ್ನು ಮರುಸ್ಥಾಪಿಸಲಾಗುತ್ತಿದೆ ಎಂದು ಹೇಳಿದೆ.

ಸುಂಕದಲ್ಲಿಲ್ಲ ಯಾವುದೇ ಬದಲಾವಣೆ
ಈ ಸೇವೆಗಳು ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಇಲಾಖೆಯ ಹೊಸ ನಿಯಮಗಳಿಗೆ ಒಳಪಟ್ಟಿರುತ್ತವೆ. ಹೊಸ ನಿಯಮದ ಪ್ರಕಾರ, ಭಾರತದಿಂದ ಅಮೆರಿಕಕ್ಕೆ ಹೋಗುವ ಅಂಚೆಯ ಮೇಲಿನ ತೆರಿಗೆ ದರವನ್ನು ಘೋಷಿತ ವಸ್ತುಗಳ ಮೌಲ್ಯದ 50% ಎಂದು ನಿಗದಿಪಡಿಸಲಾಗಿದೆ. ಈ ಕ್ರಮವು MSME (ಸಣ್ಣ, ಕಿರಿಯ ಮತ್ತು ಮಧ್ಯಮ ಉದ್ಯಮಗಳು), ಕರಕುಶಲಿಗರು, ಸಣ್ಣ ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ರಫ್ತುದಾರರಿಗೆ ನೆರವಾಗಲು ತೆಗೆದುಕೊಳ್ಳಲಾಗಿದೆ. ಇದರಿಂದ ಭಾರತದ ರಫ್ತು ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ
ಭಾರತದ ರಫ್ತಿಗೆ ಉತ್ತೇಜನ
ಈ ಕ್ರಮವು ಭಾರತದ ರಫ್ತಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ಈ ನಿರ್ಧಾರವು ಹಲವು ಆಯಾಮಗಳಲ್ಲಿ ಮಹತ್ವ ಪಡೆದಿದೆ. ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಗಳು ಪುನಃ ಚುರುಕುಗೊಂಡಿರುವ ಸಮಯದಲ್ಲಿ ಈ ಹೆಜ್ಜೆ ಇಡಲಾಗಿದೆ.
ನಿಲುವು ಬದಲಿಸಿದ ಅಮೆರಿಕ
ಅಮೆರಿಕವು ಭಾರತದ ಬಗ್ಗೆ ಇದ್ದ ತನ್ನ ನಿಲುವನ್ನು ಸಡಿಲಿಸಿ, ಭಾರತವನ್ನು ಪ್ರಮುಖ ಮಿತ್ರ ರಾಷ್ಟ್ರ ಎಂದು ಕರೆದಿದೆ. ಈ ಮಧ್ಯೆ ವ್ಯಾಪಾರ ಮಾತುಕತೆಗಳಿಗಾಗಿ ಭಾರತೀಯ ನಿಯೋಗವೊಂದು ಅಮೆರಿಕಕ್ಕೆ ತೆರಳಲು ಸಿದ್ಧವಾಗಿದೆ.
ಅಂಚೆ ಇಲಾಖೆ ಹೇಳಿದ್ದೇನು?
ಅಂಚೆ ಇಲಾಖೆ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, "ಅಕ್ಟೋಬರ್ 15, 2025 ರಿಂದ ಅಮೆರಿಕಕ್ಕೆ ಎಲ್ಲಾ ವಿಧದ ಅಂತರರಾಷ್ಟ್ರೀಯ ಅಂಚೆ ಸೇವೆಗಳನ್ನು ಪುನರಾರಂಭಿಸಲು ಇಲಾಖೆ ಸಂತೋಷವಾಗಿದೆ." ಈ ಸೇವೆಗಳನ್ನು ಆಗಸ್ಟ್ 22 ರಂದು ಅಮೆರಿಕದ ಆಡಳಿತವು ಹೊರಡಿಸಿದ ಕಾರ್ಯಕಾರಿ ಆದೇಶ 14324 ರ ನಂತರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅಮೆರಿಕ ಸರ್ಕಾರದ ಹೊಸ ನಿಯಂತ್ರಕ ನಿಬಂಧನೆಗಳಿಂದಾಗಿ ಅಂಚೆ ಸೇವೆಗಳ ಅಮಾನತು ಅಗತ್ಯವಾಗಿತ್ತು ಎಂದು ಇಲಾಖೆ ಸ್ಪಷ್ಟಪಡಿಸಿದೆ.


Click it and Unblock the Notifications