ನವದೆಹಲಿ, ಮಾರ್ಚ್ 27: ಸಾಮಾನ್ಯವಾಗಿ ತೆರಿಗೆದಾರರು ಆದಾಯ ತೆರಿಗೆಯನ್ನು ಪ್ರತಿ ವರ್ಷವೂ ಆಯಾ ಹಣಕಾಸು ವರ್ಷಕ್ಕೆ ಪೂರಕವಾಗಿ ಐಟಿಆರ್ ಅನ್ನು ಫೈಲ್ ಮಾಡುವುದು ವಾಡಿಕೆ.
ಆ ಮೂಲಕ ತೆರಿಗೆಯಿಂದ ಸರ್ಕಾರದಿಂದ ದೊರೆಯುವ ವಿನಾಯಿತಿ ಹಾಗೂ ಇತರೆ ಅನುಕೂಲತೆಗಳನ್ನು ಪಡೆದುಕೊಳ್ಳಬಹುದು. ಆದರೆ, ನೀವು 2021-22, 2022-23 ಹಾಗೂ 2023-24ನೇ ಸಾಲಿನ ಐಟಿಆರ್ ಅನ್ನು ಕೂಡ ಈಗ ಫೈಲಿಂಗ್ ಮಾಡಬಹುದಾಗಿದೆ. ಆದರೆ, ಪ್ರಸಕ್ತ ಹಣಕಾಸು ಹೊರತಾಗಿ ಈ ಹಿಂದಿನ ಐಟಿಆರ್ ಅನ್ನು ಸಲ್ಲಿಸುವುದಕ್ಕೆ ಹೆಚ್ಚುವರಿ ಹಣವನ್ನು ಪಾವತಿಸಬೇಕು. ಅಂದರೆ, 2021-22ನೇ ಸಾಲಿನ ಐಟಿಆರ್ ಸಲ್ಲಿಕೆಗೆ ಶೇ.50ರಷ್ಟು ಮೊತ್ತವನ್ನು ಹೆಚ್ಚುವರಿ ತೆರಿಗೆಯಾಗಿ ಪಾವತಿಸಬೇಕು. 2022-23ರ ಐಟಿಆರ್ ಸಲ್ಲಿಕೆಗೆ ಶೇ.25ರಷ್ಟು ಹಣವನ್ನು ಪಾವತಿಸಬೇಕು.

ಈ ನಡುವೆ ಅನೇಕ ತೆರಿಗೆ ಪಾವತಿದಾರರಿಗೆ 2020-21ರ ಐಟಿಆರ್ ಫೈಲಿಂಗ್‌ಗೆ ಸಂಬಂಧಿಸಿದಂತೆ ಅನೇಕರಿಗೆ ಆದಾಯ ತೆರಿಗೆ ಇಲಾಖೆಯಿಂದ ಇ-ಮೇಲ್ ಸಂದೇಶ ರವಾನೆಯಾಗಿದೆ. ಆದರೆ, ಈ ಇಮೇಲ್‌ನಿಂದಾಗಿ ಅನೇಕರು ಈಗಾಗಲೇ ಆತಂಕಗೊಂಡಿದ್ದಾರೆ. ತಮ್ಮ ಹಣಕಾಸು ದಾಖಲೆಗಳಲ್ಲಿ ಕಾಣಿಸಿದ ವ್ಯವಹಾರಗಳನ್ನು ಆಧರಿಸಿ ಈ ರೀತಿಯ ಸಂದೇಶಗಳನ್ನು ಕಳುಹಿಸಲಾಗಿದೆ.
ಆದಾಯ ತೆರಿಗೆ ಇಲಾಖೆಯು ಬೇರೆ-ಬೇರೆ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ-ದಾಖಲೆಗಳನ್ನು ಆಧರಿಸಿ ಎಐಎಸ್ ಪೋರ್ಟಲ್ ಮೂಲಕ ಸಂದೇಶ ರವಾನಿಸಲಾಗಿದೆ. ಈ ಹಿನ್ನಲೆಯಲ್ಲಿ ತೆರಿಗೆ ಪಾವತಿದಾರರು ಈ ಸಂದೇಶಗಳಿಗೆ ಉತ್ತರವನ್ನು ನೀಡಬೇಕಾಗುತ್ತದೆ. ಈ ಇ-ಕ್ಯಾಂಪೈನ್ ಸಂದೇಶವು ಯಾರೆಲ್ಲ ಆದಾಯ ತೆರಿಗೆಗೆ ಸಂಬಂಧಿಸಿದ ಐಟಿಆರ್ ಪಾವತಿಸಿಲ್ಲವೋ ಅಂಥವರಿಗೆ ಹಾಗೂ ನಿಗದಿತ ತೆರಿಗೆ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸಿದವರಿಗೆ ಈ ಸಂದೇಶಗಳನ್ನು ಕಳುಹಿಸಲಾಗಿದೆ.
ಈ ಹಿನ್ನಲೆಯಲ್ಲಿ ಹಿಂದೆ ಸಲ್ಲಿಕೆಯಾಗಿರುವ ಹಳೆಯ ಐಟಿಆರ್‌ನಲ್ಲಿ ಏನಾದರೂ ಪರಿಷ್ಕರಣೆ ಅಥವಾ ತಪ್ಪುಗಳು ಆಗಿದ್ದರೆ ಈಗ ಮತ್ತೆ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬಹುದು. ಅದರಂತೆ 2020-21ರ ವರ್ಷಕ್ಕೆ ಸಂಬಂಧಿಸಿದ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡುವುದಕ್ಕೆ 2024ರ ಮಾ.31ರ ಗಡುವು ನೀಡಲಾಗಿದೆ.
ಈ ಹಿಂದೆ ಐಟಿಆರ್ ಅನ್ನು ಸಲ್ಲಿಕೆ ಮಾಡದವರು ಹಾಗೂ ಐಟಿಆರ್ ಸಲ್ಲಿಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ನೀಡಿರುವ ಮಾಹಿತಿ ಹಾಗೂ ಆದಾಯ ತೆರಿಗೆ ಇಲಾಖೆ ಕ್ರೋಢೀಕರಿಸಿರುವ ಮಾಹಿತಿಯು ಸರಿ ಹೊಂದದ ತೆರಿಗೆ ಪಾವತಿದಾರರಿಗೆ ಈ ರೀತಿಯ ಸಂದೇಶವು ಬಂದಿದೆ.
ಹೀಗಿರುವಾಗ, ಇ-ಮೇಲ್‌ನಲ್ಲಿ ನೀಡಿರುವ ಲಿಂಕ್ ಮೂಲಕ ನಿಗದಿತ ಐಟಿ ಇಲಾಖೆಯ ಎಐಎಸ್ ವೆಬ್‌ಸೈಟ್ ಮೂಲಕ ಫೀಡ್‌ಬ್ಯಾಕ್ ಅನ್ನು ನೀಡಬಹುದು. ಒಂದುವೇಳೆ, ಈ ಸಂದೇಶಕ್ಕೆ ಪ್ರತಿಕ್ರಿಯೆ ನೀಡದಿದ್ದರೆ ಮುಂದೆ ತೆರಿಗೆ ಇಲಾಖೆಯು ಆ ಬಗ್ಗೆ ಹೆಚ್ಚಿನ ಪರಿಶೀಲನೆ ಹಾಗೂ ತೆರಿಗೆ ಪಾವತಿದಾರರು ಮಾಡಿರುವ ತೆರಿಗೆ ವ್ಯತ್ಯಾಸಗಳ ಬಗ್ಗೆ ಗಮನಹರಿಸಲಿದೆ.


Click it and Unblock the Notifications