ಇಲ್ಲಿ ಕೇಳಿ..ನೀವಿನ್ನೂ ತೆರಿಗೆ ಕಟ್ಟಿಲ್ವಾ..? ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಾ..? ಹಾಗಾದ್ರೆ ಈ ವರ್ಷದ ಮಾರ್ಚ್ 31ಕ್ಕೆ ಕಟ್ಟುಬಿಡಿ. ಏಕೆಂದರೆ ಮಾರ್ಚ್ 31ನೇ ತಾರೀಖು ಪ್ರಮುಖ ಆದಾಯ ತೆರಿಗೆ ಸಂಬಂಧಿತ ಗಡುವುಗಳ ದಿನವಾಗಿದೆ. ಆದಾಯ ತೆರಿಗೆ ಪಾವತಿ, ತೆರಿಗೆ ಉಳಿಸುವ ಹೂಡಿಕೆ, ನವೀಕರಿಸಿದ ರಿಟರ್ನ್ ಸಲ್ಲಿಕೆ ಮತ್ತು ವಿದೇಶಿ ಆದಾಯ ಘೋಷಣೆ ಮುಂತಾದವುಗಳನ್ನು ಈ ಗಡುವಿನೊಳಗೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಹೌದು, ಮಾರ್ಚ್ 31ರ ಒಳಗೆ ತೆರಿಗೆ ಸಂಬಂಧಿತ ಕೆಲಸಗಳನ್ನು ಮುಗಿಸಿಕೊಳ್ಳದಿದ್ದರೆ ಜೇಬಿಗೆ ಕತ್ತರಿ ಬೀಳುವುದು ಕಟ್ಟಿಟ್ಟ ಬುತ್ತಿ. ಅಂದರೆ ಗಡುವು ಮೀರಿದರೆ ದಂಡದ ಬಿಸಿ ತಟ್ಟುತ್ತದೆ. ಅದಕ್ಕಾಗಿ ಮುನ್ನವೇ ತೆರಿಗೆ ಪಾವತಿಸಿದರೆ ದಂಡದ ಭೀತಿ ತಪ್ಪಿಸಬಹುದು. ಹಾಗೂ ಲಭ್ಯವಿರುವ ತೆರಿಗೆ ಕಡಿತಗಳ ಸದುಪಯೋಗವನ್ನೂ ನೀವು ಪಡೆದುಕೊಳ್ಳಬಹುದು.
ತೆರಿಗೆ ಉಳಿಸುವ ಹೂಡಿಕೆಗಳ ಗಡುವು:
ಹೌದು, ಹಳೆಯ ತೆರಿಗೆ ವ್ಯವಸ್ಥೆಯನ್ನು ಅನುಸರಿಸುತ್ತಿರುವ ತೆರಿಗೆದಾರರು, ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಇಕ್ವಿಟಿ-ಲಿಂಕ್ಡ್ ಸೇವಿಂಗ್ಸ್ ಸ್ಕೀಮ್, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಮುಂತಾದ ಹೂಡಿಕೆಗಳ ಮೂಲಕ ತೆರಿಗೆ ಕಡಿತ ಪಡೆಯಬಹುದು. ಇದರಿಂದ ಉಳಿತಾಯವೂ ಆಗುತ್ತದೆ. ಇನ್ನು ಇದನ್ನು ಸೆಕ್ಷನ್ 80C, 80D ಮತ್ತು 80G ಅಡಿಯಲ್ಲಿ ವಿನಾಯಿತಿಗಳನ್ನು ಪಡೆಯಲು ಕೂಡ ಬಳಸಬಹುದು. ಮಾರ್ಚ್ 31ರ ಒಳಗೆ ಈ ಎಲ್ಲಾ ಹೂಡಿಕೆಗಳನ್ನು ಪೂರ್ಣಗೊಳಿಸಿದರೆ ಉತ್ತಮ. ಆದರೆ ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿರುವವರು ಇಂತಹ ಕಡಿತಗಳ ಅಗತ್ಯವಿಲ್ಲದೆ ನೇರವಾಗಿ ತೆರಿಗೆ ಕಟ್ಟಬಹುದಾಗಿದೆ.
ನವೀಕರಿಸಿದ ತೆರಿಗೆ ರಿಟರ್ನ್ ಸಲ್ಲಿಕೆ:
ಅಂದಹಾಗೆ ಮತ್ತೊಂದು ಪ್ರಮುಖವಾದ ಗಡುವು ಏನೆಂದರೆ, ಅಪ್‌ಡೇಟ್ ಆಗಿರುವ ತೆರಿಗೆ ರಿಟರ್ನ್ ಸಲ್ಲಿಸುವುದು...ಇದು ಬಹಳ ಮುಖ್ಯವಾಗಿದೆ. ಅಂದರೆ 2022-23 ಮೌಲ್ಯಮಾಪನ ವರ್ಷದ ರಿಟರ್ನ್‌ಗಳಲ್ಲಿ ದೋಷಗಳು ಅಥವಾ ಮಿಸ್ ಮಾಡಿದ ಆದಾಯವಿದ್ದರೆ, ಮಾರ್ಚ್ 31, 2025ರ ಒಳಗೆ ಅದನ್ನು ತಿದ್ದುಪಡಿ ಮಾಡುವ ಅವಕಾಶವಿದೆ. ಈ ಮೂಲಕ ನೀವು ಪೂರಕ ಆದಾಯವನ್ನು ಘೋಷಿಸಬಹುದು. ಹಾಗೂ ತಪ್ಪುಗಳನ್ನು ಸರಿಪಡಿಸಲು ಮತ್ತು ತೆರಿಗೆ ಅಧಿಕಾರಿಗಳಿಂದ ಯಾವುದೇ ದಂಡ ಅಥವಾ ವಿಚಾರಣೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ.
TDS ಮತ್ತು ಚಲನ್ ಸಲ್ಲಿಕೆ:
2025ರ ಫೆಬ್ರವರಿಯಲ್ಲಿ ಸೆಕ್ಷನ್ 194M ಅಡಿಯಲ್ಲಿ ವೃತ್ತಿಪರರು ಅಥವಾ ಗುತ್ತಿಗೆದಾರರಿಗೆ ಪಾವತಿಸಿದ ಹಣದ ಮೇಲೆ TDS ಕಡಿತಗೊಳಿಸಲಾಗಿತ್ತು. ಈ ಕಡಿತಗೊಂಡ TDSನ ಪಾವತಿಸಬೇಕಾದವರು ಮಾರ್ಚ್ 30ರ ಒಳಗೆ ಸಲ್ಲಿಸಬೇಕು. ಹಾಗೆಯೇ ಆಸ್ತಿ ಖರೀದಿ ಮತ್ತು ಬಾಡಿಗೆ ಪಾವತಿಗಳ ಸಂಬಂಧಿಸಿದ, ತೆರಿಗೆಗಳನ್ನು ಕೂಡ ಇದೇ ಡೆಡ್‌ಲೈನ್‌ನೊಳಗೆ ಸಲ್ಲಿಸಬೇಕು. ಒಂದು ವೇಳೆ ಈ ಗಡುವು ಮೀರಿದರೆ ಬಡ್ಡಿ ಹಾಗೂ ದಂಡವನ್ನು ವಿಧಿಸಲಾಗುತ್ತದೆ. ಆಗ ಕೂಡ ನಿಮ್ಮ ಜೇಬಿಗೆ ಕತ್ತರಿ ಬಿದ್ದಂತಾಗುತ್ತದೆ.
ವಿದೇಶಿ ಆದಾಯ ಘೋಷಣೆ:
ಇನ್ನು 2022-23ರ ಆರ್ಥಿಕ ವರ್ಷದಲ್ಲಿ ವಿದೇಶಿ ಆದಾಯವನ್ನು ಗಳಿಸಿರುವವರು ಕೂಡ, ತಮ್ಮ ಆದಾಯ ಮತ್ತು ವಿದೇಶದಲ್ಲಿ ಪಾವತಿಸಿದ ತೆರಿಗೆಯ ವಿವರವನ್ನು ಮಾರ್ಚ್ 31ರೊಳಗೆಯೇ ಸಲ್ಲಿಸಬೇಕಾಗುತ್ತದೆ. ಇದು ತೆರಿಗೆ ಕ್ರೆಡಿಟ್ ಪಡೆಯಲು ಸಹಾಯ ಮಾಡಲಿದ್ದು, ತೆರಿಗೆ ನಿಯಮಗಳನ್ನು ಪಾಲಿಸಲು ಸಹಕಾರಿಯಾಗುತ್ತದೆ. ಈ ಪ್ರಕ್ರಿಯೆ ಸೆಕ್ಷನ್ 139(1) ಅಥವಾ 139(4) ಅಡಿಯಲ್ಲಿ ಖಚಿತಪಡಿಸಿಕೊಳ್ಳಲಾಗಿದೆ.
ಇನ್ನು ತೆರಿಗೆ ಸಂಬಂಧಿಸಿದ ಈ ಗಡುವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ತೆರಿಗೆ ಕಟ್ಟುವಲ್ಲಿ ಒಂದುವೇಳೆ ವಿಳಂಬವಾದರೆ, ದಂಡ ಮತ್ತು ಬಡ್ಡಿಯ ಮೊತ್ತ ಹೆಚ್ಚಾಗುತ್ತದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ತೆರಿಗೆ ಇಲಾಖೆಯಿಂದ ತನಿಖೆಗೆ ಒಳಗಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ. ಆದ್ದರಿಂದ, ಈ ಎಲ್ಲ ಸಂಭಾವಿತ ಸಮಸ್ಯೆಗಳನ್ನು ತಪ್ಪಿಸಲು, ಗಡುವಿನೊಳಗೆ ಎಲ್ಲಾ ಅಗತ್ಯ ತೆರಿಗೆ ಪ್ರಕ್ರಿಯೆಗಳನ್ನು ಪೂರೈಸುವುದು ಬಹು ಮುಖ್ಯವಾಗಿದೆ.
ಇನ್ನು ಮಾರ್ಚ್ 31ರ ಒಳಗೆ ಎದುರಾಗುತ್ತಿರುವ ಆದಾಯ ತೆರಿಗೆ ಗಡುವನ್ನು ನಿರ್ಲಕ್ಷ್ಯ ಮಾಡದೇ, ಗಂಭಿರವಾಗಿ ಪರಿಗಣಿಸಬೇಕಾಗಿದೆ. ಹಾಗೆಯೇ ತೆರಿಗೆ ಉಳಿಸುವ ಹೂಡಿಕೆಗಳ ತೀರ್ಮಾನ, ನವೀಕರಣ ಮಾಡಿದ ಆದಾಯ ರಿಟರ್ನ್ ಸಲ್ಲಿಕೆ, ವಿದೇಶಿ ಆದಾಯ ಘೋಷಣೆ ಹಾಗೂ ಟಿಡಿಎಸ್ ಪಾವತಿ ಸೇರಿ ಮುಂತಾದ ಎಲ್ಲಾ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದರೆ ಉತ್ತಮ ಎನ್ನಲಾಗಿದೆ. ಕೊನೆಯ ಕ್ಷಣದಲ್ಲಿ ದಂಡ ಮತ್ತು ಬಡ್ಡಿಯನ್ನು ತಪ್ಪಿಸಲು ಈಗಲೇ ಸಜ್ಜಾಗುವುದು ಉತ್ತಮ. ತೆರಿಗೆ ಸಂಬಂಧಿತ ನಿಯಮಗಳು ಹಳೆಯ ಸಾಲುಗಳಲ್ಲಿ ತೊಡಗಿಸಿಕೊಂಡಿದ್ದರೆ, ತೀರ್ಮಾನಿಸುವ ಕ್ರಮಗಳು ಭವಿಷ್ಯದಲ್ಲಿ ಆರ್ಥಿಕ ಲಾಭ ತರಬಹುದು.


Click it and Unblock the Notifications