ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಂತು ನೋಡುವಂತೆ ಮಾಡುವ 2026ರ ಟಿ20 ವಿಶ್ವಕಪ್ (T20 World Cup 2026) ಮ್ಯಾಚ್ ಇಂದು ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಪಂದ್ಯಾಟ ಇಂದು (ಫೆ.15) ರಾತ್ರಿ 7 ಗಂಟೆಯಿಂದ, 2026ರ ಟಿ20 ವಿಶ್ವಕಪ್ ಪಂದ್ಯಾಟ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ-ಪಾಕಿಸ್ತಾನ ಪಂದ್ಯಾಟ ನಡೆಯುವುದರ ಬಗೆಗಿನ ವಿಷಯಗಳು ಅನೇಕ ಚರ್ಚೆಗೆ ಗುರಿಯಾಗಿದ್ದರೂ, ಇದೀಗ ಕೊನೆಗೂ ಇಂದು ಪರಸ್ಪರ ಕಣಕ್ಕೆ ಇಳಿಯಲಿದೆ. ಉಭಯ ತಂಡಗಳು ಈಗಾಗಲೇ ಕೊಲಂಬೊ ಕ್ರೀಡಾಂಗಣದಲ್ಲಿ ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗಿ ನಿಂತಿದ್ದು, ಕ್ರೀಡಾಭಿಮಾನಿಗಳು ಸಹ ಪಂದ್ಯಾಟ ವೀಕ್ಷಣೆಗೆ ಕಾತುರದಲ್ಲಿದ್ದಾರೆ. ಹಾಗಿದ್ರೆ ಈ ಭಾರತ-ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಾಟದ ಲೈವ್ ಸ್ಟ್ರೀಮಿಂಗ್ (Live Streaming) ಎಲ್ಲಾಗುತ್ತೆ? ವೀಕ್ಷಕರು ಎಲ್ಲಿ ನೋಡಬಹುದು? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹಾಲಿ ಚಾಂಪಿಯನ್ ತಂಡವಾಗಿರುವ ಭಾರತ, ತನ್ನ ಅಭಿಯಾನವನ್ನು ಅಮೆರಿಕವನ್ನು ಸೋಲಿಸುವ ಮೂಲಕ ಆರಂಭಿಸಿದ್ದು, ನಂತರ ನಮೀಬಿಯಾವನ್ನು 93 ರನ್‌ಗಳ ದೊಡ್ಡ ಅಂತರದಿಂದ ಜಯಿಸಿದೆ. ಅಲ್ಲದೇ ಪಾಕಿಸ್ತಾನ ತಂಡ ಕೂಡಾ ನೆದರ್ಲೆಂಡ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಅಲ್ಲದೇ ಅಮೆರಿಕ ವಿರುದ್ಧವೂ ಗೆಲುವು ಸಾಧಿಸಿದೆ. ಉಭಯ ತಂಡಗಳು ತಲಾ ಎರಡೂ ಪಂದ್ಯಗಳನ್ನಾಡಿದ್ದು, 4 ಪಾಯಿಂಟ್‌ಗಳೊಂದಿಗೆ ಸಮಾಬಲದಲ್ಲಿದೆ. ಆದರೆ ಇದೀಗ ಇಂದು ಗೆಲ್ಲುವ ತಂಡ ಎ ಗ್ರೂಪ್‌ನಲ್ಲಿ 6 ಅಂಕ ಪಡೆಯುವ ಮೂಲಕ ಅಗ್ರಸ್ಥಾನಕ್ಕೆ ತಲುಪುತ್ತದೆ.
ಭಾರತ-ಪಾಕಿಸ್ತಾನ ಮ್ಯಾಚ್ ವಿವರಗಳು:
- ದಿನಾಂಕ: ಭಾನುವಾರ, ಫೆಬ್ರವರಿ 15, 2026
- ಸಮಯ: ಸಂಜೆ 7 ಗಂಟೆಗೆ ಪಂದ್ಯ ಆರಂಭ. ಟಾಸ್ 6:30 ಗಂಟೆಗೆ ನಡೆಯಲಿದೆ.
- ಸ್ಥಳ: ಆರ್. ಪ್ರೇಮದಾಸ ಸ್ಟೇಡಿಯಂ, ಕೊಲಂಬೊ, ಶ್ರೀಲಂಕಾ.
ಇನ್ನು ಈ ಬಾರಿ ಟಿ20 ವಿಶ್ವಕಪ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಜಿಯೋ ಹಾಟ್‌ಸ್ಟಾರ್ ಆಪ್ ಮತ್ತು ವೆಬ್‌ಸೈಟ್‌ನಲ್ಲಿ ಆಗಲಿದೆ. ಇದು ಭಾರತದಲ್ಲಿ ಅಧಿಕೃತ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದು, ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್, ಕಂಪ್ಯೂಟರ್‌ನಲ್ಲಿ ಉಚಿತವಾಗಿ ಅಥವಾ ಸಬ್‌ಸ್ಕ್ರಿಪ್ಷನ್ ಮೂಲಕ ನೋಡಬಹುದು. ಅಲ್ಲದೇ ಟಿವಿ ಮೂಲಕವೂ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೋಡಬಹುದು.
ಕೊಲಂಬೊದಲ್ಲಿ ಮಳೆ!
ಹೌದು, ಈಗಾಗಲೇ ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಮಧ್ಯೆ ಕ್ರೀಡಾಭಿಮಾನಿಗಳಿಗೆ ಆಟ ನಡೆಯುತ್ತಾ? ಇಲ್ವಾ? ಎಂಬ ಪ್ರಶ್ನೆ ಉದ್ಭವಿಸಿದೆ. ಶನಿವಾರ ಸಂಜೆ ಕೊಲಂಬೊದಲ್ಲಿ ಸುರಿದ ಭಾರೀ ಮಳೆಯಿಂದಾಗಿ, ಆರ್.ಪ್ರೇಮದಾಸ ಮೈದಾನ ತುಂಬಾ ನೀರು ಆವರಿಸಿಕೊಂಡಿತ್ತು. ಇದೀಗ ಭಾನುವಾರವೂ ಮಳೆಯಾಗುವ ಸಾಧ್ಯತೆ ಇದೆ ಎಂದು ಶ್ರೀಲಂಕಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಾಟಕ್ಕೆ ಅಡ್ಡಿಯಾಗಬಹುದು ಎನ್ನಲಾಗಿದೆ. ಇನ್ನೇನು ಪಂದ್ಯಾಟ ಆರಂಭವಾಗಲು ಕೆಲವೇ ಗಂಟೆಗಳಿದ್ದು, ಮ್ಯಾಚ್ ಆರಂಭವಾಗುತ್ತಾ? ಮಳೆ ಬರುತ್ತಾ? ಎಂದು ಕಾದು ನೋಡಬೇಕಿದೆ.


Click it and Unblock the Notifications