ಬೆಂಗಳೂರು, ಮಾರ್ಚ್ 18: ಭಾರತ ದೇಶವು ಇನ್ನು ಕೆಲವೇ ವರ್ಷಗಳಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಶಕ್ತಿಯುತವಾಗಿ ಬೆಳೆದು ನಿಲ್ಲಲಿದೆ ಎಂದು ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸಮಯದಲ್ಲಿ ಭಾರತ ಯಾವಾಗ ಅಭಿವೃದ್ಧಿ ಹೊಂದಿದ ದೇಶವಾಗಿ ಸ್ಥಾನಮಾನವನ್ನು ಪಡೆಯಲಿದೆ? ಎಂಬ ವಿಚಾರವನ್ನು ದೇಶದ ವಿತ್ತ ಸಚಿವರು ಇದೇ ವೇಳೆ ವಿವರಿಸಿದ್ದಾರೆ.
ಭಾರತವನ್ನ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ರಾಷ್ಟ್ರವಾಗಿ ಮಾಡುತ್ತೇವೆ ಅಂತಿದ್ದಾರೆ ಪ್ರಧಾನಿ ಮೋದಿ ಅವರು. ಈ ಮೂಲಕ ಭಾರತ ದೇಶವನ್ನು ಜಗತ್ತಿನ ಟಾಪ್-3 ಎಕಾನಮಿ ಮಾಡಲು ಎಲ್ಲರೂ ಕೈಜೋಡಿಸಿ ಎಂದು ಪ್ರಧಾನಿ ಮನವಿ ಮಾಡಿದ್ದರು. ಈ ಕಾರಣಕ್ಕೆ ಕೇಂದ್ರ ಸರ್ಕಾರ ಕೂಡ ಹಲವು ಯೋಜನೆ ಕೈಗೊಂಡು ಭಾರತದ ಆರ್ಥಿಕತೆ ಅಭಿವೃದ್ಧಿಗೆ ಮುಂದಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ ಹೇಳಿಕೆಯಿಂದ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಇಡೀ ಜಗತ್ತು ಮತ್ತೊಮ್ಮೆ ಭಾರತದತ್ತ ತಿರುಗಿ ನೋಡುವಂತಾಗಿದೆ.

10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ!
ತಿರುಚನಾಪಳ್ಳಿಯ ಶ್ರೀಮತಿ ಇಂದಿರಾಗಾಂಧಿ ಕಾಲೇಜಲ್ಲಿ ಸ್ಥಾಪನೆ ಮಾಡಿದ್ದ, ಮಹಾತ್ಮ ಗಾಂಧಿ ಜೀ ಅವರ ಪುತ್ಥಳಿ ಅನಾವರಣ ಮಾಡಿ ಮಾತನಾಡಿದ ಅವರು. ಆರ್ಥಿಕ ವಿಚಾರಗಳಲ್ಲಿ ಭಾರತ ಆತ್ಮ ನಿರ್ಭರತೆ ಸಾಧಿಸಬೇಕಿದೆ. ಇದೇ ಮುಂದೆ ಆರ್ಥಿಕ ಶಕ್ತಿಯಾಗಲಿದೆ. ಭಾರತವು ಜಾಗತಿಕ ಆರ್ಥಿಕತೆಯಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದೆ. ಕೆಲವೇ ವರ್ಷಗಳಲ್ಲಿ 3ನೇ ಸ್ಥಾನಕ್ಕೂ ತಲುಪಲಿದೆ ಎಂಬ ವಿಶ್ವಾಸವನ್ನು ಇದೇ ವೇಳೆ ಕೇಂದ್ರ ವಿತ್ತ ಸಚಿವರು ವ್ಯಕ್ತಪಡಿಸಿದ್ದಾರೆ. ಹಾಗೇ ವಿದ್ಯಾರ್ಥಿಗಳಲ್ಲಿ ಕೂಡ ಈ ಕುರಿತು ಆತ್ಮವಿಶ್ವಾಸ ತುಂಬಿದರು. ಹಾಗಾದರೆ ಭಾರತ ಯಾವಾಗ ಅಭಿವೃದ್ಧಿ ಹೊಂದಿದ ದೇಶ ಆಗಲಿದೆ?
2047ಕ್ಕೆ ಭಾರತದ ಅಭಿವೃದ್ಧಿ ಹೊಂದಿದ ದೇಶ
ಭಾರತ ಇದೀಗ ಜಾಗತಿಕ ಆರ್ಥಿಕ ವಲಯದಲ್ಲಿ ಬೆಳೆಯುತ್ತಿರುವ ವೇಗವನ್ನು ಗಮನಿಸಿದರೆ, ಇನ್ನು ಕೆಲವೇ ವರ್ಷದಲ್ಲಿ ಅಮೆರಿಕವನ್ನು ಕೂಡ ಹಿಂದಿಕ್ಕಿ ಮುಂದೆ ನುಗ್ಗುವ ನಿರೀಕ್ಷೆಗಳು ಇವೆ. ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೇ ದೃಷ್ಟಿಯಲ್ಲಿ ಈಗ, ಭಾರತವು 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶದ ಸ್ಥಾನಮಾನ ಪಡೆಯಲಿದೆ ಎಂದಿದ್ದಾರೆ. ಅಲ್ಲದೆ ಸದ್ಯ ಭಾರತ ಅತಿದೊಡ್ಡ ಆರ್ಥಿಕತೆ ಹೊಂದಿರುವ ಜಗತ್ತಿನ 5ನೇ ದೇಶ ಎಂಬುದನ್ನು ಅವರು ಹೇಳಿದರು. ಈ ಮೂಲಕ ಭಾರತ ನಂಬರ್ 3 ಸ್ಥಾನಕ್ಕೆ ತಲುಪುತ್ತದೆ ಎಂದು ಪ್ರತಿಪಾದಿಸಿದರು.
ಯಾವ ಯಾವ ದೇಶಗಳು ಇವೆ?
ಜಗತ್ತಿನ ಟಾಪ್ ಆರ್ಥಿಕತೆ ಸ್ಥಾನದಲ್ಲಿ ಅಮೆರಿಕ ಗಟ್ಟಿಯಾಗಿ ಕೂತಿದೆ. ಅಮೆರಿಕ ಸುಮಾರು 25 ಟ್ರಿಲಿಯನ್‌ಗೂ ಹೆಚ್ಚು ಗಾತ್ರದ ಆರ್ಥಿಕತೆ ಹೊಂದಿದ್ದರೆ ಚೀನಾ ದೇಶವು 17.963 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದೆ. ಜಪಾನ್, ಜರ್ಮನಿ ನಂತರದ ಸ್ಥಾನದಲ್ಲಿ ಇದ್ದರೆ ಭಾರತ ಕೂಡ ಟಾಪ್ 5 ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ, ಭಾರತ ನಂಬರ್ 1 ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ ಎಂಬ ಮಾತುಗಳನ್ನು ಆರ್ಥಿಕ ತಜ್ಞರು ಕೂಡ ಇದೀಗ ಪ್ರತಿಪಾದನೆ ಮಾಡುತ್ತಿದ್ದಾರೆ.


Click it and Unblock the Notifications