ರಕ್ಷಣಾ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ ಭಾರತ! 1.27 ಲಕ್ಷ ಕೋಟಿ ರೂ.ಗೆ ತಲುಪಿದ ರಕ್ಷಣಾ ಉತ್ಪಾದನೆ

ಇಂಡೋ ಪೆಸಿಫಿಕ್‌ನಲ್ಲಿ ಪ್ರಮುಖ ರಾಷ್ಟ್ರವಾದ ಭಾರತ ಎರಡು ಶತ್ರುಗಳ ರಾಷ್ಟ್ರಗಳ ಜೊತೆ ಗಡಿಭಾಗವನ್ನು ಹಂಚಿಕೊಂಡಿದ್ದು, ಹಾಗಾಗಿ ರಕ್ಷಣಾ ವಿಚಾರದಲ್ಲಿ ಭಾರತವು ಹೆಚ್ಚಿನ ಶಕ್ತಿಯಾಗಿ ಹೊರಹೊಮ್ಮುವುದು ಸದ್ಯದ ಅತ್ಯಗತ್ಯವಾಗಿದೆ. ಈಗಾಗಲೇ ಪಾಕಿಸ್ತಾನ ಹಾಗೂ ಚೀನಾ ಜೊತೆ ಯುದ್ದ ನಡೆಸಿರುವ ಭಾರತವು ಸದ್ಯ ಪಾಶ್ಚಿಮಾತ್ಯ ದೇಶಗಳ ಅಚ್ಚುಮೆಚ್ಚಿನ ರಾಷ್ಟ್ರವಾಗಿದ್ದರೂ ರಕ್ಷಣಾ ಕ್ಷೇತ್ರದಲ್ಲಿ ಭಾರತವು ಇತರೆ ರಾಷ್ಟ್ರಗಳನ್ನು ಅವಲಂಬಿಸುವುದನ್ನು ಕಡಿಮೆ ಮಾಡಬೇಕಿದೆ.

ಒಂದು ಕಾಲದಲ್ಲಿ ರಕ್ಷಣಾ ವಿಚಾರದಲ್ಲಿ ಬಹುತೇಕ ಎಲ್ಲಾ ವಸ್ತುಗಳನ್ನು ಭಾರತವು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇಂದು ಸಮಯ ಬದಲಾಗಿದ್ದು, ಹೆಚ್ಚಿನ ವಸ್ತುಗಳನ್ನು ನಾವು ದೇಶದಲ್ಲೇ ತಯಾರು ಮಾಡಿಕೊಳ್ಳುತ್ತಿದ್ದೇವೆ. ಆದರೂ ರಕ್ಷಣಾ ಉಪಕರಣಗಳ ಆಮದು ವಿಚಾರದಲ್ಲಿ ಭಾರತ ಈಗಲೂ ರಶ್ಯಾದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದರೆ ತಪ್ಪಾಗಲಾರದು.

ರಕ್ಷಣಾ ಕ್ಷೇತ್ರದಲ್ಲಿ ಭಾರತದ ಹೊಸ ದಾಖಲೆ!

ಇನ್ನು ಸದ್ಯ ರಕ್ಷಣಾ ವಿಚಾರದಲ್ಲಿ ಭಾರತದ ನೀತಿ ಸಂಪೂರ್ಣ ಬದಲಾವಣೆ ಕಂಡಿದ್ದು, ನಮಗೆ ಬೇಕಾದ ಉತ್ಪನ್ನಗಳನ್ನು ನಾವು ದೇಶದಲ್ಲೇ ತಯಾರು ಮಾಡುವುದೇ ಅಲ್ಲದೆ ಇತರೆ ದೇಶಗಳಿಗೂ ರಫ್ತು ಮಾಡುವತ್ತ ಚಿತ್ತ ಹರಿಸಿದ್ದೇವೆ. ಇದೇ ಕಾರಣಕ್ಕೆ ದೇಶದಲ್ಲಿ ರಕ್ಷಣಾ ಉಪಕರಣಗಳಿಗೆ ಸಂಬಂಧಿಸಿದ ಕೈಗಾರಿಕಾ ಕಾರಿಡಾರ್‌ಗಳು ಕೂಡ ನಿರ್ಮಾಣವಾಗುತ್ತಿದೆ.

ತಮಿಳುನಾಡು ಹಾಗೂ ಉತ್ತರ ಪ್ರದೇಶಗಳಲ್ಲಿ ಈ ಕಾರಿಡಾರ್‌ಗಳು ನಿರ್ಮಾಣವಾಗುತ್ತಿದೆ. ಅಲ್ದದೆ ಸದ್ಯ ಭಾರತವು ರಕ್ಷಣಾ ಉಪಕರಣಗಳ ವಿಚಾರದಲ್ಲಿ ನಿಧಾನವಾಗಿ ಮೇಲೇಳುತ್ತಿದ್ದು, ಮುಂದೊಂದು ದಿನ ದೊಡ್ಡ ಜಾಗತಿಕ ಶಕ್ತಿಯಾಗಿ ಗುರುತಿಸಿಕೊಳ್ಳುವ ದಿನ ದೂರವಿಲ್ಲ. ಇನ್ನು ಸದ್ಯದ ಹೊಸ ಅಂಕಿಅಂಶಗಳ ಪ್ರಕಾರ ಭಾರತವು ರಕ್ಷಣಾ ಉಪಕರಣಗಳ ರಫ್ತಿನ ವಿಚಾರದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ರಕ್ಷಣಾ ಉತ್ಪಾದನೆಯಲ್ಲಿ ಭಾರತ ಹೊಸ ದಾಖಲೆ

2023-24ರಲ್ಲಿ ಭಾರತದ ರಕ್ಷಣಾ ಉತ್ಪಾದನೆಯು ದಾಖಲೆಯ ಗರಿಷ್ಠ 1.27 ಲಕ್ಷ ಕೋಟಿ ರೂ.ಗೆ ತಲುಪಿದೆ. ಸದ್ಯ ಭಾರತ ದೇಶವು 90 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಮಿಲಿಟರಿ ಯಂತ್ರಾಂಶವನ್ನು ರಫ್ತು ಮಾಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಎನ್‌ಡಿಎ ಸರ್ಕಾರದ ಅಡಿಯಲ್ಲಿ 'ಮೇಕ್ ಇನ್ ಇಂಡಿಯಾ' ಭಾರತವು ರಕ್ಷಣಾ ಉಪಕರಣಗಳ ರಫ್ತನ್ನು ಹೆಚ್ಚಿಸುವ ಇರಾದೆ ಹೊಂದಿದೆ. ಒಂದು ಕಾಲದಲ್ಲಿ ಸಣ್ಣಪುಟ್ಟ ರಕ್ಷಣಾ ಉಪಪಕರಣಗಳಿಗೂ ವಿದೇಶಗಳತ್ತ ನೋಡುತ್ತಿದ್ದ ಭಾರತ ಇಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.

ಯಾವೆಲ್ಲಾ ರಾಷ್ಟ್ರಗಳಿಗೆ ರಫ್ತು?

ಅಮೆರಿಕ, ಫ್ರಾನ್ಸ್ ಮತ್ತು ಅರ್ಮೇನಿಯಾ, ಭಾರತದಿಂದ ಅತಿಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳಾಗಿವೆ. 2023-24ನೇ ಹಣಕಾಸು ವರ್ಷದಲ್ಲಿ ಭಾರತ ಒಟ್ಟು 21,083 ಕೋಟಿ ರೂಪಾಯಿ ಮೌಲ್ಯದ ಮಿಲಿಟರಿ ಸಾಧನಗಳನ್ನು ಮಾರಾಟ ಮಾಡಿದೆ ಎಂದು ಉನ್ನತ ಮೂಲಗಳು ಹೇಳಿವೆ. ಶಸ್ತ್ರಾಸ್ತ್ರಗಳನ್ನು ಇತರ ದೇಶಗಳಿಗೆ ರಫ್ತು ಮಾಡಲು ಆರಂಭಿಸಿರುವ ಭಾರತದ ಅಗ್ರಗಣ್ಯ ಗ್ರಾಹಕನಾಗಿ ಅರ್ಮೇನಿಯಾ ರೂಪುಗೊಂಡಿದೆ.

ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ, ಪಿನಾಕಾ ಬಹು ಉಡಾವಣೆ ರಾಕೆಟ್ ವ್ಯವಸ್ಥೆ ಮತ್ತು 155 ಎಂಎಂ ಆರ್ಟಿಲರಿ ಗನ್ ನಂಥ ಅಸ್ತ್ರಗಳನ್ನು ಅರ್ಮೇನಿಯಾ ಖರೀದಿಸುತ್ತಿದೆ. ಹಿಂದಿನ ಸೋವಿಯತ್ ಒಕ್ಕೂಟದ ದೇಶವಾಗಿರುವ ಅರ್ಮೇನಿಯಾ, ಭಾರತದಿಂದ ಕ್ಷಿಪಣಿಗಳು, ಆರ್ಟಿಲರಿ ಗನ್, ರಾಕೆಟ್ ಸಿಸ್ಟಂಗಳು, ಶಸ್ತ್ರಾಸ್ತ್ರ ಪತ್ತೆ ರಾಡಾರ್ ಗಳು, ಗುಂಡುನಿರೋಧಕ ಜಾಕೆಟ್ ಗಳು, ರಾತ್ರಿ-ದೃಷ್ಟಿ ಸಾಧನಗಳು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಕಳೆದ ನಾಲ್ಕು ವರ್ಷಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಒಟ್ಟಾರೆಯಾಗಿ 90 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಕ್ಷಣಾ ಉಪಕರಣಗಳನ್ನು ರಫ್ತು ಮಾಡುತ್ತಿದೆ. ಮುಂದಿನ ವರ್ಷಗಳಲ್ಲಿ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯನ್ನು ರಕ್ಷಣಾ ಇಲಾಖೆ ಹೊಂದಿದೆ.

ಯಾವೆಲ್ಲಾ ಉಪಕರಣಗಳು ರಫ್ತಾಗುತ್ತಿದೆ?

ಭಾರತದ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳು ಇದೀಗ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಫ್ಯೂಸ್ ಗಳನ್ನು ಸುಮಾರು 100 ದೇಶಗಳಿಗೆ ರಫ್ತು ಮಾಡುತ್ತಿವೆ. ಇದರಲ್ಲಿ ಸಮಗ್ರ ಶಸ್ತ್ರಾಸ್ತ್ರ ವ್ಯವಸ್ಥೆಗಳು, ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಗಳು, ಡ್ರೋನಿಯರ್-228 ವಿಮಾನ, ಆರ್ಟಿಲರಿ ಗನ್, ರಾಡಾರ್ ಗಳು, ಆಕಾಶ್ ಕ್ಷಿಪಣಿಗಳು, ಪಿನಾಕಾ ರಾಕೆಟ್ ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಸೇರಿವೆ.

ಆದರೆ ಅಮೆರಿಕಕ್ಕೆ ರಫ್ತಾಗುವ ಬಹುತೇಕ ವಸ್ತುಗಳು ಉಪ ವಿಭಾಗಗಳು ಮತ್ತು ಬಿಡಿಭಾಗಗಳು. ಜಾಗತಿಕ ರಕ್ಷಣಾ ಕಂಪನಿಗಳಾದ ಬೋಯಿಂಗ್ ಹಾಗೂ ಲಾಕ್ ಹೀಡ್ ಮಾರ್ಟಿನ್ ನಂಥ ಕಂಪನಿಗಳಿಗೆ ಫ್ಯೂಸ್ ಲೇಜ್, ರೆಕ್ಕೆಗಳು ಮತ್ತು ವಿಮಾನ ಹಾಗೂ ಹೆಲಿಕಾಪ್ಟರ್ ಗಳ ಇತರ ಭಾಗಗಳನ್ನು ಪೂರೈಸುತ್ತದೆ. ಭಾರತದ ಶಸ್ತ್ರಾಸ್ತ್ರ ರಫ್ತು ಮೌಲ್ಯ 2014-15ರಲ್ಲಿ 1941 ಕೋಟಿ ರೂಪಾಯಿ ಇದ್ದುದು 2023-24ರ ವೇಳೆಗೆ 21083 ಕೋಟಿಗೆ ಹೆಚ್ಚಿದೆ.

ವಿದೇಶಿ ಅವಲಂಬನೆ ಕಡಿಮೆಯಾಗಿದೆಯೇ?

ಇನ್ನು ಭಾರತದ ರಕ್ಷಣಾ ರಫ್ತು ಏರಿಕೆಯಾಗಿದೆ ಎಂಬ ಮಾತ್ರ ಭಾರತ ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಆತ್ಮನಿರ್ಭರ ಸಾಧಿಸಿಲ್ಲ. ಈಗಲೂ ಅತ್ಯಾಧುನಿಕ ಯುದ್ದವಿಮಾನ ಹಾಗೂ ಅದರ ಇಂಜಿನ್‌ ಗಳಿಗೆ ಭಾರತವು ಇಂದಿಗೂ ಅಮೆರಿಕಾ, ಫ್ರಾನ್ಸ್‌ ಮುಂತಾದ ದೇಶಗಳತ್ತ ಮುಖಮಾಡುವ ಪರಿಸ್ಥಿತಿ ಇದೆ. ಯುದ್ದ ವಿಮಾನಗಳ ಇಂಜಿನ್‌ ಹಾಗೂ ಅತ್ಯಾಧುನಿಕ ರಾಡಾರ್‌ ವಿಚಾರದಲ್ಲಿ ಸದ್ಯ ಭಾರತದ ಮುಂದೆ ಇರುವ ದೊಡ್ಡ ಸವಾಲಾಗಿದೆ. ಒಂದು ವೇಳೆ ಎಂಜಿನ್‌ ವಿಚಾರದಲ್ಲಿ ಭಾರತ ಮೇಲುಗೈ ಸಾಧಿಸಿದರೆ ಆಗ ಭಾರತವು ರಕ್ಷಣಾ ಉಪಕರಣಗಳ ರಫ್ತಿನ ವಿಚಾರದಲ್ಲಿ ಇತರೆ ಬಲಾಡ್ಯ ದೇಶಗಳಿಗೆ ಸವಾಲೊಡ್ಡಲಿದೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+