ಒಂದು ಆಘಾತಕರ ಸುದ್ದಿ ಇದೆ. ಇದು ಪ್ರಮುಖವಾಗಿ ಫ್ಲೈಟ್‌ನಲ್ಲಿ ಪ್ರಯಾಣಿಸುವವರು ತಿಳಿಯಲೇಬೇಕಾದ ಸುದ್ದಿ. ಅದೇನೆಂದರೆ ಭಾರತದ ವಿವಿಧ ವಿಮಾನ ನಿಲ್ದಾಣಗಳಿಗೆ ಭಯೋತ್ಪಾದಕ, ಸಂಘಟೆಗಳಿಂದ ಅಪಾಯವಾಗುವ ಸಾಧ್ಯತೆ ಇದೆ ಎಂದು, ಗುಪ್ತಚರ ಮಾಹಿತಿ ತಿಳಿದು ಬಂದಿದೆ. ಹೋಗಾಗಿ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಈ ಎಲ್ಲಾ ವಿಮಾನ ನಿಲ್ದಾಣಗಳನ್ನು, ಬಿಗಿಗೊಳಿಸಲು ತ್ವರಿತ ಸೂಚನೆ ನೀಡಿದೆ.

ಹೌದು, ಈ ಸೂಚನೆ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2, 2025 ರವರೆಗೆ ಪರಿಣಾಮಕಾರಿ ಆಗಿರಲಿದೆ. BCAS ನೀಡಿದ ಎಚ್ಚರಿಕೆ ಪ್ರಕಾರ, ಕೆಲವು ಸಮಾಜ ವಿರೋಧಿ ಅಂಶಗಳು ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಿಂದ ವಿಮಾನ ನಿಲ್ದಾಣಗಳಿಗೆ ಭದ್ರತಾ ಅಪಾಯವಿದೆ ಎಂಬ ಮಹತ್ವದ ಮಾಹಿತಿ ಕೇಂದ್ರ ಭದ್ರತಾ ಸಂಸ್ಥೆಗಳಿಂದ ಲಭಿಸಿದೆ. ಈ ಹಿನ್ನೆಲೆಯಲ್ಲಿ, ದೇಶದ ಎಲ್ಲ ನಾಗರಿಕ ವಿಮಾನಯಾನ ಸೌಲಭ್ಯಗಳಲ್ಲಿ, ಅಂದರೆ ವಿಮಾನ ನಿಲ್ದಾಣಗಳು, ಏರ್‌ಸ್ಟ್ರಿಪ್‌ಗಳು, ಏರ್‌ಫೀಲ್ಡ್‌ಗಳು, ಹೆಲಿಪ್ಯಾಡ್‌ಗಳಲ್ಲಿ ಬಿಗಿಯಾದ ಭದ್ರತಾ ಕ್ರಮಗಳನ್ನು ಜಾರಿಗೆ ತರಲು ಸೂಚಿಸಲಾಗಿದೆ.
BCAS ಈ ಸಂಧರ್ಭದಲ್ಲಿ ಸ್ಥಳೀಯ ಪೊಲೀಸ್ ಇಲಾಖೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ಗುಪ್ತಚರ ಬ್ಯೂರೋ (IB) ಹಾಗೂ ಇತರ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಿದೆ. ಯಾವುದೇ ಅಪಾಯದ ಶಂಕೆ ಅಥವಾ ಗುಪ್ತಚರ ಮಾಹಿತಿ ಲಭಿಸಿದ ಕ್ಷಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ವರದಿ ಮಾಡುವುದಾಗಿ ನಿರ್ದೇಶಿಸಲಾಗಿದೆ.
ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ, ಗುತ್ತಿಗೆದಾರರು, ಮತ್ತು ಭೇಟಿ ನೀಡುವವರಿಗೆ ಕಡ್ಡಾಯವಾಗಿ ಗುರುತಿನ ಚೀಟಿ ಪರಿಶೀಲನೆ ನಡೆಯಬೇಕು. ಎಲ್ಲಾ ಸಿಸಿಟಿವಿ ಕ್ಯಾಮೆರಾಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಬೇಕು ಮತ್ತು ನಿರಂತರವಾಗಿ ಮೇಲ್ವಿಚಾರಣೆ ನಡೆಯಬೇಕು.
ಈ ಎಚ್ಚರಿಕೆಯನ್ನು ರಾಜ್ಯ ಪೊಲೀಸರು, ವಿಮಾನ ನಿಲ್ದಾಣ ವ್ಯವಸ್ಥಾಪಕರು ಮತ್ತು ಎಲ್ಲಾ ವಿಮಾನಯಾನ ಸಂಸ್ಥೆಗಳ ಪಾಲುದಾರರಿಗೆ ನೀಡಲಾಗಿದೆ. ಭದ್ರತಾ ಲೋಪದಿಂದ ಉಂಟಾಗಬಹುದಾದ ಅಪಾಯಗಳನ್ನು ತಡೆಯುವುದು ಮತ್ತು ಸಾರ್ವಜನಿಕ ಭದ್ರತೆ ಕಾಪಾಡುವುದು ಮುಖ್ಯ ಉದ್ದೇಶವಾಗಿದೆ.
ಇದಕ್ಕಿಂತ ಮುಂಚಿತವಾಗಿ, ಈ ವರ್ಷ 2025ರ ಜುಲೈ 20ರವರೆಗೆ 69 ಹುಸಿ ಬಾಂಬ್ ಬೆದರಿಕೆಗಳು ವಿಮಾನಯಾನ ಸಂಸ್ಥೆಗಳಿಗೆ ಲಭಿಸಿದ್ದು, ಈ ಅಂಕಿಅಂಶವು ಆತಂಕ ಮೂಡಿಸಿದೆ. ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದಾಗ ಈ ಮಾಹಿತಿಯನ್ನು ಹಂಚಿಕೊಂಡರು.
2024 ರಲ್ಲಿ ಮಾತ್ರವೇ 728 ಹುಸಿ ಬಾಂಬ್ ಬೆದರಿಕೆಗಳು ಲಭಿಸಿದ್ದು, 2023 ರಲ್ಲಿ 71 ಹಾಗೂ 2022 ರಲ್ಲಿ 13 ಬೆದರಿಕೆಗಳು ಬಂದಿವೆ. ಈ ಅಂಕಿಅಂಶಗಳಿಂದಾಗಿ ವಿಮಾನಯಾನ ಕ್ಷೇತ್ರದಲ್ಲಿ ಭದ್ರತೆಯ ಮಹತ್ವ ಮತ್ತಷ್ಟು ಹೆಚ್ಚಾಗಿದೆ.
BCAS ಈಗಾಗಲೇ ಇಂತಹ ಬೆದರಿಕೆಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಸಾರ್ವಜನಿಕರ ಆತಂಕ ತಗ್ಗಿಸಲು ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳನ್ನು ರೂಪಿಸಿದೆ. ಈ ಪ್ರೋಟೋಕಾಲ್‌ಗಳನ್ನು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪಾಲನೆ ಮಾಡಲಾಗುತ್ತಿದ್ದು, ವಿಮಾನಗಳ ಕಾರ್ಯಾಚರಣೆಗೆ ಕನಿಷ್ಠ ಅಡ್ಡಿಯೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ.
ಈ ಭದ್ರತಾ ಎಚ್ಚರಿಕೆಯಿಂದಾಗಿ ಪ್ರವಾಸಿಗರು ಮತ್ತು ವಿಮಾನ ನಿಲ್ದಾಣ ಸಿಬ್ಬಂದಿಯೆಲ್ಲರೂ ಎಚ್ಚರಿಕೆಯಿಂದಿರಬೇಕು. ಯಾವುದೇ ಶಂಕಾಸ್ಪದ ಚಟುವಟಿಕೆಯನ್ನು ಕೂಡಲೇ ಅಧಿಕಾರಿಗಳಿಗೆ ವರದಿ ಮಾಡುವುದು ಅಗತ್ಯ. ಭದ್ರತೆಗಾಗಿ ನಡೆಯುವ ಪರಿಶೀಲನೆಗೆ ಸಹಕಾರ ನೀಡುವುದು, ಸುರಕ್ಷಿತ ಮತ್ತು ಸ್ಥಿರ ವಿಮಾನಯಾನ ಸೇವೆಗಾಗಿ ಎಲ್ಲರ ಜವಾಬ್ದಾರಿಯಾಗಿದೆ.


Click it and Unblock the Notifications