2023ರಲ್ಲಿ ಭಾರತ ಮತ್ತು ಚೀನಾವು ಜಾಗತಿಕ ಆರ್ಥಿಕ ಬೆಳವಣಿಗೆಗೆ ಸುಮಾರು ಅರ್ಧ ಭಾಗದಷ್ಟು ಕೊಡುಗೆಯನ್ನು ನೀಡಲಿದೆ ಎಂದು ಮಂಗಳವಾರ ಚೀನಾದ ಟಾಪ್ ಥಿಂಕ್ ಟ್ಯಾಂಕ್ ಹೇಳಿದೆ. ಏಷ್ಯಾವು ಜಾಗತಿಕವಾಗಿ ಅತೀ ಮುಖ್ಯ ಪಾತ್ರವನ್ನು ವಹಿಸಲಿದೆ. ಜಿಡಿಪಿ ವಿಸ್ತರಣೆ ಶೇಕಡ 4.5ರಷ್ಟು ಆಗಿರಲಿದೆ. ಜಾಗತಿಕ ಆರ್ಥಿಕ ಮಂದಗತಿಯಲ್ಲಿ ಸಾಗುವಾಗಲೂ ಭಾರತ ಮತ್ತು ಚೀನಾದ ಕೊಡುಗೆ ಪ್ರಮುಖವಾಗಲಿದೆ ಎಂದು ಹೇಳಿದೆ. ಬೆಜಿಂಗ್‌ನ ಪ್ರಮುಖ ಅಧಿಕೃತ ಥಿಂಕ್ ಟ್ಯಾಂಕ್ ಆದ ದಿ ಬಾವೊ ಫಾರಮ್ ಫಾರ್ ಏಷ್ಯಾ (ಬಿಎಫ್‌ಎ) ಈ ಬಗ್ಗೆ ವಿವರಣೆ ನೀಡಿದೆ.
ಏಷ್ಯಾದ ಆರ್ಥಿಕತೆಯು 2023ರ ಸಂಪೂರ್ಣ ಜಾಗತಿಕ ಆರ್ಥಿಕತೆ ಚೇತರಿಕೆಗೆ ವೇಗವನ್ನು ನೀಡುತ್ತದೆ. ಜಾಗತಿಕವಾಗಿ ಆರ್ಥಿಕ ಕುಸಿತ ಇರುವಾಗ ಏಷ್ಯಾವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಬಿಎಫ್‌ಎ ಹೇಳಿದೆ. ಮಂಗಳವಾರ ಥಿಂಕ್ ಟ್ಯಾಂಕ್ (ಚಿಂತಕರ ಚಾವಡಿ) ಚೀನಾದ ಹೈನಾನ್ ಪ್ರಾಂತ್ಯದ ಬೋವೊ ಗ್ರಾಮದಲ್ಲಿ ತನ್ನ ನಾಲ್ಕು ದಿನಗಳ ವಾರ್ಷಿಕ ಅಧಿವೇಶನವನ್ನು ಆರಂಭಿಸಿದೆ. ಈ ಸಂದರ್ಭದಲ್ಲಿ ವರದಿಯನ್ನು ಬಿಡುಗಡೆ ಮಾಡಿದೆ.

"ಏಷ್ಯನ್ ಎಕನಾಮಿಕ್ ಔಟ್‌ಲುಕ್ ಆಂಡ್ ಇಂಟಿಗ್ರೇಷನ್ ಪ್ರೋಗ್ರೆಸ್" (Asian Economic Outlook and Integration Progress) ಎಂಬ ಶೀರ್ಷಿಕೆಯ ವರದಿಯಲ್ಲಿ ಈ ವಿಚಾರಗಳನ್ನು ಉಲ್ಲೇಖ ಮಾಡಲಾಗಿದೆ. ಈ ಸಂಸ್ಥೆಯು 2023ರಲ್ಲಿ ಏಷ್ಯಾದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಶೇಕಡ 4.5 ಎಂದು ಅಂದಾಜು ಮಾಡಿದೆ. 2022ರ ಜಿಡಿಪಿ 4.2ಕ್ಕಿಂತ ಅಧಿಕ ಜಿಡಿಪಿಯನ್ನು ಅಂದಾಜು ಮಾಡಲಾಗಿದೆ. "ಈ ವರ್ಷ ವಿಶ್ವದ ಅರ್ಧದಷ್ಟು ಬೆಳವಣಿಗೆಗೆ ಚೀನಾ ಮತ್ತು ಭಾರತ ಕೊಡುಗೆ ನೀಡಲಿದೆ," ಎಂದು ವರದಿಯು ಹೇಳಿದೆ.
ಇನ್ನು ವರದಿಯಲ್ಲಿ ವಾಷಿಂಗ್ಟನ್ ಮೂಲದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂಕಿಅಂಶಗಳನ್ನು ಕೂಡಾ ಉಲ್ಲೇಖ ಮಾಡಲಾಗಿದೆ. "ವಿಶ್ವದ ಆರ್ಥಿಕತೆಗೆ ಏಷ್ಯಾ ಪ್ರಮುಖ ಇಂಜಿನ್ ಆಗಲಿದೆ. ಏಷ್ಯಾದ ಆರ್ಥಿಕತೆಯು 2023 ರಲ್ಲಿ ಒಟ್ಟಾರೆ ಜಾಗತಿಕ ಆರ್ಥಿಕ ಚೇತರಿಕೆಯ ವೇಗವನ್ನು ಹೆಚ್ಚಿಸುತ್ತದೆ. ಈ ವರ್ಷ ವಿಶ್ವದ ಅರ್ಧದಷ್ಟು ಬೆಳವಣಿಗೆಗೆ ಚೀನಾ ಮತ್ತು ಭಾರತವು ಕೊಡುಗೆ ನೀಡುತ್ತದೆ ಎಂದು ಐಎಂಎಫ್ ಸೂಚಿಸುತ್ತದೆ. ಚೀನಾದ ಆರ್ಥಿಕ ಬೆಳವಣಿಗೆಯಲ್ಲಿ ಪ್ರತಿ ಶೇಕಡ 1ರಷ್ಟು ಹೆಚ್ಚಳವು ಏಷ್ಯಾದ ಉಳಿದ ಭಾಗಗಳಿಗೆ ಉತ್ಪಾದನೆಯಲ್ಲಿ ಸುಮಾರು ಶೇಕಡ 0.3 ಹೆಚ್ಚಳಕ್ಕೆ ಕಾರಣವಾಗುತ್ತದೆ," ಎಂದು ಹೇಳಿದ್ದಾರೆ.
ಇತರೆ ಏಷ್ಯಾದ ದೇಶಗಳ ಕೊಡುಗೆ ಎಷ್ಟಿರಲಿದೆ?
ಬೆಜಿಂಗ್‌ನ ಪ್ರಮುಖ ಅಧಿಕೃತ ಥಿಂಕ್ ಟ್ಯಾಂಕ್ ಆದ ದಿ ಬಾವೊ ಫಾರಮ್ ಫಾರ್ ಏಷ್ಯಾ (ಬಿಎಫ್‌ಎ) ಪ್ರಕಾರ ಏಷ್ಯಾದ ಇತರ ಪ್ರದೇಶಗಳು ಜಾಗತಿಕ ಬೆಳವಣಿಗೆಯ ಕಾಲು ಭಾಗದಷ್ಟು ಕೊಡುಗೆ ನೀಡಬಹುದು. ಇನ್ನು ಐಎಂಎಫ್ ಅಂದಾಜಿನ ಪ್ರಕಾರ 2023 ರಲ್ಲಿ ಭಾರತವು ಶೇಕಡ 6.8ರಷ್ಟು ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ. ಚೀನಾದ ಆರ್ಥಿಕತೆಯು ಶೇಕಡ 5.2ರಷ್ಟು ಬೆಳೆದು ನಂತರದ ಸ್ಥಾನದಲ್ಲಿರಲಿದೆ.
ಇನ್ನು ಮಾರ್ಚ್ 26 ರಂದು ಚೀನಾ ಡೆವಲಪ್‌ಮೆಂಟ್ ಫೋರಮ್‌ನಲ್ಲಿ ಮಾಡಿದ ಭಾಷಣದಲ್ಲಿ, ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಜಾಗತಿಕ ಆರ್ಥಿಕ ಬೆಳವಣಿಗೆಯು ಈ ವರ್ಷ ಶೇಕಡ 3ಕ್ಕಿಂತ ಕಡಿಮೆಯಾಗಬಹುದು ಎಂದು ಒತ್ತಿ ಹೇಳಿದ್ದಾರೆ. "ಕೋವಿಡ್ ಸಾಂಕ್ರಾಮಿಕ ರೋಗ, ಉಕ್ರೇನ್‌ನಲ್ಲಿನ ಯುದ್ಧ, ಇತರೆ ಆರ್ಥಿಕ ಬಿಕ್ಕಟ್ಟು ಆರ್ಥಿಕ ಚಟುವಟಿಕೆಯ ಮೇಲೆ ಪ್ರಭಾವ ಬೀರಲಿದ್ದು, ಶೇಕಡ 3ಕ್ಕಿಂತ ಕಡಿಮೆಯಾಗಲಿದೆ. ಆದ್ದರಿಂದ 2023 ಮತ್ತೊಂದು ಸವಾಲಿನ ವರ್ಷವಾಗಿದೆ ಎಂಬುವುದು ನಮ್ಮ ನಿರೀಕ್ಷೆಯಾಗಿದೆ," ಎಂದು ಜಾರ್ಜಿವಾ ಹೇಳಿದರು.


Click it and Unblock the Notifications