ಭಾರತ-ಯುರೋಪಿಯನ್ ಒಕ್ಕೂಟ (India-EU) ನಡುವಿನ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದ (Free Trade Deal Agreement) ಮಂಗಳವಾರ ಮುಕ್ತಾಯಗೊಂಡಿದೆ. ಎರಡೂ ದೇಶಗಳು ಸಹಿ ಮಾಡುವ ಮೂಲಕ ಮಹತ್ವಾಕಾಂಕ್ಷೆಯ ವ್ಯಾಪಾರ ಒಪ್ಪಂದಕ್ಕೆ ಅಡಿಪಾಯ ಹಾಕಿತು. ಇನ್ನು ಭಾರತ ಮತ್ತು ಯುರೋಪಿಯನ್ ಒಕ್ಕೂಟಗಳ ನಡುವಿನ ಒಪ್ಪಂದ ಜಾಗತಿಕವಾಗಿ ಆರ್ಥಿಕ ಸ್ಥಿರತೆಗೆ ಹೊಸ ಆಯಾಮ ತರಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಇನ್ನು ಈ ಒಪ್ಪಂದದಿಂದ ಭಾರತಕ್ಕೆ ಹಲವಾರು ಪ್ರಯೋಜನಗಳನ್ನು ನೀಡಲಿದೆ. ವಿಶೇಷವಾಗಿ ಭಾರತದಲ್ಲಿ ಐಷಾರಾಮಿ ಕಾರುಗಳು (Car), ಯುರೋಪಿಯನ್ ವೈನ್‌ಗಳು (Wines), ಔಷಧಗಳು, ಯಂತ್ರೋಪಕರಣಗಳು, ಉಕ್ಕು ಮತ್ತು ರಾಸಾಯನಿಕಗಳಂತಹ ಕಚ್ಚಾ ಸಾಮಗ್ರಿಗಳ ಬೆಲೆಗಳು ಕಡಿಮೆಯಾಗಲಿವೆ.

ಅದೇ ಸಂದರ್ಭದಲ್ಲಿ, ಭಾರತದಿಂದ ಯುರೋಪಿಯನ್ ಒಕ್ಕೂಟಕ್ಕೆ ಆಟೋಮೊಬೈಲ್‌ಗಳು, ವೈನ್‌ಗಳು, ಉಡುಪುಗಳು, ಚರ್ಮದ ಉತ್ಪನ್ನಗಳು ಮತ್ತು ಆಭರಣಗಳ ರಫ್ತಿಗೆ ದೊಡ್ಡ ಆಯಾಮ ಸಿಗಲಿದೆ. ಮಂಗಳವಾರ ನಡೆದ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಒಪ್ಪಂದದ ಬಗ್ಗೆ ಪ್ರಧಾನಮಂತ್ರಿ ಮೋದಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಈ ಒಪ್ಪಂದವು ಜಗತ್ತಿಗೆ ಮಾದರಿಯಾಗಲಿದೆ ಎಂದು ಹೇಳಿದರು.
ಸಭೆ ಬಗ್ಗೆ ಮೋದಿ ಹೇಳಿದ್ದೇನು?
"ಇದು ಕೇವಲ ವ್ಯಾಪಾರ ಒಪ್ಪಂದವಲ್ಲ, ಬದಲಿಗೆ ಎರಡು ದೇಶಗಳ ಅಭಿವೃದ್ಧಿಗಾಗಿ ತಯಾರಾದ ಹೊಸ ನೀಲನಕ್ಷೆ" ಎಂದು ಮೋದಿ ವಿವರಿಸಿದರು. ಇತಿಹಾಸದಲ್ಲೇ ಭಾರತ ಮಾಡಿಕೊಂಡ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದ ಇದಾಗಿದೆ ಎಂದು ಅವರು ಹೆಮ್ಮೆಯಿಂದ ಘೋಷಿಸಿದರು. ಈ ಒಪ್ಪಂದವು ಸೈಬರ್ ಸುರಕ್ಷತೆಯಲ್ಲಿ ಸಹಕಾರವನ್ನು ಹೆಚ್ಚಿಸಲು ಕೂಡ ಸಹಕಾರಿಯಾಗಲಿದೆ ಎಂದು ಪ್ರಧಾನಿ ಹೇಳಿದರು.
ಈ ಉತ್ಪನ್ನಗಳ ಬೆಲೆ ಇಳಿಕೆ
ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬಂದ ಬಂದರೆ ಹಲವು ಉತ್ಪನ್ನಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ಅವುಗಳೆಂದರೆ ಬಿಎಂಡಬ್ಲ್ಯು, ಮರ್ಸಿಡಿಸ್, ಲಂಬೋರ್ಘಿನಿ, ಪೋರ್ಷೆ ಮತ್ತು ಆಡಿ (Audi) ನಂತಹ ಐಷಾರಾಮಿ ಯುರೋಪಿಯನ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ಅಗ್ಗವಾಗಲಿವೆ. ಮುಂದಿನ ವರ್ಷದಿಂದ ಈ ಒಪ್ಪಂದ ಜಾರಿಗೆ ಬರುವ ನಿರೀಕ್ಷೆಯಿದ್ದು, ಭಾರತವು ಕೋಟಾ ಆಧಾರಿತ ಆಮದು ಸುಂಕ ರಿಯಾಯಿತಿಗಳನ್ನು ನೀಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಒಪ್ಪಂದದ ಪ್ರಕಾರ, 15,000 ಯುರೋ (ಸುಮಾರು ₹16 ಲಕ್ಷ) ಗಿಂತ ಹೆಚ್ಚು ಬೆಲೆಯ ಕಾರುಗಳ ಮೇಲೆ ಪ್ರಸ್ತುತ ಇರುವ 40% ಸುಂಕವನ್ನು ಹಂತ ಹಂತವಾಗಿ 10% ಕ್ಕೆ ಇಳಿಸಲಾಗುತ್ತದೆ ಎನ್ನಲಾಗಿದೆ. ಇದರಿಂದ ಈ ಕಾರುಗಳ ಬೆಲೆ ಲಕ್ಷಗಳಲ್ಲಿ ಇಳಿಕೆಯಾಗಲಿದೆ. ಭಾರತೀಯ ಆಟೋ ಉದ್ಯಮದ ತ್ವರಿತ ಬೆಳವಣಿಗೆಯನ್ನು ರಕ್ಷಿಸಲು "ಕೋಟಾ" ಆಧಾರಿತ ಸುಂಕ ರಿಯಾಯಿತಿಗಳನ್ನು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಯುರೋಪಿಯನ್ ಒಕ್ಕೂಟವು ಭಾರತೀಯ ಆಟೋಮೊಬೈಲ್‌ಗಳ ಮೇಲಿನ ಸುಂಕವನ್ನು ಹಂತ ಹಂತವಾಗಿ ತೆಗೆದುಹಾಕಿದರೆ, ಭಾರತವು ನಿರ್ದಿಷ್ಟ ಸಂಖ್ಯೆಯ ವಾಹನಗಳಿಗೆ ಶೇಕಡಾ 10% ರಷ್ಟು ಸುಂಕ ಇಳಿಕೆ ಮಾಡಲಿದೆ. ಭಾರತದಲ್ಲಿ ಈಗಾಗಲೇ ₹3.8 ಕೋಟಿಗೂ ಹೆಚ್ಚು ಬೆಲೆಗೆ ಕಾರುಗಳನ್ನು ಮಾರಾಟ ಮಾಡುವ ಇಟಾಲಿಯನ್ ಕಾರು ತಯಾರಕ ಲಂಬೋರ್ಘಿನಿ ತನ್ನೆಲ್ಲಾ ಮಾದರಿಗಳನ್ನು ಆಮದು ಮಾಡಿಕೊಳ್ಳುತ್ತದೆ. ಈ ಒಪ್ಪಂದವು ಕಂಪನಿಗೆ ಬಹಳ ಪ್ರಯೋಜನಕಾರಿಯಾಗಲಿದೆ.
ಯುರೋಪಿಯನ್ ವೈನ್‌ಗಳು ಅಗ್ಗ!
ಯುರೋಪಿಯನ್ ವೈನ್‌ಗಳ ಮೇಲಿನ ಆಮದು ಸುಂಕದಲ್ಲಿ ರಿಯಾಯಿತಿ ನೀಡುವ ಮೂಲಕ ಅವುಗಳು ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗವಾಗಲಿವೆ. ಈ ಒಪ್ಪಂದದ ಅಡಿಯಲ್ಲಿ, ದುಬಾರಿ ಯುರೋಪಿಯನ್ ವೈನ್‌ಗಳ ಮೇಲಿನ 150% ಸುಂಕವು 20% ಕ್ಕೆ ಇಳಿಯುತ್ತದೆ. ಆದರೆ, 2.5 ಯುರೋಗಳಿಗಿಂತ ಕಡಿಮೆ ಬೆಲೆಯ ವೈನ್‌ಗಳಿಗೆ ಯಾವುದೇ ಸುಂಕ ರಿಯಾಯಿತಿ ಇರುವುದಿಲ್ಲ. ಭಾರತೀಯ ವೈನ್‌ಗಳಿಗೂ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಲ್ಲಿ ಸುಂಕ ರಿಯಾಯಿತಿಗಳು ದೊರೆಯಲಿವೆ.
ಭಾರತೀಯ ವೈನ್‌ಗಳಿಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ಸಿಗಲಿದೆ. ಯುರೋಪಿಯನ್ ಒಕ್ಕೂಟವು ಭಾರತೀಯ ವೈನ್ ಮೇಲಿನ ಸುಂಕಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ. "ಆಟೋಮೊಬೈಲ್‌ನಂತೆಯೇ, ವೈನ್ ಕೂಡ ಭಾರತೀಯ ಉದ್ಯಮಕ್ಕೆ ದೊಡ್ಡ ರಫ್ತು ಉತ್ಪನ್ನಗಳಲ್ಲಿ ಒಂದಾಗಿದೆ. ಆದ್ದರಿಂದ, ಯುರೋಪಿಯನ್ ಒಕ್ಕೂಟಕ್ಕೆ ಇದರಿಂದ ಭಾರೀ ಲಾಭ ಸಿಗಲಿದೆ.
2024-25ರಲ್ಲಿ, ಭಾರತದಿಂದ ಯುರೋಪಿಯನ್ ಒಕ್ಕೂಟಕ್ಕೆ ವೈನ್‌ಗಳ ರಫ್ತು 1.4 ಮಿಲಿಯನ್ ಡಾಲರ್ ಆಗಿದ್ದರೆ, ಬ್ಲೆಂಡೆಡ್ ವಿಸ್ಕಿ, ವೋಡ್ಕಾ, ಬ್ರಾಂಡಿ ಮತ್ತು ಮದ್ಯಗಳ ರಫ್ತು 24.5 ಮಿಲಿಯನ್ ಡಾಲರ್ ಆಗಿತ್ತು. ಅದೇ ಅವಧಿಯಲ್ಲಿ ವೈನ್‌ಗಳ ಆಮದು 7.9 ಮಿಲಿಯನ್ ಡಾಲರ್ ಆಗಿದ್ದರೆ, ಬ್ಲೆಂಡೆಡ್ ವಿಸ್ಕಿ, ಬ್ರಾಂಡಿ, ಜಿನ್ ಟಕಿಲಾ, ವೋಡ್ಕಾ ಮತ್ತು ಮದ್ಯಗಳ ಆಮದು 87.8 ಮಿಲಿಯನ್ ಡಾಲರ್ ಆಗಿತ್ತು.
ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ
ಈ ಒಪ್ಪಂದದಿಂದ ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಬಳಸುವ ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳು ಭಾರತದಲ್ಲಿ ಅಗ್ಗವಾಗಲಿವೆ. ಇದರ ಜೊತೆಗೆ, ಭಾರತದಲ್ಲಿ ತಯಾರಿಸಿದ ಔಷಧಗಳು 27 ಯುರೋಪಿಯನ್ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ. ವಿಮಾನಗಳ ಬಿಡಿಭಾಗಗಳು, ಮೊಬೈಲ್ ಫೋನ್‌ಗಳು ಮತ್ತು ಯುರೋಪ್‌ನಿಂದ ಆಮದು ಮಾಡಿಕೊಳ್ಳುವ ಉನ್ನತ ತಂತ್ರಜ್ಞಾನದ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಸುಂಕಗಳನ್ನು ತೆಗೆದುಹಾಕುವುದರಿಂದ ಭಾರತದಲ್ಲಿ ಈ ಗ್ಯಾಜೆಟ್‌ಗಳ ಉತ್ಪಾದನಾ ವೆಚ್ಚ ಕಡಿಮೆಯಾಗಿ ಅವುಗಳು ಕೂಡಾ ಕಡಿಮೆ ಬೆಲೆಗೆ ಸಿಗಲಿದೆ.


Click it and Unblock the Notifications