ಭಾರತ ಮತ್ತು ಫ್ರಾನ್ಸ್ (India-France) ನಡುವಿನ ರಕ್ಷಣಾ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮಹತ್ವದ ಕ್ರಮವೊಂದು ತೆಗೆದುಕೊಳ್ಳಲಾಗುತ್ತಿದೆ. ಈ ಹಿನ್ನೆಲೆ ಫೆಬ್ರವರಿ 17 ರಂದು ಬೆಂಗಳೂರಿನಲ್ಲಿ ಭಾರತ-ಫ್ರಾನ್ಸ್ ನಡುವಿನ 6ನೇ ವಾರ್ಷಿಕ ರಕ್ಷಣಾ ಸಂವಾದ (6th India-France Annual Defence Dialogue) ನಡೆಯಲಿದೆ. ಇನ್ನು ಈ ದ್ವಿಪಕ್ಷೀಯ ಸಭೆಯಲ್ಲಿ ಉಭಯ ರಾಷ್ಟ್ರಗಳು ತಮ್ಮ 10 ವರ್ಷಗಳ ರಕ್ಷಣಾ ಸಹಕಾರ ಒಪ್ಪಂದಕ್ಕೆ ಹೊಸ ರೂಪ ನೀಡಲಿದೆ ಎಂದು ವರದಿಯಾಗಿದೆ.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫೆಬ್ರವರಿ 17 ರಂದು ಬೆಂಗಳೂರಿನಲ್ಲಿ ತಮ್ಮ ಫ್ರೆಂಚ್ ಸಹವರ್ತಿ ಕ್ಯಾಥರೀನ್ ವಾಟ್ರಿನ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ದ್ವಿಪಕ್ಷೀಯ ಸಂವಾದವು ಉಭಯ ರಾಷ್ಟ್ರಗಳ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವಂತಹ ಪ್ರಮುಖ ಫಲಿತಾಂಶಗಳಿಗೆ ಕಾರಣವಾಗುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸಭೆಯ ನಿರೀಕ್ಷೆಗಳು
ಈ ಸಭೆಯಲ್ಲಿ, ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರ ಒಪ್ಪಂದವನ್ನು ಮುಂದಿನ 10 ವರ್ಷಗಳ ಅವಧಿಗೆ ನವೀಕರಿಸುವ ಸಾಧ್ಯತೆಯಿದೆ. ಜೊತೆಗೆ, "ಹ್ಯಾಮರ್ ಕ್ಷಿಪಣಿಗಳ" ತಯಾರಿಕೆಗಾಗಿ ಜಂಟಿ ಉದ್ಯಮಕ್ಕೆ ಸಂಬಂಧಿಸಿದ ತಿಳುವಳಿಕೆ ಒಪ್ಪಂದಕ್ಕೆ (MoU) ಸಹ ಸಹಿ ಹಾಕುವ ನಿರೀಕ್ಷೆಯಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ. ಇನ್ನು ಎರಡೂ ದೇಶಗಳ ಸಚಿವರ ಒಪ್ಪಂದದ ನಂತರವೇ ಈ ಮಹತ್ವದ ನಿರ್ಧಾರವಾಗಲಿದೆ. ಇದು ರಫೇಲ್ ಯುದ್ಧ ವಿಮಾನಗಳಿಗೆ ಬಳಸುವ ಮಿಸೈಲ್‌ಗಳಾಗಿದ್ದು, ಈ ಮೂಲಕ ಭಾರತದಲ್ಲಿ ಸ್ಥಳೀಯ ಉತ್ಪಾದನೆಗೆ ಮಹತ್ವದ ಹೆಜ್ಜೆಯಾಗಲಿದೆ.
ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, "ಕರ್ನಾಟಕದ ಕೋಲಾರ ತಾಲೂಕಿನ ವೇಮಗಲ್‌ನಲ್ಲಿರುವ ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಮತ್ತು ಏರ್‌ಬಸ್ ಒಗ್ಗೂಡಿ ಆರಂಭಿಸಿರುವ H125 ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಅಸೆಂಬ್ಲಿ ಘಟಕದ ವರ್ಚುವಲ್ ಉದ್ಘಾಟನೆಗೆ ಇಬ್ಬರೂ ಸಚಿವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಭಾಗವಹಿಸುವ ನಿರೀಕ್ಷೆಯಿದೆ."
ಮೋದಿ-ಫ್ರಾನ್ಸ್ ಅಧ್ಯಕ್ಷ ಭೇಟಿ
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಈಗಾಗಲೇ ಭಾರತ ಪ್ರವಾಸ ಕೈಗೊಂಡಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂಬೈನಲ್ಲಿ ಭೇಟಿಯಾಗಲಿದ್ದಾರೆ. ನಂತರ, ಅವರು ನವದೆಹಲಿಗೆ ತೆರಳಿ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಭಾಗವಹಿಸಲಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್‌ನ ಸಶಸ್ತ್ರ ಪಡೆಗಳು ಹಾಗೂ ಮಾಜಿ ಸೈನಿಕರ ವ್ಯವಹಾರಗಳ ಸಚಿವೆ ಕ್ಯಾಥರೀನ್ ವಾಟ್ರಿನ್ ಅವರು ಫೆಬ್ರವರಿ 17 ರಂದು ಬೆಂಗಳೂರಿನಲ್ಲಿ ನಡೆಯುವ ಆರನೇ ಭಾರತ-ಫ್ರಾನ್ಸ್ ವಾರ್ಷಿಕ ರಕ್ಷಣಾ ಸಂವಾದದ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಚಿವಾಲಯ ಹೇಳಿದೆ. ಕೈಗಾರಿಕಾ ವಲಯವನ್ನು ವಿಸ್ತರಿಸುವತ್ತ ಗಮನ ಹರಿಸಿ, ಈ ಸಭೆಯು ದ್ವಿಪಕ್ಷೀಯ ರಕ್ಷಣಾ ಸಹಕಾರದ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆ ಮತ್ತು ಫ್ರಾನ್ಸ್ ಭೂ ಸೇನಾ ಘಟಕಗಳ ನಡುವೆ ಅಧಿಕಾರಿಗಳ ಪರಸ್ಪರ ನಿಯೋಜನೆ ಕುರಿತ ಪ್ರಕಟಣೆಯೂ ಹೊರಬೀಳುವ ನಿರೀಕ್ಷೆಯಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಸಾಂಪ್ರದಾಯಿಕವಾಗಿ, ರಕ್ಷಣೆ ಉಭಯ ದೇಶಗಳ ಸಂಬಂಧದ ಪ್ರಮುಖ ಆಧಾರವಾಗಿ ಈ ಸಭೆಯಲ್ಲಿ ಪ್ರತಿಬಿಂಬಿಸಲಿದೆ.
ಭಾರತಕ್ಕೆ ಫ್ರಾನ್ಸ್ ಅಧ್ಯಕ್ಷರ ಆಗಮನ
ಇನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಫೆಬ್ರವರಿ 17 ರಿಂದ 19 ರವರೆಗೆ ಭಾರತಕ್ಕೆ 3 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಇದು ಎರಡು ದೇಶಗಳ ನಡುವೆ ರಕ್ಷಣಾ, ತಂತ್ರಜ್ಞಾನ ಮತ್ತು ಕೈಗಾರಿಕ ವಲಯಗಳ ಅಭಿವೃದ್ಧಿಗೆ ಹೊಸ ಆಯಾಮ ತರುವ ನಿರೀಕ್ಷೆಯಿದೆ.


Click it and Unblock the Notifications