ನವದೆಹಲಿ, ಜೂನ್ 11: ಕೊರೊನಾವೈರಸ್ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಸದ್ಯ ಭಾರತದ ಆರ್ಥಿಕ ಪರಿಸ್ಥಿತಿ ಪತಾಳಕ್ಕೆ ಕುಸಿಯುತ್ತಿದೆ. ಇದೇ ಹೊತ್ತಿನಲ್ಲೇ ಒಂದು ಆಶಾದಾಯಕ ವರದಿ ಬಂದಿದೆ.
ರೇಟಿಂಗ್ ಏಜೆನ್ಸಿಯಾದ ಫಿಚ್, (Fitch rating Agency) ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ಗಮನಾರ್ಹ ಸುಧಾರಣೆ ಕಾಣಲಿದೆ ಎಂದು ಭವಿಷ್ಯ ನುಡಿದಿದೆ. ಒಟ್ಟು ದೇಶಿಉಯ ಉತ್ಪನ್ನದ (ಜಿಡಿಪಿ) ದರ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಾಣಲಿದೆ ಎಂದಿದೆ.
ಶೇ 9.5 ರ ದರದಲ್ಲಿ ಭಾರತದ ಜಿಡಿಪಿ ಮುಂದಿನ ವರ್ಷ ಚೇತರಿಕೆ ಕಾಣಲಿದೆ ಎಂದು ರೇಟಿಂಗ್ ಏಜೆನ್ಸಿ ಫಿಚ್ ಹೇಳಿದೆ. ಈ ರೀತಿ ಆಗಬೇಕಾದರೆ ಭಾರತ ಸದ್ಯ ಎದ್ದಿರುವ ಆರ್ಥಿಕ ಕುಸಿತವನ್ನು ವ್ಯಾಪಕವಾಗಿ ತಡೆಗಟ್ಟಬೇಕು. ಅಂದಾಗ ಮಾತ್ರ ಜಿಡಿಪಿ ದರ ಹೆಚ್ಚಳವಾಗುತ್ತದೆ ಎಂದು ಫಿಚ್ ಹೇಳಿದೆ.
ಆಶಾವಾದ ಮೂಡಿಸಿದೆ
ಕಳೆದ ಮೂರು ತಿಂಗಳ ಲಾಕ್‌ಡೌನ್ ತರುವಾಯ ಭಾರತದಲ್ಲಿ ನಿಧಾನಗತಿಯಲ್ಲಿ ಆರ್ಥಿಕ ಚಟುವಟಿಕೆಗಳು ಪುನಾರಂಭವಾಗಿರುವುದು ಆಶಾವಾದ ಮೂಡಿಸಿದೆ. ಜಿಡಿಪಿಯ ಶೇ 20 ರ ಮೊತ್ತದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಿದೆ. ಇದು ಮುಂದಿನ ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಭಾರತದ ಜಿಡಿಪಿ ಏರಲು ಕಾರಣವಾಗಲಿದೆ ಎಂದು ಫಿಚ್ ರೇಟಿಂಗ್ ಏಜೆನ್ಸಿ ಹೇಳಿದೆ.
ಭಾರತದ ವಿತ್ತೀಯ ಕೊರತೆ ಹಾಗೂ ಸಾಲದ ಹೊರೆ ಹೆಚ್ಚೇ ಇದೆ
ಪ್ಯಾಕೇಜ್ ಪರಿಣಾಮವಾಗಿ ಭಾರತದ ಜಿಡಿಪಿ ದರ ಏರಬಹುದು. ಆದರೆ, ಭಾರತದ ವಿತ್ತೀಯ ಕೊರತೆ ಹಾಗೂ ಸಾಲದ ಹೊರೆ ಹೆಚ್ಚೇ ಇದೆ. ಇವೆರಡನ್ನೂ ಕಡಿಮೆಗೊಳಿಸಿಕೊಳ್ಳಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ. ಈ ಹಂತದಲ್ಲೇ ಅವರ ಸರ್ಕಾರ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಅಪಾರ ನಷ್ಟ ಅನುಭವಿಸಿದೆ. 20 ಲಕ್ಷ ಕೋಟಿ ರು ಪ್ಯಾಕೇಜ್ ಜಾಣ ನಡೆ ಎಂದು ಫಿಚ್ ರೇಟಿಂಗ್ ಏಜೆನ್ಸಿ ಹೇಳಿದೆ ಹೇಳಿದೆ.
ಎಸ್ ಆಂಡ್ ಪಿ ರೇಟಿಂಗ್ ಏಜೆನ್ಸಿ
ಎಸ್ ಆಂಡ್ ಪಿ ರೇಟಿಂಗ್ ಏಜೆನ್ಸಿ ಕೂಡ 2020-21 ರಲ್ಲಿ ಭಾರತ ಹೆಚ್ಚಿನ ಮಟ್ಟದಲ್ಲಿ ಆರ್ಥಿಕ ಅಭಿವೃದ್ದಿ ಸಾಧಿಸಲಿದೆ. 20 ಲಕ್ಷ ಕೋಟಿ ರು ಪ್ಯಾಕೇಜ್ ಇದಕ್ಕೆ ವರದಾನವಾಗಲಿದೆ ಎಂದಿದೆ.
ಆಶ್ಚರ್ಯ ಮೂಡಿಸಿದೆ
ಒಟ್ಟಿನಲ್ಲಿ ಕೆಲ ಆರ್ಥಿಕ ತಜ್ಞರು ಲಾಕ್‌ಡೌನ್ ಪರಿಣಾಮವನ್ನು ಭಾರತ ಎದುರಿಸುವಲ್ಲಿ ಧೀರ್ಘಾವಧಿ ಬೇಕು ಎನ್ನುತ್ತಿದ್ದರೆ, ಕೆಲ ರೇಟಿಂಗ್ ಏಜನ್ಸಿಗಳು 20 ಲಕ್ಷ ಕೋಟಿ ರು ಪ್ಯಾಕೇಜ್ ನ್ನೇ ಆಧಾರವಾಗಿಟ್ಟುಕೊಂಡು ಜಿಡಿಪಿ ದರ ಭಾರೀ ಏರಿಕೆ ಕಾಣಲಿದೆ ಎಂದು ಹೇಳಿರುವುದು ಆಶ್ಚರ್ಯ ಮೂಡಿಸಿದೆ


Click it and Unblock the Notifications