ವಾಷಿಂಗ್ಟನ್, ಏಪ್ರಿಲ್ 19: ಭಾರತ ಬಲಿಷ್ಠ ದೇಶವಾಗಿ ಅಭಿವೃದ್ಧಿ ಹೊಂದುತ್ತಿರುವ ಕಾರಣಕ್ಕೆ, ಜಾಗತಿಕ ಮಟ್ಟದಲ್ಲಿ ಕೂಡ ದೊಡ್ಡ ಹೆಸರು ಬರುತ್ತಿದೆ. ಪ್ರಪಂಚದ ಬಹುತೇಕ ಎಲ್ಲಾ ದೇಶಗಳಿಂದ ಭಾರತದ ಜೊತೆಗೆ ಉತ್ತಮ ಆರ್ಥಿಕ ಸಂಬಂಧ ಹೊಂದುವ ಗುರಿ ಇದೆ. ಇಂತಹ ಹೊತ್ತಲ್ಲಿ ಭಾರತಕ್ಕೆ ಮತ್ತೊಂದು ಸಿಹಿಯಾದ ಸುದ್ದಿ ಸಿಕ್ಕಿದ್ದು, ಇದೀಗ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೀಡಿರುವ ಹೇಳಿಕೆ ಭಾರತದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬುತ್ತಿದೆ.
ಭಾರತ ಎಲ್ಲಾ ಕ್ಷೇತ್ರದಲ್ಲೂ ಬೆಳವಣಿಗೆ ಕಾಣುತ್ತಿದೆ. ಭಾರತದ ಆರ್ಥಿಕತೆಯ ಬೆಳೆವಣಿಗೆಗೆ ಬೇರೆ ಯಾವುದೇ ದೇಶವೂ ಸಾಟಿ ಇಲ್ಲ ಎನ್ನುವ ರೀತಿಯಲ್ಲಿ ಭಾರತ ಈಗ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇದೇ ಸಮಯದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಕೂಡ ಈಗ ಭಾರತದ ಬೆನ್ನುತಟ್ಟಿದೆ. ವಿಶ್ವದಲ್ಲೇ ಭಾರತ ಬಲಿಷ್ಠ ಸಾಧಕ ರಾಷ್ಟ್ರಗಳ ಪೈಕಿ ಒಂದಾಗಿದ್ದು, 2024 ರಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.8 ರಷ್ಟು ಪ್ರಗತಿ ಕಾಣಲಿದೆ ಎಂದಿದೆ ಐಎಂಎಫ್. ಈ ಹೇಳಿಕೆ ಕೂಡ ಭಾರತದ ಆರ್ಥಿಕತೆ ಬೆಳವಣಿಗೆಗೆ ಮತ್ತಷ್ಟು ಬಲ ನೀಡಿದಂತಾಗಿದೆ.

ಚೀನಾ ಬೆಳವಣಿಗೆ ಕುಸಿತ?
ಮತ್ತೊಂದು ಕಡೆ ಭಾರತದ ನೆರೆಯ ದೇಶವಾದ ಚೀನಾದ ಜಿಡಿಪಿ ಶೇ 4.6 ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ವಿವರಿಸಿದೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್). 2025 ರಲ್ಲಿ ಭಾರತದ ಜಿಡಿಪಿ ಶೇ 6.5 ರಷ್ಟು ಪ್ರಗತಿಯನ್ನು ಕಾಣಲಿದೆ. ದೇಶೀಯ ಬೇಡಿಕೆಯ ದೃಢತೆ ಹಾಗೂ ದುಡಿಯುವ ವಯಸ್ಸಿನ ಜನ ಸಂಖ್ಯೆ ಹೆಚ್ಚಳ ಆರ್ಥಿಕತೆಯ ಬೆಳವಣಿಗೆಗೆ ನೆರವಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ಜೊತೆಗೆ ಭಾರತ ಬಲಿಷ್ಠ ಸಾಧಕ ರಾಷ್ಟ್ರ ಎಂಬ ಹಮ್ಮೆಯ ವಿಚಾರವನ್ನೂ ಐಎಂಎಫ್ ಹಂಚಿಕೊಂಡಿದೆ. 2024 ಹಾಗೂ 2025ನೇ ಸಾಲಿನ ಆರ್ಥಿಕತೆ ಬೆಳವಣಿಗೆ ಪರಿಷ್ಕರಿಸಿದ ಕಾರಣವನ್ನೂ ಈ ಮೂಲಕ ತಿಳಿಸಲಾಗಿದೆ.
ಏಷ್ಯಾದ ಆರ್ಥಿಕತೆಗೆ ಕಂಟಕ?
ಭಾರತದ ಆರ್ಥಿಕತೆ ಬೆಳವಣಿಗೆ ಕಂಡರೂ ಏಷ್ಯಾದ ಬೆಳವಣಿಗೆಯು ಕುಸಿತ ಕಾಣಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2023 ರಲ್ಲಿ ಶೇ 5.6 ರಷ್ಟಿದ್ದ ಜಿಡಿಪಿ 2024 ರಲ್ಲಿ ಶೇ 5.2 ಕ್ಕೆ ಕುಸಿತ ಕಾಣಲಿದೆ. 2025 ರಲ್ಲಿ ಕೂಡ ಇದೇ ಸ್ಥಿತಿ ಮುಂದುವರಿಸಲಿದ್ದು, ಶೇ 4.9ಕ್ಕೆ ಇಳಿಕೆ ಕಾಣುವ ಬಗ್ಗೆ ಅಂದಾಜು ಮಾಡಿರುವ ಬಗ್ಗೆ ತಿಳಿಸಲಾಗಿದೆ. ಅಲ್ಲದೆ 2023ರಲ್ಲಿ ಶೇ 5.2 ರಷ್ಟು ಇದ್ದ ಚೀನಾದ ಜಿಡಿಪಿ ಈಗ, 2024 ರಲ್ಲಿ ಶೇ 4.6ಕ್ಕೆ ಇಳಿಕೆ ಕಂಡಿದೆ. 2025 ರಲ್ಲಿ ಶೇಕಡಾ 4.1ಕ್ಕೆ ಇಳಿಕೆ ಕಾಣುವ ಅಂದಾಜು ಇದೆ ಎಂದು ಹೇಳಲಾಗಿದೆ. ಆದರೆ ಈ ಸಮಯದಲ್ಲಿ ಭಾರತದ ಆರ್ಥಿಕತೆ ಮಾತ್ರ ಮುಂದೆ ಸಾಗಲಿದೆ.


Click it and Unblock the Notifications