ದ್ವಿಪಕ್ಷೀಯ ವ್ಯಾಪಾರ ಮತ್ತು ರಕ್ಷಣಾ ಸಹಕಾರದ ಉದ್ದೇಶದಿಂದ ಇದೀಗ ಪ್ರಧಾನಿ ನರೇಂದ್ರ ಮೋದಿ (PM Narendra Modi) ಫೆಬ್ರವರಿ 25 ಮತ್ತು 26 ರಂದು ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಇಸ್ರೇಲ್‌ಗೆ ಪ್ರವಾಸ ಕೈಗೊಂಡಿರುವ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israel PM Benjamin Netanyahu) ಅವರೊಂದಿಗೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಇನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ನಡೆಯುತ್ತಿರುವ ಈ ಭೇಟಿ ಭಾರತ ಮತ್ತು ಇಸ್ರೇಲ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಪ್ರಧಾನಿ ಮೋದಿಯವರು ಎರಡನೇ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡುತ್ತಿದ್ದು, 2017 ರಲ್ಲಿ ಮೊದಲ ಬಾರಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹಲವು ಮಾತುಕತೆಗಳನ್ನು ನಡೆಸಲಾಗಿತ್ತು. ಇದೀಗ ಮತ್ತೊಮ್ಮೆ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ.
ಇಸ್ರೇಲ್‌ನಲ್ಲಿ "ನಮೋ" ಹವಾ!
ಪ್ರಧಾನಿ ಮೋದಿ ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಗ್ ಅವರನ್ನು ಭೇಟಿಯಾಗಲಿದ್ದು, ಬಳಿಕ ಬೆಂಜಮಿನ್ ನೆತನ್ಯಾಹು ಜೊತೆಗೂ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಇಸ್ರೇಲ್ ಸಂಸತ್ತಿನಲ್ಲಿಯೂ ಮೋದಿ ಭಾಷಣ ಮಾಡಲಿದ್ದಾರೆ.
2017ರಲ್ಲಿ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದರು. ಆ ಭೇಟಿ ವೇಳೆ ಎರಡೂ ದೇಶಗಳ ಸಂಬಂಧ ಕಾರ್ಯತಂತ್ರದ ಪಾಲುದಾರಿಕೆಯಾಗಿ ಉನ್ನತೀಕರಿಸಲ್ಪಟ್ಟಿತು. ನೆತನ್ಯಾಹು 2018ರ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಮುಂಬರುವ ಭೇಟಿಯಲ್ಲಿ ಮೋದಿ, ನೆತನ್ಯಾಹು ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಲಿದ್ದಾರೆ ಎನ್ನಲಾಗಿದೆ
ರಕ್ಷಣೆ ಮತ್ತು ಭದ್ರತಾ ಸಹಕಾರವೇ ಈ ಚರ್ಚೆಗಳ ಕೇಂದ್ರಬಿಂದುವಾಗಲಿದೆ. ಇಸ್ರೇಲ್ ಭಾರತಕ್ಕೆ ಪ್ರಮುಖ ಮಿಲಿಟರಿ ಉಪಕರಣಗಳು ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆಗಳ ಪ್ರಮುಖ ಪೂರೈಕೆದಾರರೂ ಹೌದು. ಉಭಯ ದೇಶಗಳು ಪ್ರಸ್ತುತ ಸಹಕಾರವನ್ನು ಪರಿಶೀಲಿಸಿ, ಭವಿಷ್ಯದ ಸಹಭಾಗಿತ್ವವನ್ನು ಅನ್ವೇಷಿಸುವ ನಿರೀಕ್ಷೆಯಿದೆ. ಇನ್ನು ಇಸ್ರೇಲ್‌ನ 'ಐರನ್ ಡೋಮ್' ವ್ಯವಸ್ಥೆಯ ತಂತ್ರಜ್ಞಾನವನ್ನು ಭಾರತದ "ಸುದರ್ಶನ್ ಚಕ್ರ" ಏರ್ ಡಿಫೆನ್ಸ್ ಶೀಲ್ಡ್‌ಗೆ ಅಳವಡಿಸುವ ಬಗ್ಗೆ ಚರ್ಚೆ ನಡೆಯಬಹುದು ಎನ್ನಲಾಗಿದೆ. ಅಲ್ಲದೇ ಹೊಸ ರಕ್ಷಣಾ ಒಪ್ಪಂದಗಳು, ಡ್ರೋನ್‌ಗಳು, ಮಿಸೈಲ್‌ಗಳು, ಲೇಸರ್ ಡಿಫೆನ್ಸ್ ಸಿಸ್ಟಮ್‌ಗಳ ಖರೀದಿ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ.
ಮುಕ್ತ ವಾಣಿಜ್ಯ ಒಪ್ಪಂದ ಸಾಧ್ಯತೆ
ಇನ್ನು ಭಾರತ ಮತ್ತು ಇಸ್ರೇಲ್ ನಡುವು ಮುಕ್ತ ವ್ಯಾಪಾರ ಒಪ್ಪಂದದ (FTA) ಬಗ್ಗೆ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ. ಅಲ್ಲದೇ ಕಳೆದ ನವೆಂಬರ್‌ನಲ್ಲಿ ವಾಣಿಜ್ಯ ಸಚಿವ ಪಿಯೂಚ್ ಗೋಯೆಲ್ ಭೇಟಿ ನೀಡಿದಾಗ ಒಪ್ಪಂದದ ಟರ್ಮ್ಸ್ ಆಫ್ ರೆಫರೆನ್ಸ್ ಸಹಿ ಆಗಿತ್ತು. ಸೆಪ್ಟೆಂಬರ್‌ನಲ್ಲಿ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಏನಿದು ಹೆಕ್ಸಾಗಾನ್ ಮೈತ್ರಿ ಯೋಜನೆ?
ಈಗಾಗಲೇ ಬೆಂಜಮಿನ್ ನೆತನ್ಯಾಹು ಅವರು ಹೆಕ್ಸಾಗಾನ್ ಆಫ್ ಅಲಯನ್ಸಸ್ ಎಂಬ ಹೊಸ ರೀತಿಯ ಮೈತ್ರಿ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಈ ಯೋಜನೆಯಲ್ಲಿ ಇಸ್ರೇಲ್, ಭಾರತ, ಗ್ರೀಸ್ ಸೇರಿದಂತೆ ಅರಬ್, ಆಫ್ರಿಕನ್, ಏಷ್ಯಾದ ಇತರ ದೇಶಗಳು ಕೈಜೋಡಿಸುವ ನಿರೀಕ್ಷೆಯಿದೆ. ಇನ್ನು ಈ ಮೈತ್ರಿ ಯೋಜನೆಯನ್ನು ಹಲವು ದೇಶಗಳ ಸ್ಥಿರತೆ, ಪ್ರಗತಿ ಮತ್ತು ಭದ್ರತೆಗಾಗಿ ರಚಿಸಲಾಗಿದೆ.


Click it and Unblock the Notifications