ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದು, ಭದ್ರತಾ ಹಿನ್ನಲೆಯಲ್ಲಿ ಹಲವು ಪ್ರದೇಶಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಈ ಸಂಘರ್ಷದ ಹಿನ್ನೆಲೆಯಲ್ಲಿ, ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರವಾಸಿಗರಿಗೆ ಮಹತ್ವದ ಮುನ್ನೆಚ್ಚರಿಕೆ ಸೂಚನೆಯನ್ನು ನೀಡಿದೆ.

ಈ ಸ್ಥಳಗಳಿಗೆ ಪ್ರವಾಸ ಹೋಗಬೇಡಿ:
ರಾಯಭಾರ ಕಚೇರಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ ಮಾಹಿತಿ ಪ್ರಕಾರ, ಥೈಲ್ಯಾಂಡ್-ಕಾಂಬೋಡಿಯಾ ಗಡಿಯ ಬಳಿ ಇರುವ ಏಳು ಪ್ರಾಂತ್ಯಗಳಿಗೆ ಭಾರತೀಯರು ಪ್ರವಾಸ ಮಾಡುವುದನ್ನು ತಪ್ಪಿಸಬೇಕು. ಈ ಪ್ರಾಂತ್ಯಗಳು: ಉಬೊನ್ ರಟ್ಚಥಾನಿ, ಸುರಿನ್, ಸಿಸಾಕೆಟ್, ಬುರಿರಾಮ್, ಸಾ ಕೆಯೊ, ಚಂತಬುರಿ ಮತ್ತು ಟ್ರಾಟ್. ಈ ಪ್ರದೇಶಗಳಲ್ಲಿ ಕೆಲವೊಂದು ವಿಶೇಷ ನೈಸರ್ಗಿಕ ಸ್ಥಳಗಳು, ಅರಣ್ಯ ಉದ್ಯಾನಗಳು ಮತ್ತು ಗಡಿ ಸಮೀಪದ ತಾಣಗಳು ತಾತ್ಕಾಲಿಕವಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ಸಂಘರ್ಷದಿಂದಾಗಿ ತಾತ್ಕಾಲಿಕವಾಗಿ ಮುಚ್ಚಲಾದ ಪ್ರಮುಖ ಪ್ರದೇಶಗಳೆಂದರೆ ಫನೋಮ್ ಸ್ವೈ ಫಾರೆಸ್ಟ್ ಪಾರ್ಕ್, ಚೋಂಗ್ ಸಾಯಿ ಟಕು, ತಾ ಫ್ರೇಯಾ ನ್ಯಾಶನಲ್ ಪಾರ್ಕ್ ಮತ್ತು ಚೋಂಗ್ ಸಾಂಗಮ್ ಗಡಿ ಮಾರ್ಗ. ಈ ಪ್ರದೇಶಗಳಲ್ಲಿ ಪ್ರವೇಶಿಸುವುದರಿಂದ ಭದ್ರತಾ ಸಮಸ್ಯೆಗಳ ಸಾಧ್ಯತೆ ಇರುವುದರಿಂದ, ಪ್ರವಾಸಿಗರು ಸ್ಥಳೀಯ ಅಧಿಕಾರಿಗಳ ಮಾರ್ಗದರ್ಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.
ಥೈಲ್ಯಾಂಡ್ ಪ್ರವಾಸೋದ್ಯಮ ಪ್ರಾಧಿಕಾರದ (TAT) ನ್ಯೂಸ್‌ರೂಮ್ ಪ್ರಕಟಣೆಯ ಪ್ರಕಾರ, ಈ ಪ್ರದೇಶಗಳಲ್ಲಿ ಸೈನ್ಯ ಮತ್ತು ಭದ್ರತಾ ಪಡೆಗಳು ಹೆಚ್ಚುವರಿಯಾಗಿ ನಿಯೋಜಿಸಲಾಗಿದ್ದು, ಗಡಿಯಲ್ಲಿ ಹೆಚ್ಚಿದ ಭದ್ರತಾ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಹಲವು ಚೆಕ್‌ಪೋಸ್ಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಥೈಲ್ಯಾಂಡ್ ಸರ್ಕಾರದ ಮಾಹಿತಿಯ ಪ್ರಕಾರ, ಗಡಿಭಾಗದ ಒಟ್ಟು 100,000 ಕ್ಕೂ ಹೆಚ್ಚು ನಾಗರಿಕರು ಈ ಉದ್ವಿಗ್ನತೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ಘರ್ಷಣೆಯಲ್ಲಿ 14 ಜನರು ಸಾವನ್ನಪ್ಪಿರುವುದಾಗಿ ಥಾಯ್ ಆಂತರಿಕ ವ್ಯವಹಾರಗಳ ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಸಂಘರ್ಷವು ಎರಡು ರಾಷ್ಟ್ರಗಳ ಗಡಿ ವಿವಾದದಿಂದ ಹುಟ್ಟಿಕೊಂಡದು.
2003ರಿಂದ ಆರಂಭಗೊಂಡ ಗಡಿ ವಿವಾದ 2013ರಲ್ಲಿ ವಿಶ್ವ ನ್ಯಾಯಾಲಯದ ತೀರ್ಪಿನಿಂದ ತಾತ್ಕಾಲಿಕವಾಗಿ ಶಮನಗೊಂಡಿತ್ತು. ಆದರೆ 2025ರ ಮೇ ತಿಂಗಳಲ್ಲಿ ಮತ್ತೊಮ್ಮೆ ಗಡಿಯಲ್ಲಿ ನಡೆದ ಹೊಸ ಘರ್ಷಣೆಯಲ್ಲಿ ಕಾಂಬೋಡಿಯನ್ ಸೈನಿಕನೊಬ್ಬನ ಸಾವಿನಿಂದ ಬಿಕ್ಕಟ್ಟು ಮತ್ತಷ್ಟು ಗಂಭೀರವಾಗಿದೆ. ಈ ಘಟನೆ ಬಳಿಕ ಥೈಲ್ಯಾಂಡ್ ತನ್ನ ರಾಯಭಾರಿಯನ್ನು ವಾಪಸ್ ಕರೆದುಕೊಂಡು, ಕಾಂಬೋಡಿಯಾದ ರಾಯಭಾರಿಯನ್ನು ಹೊರಹಾಕಿದೆ.
ಭಾರತೀಯ ಪ್ರಯಾಣಿಕರಿಗೆ ಸಲಹೆ ನೀಡಿದ ಭಾರತೀಯ ರಾಯಭಾರ ಕಚೇರಿ, ಥೈಲ್ಯಾಂಡ್‌ಗೆ ಹೋಗುವವರು ಥೈಲ್ಯಾಂಡ್ ಪ್ರವಾಸೋದ್ಯಮ ನ್ಯೂಸ್‌ರೂಮ್ ಹಾಗೂ ಇತರ ಅಧಿಕೃತ ಮೂಲಗಳಿಂದ ಭದ್ರತಾ ಮಾಹಿತಿ ಮತ್ತು ಪ್ರಯಾಣ ಸಂಬಂಧಿತ ನವೀಕರಣಗಳನ್ನು ನಿರಂತರವಾಗಿ ಪರಿಶೀಲಿಸಬೇಕೆಂದು ಸೂಚಿಸಿದೆ.
ಭದ್ರತೆ ಮುಖ್ಯವಾಗಿರುವ ಈ ಸಮಯದಲ್ಲಿ, ಯಾವುದೇ ಅನಿವಾರ್ಯತೆಯಿಲ್ಲದೆ ಗಡಿಭಾಗ ಪ್ರವಾಸವನ್ನು ಮುಂದೂಡುವುದು ಶ್ರೇಷ್ಠ. ಭಾರತೀಯರು ತಮ್ಮ ಪ್ರಯಾಣ ಯೋಜನೆಗೆ ಮೊದಲು ನಿಖರ ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳುವಂತೆಯೂ ರಾಯಭಾರ ಕಚೇರಿ ಸಲಹೆ ನೀಡಿದೆ.


Click it and Unblock the Notifications