ತರಕಾರಿ ಬೆಲೆ ಏರಿಕೆಯಾಗುತ್ತಾ ಸಾಗುತ್ತಿದೆ. ಇದಾದ ಬೆನ್ನಲ್ಲೇ ಆಹಾರ ಹಣದುಬ್ಬರವು ಕೂಡಾ ಏರಿಕೆಯನ್ನು ಕಂಡಿದೆ. ಸರ್ಕಾರವು ರಷ್ಯಾದಿಂದ ಗೋಧಿಯನ್ನು ರಿಯಾಯಿತಿಯಲ್ಲಿ ಆಮದು ಮಾಡಿಕೊಳ್ಳಲು ಮುಂದಾಗಿದೆ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಸರಬರಾಜಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಜುಲೈ ತಿಂಗಳಿನಲ್ಲಿ ಆಹಾರ ಹಣದುಬ್ಬರವು 15 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಬೆನ್ನಲ್ಲೇ ಸರ್ಕಾರವು ಕೈಗೊಳ್ಳಲಿರುವ ಕ್ರಮವು ರಿಟೇಲ್ ಹಣದುಬ್ಬರವನ್ನು ನಿಯಂತ್ರಣ ಮಾಡಲು ಸಹಾಯವಾಗಲಿದೆ. ಈ ಹಿಂದೆಯೂ ಸರ್ಕಾರವು ಹಣದುಬ್ಬರ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.

"ಖಾಸಗಿ ವ್ಯಾಪಾರ ಮತ್ತು ಸರ್ಕಾರದಿಂದ ಸರ್ಕಾರದ ಒಪ್ಪಂದಗಳ ಮೂಲಕ ಆಮದು ಮಾಡಿಕೊಳ್ಳುವ ಸಾಧ್ಯತೆಯನ್ನು ಸರ್ಕಾರವು ಮುಂದೆ ನೋಡುತ್ತಿದೆ. ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಲಾಗುವುದು," ಎಂದು ರಷ್ಯಾದಿಂದ ಗೋಧಿ ಆಮದಿನ ಬಗ್ಗೆ ಕೇಳಿದಾಗ ಮೂಲವೊಂದು ರಾಯಿಟರ್ಸ್‌ಗೆ ತಿಳಿಸಿದೆ.
ಭಾರತದಲ್ಲಿ ಸಗಟು ಗೋಧಿ ಬೆಲೆಗಳು ಆಗಸ್ಟ್‌ನಲ್ಲಿ ಏಳು ತಿಂಗಳ ಗರಿಷ್ಠ ಮಟ್ಟಕ್ಕೆ, ಎರಡು ತಿಂಗಳ ಅವಧಿಯಲ್ಲಿ ಸುಮಾರು ಶೇಕಡ 10ರಷ್ಟು ಏರಿಕೆಯಾಗಿದೆ. ಸರ್ಕಾರಿ ಗೋದಾಮುಗಳಲ್ಲಿನ ಗೋಧಿ ದಾಸ್ತಾನು ಆಗಸ್ಟ್ 1 ರಂದು 28.3 ಮಿಲಿಯನ್ ಟನ್‌ಗಳಷ್ಟಿತ್ತು. 10 ವರ್ಷಗಳಲ್ಲಿ ಸರಾಸರಿಗಿಂತ ಶೇಕಡ 20ರಷ್ಟು ಕಡಿಮೆಯಾಗಿದೆ.
ಕಳೆದ ವರ್ಷ, ಕಡಿಮೆ ಉತ್ಪಾದನೆಯ ಕಾರಣದಿಂದ ಭಾರತವು ಗೋಧಿ ರಫ್ತುಗಳನ್ನು ನಿಷೇಧಿಸಿದೆ. ಈ ವರ್ಷದ ಬೆಳೆ ಕೂಡ ಸರ್ಕಾರದ ಅಂದಾಜಿಗಿಂತ ಕನಿಷ್ಠ ಶೇಕಡ 10 ರಷ್ಟು ಕಡಿಮೆ ಎಂದು ನಿರೀಕ್ಷಿಸಲಾಗಿದೆ.
ಹಲವು ವರ್ಷಗಳಿಂದ ಸರ್ಕಾರದ ಒಪ್ಪಂದಗಳ ಮೂಲಕ ಭಾರತವು ಗೋಧಿಯನ್ನು ಆಮದು ಮಾಡಿಕೊಂಡಿಲ್ಲ. 2017 ರಲ್ಲಿ ಭಾರತವು ಕೊನೆಯ ಬಾರಿಗೆ ಗಮನಾರ್ಹ ಪ್ರಮಾಣದ ಗೋಧಿಯನ್ನು ಆಮದು ಮಾಡಿಕೊಂಡಿದೆ. ಖಾಸಗಿ ವ್ಯಾಪಾರಿಗಳು 5.3 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಗೋಧಿಯನ್ನು ಆಮದು ಮಾಡಿಕೊಂಡಿದ್ದಾರೆ.
ಗೋಧಿ ಸ್ಟಾಕ್ ಇಳಿಕೆ
ಕೊರತೆಯನ್ನು ನೀಗಿಸಲು ಭಾರತಕ್ಕೆ ಕೇವಲ 3 ಮಿಲಿಯನ್‌ನಿಂದ 4 ಮಿಲಿಯನ್ ಮೆಟ್ರಿಕ್ ಟನ್ ಗೋಧಿ ಅಗತ್ಯವಿದ್ದರೂ, ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ರಷ್ಯಾದಿಂದ 8 ಮಿಲಿಯನ್‌ನಿಂದ 9 ಮಿಲಿಯನ್ ಟನ್ ಗೋಧಿಯನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಯು ಹೇಳುತ್ತದೆ.
ಅಕ್ಕಿ, ಗೋಧಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ
ಆಹಾರ ಹಣದುಬ್ಬರ ಏರಿಕೆಯ ಮಧ್ಯೆ, ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್ಚುವರಿ 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಈ ಹಿಂದೆ ಘೋಷಣೆ ಮಾಡಿದೆ. ಈ ಹಿಂದೆ 15 ಲಕ್ಷ ಟನ್ ಗೋಧಿ ಮತ್ತು 5 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಆದರೆ ಈಗ ಇದನ್ನು ಏರಿಕೆ ಮಾಡಲಾಗಿದೆ.
ಈ ಆರ್ಥಿಕ ವರ್ಷದಲ್ಲಿ ಎಫ್‌ಸಿಐ ಇ-ಹರಾಜು ಮೂಲಕ 8 ಲಕ್ಷ ಟನ್ ಗೋಧಿ ಮತ್ತು 1,900 ಟನ್ ಅಕ್ಕಿಯನ್ನು ಮಾರಾಟ ಮಾಡಿದೆ. ಇತ್ತೀಚಿನ ಹರಾಜಿನಲ್ಲಿ ಬಿಡ್‌ದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣ ಅಕ್ಕಿಯ ಮೀಸಲು ಬೆಲೆಯನ್ನು ಕಡಿಮೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಗೋಧಿ, ಅಕ್ಕಿ ಬೆಲೆ ಎಷ್ಟು ಏರಿಕೆ
ಆಗಸ್ಟ್ 7, 2023 ರಂತೆ, ಒಂದು ವರ್ಷದಲ್ಲಿ, ಗೋಧಿ ಬೆಲೆಯು ರಿಟೇಲ್ ಮಾರುಕಟ್ಟೆಯಲ್ಲಿ ಶೇಕಡ 6.77 ರಷ್ಟು ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇಕಡ 7.37 ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಅಕ್ಕಿಯ ಬೆಲೆಯು ರಿಟೇಲ್ ಮಾರುಕಟ್ಟೆಯಲ್ಲಿ ಶೇಕಡ 10.63 ರಷ್ಟು ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇಕಡ 11.12 ರಷ್ಟು ಏರಿಕೆಯಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಂಕಿಅಂಶಗಳು ಹೇಳುತ್ತದೆ.
ಜುಲೈನಲ್ಲಿ, ಸಿಪಿಐ-ಆಧಾರಿತ ರಿಟೇಲ್ ಹಣದುಬ್ಬರವು ಐದು ತಿಂಗಳಲ್ಲಿ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಹಿಷ್ಣು ಮಟ್ಟವಾದ ಶೇಕಡ 6ಕ್ಕಿಂತ ಅಧಿಕವಾಗಿರುವ ಅಂದಾಜು ಮಾಡಲಾಗಿದೆ. ಜುಲೈ ಸಿಪಿಐ ಡೇಟಾವನ್ನು ಆಗಸ್ಟ್ 14 ರಂದು ಪ್ರಕಟಿಸಲು ನಿರ್ಧರಿಸಲಾಗಿದೆ.


Click it and Unblock the Notifications