ಭಾರತ ದೇಶವು ಉಳಿದ ದೇಶಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಬದಲಾವಣೆಯನ್ನು ಕಾಣುತ್ತಿರುವ ನಡುವೆಯೂ ಭಾರತದಲ್ಲಿ ಸಾಮಾನ್ಯ ಜನರಿಗೆ ಅದರಲ್ಲೂ ಮುಖ್ಯವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಲವಾರು ಆಹಾರ ಪದಾರ್ಥಗಳ ಕೊರತೆಯೂ ಕೂಡಾ ಕಾಣಿಸಿಕೊಳ್ಳುತ್ತಿದೆ.
ಈಗಾಗಲೇ ದೇಶದಲ್ಲಿ ಅಕ್ಕಿಯ ಕೊರತೆ ಕಾಣಿಸುವ ಸಾಧ್ಯತೆಯ ನಡುವೆ ಕೇಂದ್ರ ಸರ್ಕಾರವು ಬಾಸ್ಮತಿಯೇತರ ಅಕ್ಕಿ ರಫ್ತಿಗೆ ನಿರ್ಬಂಧವನ್ನು ಹೇರಿದೆ. ಭತ್ತ ಬೆಳೆಯಲ್ಲಿ ಕಡಿಮೆಯಾದ ಕಾರಣದಿಂದಾಗಿ, ಬೆಲೆ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ರಫ್ತು ಮೇಲೆ ನಿರ್ಬಂಧವನ್ನು ವಿಧಿಸಲಾಗಿದೆ. ಈ ನಡುವೆ ಈಗ ಸರ್ಕಾರವು 7 ವರ್ಷಗಳ ಬಳಿಕ ಮೊದಲ ಬಾರಿಗೆ ಸಕ್ಕರೆ ರಫ್ತನ್ನು ನಿಷೇಧಿಸುವ ಸಾಧ್ಯತೆಯಿದೆ.

ಸಕ್ಕರೆ ರಫ್ತು ನಿಷೇಧ ಸಾಧ್ಯತೆ, ಕಾರಣ?
ದೇಶದಲ್ಲಿ ಕಬ್ಬಿನ ಉತ್ಪಾದನೆಯ ಮೇಲೆ ಮಳೆಯ ಕೊರತೆಯು ಪರಿಣಾಮ ಉಂಟು ಮಾಡಿದೆ. ಇದರಿಂದಾಗಿ ಅಕ್ಟೋಬರ್‌ನಿಂದ ಭಾರತವು ಸಕ್ಕರೆ ರಫ್ತು ನಿಷೇಧಿಸುವ ನಿರೀಕ್ಷೆಯಿದೆ ಎಂದು ಮೂರು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಸುಮಾರು ಏಳು ವರ್ಷಗಳ ಬಳಿಕ ಭಾರತದಲ್ಲಿ ಸಕ್ಕರೆ ರಫ್ತಿನ ಮೇಲಿನ ನಿಷೇಧ ಹೇರಲಾಗುವ ಸಾಧ್ಯತೆ ಇರುವ ಕಾರಣದಿಂದಾಗಿ ಜಾಗತಿಕವಾಗಿ ಸಕ್ಕರೆ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ. ಜಾಗತಿಕ ಆಹಾರ ಮಾರುಕಟ್ಟೆಗಳಲ್ಲಿ ಹಣದುಬ್ಬರವು ಅಧಿಕವಾಗುವ ಸಾಧ್ಯತೆಯಿದೆ.
ಹೆಚ್ಚಿನ ಕಬ್ಬು ಉತ್ಪಾದಿಸುವ ಪ್ರದೇಶಗಳಲ್ಲಿ ಮಳೆಯ ಕೊರತೆಯಿಂದಾಗಿ ಉತ್ಪಾದನೆ ಕಡಿಮೆಯಾಗಿದೆ. ಆದ್ದರಿಂದಾಗಿ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಳ್ಳುವ ಸಾಧ್ಯತೆಯಿದೆ. ಕಬ್ಬು ಅಧಿಕವಾಗಿ ಬೆಳೆಯುವ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಾನ್ಸೂನ್ ಮಳೆ ಸರಾಸರಿಗಿಂತ ಶೇಕಡ 50 ರಷ್ಟು ಕಡಿಮೆಯಾಗಿದೆ.
ರಿಟೇಲ್ ಹಣದುಬ್ಬರವು ಜುಲೈನಲ್ಲಿ 15 ತಿಂಗಳ ಗರಿಷ್ಠಮಟ್ಟ ಶೇಕಡ 7.4ಕ್ಕೆ ತಲುಪಿದೆ. ಆಹಾರ ಹಣದುಬ್ಬರವು ಶೇಕಡ 11.5 ಕ್ಕೆ ಏರಿಕೆಯಾಗಿದೆ. ಪ್ರಮುಖವಾಗಿ ಆಹಾರ ಹಣದುಬ್ಬರದ ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಈ ಬಗ್ಗೆ ದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಈ ನಡುವೆ ಕೇಂದ್ರ ಸರ್ಕಾರವು ಇಂತಹ ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮುಂಬರುವ 2023/24 ಋತುವಿನಲ್ಲಿ ಭಾರತದಲ್ಲಿ ಸಕ್ಕರೆ ಉತ್ಪಾದನೆಯು 3.3 ಶೇಕಡದಷ್ಟು 31.7 ಮಿಲಿಯನ್ ಟನ್‌ಗಳಿಗೆ ಇಳಿಯುವ ನಿರೀಕ್ಷೆಯಿದೆ. ಹಿಂದಿನ ಋತುವಿನಲ್ಲಿ 11.1 ಮಿಲಿಯನ್ ಟನ್‌ಗಳಿಗೆ ಹೋಲಿಸಿದರೆ ಪ್ರಸಕ್ತ ಋತುವಿನಲ್ಲಿ ಕೇವಲ 6.1 ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡಲು ದೇಶವು ಗಿರಣಿಗಳಿಗೆ ಅವಕಾಶ ನೀಡಿದೆ.
ಈ ಬೆಳವಣಿಗೆಗಳ ಮಧ್ಯೆ, ಸ್ಥಳೀಯ ಸಕ್ಕರೆ ಅಗತ್ಯತೆಗಳು ಮತ್ತು ಹೆಚ್ಚುವರಿ ಕಬ್ಬಿನಿಂದ ಎಥೆನಾಲ್ ಉತ್ಪಾದನೆಗೆ ಆದ್ಯತೆ ನೀಡುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
"ನಮ್ಮ ಪ್ರಾಥಮಿಕ ಗಮನವು ಸ್ಥಳೀಯ ಸಕ್ಕರೆ ಅವಶ್ಯಕತೆಗಳನ್ನು ಪೂರೈಸುವುದು ಮತ್ತು ಹೆಚ್ಚುವರಿ ಕಬ್ಬಿನಿಂದ ಎಥೆನಾಲ್ ಅನ್ನು ಉತ್ಪಾದಿಸುವುದು," ಎಂದು ಸರ್ಕಾರಿ ಮೂಲವು ಸುದ್ದಿ ಸಂಸ್ಥೆಗೆ ತಿಳಿಸಿದೆ. "ಮುಂಬರುವ ಋತುವಿನಲ್ಲಿ, ರಫ್ತಿಗಾಗಿ ಬೇಕಾಗುವಷ್ಟು ನಮಗೆ ಸಕ್ಕರೆ ಇರುವುದಿಲ್ಲ," ಎಂದು ಕೂಡಾ ಮಾಹಿತಿ ಲಭಿಸಿದೆ.
ಗಮನಾರ್ಹವಾಗಿ, ಭಾರತವು ಸೆಪ್ಟೆಂಬರ್ 30 ರವರೆಗಿನ ಪ್ರಸಕ್ತ ಋತುವಿನಲ್ಲಿ ಕೇವಲ 6.1 ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಕಳೆದ ಋತುವಿನಲ್ಲಿ ದಾಖಲೆಯ 11.1 ಮಿಲಿಯನ್ ಟನ್‌ಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿತು. 2016 ರಲ್ಲಿ, ಸಾಗರೋತ್ತರ ಮಾರಾಟವನ್ನು ತಡೆಯಲು ಭಾರತವು ಸಕ್ಕರೆ ರಫ್ತಿನ ಮೇಲೆ ಶೇಕಡ 20ರಷ್ಟು ತೆರಿಗೆಯನ್ನು ವಿಧಿಸಿತು. ಕಳೆದ ವರ್ಷ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ವಿಧಿಸಿತ್ತು.


Click it and Unblock the Notifications