ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಈಗಾಗಲೇ ಆರಂಭವಾಗಿ ಹಲವು ಪಂದ್ಯಗಳು ನಡೆದಿದೆ. ಆದ್ರೆ ಭಾರತ ಮತ್ತು ಪಾಕಿಸ್ತಾನ (India-Pakistan) ನಡುವಿನ ಹೈವೋಲ್ಟೇಜ್ ಪಂದ್ಯಾಟ ನಡೆಯುತ್ತಾ? ಇಲ್ವಾ? ಎಂಬ ಭಾರೀ ಗೊಂದಲಗಳಿತ್ತು. ಆದ್ರೆ ಇದೀಗ ಕೊನೆಗೂ ಭಾರತ-ಪಾಕಿಸ್ತಾನ ಕ್ರಿಕೆಟ್ ಸಮರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಾಂಗ್ಲಾದೇಶಕ್ಕೆ ಬೆಂಬಲ ನೀಡುವ ನೆಪದಲ್ಲಿ ಭಾರತದ ಜೊತೆಗಿನ ಆಟಕ್ಕೆ ಪಾಕಿಸ್ತಾನ ಬಹಿಷ್ಕಾರ ಹಾಕಿತ್ತು. ಆದರೆ ಇದೀಗ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದಂತೆ, ಪಾಕಿಸ್ತಾನ ತನ್ನ ಮಾತಿಗೆ ಯೂಟರ್ನ್ ಹೊಡೆದಿದೆ.

ಹೌದು, ಬಾಂಗ್ಲಾದೇಶವನ್ನು ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯಿಂದ ಹೊರಗಿಟ್ಟಿರುವ ಬೆನ್ನಲ್ಲೇ, ಭಾರತದ ವಿರುದ್ಧ ಗುಂಪು ಹಂತದ ಪಂದ್ಯಾಟ ಆಡುವುದಿಲ್ಲ ಎಂದು ಪಾಕಿಸ್ತಾನ ಘೋಷಿಸಿತ್ತು. ಆದ್ರೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಅಧಿಕಾರಿಗಳ ನಡುವೆ ಲಾಹೋರ್‌ನಲ್ಲಿ ನಡೆದ ಮಾತುಕತೆಯ ನಂತರ ಪಾಕಿಸ್ತಾನ ತನ್ನ ಮಾತಿಗೆ ಯೂಟರ್ನ್ ಹೊಡೆದಿದೆ.
ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಸಮರ ಫಿಕ್ಸ್!
ಫೆಬ್ರವರಿ 15, 2026 ರಂದು ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಆಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತನ್ನ ಹಿಂದಿನ ಬಹಿಷ್ಕಾರ ನಿರ್ಧಾರವನ್ನು ಕೈಬಿಟ್ಟಿದೆ. ಪಾಕಿಸ್ತಾನ ಸರ್ಕಾರ ಸೋಮವಾರ ರಾಷ್ಟ್ರೀಯ ತಂಡಕ್ಕೆ ಭಾರತದ ವಿರುದ್ಧ ಆಡುವಂತೆ ನಿರ್ದೇಶಿಸಿತು. ಈ ಮೂಲಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಬಗ್ಗೆ ಶುರುವಾಗಿದ್ದು ವಿವಾದಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.
ಕೊನೆಯ ಕ್ಷಣದಲ್ಲಿ ಪಂದ್ಯದಿಂದ ಹಿಂದಕ್ಕೆ ಸರಿದರೆ ಉಂಟಾಗುವ ಆರ್ಥಿಕ ಪರಿಣಾಮಗಳ ಬಗ್ಗೆ ಐಸಿಸಿ ಪಿಸಿಬಿಗೆ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಪಾಕಿಸ್ತಾನ, ಭಾರತ ವಿರುದ್ಧ ಆಡಲು ಸಜ್ಜಾಗಿದೆ.
ಇನ್ನು ಈ ಕುರಿರು ಪಾಕಿಸ್ತಾನ ಪ್ರಕಟಣೆ ಹೊರಡಿಸಿದ್ದು, "ನಮ್ಮ ಸಹೋದರ ರಾಷ್ಟ್ರ ವ್ಯಕ್ತಪಡಿಸಿದ ಆಳವಾದ ಕೃತಜ್ಞತೆಯನ್ನು ನಾವು ಸ್ವಾಗತಿಸುತ್ತೇವೆ. ಪಾಕಿಸ್ತಾನವು ಬಾಂಗ್ಲಾದೇಶದೊಂದಿಗೆ ಯಾವಾಗಲೂ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ. ಅಲ್ಲದೇ ಕ್ರಿಕೆಟ್ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ಜಾಗತಿಕ ಕ್ರೀಡೆಗೆ ಬೆಂಬಲ ನೀಡುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಲವು ಚರ್ಚೆಗಳ ನಂತರ, ಪಾಕಿಸ್ತಾನ ಸರ್ಕಾರವು ಫೆಬ್ರವರಿ 15, 2026 ರಂದು ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು ಮೈದಾನಕ್ಕೆ ಇಳಿಸಲು ನಿರ್ದೇಶಿಸಲಾಗಿದೆ" ಎಂದು ಪಾಕಿಸ್ತಾನ ಸರ್ಕಾರ ತನ್ನ ಹೇಳಿಕೆಯಲ್ಲಿ ಪುನರುಚ್ಚರಿಸಿದೆ.
ಹೀಗಾಗಿ, ಬಹುಪಕ್ಷೀಯ ಚರ್ಚೆಗಳ ಫಲಿತಾಂಶ ಮತ್ತು ಮಿತ್ರ ರಾಷ್ಟ್ರಗಳ ಕೋರಿಕೆಗಳನ್ನು ಪರಿಗಣಿಸಿ, ಪಾಕಿಸ್ತಾನ ಸರ್ಕಾರವು ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ 2026ರ ಫೆಬ್ರವರಿ 15 ರಂದು ಐಸಿಸಿ ಪುರುಷರ ಟಿ-20 ವಿಶ್ವಕಪ್‌ನಲ್ಲಿ ನಿಗದಿತ ಪಂದ್ಯದಲ್ಲಿ ಭಾಗವಹಿಸಲು ನಿರ್ದೇಶಿಸಿದೆ. ಕ್ರಿಕೆಟ್‌ನ ಸ್ಫೂರ್ತಿ ಹಾಗೂ ಜಾಗತಿಕ ಕ್ರೀಡೆಯ ನಿರಂತರತೆಯನ್ನು ಕಾಪಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶ ಎಂದು ಹೇಳಿಕೊಂಡಿದೆ.
ಮಾತುಕತೆ ಬಗ್ಗೆ ಐಸಿಸಿ ಹೇಳಿದ್ದೇನು?
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತನ್ನ ಹೇಳಿಕೆಯಲ್ಲಿ, "ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಜೊತೆಗಿನ ತನ್ನ ಮಾತುಕತೆ ಟಿ-20 ವಿಶ್ವಕಪ್ ಅನ್ನು ಸುಗಮವಾಗಿ ನಡೆಸುವುದರ ಜೊತೆಗೆ ಏಕತೆ, ಸಮಗ್ರತೆ ಮತ್ತು ಭಾಗವಹಿಸುವಿಕೆಯ ಬದ್ಧತೆಗಳನ್ನು ಬಲಪಡಿಸುವ ಗುರಿ ಹೊಂದಿತ್ತು" ಎಂದು ತಿಳಿಸಿದೆ.
"ಐಸಿಸಿ ಮತ್ತು ಪಿಸಿಬಿ ನಡುವಿನ ಸಂವಾದದಲ್ಲಿ ಬಹಳಷ್ಟು ಚರ್ಚೆಗಳಾಗಿದೆ. ಆಟದ ಉತ್ತಮ ಹಿತಾಸಕ್ತಿಗಾಗಿ, ಸಮಗ್ರತೆ, ಸೌಹಾರ್ದತೆ, ಏಕತೆ ಅಗತ್ಯವೆಂದು ಎರಡೂ ಪಕ್ಷಗಳು ಒಪ್ಪಿಕೊಂಡಿವೆ" ಎಂದು ಐಸಿಸಿ ಹೇಳಿದೆ.
ಏನಿದು ವಿವಾದ?
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ಇದನ್ನು ವಿರೋಧಿಸಿ ಭಾರತದಲ್ಲಿ ಅನೇಕ ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅಲ್ಲದೇ ಈ ವೇಳೆ ಐಪಿಎಲ್‌ನಲ್ಲಿ ಆಡುತ್ತಿದ್ದ ಬೌಲರ್ ಮುಸ್ತಫಿಝರ್ ರೆಹಮಾನ್ ಅವರನ್ನು ಲೀಗ್‌ನಿಂದ ಹೊರಗಿಡಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳು ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿ ಮತ್ತು ಅಲ್ಲಿನ ಸರ್ಕಾರವನ್ನು ಕೆರಳುವಂತೆ ಮಾಡಿತ್ತು. ಈ ಪರಿಣಾಮ ಬಾಂಗ್ಲಾದೇಶ ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲ್ಲ, ಭದ್ರತೆಯ ಕಾರಣಕ್ಕಾಗಿ ಭಾರತದಲ್ಲಾಡಬೇಕಿದ್ದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾಗೆ ಶಿಫ್ಟ್ ಮಾಡಬೇಕೆಂದು ಬೇಡಿಕೆ ಇಟ್ಟಿತು. ಆದರೆ ಐಸಿಸಿ ಇದನ್ನು ನಿರಾಕರಿಸಿದ ಬೆನ್ನಲ್ಲೇ, ಬಾಂಗ್ಲಾದೇಶ ಟೂರ್ನಿಯಿಂದಲೇ ಹೊರಗುಳಿಯಿತು. ಇದೀಗ ಬಾಂಗ್ಲಾದೇಶದ ಬದಲಾಗಿ ಈ ಬಾರಿ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ಆಡುತ್ತಿದೆ.
ಬಾಂಗ್ಲಾದೇಶವನ್ನು ಹೊರಗಿಡುತ್ತಿದ್ದಂತೆ, ಪಾಕಿಸ್ತಾನದ ಹೈಡ್ರಾಮ ಆರಂಭವಾಯಿತು. ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರಹಾಕಿದ್ದನ್ನು ಪ್ರತಿಭಟಿಸಿ ಪಾಕಿಸ್ತಾನ ಫೆಬ್ರವರಿ 15 ರಂದು ಕೊಲಂಬೋದಲ್ಲಿ ನಡೆಯಲಿರುವ ಗುಂಪು ಹಂತದ ಪಂದ್ಯಕ್ಕೆ ಬಹಿಷ್ಕಾರ ಹಾಕಿತ್ತು. ಆದರೆ ಇದೀಗ ಮತ್ತೆ ಐಸಿಸಿಯೊಂದಿಗಿನ ಮಾತುಕತೆ ಬೆನ್ನಲ್ಲೇ, ಯೂಟರ್ನ್ ಹೊಡೆಯುವ ಮೂಲಕ, ತನ್ನ ಬಹಿಷ್ಕಾರದ ನಿರ್ಧಾರವನ್ನು ಬಿಟ್ಟು, ಭಾರತದ ವಿರುದ್ಧ ಆಡಲು ಸಿದ್ಧವಾಗಿದೆ.


Click it and Unblock the Notifications