ಸರ್ಕಾರಿ ಉದ್ಯೋಗವನ್ನೇ ಎದುರು ನೋಡುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಒಂದು ಭರ್ಜರಿ ಗುಡ್‌ನ್ಯೂಸ್ ಇದೆ. ಅದೇನೆಂದರೆ ಭಾರತೀಯ ಅಂಚೆ ಇಲಾಖೆ 21 ಸಾವಿರದ 413 ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಮುಂಬರುವ ಮಾರ್ಚ್ 3 ಕೊನೆಯ ದಿನವಾಗಿದ್ದು, ಆಕಾಂಕ್ಷಿಗಳು ಈ ಕೂಡಲೇ ಆನ್‌ಲೈನ್ ಸೈಟ್ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬೇಕಾಗಿದೆ.

ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಲ್ಲಿ ಬ್ರಾಂಚ್ ಪೋಸ್ಟ್‌ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ಎಬಿಪಿಎಂ) ಮುಂತಾದವು ಸೇರಿವೆ. 10ನೇ ತರಗತಿ ಪಾಸಾದ ಯಾವುದೇ ಆಕಾಂಕ್ಷಿಗಳು, ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಆದ indiapostgdsonline.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 10 ರಿಂದಲೇ ಅರ್ಜಿ ಸಲ್ಲಿಕೆಯ ದಿನಾಂಕ ಆರಂಭವಾಗಿದ್ದು, ಮುಂಬರುವ ಮಾರ್ಚ್ 3 ಕೊನೆಯ ದಿನವಾಗಿದೆ. ಬಳಿಕ ಮಾರ್ಚ್ 6 ಮತ್ತು 8 ರ ನಡುವೆ ಅರ್ಜಿ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ.
ಯಾವ್ಯಾವ ರಾಜ್ಯಗಳಲ್ಲಿ GDS ಹುದ್ದೆಗಳು ಖಾಲಿ ಇವೆ:
ಭಾರತೀಯ ಅಂಚೆ ಇಲಾಖೆಯ GDS ಹುದ್ದೆಗಳಿಗೆ ಹಲವು ರಾಜ್ಯಗಳಲ್ಲಿ ನೇಮಕಾತಿ ಆರಂಭವಾಗಿದೆ. ಕರ್ನಾಟಕ, ಕೇರಳ, ಮಧ್ಯಪ್ರದೇಶ, ತಮಿಳುನಾಡು, ತೆಲಂಗಾಣ, ಒಡಿಶಾ, ಪಂಜಾಬ್, ಉತ್ತರಾಖಂಡ, ಪಶ್ಚಿಮ ಬಂಗಾಳ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಿಗೆ ನೇಮಕಾತಿ ಆರಂಭವಾಗಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಹುದ್ದೆಗಳಿದ್ದು, ಉತ್ತರ ಪ್ರದೇಶ ನಂತರದ ಸ್ಥಾನದಲ್ಲಿದೆ.
ಭಾರತೀಯ ಅಂಚೆಯ ಜಿಡಿಎಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಮಾನದಂಡ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 40 ವರ್ಷದೊಳಗಿನವರಾಗಿರಬೇಕು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಹಾಗೂ SC, ST ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿ ಒದಗಿಸಲಾಗುತ್ತದೆ. ಪ್ರಮುಖ ವಿಷಯ ಏನಂದ್ರೆ ಅರ್ಜಿದಾರರು ಶಿಕ್ಷಣ ಮಂಡಳಿಯಿಂದ ಇಂಗ್ಲಿಷ್ ಮತ್ತು ಗಣಿತ ವಿಷಯಗಳನ್ನು ಮಾಧ್ಯಮಿಕ ಶಾಲಾ ಪರೀಕ್ಷೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು.
ಜೊತೆಗೆ ಅರ್ಜಿದಾರರಿಗೆ ಆಯಾ ರಾಜ್ಯದ ಅಧಿಕೃತ ಭಾಷೆ ಓದಲು, ಬರೆಯಲು, ಮಾತನಾಡಲು ಬರಬೇಕು. ಅದರಂತೆ ಕರ್ನಾಟಕ ರಾಜ್ಯದ ಅರ್ಜಿದಾರರು ಕೂಡ ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಇದರ ಜೊತೆಗೆ ಬೇಸಿಕ್ ಕಂಪ್ಯೂಟರ್ ಜ್ಞಾನ ಇರಬೇಕು. ಕಂಪ್ಯೂಟರ್ ಅಧ್ಯಯನದ ಪ್ರಮಾಣ ಪತ್ರ ಹೊಂದಿರುವವರಿಗೆ ಮೊದಲ ಆದ್ಯತೆ ಎನ್ನಲಾಗಿದೆ.
ಭಾರತೀಯ ಅಂಚೆಯ ಜಿಡಿಎಸ್ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿದಾರರು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಆದ indiapostgdsonline.gov.in ಭೇಟಿ ನೀಡಬೇಕು. ಈ ಸೈಟ್‌ನಲ್ಲಿ ಅರ್ಜಿದಾರರು ನೋಂದಾಯಿಸಿಕೊಳ್ಳಬೇಕು. ಅರ್ಜಿ ನಮೂನೆ ಭರ್ತಿ ಮಾಡಿ ದಾಖಲೆಗಳನ್ನು ಒದಗಿಸಬೇಕು. ಬಳಿಕ ಅರ್ಜಿ ಶುಲ್ಕ ಪಾವತಿಸಿ ಫಾರ್ಮ್ ಸಲ್ಲಿಸಬೇಕು. ಎಲ್ಲವನ್ನೂ ಸಲ್ಲಿಸಿದ ಬಳಿಕ ಅಪ್ಲಿಕೇಷನ್ ಪ್ರಿಂಟ್‌ನ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಅರ್ಜಿ ಶುಲ್ಕ ಒಬಿಸಿ ಅಭ್ಯರ್ಥಿಗಳಿಗೆ 100 ರೂ. ಮಹಿಳಾ ಅಭ್ಯರ್ಥಿಗಳು ಮತ್ತು SC/ ST/PWD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ಈ ಮೇಲಿನ ಎಲ್ಲಾ ವಿವರಗಳನ್ನು ಒಳಗೊಂಡು ಅರ್ಹರಿರುವ ಎಲ್ಲಾ ಅಕಾಂಕ್ಷಿಗಳು, ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಜಿಡಿಎಸ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
GDS ಹುದ್ದೆಯ ಸಂಬಳ ರಚನೆ:
ಬ್ರಾಂಚ್ ಪೋಸ್ಟ್ ಮಾಸ್ಟರ್ (BPM): ರೂ 12,000 - ರೂ 29,380 ಸಂಬಳ
ಸಹಾಯಕ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM)/ಡಕ್ ಸೇವಕ: ರೂ 10,000 - ರೂ 24,470 ಸಂಬಳ


Click it and Unblock the Notifications