ಪಹಲ್ಗಾಮ್‌ನಲ್ಲಿ ನಡೆಯುತ್ತಿರುವ ಉಗ್ರರ ಹಾವಳಿಯಿಂದ ಭಾರತೀಯರ ಕಣ್ಣು ಕೆಂಪಾಗಿದೆ. ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಪಾಠ ಕಲಿಸಲೇಬೇಕೆಂದು, ಭಾರತ ನಿರ್ಧಾರ ಮಾಡಿಬಿಟ್ಟಿದೆ. ಅದಕ್ಕಾಗಿ ನಾನಾ ಕಾರ್ಯಗಳು ಪ್ರಗತಿಯಲ್ಲಿವೆ. ಈ ಕ್ರಮದ ಭಾಗವಾಗಿ, ಭಾರತ ಪಾಕಿಸ್ತಾನವೊಂದಿಗಿನ ಎಲ್ಲಾ ರೀತಿಯ ಸಂಬಂಧಗಳನ್ನು ಹಂತ ಹಂತವಾಗಿ ಮುರಿಯಲಾರಂಭಿಸಿದೆ. ಇದಕ್ಕೆ ಮೊದಲ ಹೆಜ್ಜೆಯಾಗಿ ಅಟ್ಟಾರಿ ಮತ್ತು ವಾಘಾ ಗಡಿಗಳನ್ನು ಮುಚ್ಚಲಾಗಿದೆ. ಆದರೆ ಪಾಕಿಸ್ತಾನಕ್ಕೆ ಪಾಠ ಕಲಿಸುವುದು ಸುಲಭವೇ ಆದರೂ, ಅದರಿಂದ ಭಾರತದಲ್ಲಿ ಕೂಡ ಕೆಲವೊಂದಿಷ್ಟು ಸಮಸ್ಯೆಗಳು ಆಗಬಹುದು.

ವ್ಯಾಪಾರ ಸ್ಥಗಿತ..ಈ ವಸ್ತುಗಳು ದುಬಾರಿಯಾಗಬಹುದು:
ಇನ್ನು ಪಾಕಿಸ್ತಾನದೊಂದಿಗೆ ಭಾರತದ ವ್ಯಾಪಾರ ಸಂಪೂರ್ಣವಾಗಿ ನಿಂತರೆ, ಭಾರತದ ಮಾರುಕಟ್ಟೆಯಲ್ಲಿ ಕೆಲವು ವಸ್ತುಗಳ ಬೆಲೆಗಳು ಏರಬಹುದು. ಮುಖ್ಯವಾಗಿ ಒಣ ಹಣ್ಣುಗಳಾದ ಬಾದಾಮಿ, ಪಿಸ್ತಾ ಮತ್ತು ಏಪ್ರಿಕಾಟ್‌ಗಳು ದುಬಾರಿಯಾಗುವ ಸಾಧ್ಯತೆ ಇದೆ. ಆದರೆ ಭಾರತ ಇವುಗಳನ್ನು ಇತರ ರಾಷ್ಟ್ರಗಳಿಂದಲೂ ಆಮದು ಮಾಡಿಕೊಳ್ಳುತ್ತಿದ್ದು, ಇದರ ಪರಿಣಾಮ ತುಸು ಕಡಿಮೆ ಇರಬಹುದು.
ಕಲ್ಲು ಉಪ್ಪಿನ ಬೆಲೆ ಏರಿಕೆ ಸಾಧ್ಯತೆ:
ಅಷ್ಟೇ ಅಲ್ಲ ಭಾರತವು ಪಾಕಿಸ್ತಾನದಿಂದ ಕಲ್ಲುಪ್ಪನ್ನು ವಿಶೇಷವಾಗಿ ಆಮದು ಮಾಡಿಕೊಳ್ಳುತ್ತದೆ. ಅಲ್ಲಿಂದ ತರಿಸಿಕೊಳ್ಳುವ ಕಲ್ಲುಪ್ಪನ್ನು ವಿಶೇಷ ಸಂದರ್ಭದಲ್ಲಿ ಬಳಸಲಾಗುತ್ತದೆ. ಅಂದರೆ ಉಪವಾಸ ಮತ್ತು ಧಾರ್ಮಿಕ ಹಬ್ಬಗಳಲ್ಲಿ ಹೆಚ್ಚಿನವಾಗಿ ಬಳಸುವ ಈ ಉಪ್ಪಿನ ದರ ವ್ಯಾಪಾರ ಸ್ಥಗಿತದಿಂದ ಏರಬಹುದು.
ಆಪ್ಟಿಕಲ್ ಲೆನ್ಸ್ ಮತ್ತು ಇತರ ವಸ್ತುಗಳ ಮೇಲೆ ಪ್ರಭಾವ:
ಕನ್ನಡಕಗಳಲ್ಲಿ ಬಳಸುವ ಆಪ್ಟಿಕಲ್ ಲೆನ್ಸ್‌ಗಳೂ ಪಾಕಿಸ್ತಾನದಿಂದ ಆಮದು ಆಗುತ್ತವೆ. ವ್ಯಾಪಾರ ನಿಂತರೆ, ಇವುಗಳ ಬೆಲೆಗಳು ತಾತ್ಕಾಲಿಕವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ, ಸಿಮೆಂಟ್, ಹತ್ತಿ, ಉಕ್ಕು, ಚರ್ಮದ ವಸ್ತುಗಳು ಮತ್ತು ಸಾವಯವ ರಾಸಾಯನಿಕಗಳಂತಹ ಇತರ ವಸ್ತುಗಳ ದರಗಳಿಗೂ ಪ್ರಭಾವ ಬೀರಬಹುದು.
ಭಾರತಕ್ಕಷ್ಟೇ ಅಲ್ಲ...ವ್ಯಾಪಾರ ಸ್ಥಗಿತದಿಂದ ಪಾಕಿಸ್ತಾನಕ್ಕೂ ಹಾನಿ:
ಇನ್ನು ಈ ಎರಡೂ ದೇಶಗಳ ನಡುವೆ ವ್ಯಾಪಾರ ಸ್ಥಗಿತಗೊಂಡರೆ ಕೇವಲ ಭಾರತಕ್ಕೆ ಮಾತ್ರ ಹಾನಿಯಾಗುವುದಿಲ್ಲ. ಇದರಿಂದ ಪಾಕಿಸ್ತಾನಕ್ಕೂ ಹಾನಿಯಾಗುತ್ತದೆ.. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ, ಭಾರತದಿಂದ ಸಾವಯವ ರಾಸಾಯನಿಕಗಳು, ಔಷಧಿಗಳು, ಪ್ಲಾಸ್ಟಿಕ್ ಉತ್ಪನ್ನಗಳು, ಹಣ್ಣುಗಳು, ತರಕಾರಿಗಳು, ಚಹಾ, ಕಾಫಿ, ಮಸಾಲೆಗಳು, ಸಕ್ಕರೆ, ಎಣ್ಣೆಕಾಳುಗಳು, ಡೈರಿ ಉತ್ಪನ್ನಗಳು ಮತ್ತು ಪಶು ಆಹಾರದಂತಹ ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ವ್ಯಾಪಾರ ಸ್ಥಗಿತವು ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿಸಬಹುದು.
ಪಹಲ್ಗಾಮ್‌ನ ದಾಳಿಯ ನಂತರ ಭಾರತವು ತಾಳ್ಮೆ ತೊರೆದು ನೇರ ಕ್ರಿಯೆಗೆ ಇಳಿದಿದ್ದು, ಶತ್ರು ರಾಷ್ಟ್ರಗಳಿಗೆ ಭಾರತವನ್ನು ಕಡೆಗಣಿಸಲು ಅವಕಾಶವಿಲ್ಲ ಎಂಬುದನ್ನು ಪುನಃ ಸಾಬೀತುಪಡಿಸಿದೆ. ಅಟ್ಟಾರಿ ಮತ್ತು ವಾಘಾ ಗಡಿಗಳನ್ನು ಮುಚ್ಚುವುದು ಒಂದು ಆರಂಭ ಮಾತ್ರ. ಮುಂದಿನ ಹಂತದಲ್ಲಿ ಬಾಂಧವ್ಯ ಕಡಿತ, ನೀರಿನ ಒಪ್ಪಂದಗಳ ಮರುಪರಿಶೀಲನೆ, ನೈಜ ರಾಜತಾಂತ್ರಿಕ ಒತ್ತಡಗಳನ್ನು ಹೆಚ್ಚಿಸುವಂತೆ ಭಾರತ ಕಾರ್ಯೋನ್ಮುಖವಾಗಿದೆ.
ಹೌದು, ಪಾಕಿಸ್ತಾನದೊಂದಿಗೆ ವ್ಯಾಪಾರ ಸ್ಥಗಿತದಿಂದ ಕೆಲವೊಂದು ವಸ್ತುಗಳ ಬೆಲೆ ಹೆಚ್ಚಾಗಬಹುದು, ಮಾರುಕಟ್ಟೆಯಲ್ಲಿ ಚಲನೆಗಳಾಗಬಹುದು. ಆದರೆ ಈ ಸಣ್ಣ ಅವ್ಯವಸ್ಥೆಗಳು ಭಾರತದ ಭದ್ರತೆ ಮತ್ತು ಗೌರವದ ಹಿನ್ನಲೆಯಲ್ಲಿ ಬಹಳ ಹಾಸ್ಯಾಸ್ಪದವಾಗಿವೆ. ದೇಶದ ಭದ್ರತೆ ಮೌಲ್ಯಮಾಪನದಲ್ಲಿ ಯಾವುದೇ ತಾರತಮ್ಯ ಇಲ್ಲ ಎಂಬುದನ್ನು ಭಾರತ ಜಗತ್ತಿಗೆ ತೋರಿಸಿದೆ.
ಇದರ ಜೊತೆಗೆ, ಭಾರತ ಇಂದು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಬೆಳೆದಿದೆ. ಪಾಕಿಸ್ತಾನದಿಂದ ಆಗುವ ಆಮದು-ರಫ್ತು ಕಡಿತವು ಭಾರತಕ್ಕೆ ಉಂಟಾಗುವ ಪರಿಣಾಮವನ್ನು ತಕ್ಷಣವೇ ಇತರ ರಾಷ್ಟ್ರಗಳೊಂದಿಗೆ ಬದಲಿ ವ್ಯಾಪಾರದ ಮೂಲಕ ಸಮತೋಲನಗೊಳಿಸಬಹುದು. ಬದಲಿ ಮಾರ್ಗಗಳು, ಹೊಸ ವ್ಯಾಪಾರ ಒಪ್ಪಂದಗಳು ಮತ್ತು ಒಳನಾಡು ಉತ್ಪಾದನೆಯ ಉತ್ತೇಜನದ ಮೂಲಕ ಭಾರತ ಸಜ್ಜಾಗಿದೆ.
ಇನ್ನು ಪಾಕಿಸ್ತಾನಕ್ಕೆ ಈ ಸಂಬಂಧ ಮುರಿವಿನ ಪರಿಣಾಮ ಭಾರೀ ಹಾನಿ ಉಂಟುಮಾಡಲಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ, ಭಾರತದಿಂದ ಗೃಹೋಪಯೋಗಿ ವಸ್ತುಗಳು, ಆಹಾರ ಸಾಮಗ್ರಿಗಳು ಮತ್ತು ಔಷಧಿಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಈ ಪ್ರವಾಹವನ್ನು ನಿಲ್ಲಿಸುವುದು ಪಾಕಿಸ್ತಾನದ ಜನಜೀವನಕ್ಕೂ ಭಾರೀ ಹೊರೆ ತರಲಿದೆ. ಇದರೊಂದಿಗೆ ಆ ದೇಶದ ಆರ್ಥಿಕ ಸ್ಥಿತಿಗತಿ ಇನ್ನಷ್ಟು ಹದಗೆಡಲಿದ್ದು ಸ್ಪಷ್ಟವಾಗಿದೆ.


Click it and Unblock the Notifications