ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂ ನಾಯಕರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಇಂದು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
15ನೇ ಬ್ರಿಕ್ಸ್ ಶೃಂಗಸಭೆ ದಕ್ಷಿಣ ಆಫ್ರಿಕಾದಲ್ಲಿ ಆಗಸ್ಟ್ 22-24ರವರೆಗೆ ನಡೆಯಲಿದೆ. ಶೃಂಗಸಭೆಯು ಆರ್ಥಿಕ ಸಹಕಾರ, ವ್ಯಾಪಾರ, ಹೂಡಿಕೆ ಮತ್ತು ಭದ್ರತೆಯಂತಹ ವಿಷಯಗಳ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ. ಈ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಆಗಸ್ಟ್ 22ರಂದು ಮಾತನಾಡಿದರು.

"ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ," ಎಂದು ಪ್ರಧಾನಿ, ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಕೊಡುಗೆಯನ್ನು ನೀಡುವ ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲೀಕರಣ ಮತ್ತು ಉತ್ಪಾದನೆಯ ಮೇಲೆ ಸರ್ಕಾರ ಗಮನ ಅಧಿಕವಾಗಿದೆ ಎಂದು ಒತ್ತಿ ಹೇಳಿದರು.
ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಬ್ರಿಕ್ಸ್ ದೇಶಗಳ ನಡುವೆ ಹೆಚ್ಚಿನ ಸಹಕಾರಕ್ಕಾಗಿ ಪ್ರಧಾನಿ ಮೋದಿ ಕರೆ ನೀಡಿದರು. ಮುಂಬರುವ ವರ್ಷಗಳಲ್ಲಿ ಜಾಗತಿಕ ಆರ್ಥಿಕತೆಯನ್ನು ರೂಪಿಸುವಲ್ಲಿ ಬ್ರಿಕ್ಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಿಸಿದರು.
ಹೂಡಿಕೆದಾರರ ವಿಶ್ವಾಸದ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದು, "ಭಾರತದಲ್ಲಿ ಜಿಎಸ್‌ಟಿ ಮತ್ತು ದಿವಾಳಿ ಸಂಹಿತೆಯನ್ನು ಜಾರಿ ಮಾಡಿದ ಬಳಿಕ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿದೆ. ಖಾಸಗಿ ವಲಯದ ಹೂಡಿಕೆಗೆ ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳನ್ನು ತೆರೆಯಲಾಗಿದೆ. ತಂತ್ರಜ್ಞಾನದ ಬಳಕೆಯೊಂದಿಗೆ, ನಾವು ಆರ್ಥಿಕ ಸೇರ್ಪಡೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ್ದೇವೆ," ಎಂದು ಪ್ರಧಾನಿ ತಿಳಿಸಿದರು.
"ಇಂದು ಯುಪಿಐ ಅನ್ನು ಶಾಪಿಂಗ್ ಮಾಲ್‌ಗಳಿಂದ ಹಿಡಿದು ಬೀದಿ ಬದಿ ವ್ಯಾಪಾರಿಗಳವರೆಗೆ ಬಳಕೆ ಮಾಡಲಾಗುತ್ತಿದೆ. ಸೌರ ಶಕ್ತಿ, ಪವನ ಶಕ್ತಿ, ಎಲೆಕ್ಟ್ರಿಕ್ ವಾಹನಗಳು ಮತ್ತು ಗ್ರೀನ್ ಹೈಡ್ರೋಜನ್ ಕ್ಷೇತ್ರಗಳಲ್ಲಿ ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ನಾವು ಸಕ್ರಿಯವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ," ಎಂದು ಮೋದಿ ಹೇಳಿದರು.
ಇಂಡಿಯಾ ಗ್ರೋತ್ ಇಂಜಿನ್ ಎಂದ ಪ್ರಧಾನಿ
ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಎಂದು ಕರೆದ ಪ್ರಧಾನಿ ಮೋದಿ, "ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ. ಏಕೆಂದರೆ ಭಾರತವು ವಿಪತ್ತು ಮತ್ತು ಕಠಿಣ ಸಮಯವನ್ನು ಆರ್ಥಿಕ ಸುಧಾರಣೆಯ ಸಮಯವನ್ನಾಗಿ ಪರಿವರ್ತನೆ ಮಾಡಿಕೊಂಡಿದೆ," ಎಂದಿದ್ದಾರೆ.


Click it and Unblock the Notifications