ಕಳೆದ ಹಲವಾರು ತಿಂಗಳುಗಳಿಂದ ದೇಶದಲ್ಲಿ ಅಗತ್ಯ ವಸ್ತುಗಳ ದರವು ಹೆಚ್ಚಳವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ನಾವು ಮೇ, ಜೂನ್ ಮತ್ತು ಪ್ರಸ್ತುತ ಜುಲೈ ತಿಂಗಳಿನಲ್ಲಾದ ಬೆಲೆ ಏರಿಕೆ ಪ್ರಮಾಣವನ್ನು ಪರಿಶೀಲನೆ ಮಾಡಿದಾಗ ದೇಶದಲ್ಲಿ ಬಹುತೇಕ ಎಲ್ಲ ಅಗತ್ಯ ವಸ್ತುಗಳು ದುಬಾರಿಯಾಗಿರುವುದು ಕಂಡುಬರುತ್ತಿದೆ. ಈಗಾಗಲೇ ಟೊಮೆಟೊ ದರ ಗಗನಕ್ಕೆ ಏರಿದೆ. ಈ ನಡುವೆ ಸರ್ಕಾರ ಬಾಸ್ಮತಿಯೇತರ ಅಕ್ಕಿ ರಫ್ತಿಗೆ ನಿರ್ಬಂಧ ವಿಧಿಸಿದೆ, ಆದರೆ ಕಾರಣವೇನು?
ಭಾರತ ಸರ್ಕಾರ ಬಾಸ್ಮತಿ ಹೊರತುಪಡಿಸಿ ಇತರೆ ಅಕ್ಕಿಗಳ ರಫ್ತಿಗೆ ನಿರ್ಬಂಧವನ್ನು ಹೇರುವ ನಿರ್ಧಾರವನ್ನು ಮಾಡಿದೆ ಎಂದು ಎಎನ್‌ಐ ವರದಿ ಮಾಡಿದೆ. ಬಾಸ್ಮತಿಯೇತರ ಬಿಳಿ ಅಕ್ಕಿಯ (ಸಂಪೂರ್ಣವಾಗಿ ಅಥವಾ ಭಾಗಶಃ ಗಿರಣಿ ಮಾಡಿದ ಅಕ್ಕಿ, ಪಾಲಿಶ್ ಅಥವಾ ಪಾಲಿಶ್ ಮಾಡದ ಅಕ್ಕಿ) ರಫ್ತನ್ನು ನಿರ್ಬಂಧ ಮಾಡಲಾಗುತ್ತದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ತಿಳಿಸಿದೆ.

ಯಾವೆಲ್ಲ ಸಂದರ್ಭದಲ್ಲಿ ಅಕ್ಕಿ ರಫ್ತಿಗೆ ಅವಕಾಶ
ಇನ್ನು ಇಂತಹ ಅಕ್ಕಿಗಳ ರಫ್ತನ್ನು ಕೆಲವು ನಿಗದಿತ ಕಾರಣಗಳಿದ್ದರೆ ಮಾತ್ರ ರಫ್ತಿಗೆ ಅವಕಾಶ ನೀಡಲಾಗುತ್ತದೆ ಎಮದು ಕೂಡಾ ಇದೆ ಸಂದರ್ಭದಲ್ಲಿ ಡಿಜಿಎಫ್‌ಟಿ ತಿಳಿಸಿದೆ. ಅದು ಕೂಡಾ ಈ ನಿರ್ಬಂಧ ಹೇರುವ ಮೊದಲೇ ರಫ್ತು ಪ್ರಕ್ರಿಯೆ ಆರಂಭವಾಗಿದ್ದರೆ, ಶಿಪ್ಪಿಂಗ್ ಬಿಲ್ ಮಾಡಲಾಗಿದ್ದರೆ, ರಫ್ತು ಮಾಡಲಾಗುವ ಅಕ್ಕಿಯು ಬಂದರಿಗೆ ತಲುಪಿದ್ದರೆ ಮಾತ್ರವೇ ರಫ್ತಿಗೆ ಅವಕಾಶವಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಬಂದರು ಅಧಿಕಾರಿಗಳಿಂದ ಪ್ರತಿಕ್ರಿಯೆ ಲಭ್ಯವಾದ ಬಳಿಕವೇ, ಬಾಸ್ಮತಿಯೇತರ ಅಕ್ಕಿಯನ್ನು ಪರಿಶೀಲನೆ ಮಾಡಿದ ಸುತ್ತೋಲೆಗೂ ಮುನ್ನ ರಫ್ತು ಪ್ರಕ್ರಿಯೆ ಆರಂಭವಾಗಿರುವುದನ್ನು ಅಧಿಕಾರಿಗಳು ಖಚಿತ ಪಡಿಸಿದ ಬಳಿಕವೇ ರಫ್ತಿಗೆ ಅವಕಾಶವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದನ್ನು ಹೊರತುಪಡಿಸಿ ಯಾವ ದೇಶವು ನಮ್ಮಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿದೆಯೋ ಆ ದೇಶವು ನಮ್ಮ ಸರ್ಕಾರವನ್ನು ಸಂಪರ್ಕಿಸಿ ಆಹಾರ ಕೊರತೆಯ ಭಾದ್ಯತೆಯನ್ನು ಮುಂದಿಟ್ಟರೆ ಅಕ್ಕಿ ರಫ್ತಿಗೆ ಅವಕಾಶ ನೀಡಲಾಗುತ್ತದೆ.
ಭಾರತದಲ್ಲಿ ಅಧಿಕ ಬಾಸ್ಮತಿಯೇತರ ಅಕ್ಕಿಯನ್ನು ಆಮದು ಮಾಡಿಕೊಳ್ಳುವುದು ಆಫ್ರಿಕನ್ ದೇಶ ಬೆನಿನ್ ಆಗಿದೆ. ಹಾಗೆಯೇ ನೇಪಾಳ, ಬಾಂಗ್ಲಾದೇಶ, ಚೀನಾ, ಟೊಗೊ, ಸೆನೆಗಲ್, ವಿಯೇಟನಂ, ಸೊಮಾಲಿಯಾ, ಮಲೇಷಿಯಾ, ಲಿಬೇರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವಾರು ದೇಶಗಳು ಕೂಡಾ ಭಾರತದಲ್ಲಿ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತದೆ.
ರಫ್ತು ನಿರ್ಬಂಧಕ್ಕೆ ಪ್ರಮುಖ ಕಾರಣವೇನು?
ಭತ್ತ ಬೆಳೆಯಲ್ಲಿ ಕಡಿಮೆಯಾದ ಕಾರಣದಿಂದಾಗಿ, ಬೆಲೆ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ರಫ್ತು ಮೇಲೆ ನಿರ್ಬಂಧವನ್ನು ವಿಧಿಸಲಾಗಿದೆ. ಈ ಹಿಂದೆ ಸೆಪ್ಟೆಂಬರ್ 2022ರಲ್ಲಿ ಭಾರತ ಸರ್ಕಾರವು ಡಾಕ್ಕಿ ರಫ್ತನ್ನು ನಿರ್ಬಂಧಿಸಿತ್ತು. ಹಾಗೆಯೆ ಬೇರೆ ಎಲ್ಲ ರೀತಿಯ ಅಕ್ಕಿಯ ರಫ್ತಿನ ಮೇಲೆ ಶೇಕಡ 20ರಷ್ಟು ಸುಂಕವನ್ನು ವಿಧಿಸಿತ್ತು. ಅದಾದ ಬಳಿಕ ನವೆಂಬರ್‌ನಲ್ಲಿ ನಿರ್ಬಂಧವನ್ನು ತೆಗೆದುಹಾಕಲಾಗಿತ್ತು.


Click it and Unblock the Notifications